• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದಿ ವಿಜ್ಞಾನ ಬರವಣಿಗೆ : ಮಿತಿ ಮತ್ತು ಪ್ರಯೋಜನ

By Staff
|

ಮಾಹಿತಿ ಸೋರಿಹೋಗದಂತೆ ಕನ್ನಡಕ್ಕೆ ವಿಜ್ಞಾನದ ವೇಷ ತೊಡಿಸುವ ಪ್ರಯತ್ನಕ್ಕೆ ಶ್ರೀವತ್ಸ ಜೋಶಿ ಒಲವು.

ಉತ್ತರ ಅಮೆರಿಕಾದ ಮೇರಿಲ್ಯಾಂಡಿನ ಕನ್ನಡಿಗರ ಕುಟೀರ ಭೂಮಿಕಾ ವೇದಿಕೆಯಲ್ಲಿ "ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಬರವಣಿಗೆ : ಪ್ರಯೋಜನಗಳು ಮತ್ತು ಮಿತಿಗಳು" ಎಂಬ ವಿಷಯದ ಬಗ್ಗೆ ಲೇಖಕ ಶ್ರೀವತ್ಸ ಜೋಶಿ ತಮ್ಮ ವಿಚಾರ ಲಹರಿಗಳನ್ನು ಹಂಚಿಕೊಂಡರು.

ವರ್ಜೀನಿಯಾದಲ್ಲಿ ನೆಲೆಸಿರುವ ಶ್ರೀವತ್ಸ ಜೋಶಿ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ದಟ್ಸಕನ್ನಡದ ಓದುಗರಿಗೆ "ವಿಚಿತ್ರಾನ್ನ" ಅಂಕಣದ ಮೂಲಕ ಪರಿಚಿತರಾಗಿರುವ ಜೋಶಿ ಸ್ವಭಾವತಃ ವಾಚಾಳಿಯಲ್ಲ. ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ, ಅವುಗಳನ್ನು ಒಪ್ಪವಾಗಿ ಹೆಣೆದು ಸ್ವಾರಸ್ಯಕರವಾಗಿ ಬರೆದು ಹಂಚಿಕೊಳ್ಳುವುದರಲ್ಲಿ ಅವರು ಪರಿಣತರು.

"ಸಂತಪ್ತಾಯಸಿ ಸಂಸ್ಠಿತಸ್ಯ ನಾಮಾಪಿ ನಶ್ರುಯತೇ" ಎಂದು ಪ್ರಾರಂಭವಾಗುವ ಸಂಸ್ಕೃತ ಸುಭಾಷಿತವೊಂದನ್ನು ಓದುವುದರೊಂದಿಗೆ ತಮ್ಮ ಮಾತನ್ನು ಆರಂಭಿಸಿದ ಜೋಶಿ, ಅದರ ಅರ್ಥವನ್ನು ಕನ್ನಡದಲ್ಲಿ ಹೇಳಿ, ಅದರಲ್ಲಿರುವ ವಿಷಯಗಳನ್ನು ವಿಜ್ಞಾನದ ಹಿನ್ನೆಲೆಯಲ್ಲಿ ವಿವರಿಸಿದರು.

