• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದರ್ಶ ನಾರಿ ಸೀತೆ ಕುರಿತು ‘ಭೂಮಿಕಾ’ದಲ್ಲಿ ಚರ್ಚೆ

By Staff
|

ಸೀತೆಯ ಪಾತ್ರವನ್ನು ವಿವಿಧ ಕವಿಗಳು ಬೆಳೆಸಿದ ಬಗೆಯನ್ನು, ಆಕೆಯ ಪಾತ್ರ ಬಿಂಬಿಸುವ ಸಾಮಾಜಿಕ ಮೌಲ್ಯಗಳನ್ನು, 21ನೇ ಶತಮಾನದ ಭಾರತೀಯ ಸ್ತ್ರೀಯರ ಮೇಲೆ ಸೀತೆಯ ಪ್ರಭಾವವದ ವಿಶ್ಲೇಷಣೆ ಇಲ್ಲಿದೆ.

Debate on Sita in Bhoomika by Vijaya Kulkarniಮಾರ್ಚ್‌ 11 ರಂದು ಮೇರಿಲ್ಯಾಂಡಿನ ಬಾವರ್‌ ಕಮ್ಯೂನಿಟಿ ಸೆಂಟರ್‌ನಲ್ಲಿ ಭೂಮಿಕಾ ವೇದಿಕೆಯ ಮೇಲೆ ‘‘ಚಾರಿತ್ರಿಕ ಹಾಗೂ ಪಾರಂಪರಿಕ ಸೀತೆ: ಆದರ್ಶ ನಾರಿಯ ಕಲ್ಪನೆ’’ ಎಂಬ ವಿಷಯವಾಗಿ ಮಾತನಾಡಿದವರು ಡಾ. ವಿಜಯ ಕುಲಕರ್ಣಿ.

ಭೂಮಿಕಾದ ಸಂಸ್ಥಾಪಕರಲ್ಲಿ ಒಬ್ಬರಾದ ಡಾ. ವಿಜಯ ಕುಲಕರ್ಣಿ ವೃತ್ತಿಯಿಂದ ವಿಜ್ಞಾನಿ. ಭೂಮಿಕಾದ ತಿಂಗಳ ಚರ್ಚಾಸಭೆಗೆ ತಪ್ಪದೇ ಭಾಷಣಕಾರರನ್ನು ಹುಡುಕಿ, ಸಂಪರ್ಕಿಸಿ, ವಿಚಾರಪೂರಿತ, ಸ್ವಾರಸ್ಯಕರ ಏರ್ಪಡಿಸುವ ಅವಿರತ ಪ್ರಯತ್ನ ವಿಜಯಾರವರದ್ದು. ಅವರು ಭೂಮಿಕಾ ಪ್ರಸ್ತುತ ಜೋಕುಮಾರಸ್ವಾಮಿ ಹಾಗೂ The square Peg (ಹಿಂದಿಯಲ್ಲಿ ’ತ್ರಿಶಂಕು’) ನಾಟಕಗಳಿಗೆ ಸಹ ನಿರ್ದೇಶಕಿಯಾಗಿದ್ದರು.

ರಾಮಾಯಣವನ್ನು ಮೊದಲು ಬರೆದದ್ದು ಕ್ರಿ.ಪೂ. 1200 ರ ಸುಮಾರಿಗೆ ಎಂಬ ಅಂದಾಜಿದೆ. ಅದಕ್ಕೂ ಬಹಳ ಮುಂಚಿನಿಂದಲೇ ಜನಪದದಲ್ಲಿ ರಾಮ, ಸೀತೆಯರ ಕಥೆ ಹಾಸುಹೊಕ್ಕಾಗಿತ್ತು. ಆ ಕಾಲದಿಂದಲೂ ಮಹಾಕವಿಗಳಷ್ಟೇ ಅಲ್ಲದೇ, ಜನಸಾಮಾನ್ಯರೂ ಸಹಾ ರಾಮಾಯಣವನ್ನು ಮತ್ತೆ ಮತ್ತೆ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಕಳೆದ ಶತಮಾನದಲ್ಲಿ ಕುವೆಂಪು ಬರೆದ ಜ್ಞಾನಪೀಠ ಪ್ರಶಸ್ತಿ ವಿಜೇತ ‘‘ಶ್ರೀರಾಮಾಯಣ ದರ್ಶನಂ’’, ಹಾಗೂ ತೀರಾ ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಬರೆಯುತ್ತಿರುವ ‘‘ಶ್ರೀ ರಾಮಾಯಣ ಮಹಾನ್ವೇಷಣಂ’’ ಗಳನ್ನು ಇಲ್ಲಿ ಸ್ಮರಿಸಬಹುದು. ಇನ್ನು ರಮಾನಂದ ಸಾಗರರ ರಾಮಾಯಣವನ್ನು ದೂರದರ್ಶನದಲ್ಲಿ ನೋಡದ ಭಾರತೀಯರಿಲ್ಲ ಎನ್ನಬಹುದು.

ರಾಮಾಯಣದಲ್ಲಿ ರಾಮನಷ್ಟೇ ಮುಖ್ಯವಾದ ಇನ್ನೊಂದು ಪಾತ್ರ ಸೀತೆಯದು. ರಾಮನನ್ನು ಆದರ್ಶ ಪುರುಷ, ಮರ್ಯಾದಾ ಪುರುಷೋತ್ತಮನನ್ನಾಗಿಸಿದ ಭಾರತೀಯ ಸಂಸ್ಕೃತಿ, ಸೀತೆಯನ್ನು ಆದರ್ಶ ನಾರಿಯನ್ನಾಗಿಸಿದೆ. ಹೀಗೆ ಸೀತೆಯ ಪಾತ್ರವನ್ನು ವಿವಿಧ ಕವಿಗಳು ಬೆಳೆಸಿದ ಬಗೆಯನ್ನು, ಆಕೆಯ ಪಾತ್ರ ಬಿಂಬಿಸುವ ಸಾಮಾಜಿಕ ಮೌಲ್ಯಗಳನ್ನು, 21ನೇ ಶತಮಾನದ ಭಾರತೀಯ ಸ್ತ್ರೀಯರ ಮೇಲೆ ಸೀತೆಯ ಪ್ರಭಾವವನ್ನು ವಿಶ್ಲೇಷಿಸಿದರು ವಿಜಯ.

ವಾಲ್ಮೀಕಿ ಮೊದಲಿಗೆ 5 ಕಾಂಡ, 24000 ಶ್ಲೋಕಗಳಲ್ಲಿ ಬರೆದ ರಾಮಾಯಣಕ್ಕೆ ಮುಂದಿನ ಪರಂಪರೆಯ ಕವಿಗಳು ಬಾಲ ಕಾಂಡ, ಉತ್ತರ ಕಾಂಡ ಹಾಗೂ ಎಷ್ಟೋ ಶ್ಲೋಕಗಳನ್ನು ಸೇರಿಸಿ 7 ಕಾಂಡಗಳಾಗಿ ವಿಸ್ತರಿಸಿದ್ದಾರೆ. ಲಭ್ಯವಾಗಿರುವ ಕೆಲವು ಕನ್ನಡ ರಾಮಾಯಣಗಳು: ಜೈನ ಪರಂಪರೆಯ ಚಾವುಂಡರಾಯನ ರಾಮಾಯಣ, ರಾಮಚಂದ್ರಚರಿತಪುರಾಣ, ವೈದಿಕ ಪರಂಪರೆಯ ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ, ಬತ್ತಲೇಶ್ವರನ ಕೌಶಿಕ ರಾಮಾಯಣ, ಲಕ್ಷ್ಮೀಶನ ಜೈಮಿನಿಭಾರತದಲ್ಲಿ ರಾಮಾಯಣದ ಕಥೆ, ಇತ್ಯಾದಿ. ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗದಲ್ಲಿ ರಾಮಾಯಣದ ಪದ್ಯಗಳ ಪ್ರಯೋಗವಿದೆ. ಜನಪದ, ಲಾವಣಿಗಳಲ್ಲಿ, ಯಕ್ಷಗಾನದಲ್ಲಿ ರಾಮಾಯಣವಿದೆ.