ನೀರಿನ ಹನಿ ಭೋರ್ಗಲ್ಲ ಮೇಲೆ ಬಿದ್ದರೆ, ಆವಿಯಾಗಿ ನಾಶವಾಗುತ್ತದೆ; ಅದೇ ಹನಿ ತಾವರೆ ಎಲೆಯ ಮೇಲೆ ಬಿದ್ದರೆ, ಮಣಿಯಂತೆ ಪ್ರಕಾಶಿಸುತ್ತದೆ; ಸ್ವಾತಿ ನಕ್ಷತ್ರದಲ್ಲಿ ಸಮುದ್ರದ ಚಿಪ್ಪಿನಲ್ಲಿ ಬಿದ್ದರೆ ಮುತ್ತಾಗುತ್ತದೆ. ಇದರ ಪ್ರತಿಸಾಲಿನಲ್ಲೂ ನಾವು ವಿಜ್ಞಾನದ ಬಗ್ಗೆ ಚಿಂತಿಸಬಹುದು. ನೀರು ಆವಿಯಾಗುವಲ್ಲಿ, ನೀರಿನ ವಿವಿಧ ರೂಪಗಳು; ತಾವರೆ ಎಲೆಯ surface tension; ಮುಂಗಾರು ಮಳೆ ಮುಗಿಯುವ ಸಮಯದ ಸ್ವಾತಿ ನಕ್ಷತ್ರದಲ್ಲಿ ವಾತಾವರಣದಲ್ಲಿನ nitrogen oxideನ ಆಮ್ಲೀಯ ಗುಣ ಮುತ್ತಾಗಲು ಸಹಾಯಮಾಡುವುದು; ಹೀಗೆ ಮೂಲತಃ ಈ ಸುಭಾಷಿತವು ಮನುಷ್ಯನ ಸ್ವಭಾವವನ್ನು ನಿರೂಪಿಸುತ್ತಾದರೂ, ವಿಜ್ಞಾನದ ಬಗ್ಗೆ ಯೋಚಿಸಲೂ ಪ್ರೇರೇಪಿಸುತ್ತದೆ.

ನಮ್ಮ ಸುತ್ತಮುತ್ತಲು ಪ್ರತಿಯೊಂದರಲ್ಲೂ ಕಂಡುಬರುವ ವಿಜ್ಞಾನದ ಸಂಗತಿಗಳ ಬಗ್ಗೆ ಕನ್ನಡದಲ್ಲಿ ಸೂಕ್ತ ವಿವರಣೆಯಿದ್ದರೆ ಕನ್ನಡದ ಜನತೆಗೆ ತುಂಬ ಅನುಕೂಲವಾಗುತ್ತದೆ ಎನ್ನುತ್ತಾ ಜೋಶಿ ಕನ್ನಡದಲ್ಲಿ ಈಗಿನ ಜನಪ್ರಿಯ ವಿಜ್ಞಾನ ಸಾಹಿತ್ಯದ ವ್ಯಾಪ್ತಿಯ ಪರಿಚಯ ಮಾಡಿಕೊಟ್ಟರು. ಕನ್ನಡದಲ್ಲಿ ಬೇರೆ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ, ಜನಪ್ರಿಯ ವಿಜ್ಞಾನ ಸಾಹಿತ್ಯ ಹೆಚ್ಚು ಬೆಳೆದು ಬಂದಿಲ್ಲವಾದರೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸುಮಾರು 3500 ಕನ್ನಡ ಜನಪ್ರಿಯ ವಿಜ್ಞಾನ ಪುಸ್ತಕಗಳ ಸೂಚಿಯನ್ನು 2005 ರಲ್ಲಿ ಪ್ರಕಟಿಸಿರುವುದು ಶ್ಲಾಘನೀಯ ಎಂದರು.

ಜೋಶಿ ಅನೇಕ ವಿಜ್ಞಾನ ಸಾಹಿತ್ಯದ ಬರಹಗಾರರ ಕೊಡುಗೆಗಳನ್ನು ಪ್ರಸ್ತಾಪಿಸಿದರು. ಮೊದಲನೆಯದಾಗಿ ಕಡಲ ತಡಿಯ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದು ಹೆಸರಾದ ದಿ. ಶಿವರಾಮ ಕಾರಂತರು. ಅವರು ಅದ್ಭುತ ಜಗತ್ತು, ವಿಜ್ಞಾನಪ್ರಪಂಚ, ವಿಜ್ಞಾನದ ಅರ್ಥಕೋಶ ಇತ್ಯಾದಿ ಪುಸ್ತಕಗಳನ್ನು ಬರೆದಿದ್ದಾರೆ. ಬಿ.ಜಿ.ಲ್.ಸ್ವಾಮಿಯವರ ಹಸುರು ಹೊನ್ನು, ಪೂರ್ಣಚಂದ್ರ ತೇಜಸ್ವಿಯವರ ಪ್ರಕೃತಿಯ ಮೇಲಿನ ಬರಹಗಳನ್ನು, ಪರಿಸರ ವಿಜ್ಞಾನದ ದೃಷ್ಟಿಯಿಂದ ಇಲ್ಲಿ ಸ್ಮರಿಸಬಹುದು. ಡಾ|ಅನುಪಮಾ ನಿರಂಜನ ಸ್ತ್ರೀಸ್ವಾಸ್ಥ್ಯ ಮುಂತಾದ ವೈದ್ಯಕೀಯ ಸಾಹಿತ್ಯದ ಪುಸ್ತಕಗಳನ್ನು ಬರೆದಿದ್ದಾರೆ. ರಾಜಶೇಖರ ಭೂಸನೂರಮಠ ಅನೇಕ ವಿಜ್ಞಾನ ಕಥೆ ಕಾದಂಬರಿಗಳನ್ನು ಬರೆದಿದ್ದಾರೆ.