ವಾಲ್ಮೀಕಿಯ ಸೀತೆ ಅಯೋನಿಜೆ, ವೀರ್ಯಶುಲ್ಕಳು; ಬಾಲ್ಯದಿಂದಲೇ ಸತೀಧರ್ಮವನ್ನು ಕಲಿದು ಬೆಳೆದವಳು. ಧರಿತ್ರೆಯಂತೆ ಕ್ಷಮಾಶೀಲೆ; ಪರಮಪತಿವ್ರತೆ, ರಾಮನ ಕರ್ತವ್ಯಪಾಲನೆಯಲ್ಲಿ ಸಂಪೂರ್ಣ ಸಹಕಾರವಿತ್ತವಳು. ಸ್ವಾರಸ್ಯವೆಂದರೆ, ಕೆಲವು ಬೌದ್ಧ ಪರಂಪರೆಯ ರಾಮಾಯಣಗಳಲ್ಲಿ ರಾಮಸೀತೆಯರು ಅಣ್ಣತಂಗಿಯರು; ರಾವಣನ ಪ್ರಸ್ತಾಪವಿಲ್ಲ. ವೈದಿಕ- ಜೈನ ಧರ್ಮದವರು ಪಾತ್ರ ಬೆಳವಣಿಗೆ, ವ್ಯಕ್ತಿತ್ವಕ್ಕಿಂತ ಧರ್ಮಕ್ಕೆ, ರೂಪಕ್ಕೆ ಹೆಚ್ಚು ಮನ್ನಣೆ ಕೊಟ್ಟಿದ್ದಾರೆ.

ಎಲ್ಲಾ ಕನ್ನಡ ಕವಿಗಳು ಸೀತೆಯ ಕಲ್ಪನೆಯಲ್ಲಿ ವಾಲ್ಮೀಕಿಯನ್ನು ಅನುಸರಿಸಿದ್ದಾರೆ. ಸೀತೆ ಮುಗ್ಧೆ, ಕೋಮಲೆ, ಹಿರಿಯರಲ್ಲಿ ಗೌರವ. ಪರಮಪತಿವ್ರತೆಯಾದರೂ, ಸ್ವತಂತ್ರವ್ಯಕ್ತಿತ್ವ. ರಾಮನನ್ನು ದಿಟ್ಟತನದಿಂದ ಎದುರಿಸಿ, ವಾದಿಸಿ, ತಾನು ಪತಿಯಾಂದಿಗೆ ಕಾಡಿಗೆ ಹೋಗಲು ಒಪ್ಪಿಸುತ್ತಾಳೆ ಸೀತೆ. ರಾವಣ ಹೊತ್ತೊಯ್ಯುವಾಗ, ಸುಳಿವಿಗಾಗಿ ಆಭರಣಗಳನ್ನು ಒಂದೊಂದಾಗಿ ಹಾಕುತ್ತಾ ಹೋಗುವ ಜಾಗೃತ ಬುದ್ಧಿ. ರಾವಣನಿಗೂ ಬುದ್ಧಿಹೇಳುವ, ಧರ್ಮ ಬುದ್ಧಿಯನ್ನು ಜಾಗ್ರತಪಡಿಸುವ ಪ್ರಯತ್ನ. ರಕ್ಕಸಿಯರನ್ನು ಕ್ಷಮಿಸಿ, ಅಯೋಧ್ಯೆಗೆ ಎಲ್ಲಾ ವಾನರಸ್ತ್ರೀಯರನ್ನು ಕರೆದೊಯ್ಯುವ ಉದಾರತೆ, ಕೊನೆಗೆ ಸೀತಾಪರಿತ್ಯಾಗದ ಸಂದರ್ಭದಲ್ಲೂ ಸಹ ಲಕ್ಷ್ಮಣನಿಗೆ ‘‘ತನ್ನ ಸ್ಥಿತಿಯನ್ನು ನೋಡಿ ರಾಮನಿಗೆ ಹೇಳು, ಪ್ರಜೆಗಳ ಮಧ್ಯದಲ್ಲಿ ಪ್ರಜಾಪಾಲಕನಾಗಿರುವ ರಾಮ ಪ್ರಜೆಗಳ ಕ್ಷೇಮದ ಬಗ್ಗೆ ಸದಾ ಚಿಂತಿಸಲಿ’’ ಎಂದು ಹೇಳಿಕಳಿಸುವ ಆತ್ಮಸ್ಥೈರ್ಯ- ಹೀಗೆ ವಿವಿಧ ಕವಿಗಳು ಸೀತೆಯ ವ್ಯಕ್ತಿತ್ವವನ್ನು ಚಿತ್ರಿಸಿದ್ದಾರೆ.

ಇನ್ನು ಆಧುನಿಕ ಕಾಲಕ್ಕೆ ಬಂದರೆ, ಮಧು ಕೀಶ್ವರ್‌ ‘‘ಮಾನುಷಿ’’ ಗೆ ಸ್ತ್ರೀಯರು ಬರೆದು ಕಳಿಸಿದ ಕವಿತೆಗಳಲ್ಲಿ ಸೀತೆಯ ಮೇಲೆ ಬರೆದವುಗಳ ಸಂಖೆಯಿಂದ ಆಶ್ಚರ್ಯ ಹೊಂದಿ, ಜನಸಾಮಾನ್ಯರು ಸೀತೆಯನ್ನು ಕಾಣುವ ರೀತಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ನಿಮ್ಮ ದೃಷ್ಟಿಯಲ್ಲಿ ಆದರ್ಶ ಪುರುಷ ಯಾರು, ಆದರ್ಶ ಮಹಿಳೆ ಯಾರು ಎಂದು ಪ್ರಶ್ನಿಸಿದ್ದಾರೆ. ಅವಿವಾಹಿತ ಯುವತಿಯರು, ವಿವಾಹಿತ ಯುವತಿಯರು, ವೃದ್ಧೆಯರು ಸೀತೆಯನ್ನು ಆದರ್ಶ ನಾರಿಯಾಗಿ ನೋಡುತ್ತಾರೆ. ಗ್ರಾಮ್ಯಜನತೆಯಷ್ಟೇ ಅಲ್ಲ, ನಗರದ ಕಾಲೇಜು ಯುವತಿಯರು ಸಹಾ ಸೀತೆಯನ್ನು ಆದರ್ಶನಾರಿಯಾಗಿ ಕಾಣುತ್ತಾರೆ ಎಂದು ಮಧು ಕೀಶ್ವರ್‌ ತಮ್ಮ ಸಂಶೋಧನಾ ಲೇಖನದಲ್ಲಿ ಬರೆದಿದ್ದಾರೆ.

ಇನ್ನೂ ಮುಂದುವರೆದು, ಮಧು ಕೀಶ್ವರ್‌ ರಾಮನ ಬಗ್ಗೆಯೂ ಬರೆಯುತ್ತಾರೆ. ರಾಮನು ಸೀತೆಗೆ ಮಾಡಿದ ಅನ್ಯಾಯವನ್ನು ಸ್ತ್ರೀ, ಪುರುಷ, ಹಿರಿಯ, ಕಿರಿಯರೆಂಬ ಭೇದವಿಲ್ಲದೇ ಎಲ್ಲರೂ ದೂಷಿಸುತ್ತಾರೆ. ಮೊದಲ ಬಾರಿಗೆ ಅಗ್ನಿಪರೀಕ್ಷೆಗೆ ಗುರಿಮಾಡಿದ್ದನ್ನು ಸಹಾ ಬಹಳಷ್ಟು ಜನ ಖಂಡಿಸುತ್ತಾರೆ. ಕೊನೆಗೆ, ಎಲ್ಲಾ ಪ್ರಜೆಗಳ ಮುಂದೆ ಸೀತೆಯನ್ನು ಇನ್ನೊಂದು ಬಾರಿ ಪರೀಕ್ಷೆಗೊಳಪಡಿಸಲು ಪ್ರಯತ್ನಿಸಿದ ರಾಮನ ಕೃತ್ಯವನ್ನು ಖಂಡಿಸದವರೇ ಇಲ್ಲ. ಆಗ ರಾಮನನ್ನು ತಿರಸ್ಕರಿಸಿ, ಭೂಮಿಯಲ್ಲಿ ಸೇರಿಹೋದ ಸೀತೆಯ ಕೃತ್ಯವನ್ನು ಆಕೆಯ ಘನತೆಯ, ಆತ್ಮಾಭಿಮಾನದ ನಿದರ್ಶನವೆಂದು ಕಾಣುತ್ತಾರೆ.