ಪ್ರಜಾವಾಣಿ, ಸುಧಾ, ಕಸ್ತೂರಿ, ಕರ್ಮವೀರ ಮುಂತಾದ ಪತ್ರಿಕೆಗಳಲ್ಲಿನ ವಿಜ್ಞಾನ ಅಂಕಣಗಳಿಗೆ ಬರೆದಿರುವ, ಬರೆಯುತ್ತಿರುವ ಅಂಕಣಕಾರರನ್ನು ಪ್ರಸ್ತಾಪಿಸಿದರು ಜೋಶಿ. ಉದಾಹರಣೆಗೆ, ವಿಜಯಕರ್ನಾಟಕದಲ್ಲಿ ನೆಟ್ ನೋಟ ಸಾಪ್ತಾಹಿಕ ಅಂಕಣವನ್ನು 5 ವರ್ಷಗಳಿಂದ ಬರೆಯುತ್ತಿರುವ ಹಾಲ್ದೊಡ್ಡೇರಿ ಸುಧೀಂದ್ರ, ಕಸ್ತೂರಿ, ಕರ್ಮವೀರದಲ್ಲಿ ಬರೆಯುತ್ತಿದ್ದ, ರೇಡಿಯೋದಲ್ಲಿ ನಕ್ಷತ್ರವೀಕ್ಷಣೆ ಯ ಕಾಮೆಂಟರಿ ಕೊಡುತ್ತಿದ್ದ ಜಿ.ಟಿ.ನಾರಾಯಣ ರಾವ್, ಚೇತನ ಶೀತಲಭಾವಿ, ಷಡಕ್ಷರಿ ಇತ್ಯಾದಿ ಹೆಸರುಗಳಿಂದ ಬರೆಯುತ್ತಿದ್ದ, ನಾಗೇಶ ಹೆಗಡೆ ಮುಂತಾದವರು.

ಸ್ವತಃ ಶ್ರೀವತ್ಸ ಜೋಶಿಯವರೇ ತಮ್ಮ ವಿಚಿತ್ರಾನ್ನ ಅಂಕಣದಲ್ಲಿ ಹಲವಾರು ವಿಜ್ಞಾನದ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಲೇಖನಗಳ ವಿಷಯ ಮತ್ತು ಹಿನ್ನೆಲೆಯನ್ನು ಜೋಶಿ ವಿವರಿಸಿದರು.

ಮೊದಲ ಮಳೆ ಬಂದಾಗಿನ ಮಣ್ಣಿನ ವಾಸನೆಯ ಕಾರಣ, ಬಚ್ಚಲಮನೆಯಲ್ಲಿ ಹಾಡುವ ಮೂಡು ಬರುವ ಕಾರಣ, ಕಾಗದವನ್ನು ಏಳಕ್ಕಿಂತ ಹೆಚ್ಚು ಸಲ ಮಡಿಸಲಾಗದು ಎಂಬುದು ಮಿಥ್ಯವೆಂದು ತೋರಿಸಿದ ಅಮೇರಿಕಾದ ವಿದ್ಯಾರ್ಥಿನಿ ಉಪಯೋಗಿಸಿದ ತತ್ವ, ಇತ್ಯಾದಿ ಲೇಖನಗಳ ಬಗ್ಗೆ ಮಾತನಾಡಿದರು.