ಸೀತೆಯನ್ನು ಆದರ್ಶ ಸತಿಯಾಗಿ ಕಂಡ ಜನತೆ, ರಾಮನನ್ನು ಆದರ್ಶ ಪತಿಯಾಗಿ ಕಾಣುವುದಿಲ್ಲ. ಸೀತೆ ಹುಟ್ಟಿದ ಮಿಥಿಲೆಯ ಜನಪದದಲ್ಲಿ ವಿವಾಹ ಸಂದರ್ಭದಲ್ಲಿ ಸೀತೆಯ ಹೆಸರಿದ್ದರೂ, ರಾಮನ ಹೆಸರಿಲ್ಲ. ಮಗಳು ತಂದೆಗೆ ‘ತನಗೆ ಗಂಡು ಹುಡುಕಲು ಉತ್ತರ, ದಕ್ಷಿಣ, ಪೂರ್ವಕ್ಕೆ ಹೋಗು, ಪಶ್ಚಿಮಕ್ಕೆ ಹೋಗಬೇಡ’ ಎಂದು ಹೇಳುವ ಪದ್ಯವೊಂದಿದೆ. ವಿವಾಹದ ಸಂದರ್ಭದ ಪದ್ಯಗಳಲ್ಲಿ ಶಿವಪಾರ್ವತಿಯರ ಪ್ರಸ್ತಾಪ ಹೆಚ್ಚಾಗಿ ಕಾಣುತ್ತದೆ.

ಸೀತೆಯ ಪಾತ್ರ ಕೇವಲ ಭಾರತೀಯರನ್ನಷ್ಟೇ ಅಲ್ಲದೇ, ಕೆಲವು ಪಾಶ್ಚಾತ್ಯರನ್ನೂ ಕಾಡಿದೆ. ಅಮೇರಿಕಾದ ವ್ಯಂಗ್ಯಚಿತ್ರಗಾರ್ತಿ ನೀನಾ ಪಾಲೆಗೆ ಸೀತೆ ದಾಸ್ಯಮನೋವೃತ್ತಿಯ ಅಬಲೆ ಎಂಬ ಭಾವನೆಯಿತ್ತು. ತಮ್ಮ ಜೀವನದಲ್ಲಿ ವಿಚ್ಛೇಧನದ ನೋವನ್ನು ಅನುಭವಿಸಿದಾಗ, ಸೀತೆಯ ಪಾತ್ರದಲ್ಲಿನ ದ್ವಂದ್ವ ನೀನಾ ಪಾಲೆಗೆ ಕಂಡಿತು. Trial By Fire ಎಂಬ ಅವರ ಕಿರುಚಿತ್ರ ಹುಟ್ಟಿದ್ದು ಈ ಹಿನ್ನೆಲೆಯಲ್ಲಿ. ಅವರ Sita Sings the Blues ಎಂಬ 72 ನಿಮಿಷದ ಕಾರ್ಟೂನ್‌ ಚಿತ್ರ 2008ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೀಗೆ ಈ ಕಾಲದಲ್ಲೂ ಸೀತೆಯ ಕಥೆ ಜೀವಂತವಾಗಿರುವ ಕಾರಣವೇನು? ಜೀವಂತವಿರಬೇಕೆ? ಇನ್ನೂ ಎಷ್ಟು ಕಾಲ ಜೀವಂತವಾಗಿರುತ್ತದೆ? ಎಂಬೆಲ್ಲಾ ನಿಗದಿತ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಚರ್ಚೆ ಮುಕ್ತಾಯವಾುತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X