ಜನಪ್ರಿಯ ವಿಜ್ಞಾನ ಲೇಖನಗಳನ್ನು ಕನ್ನಡದಲ್ಲಿ ರಚಿಸುವಾಗ ಕೆಲವೊಮ್ಮೆ ಓದುಗರಿಗೆ ಕನ್ನಡದ ಪದಗಳು ಅರ್ಥವಾಗುತ್ತದೆಯೋ ಇಲ್ಲವೋ ಎಂಬ ಸಂದೇಹದಲ್ಲಿ ಜೊತೆಯಲ್ಲೇ ಅದರ ಇಂಗ್ಲೀಷ್ ಪದವನ್ನೂ ಬರೆಯಬೇಕಾಗುತ್ತದೆ ಎಂದರು ಜೋಶಿ. ಅಲ್ಲದೇ ಕನ್ನಡದ ಹೆಚ್ಚಿನ ವಿಜ್ಞಾನದ ಪದಗಳು ಸಂಸ್ಕೃತ ಪದಗಳು. ಅದೊಂದು ಬಗೆಯ ಸವಾಲಾದರೆ, ಇನ್ನು ಇತ್ತೀಚಿನ ಪಠ್ಯಪುಸ್ತಕಗಳಲ್ಲಿ ಕಂಡುಬರುವ ಕನ್ನಡದ ಆಧಾರದ ಪದಗಳು ಓದುಗರಿಗೆ ಗೊಂದಲ ಉಂಟುಮಾಡುವ ಸಾಧ್ಯತೆಯಿದೆ. ಜನಪ್ರಿಯ ವಿಜ್ಞಾನ ಸಾಹಿತ್ಯ ರಚನೆಗೆ ಇನ್ನೊಂದು ಸವಾಲೆಂದರೆ, ಕಬ್ಬಿಣದ ಕಡಲೆಯಂತ ವಿಷಯಗಳನ್ನು ಸ್ವಾರಸ್ಯವಾಗಿ ಬರೆಯುವ ಪ್ರಯತ್ನದಲ್ಲಿ ಮಾಹಿತಿ ನಿರ್ದಿಷ್ಟತೆ ತಪ್ಪದಂತೆ ನೋಡಿಕೊಳ್ಳುವುದು ಎಂದರು.

ಸ್ನಾತಕೋತ್ತರ ಮಟ್ಟದ ಗಂಭೀರ ವಿಜ್ಞಾನವನ್ನೆಲ್ಲಾ ಕನ್ನಡದಲ್ಲಿ ಅನುವಾದ ಮಾಡುವುದರಲ್ಲಿ ಹೆಚ್ಚು ಪ್ರಯೋಜನವಿಲ್ಲ. ಆದರೆ, ಜನಪ್ರಿಯ ವಿಜ್ಞಾನ ಸಾಹಿತ್ಯ ಜನಸಾಮಾನ್ಯರಲ್ಲಿ, ಅದರಲ್ಲೂ ನಗರದಿಂದಾಚೆಯಿರುವ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿರುವ ಯುವಜನಾಂಗಕ್ಕೆ, ವಿಜ್ಞಾನದ ಬಗ್ಗೆ ಅರಿವು ಮೂಡಿಸಿ, ಇನ್ನೂ ಹೆಚ್ಚು ತಿಳಿಯಬೇಕೆಂಬ ಕುತೂಹಲ, ಆಸಕ್ತಿ ಹೆಚ್ಚಿಸುವುದಕ್ಕೆ ಬಹಳ ಮುಖ್ಯವೆಂಬ ಜೋಶಿಯವರ ಅಭಿಪ್ರಾಯವನ್ನು ನೆರೆದವರೆಲ್ಲರೂ ಅನುಮೋದಿಸಿದಂತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X