ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೇರಿ’ಯಲ್ಲಿ ‘ಸಂಪಿಗೆ’ ದಶಮಾನೋತ್ಸವದ ಸೊಬಗು!

By Staff
|
Google Oneindia Kannada News


10th anniversary of Sampige ನೀವು ಹದಿನಾರರ ಪೋರ ಸುಹಾಸ್‌ನ ನೋಡಬೇಕಿತ್ತು?

ಮುಂದಿನ ಕಾರ್ಯಕ್ರಮ ಬೋಸ್ಟನ್‌ನಿಂದ ಬಂದ 16ರ ಪೋರ ಸುಹಾಸ್‌ ರಾವ್‌ ಕಛೇರಿ. ಒಂದು ಗಂಟೆಯ ಕಾಲ ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿದ ವಯೊಲಿನ್‌ ವಾದಕನ ಕೈ ಚಳಕ ಎಲ್ಲರ ಮನಸೂರೆಗೊಂಡಿತ್ತು. ಹತ್ತು ವರ್ಷಗಳ ಪರಿಶ್ರಮಗೈದ ಸುಹಾಸ್‌ ಕರ್ನಾಟಕ ಮತ್ತು ಚೆನ್ನೈನ ವಿದ್ವಾಂಸರುಗಳಿಂದ ಸೈ ಎನ್ನಿಸಿಕೊಂಡದ್ದು ನಮಗೆ ತಿಳಿಯುವಂತಹ ಸಂಗೀತ. ಸಾಥಿಯಾಗಿದ್ದವರು ನಮ್ಮ ಕೇರಿಯ ಮೃದಂಗಂ ಕಲಾವಿದ ಸುಧೀಂದ್ರ ರಾವ್‌.

ನಮ್ಮ ಸಂತೋಷದ ಮಧ್ಯೆ ಹಂಚಿಕೊಳ್ಳಬೇಕಾದ ಒಂದು ಅಂಶಕ್ಕಿಂತಲೂ ಹೆಚ್ಚು, ಬಹಳ ಹೆಚ್ಚಿನ ಪ್ರತಿಭೆ ಸುಹಾಸ್‌ನದ್ದು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಸ್‌ಸಿ , ದಿನಗಳಿಂದಲೂ ಪರಿಚಯವಿದ್ದ ಕನ್ನಡಿಗ ದಂಪತಿಗಳಾದ ಡಾ. ಸುಧಾಕರ್‌ ಮತ್ತು ಡಾ. ಉಷಾ ಅವರುಗಳ ಹೆಮ್ಮೆಯ ಪುತ್ರದ್ವಯರಲ್ಲಿ ಸುಹಾಸ್‌ ಅಣ್ಣ ಹಾಗೂ ಉಲ್ಲಾಸ್‌ ತಮ್ಮ. 2002ರಲ್ಲಿ ಅಕ್ಕ ಸಮ್ಮೇಳನದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಮೊದಲ ಬಹುಮಾನ ಗಳಿಸಿದ 12ರ ಸುಹಾಸ್‌ನನ್ನು ನಾನು ಆಗೀಗ ನೋಡುತ್ತಲೇ ಇದ್ದೆ.

ಇತ್ತೀಚೆಗಂತು ಅಮೇರಿಕದ ಎಲ್ಲ ಭಾರತಿಯರ, ಅದರಲ್ಲೂ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚು ಒತ್ತು ಕೊಡುವ ತಮಿಳರ ನಡುವೆಯೂ ಮಿಂಚಿ ಸೈ ಎನ್ನಿಸಿಕೊಳ್ಳುತ್ತಿದ್ದ ಸುಹಾಸ್‌. ಮೊನ್ನೆ ಒಮ್ಮೆ ಹೀಗೆ ಗೆಳೆಯರ ಭೇಟಿಗೆ ಹೋದ ನಾನು ಅವರ ಮನೆಯಲ್ಲಿ ಉಳಿದಿದ್ದೆ. ನಡುರಾತ್ರಿ ಎದ್ದಾಗೊಮ್ಮೆ ಕಿವಿಗೆ ಬಿದ್ದುದು ಕರ್ನಾಟಕ ಸಂಗೀತದ ಸುಶ್ರಾವ್ಯ ಗಾಯನ. ರಾಗ ತಾಳಗಳು ನನ್ನ ಬುದ್ದಿಗೆ ಅರ್ಥವಾಗುವ ಮೊದಲೇ ಹೃದಯಕ್ಕೆ ತಟ್ಟುತ್ತವೆ, ಮನಸ್ಸನ್ನು ಮೀಟುತ್ತವೆ. (ಅಂದ್ರೆ ಸಂಗೀತದ ಜ್ಞಾನ ಹೆಚ್ಚು ಕಡಿಮೆ ಸೊನ್ನೆ ;-). ಇರಲಿ, ಬೆಳಿಗ್ಗೆ ಎದ್ದವನೇ ಗೆಳೆಯನಿಗೆ ಹೇಳಿದ್ದೆ, ‘ನಿಮ್ಮ ಮಗನಿಗೆ ಪಾಪ ತುಂಬಾ ಸುಸ್ತಾಗಿರಬೇಕು; ಸಂಗೀತ ಕೇಳುತ್ತಲೇ ನಿದ್ದೆ ಹೋದ ಹಾಗಿದೆ’ಎಂದು. ‘ಹಾಗೇನಿಲ್ಲ, ಅವ ದಿನವೂ ಮಾಡುವುದು ಅದನ್ನೇ; ಅಂದ್ರೆ ರಾತ್ರಿಯಿಡೀ ಸಂಗೀತ ಕೇಳುತ್ತಾ ನಿದ್ದೆ ಹೋಗಿರುತ್ತಾನೆ’, ಎಂಬ ಉತ್ತರ ಕೇಳಿ, ಓಂದು ಘಳಿಗೆ ದಂಗು ಬಡಿದು ಹೋದೆ.

ಮರೆತು ರಾತ್ರಿಯಿಡೀ ಟಿ.ವಿ.ಯ ಸದ್ದಿಗೆ ಮಲಗಿದವರಷ್ಟೆ ಗೊತ್ತಿದ್ದ ನನಗೆ, ಹದಿಹರೆಯದ ಅಮೆರಿಕನ್ನಡಿಗ ಹುಡುಗ ಶಾಸ್ತ್ರೀಯ ಸಂಗೀತ ಕೇಳುತ್ತ ಮೈಮರೆಯುವ ಪರಿಪಾಠ ಊಹೆಗೆ ನಿಲುಕ್ಕದ್ದಾಗಿತ್ತು. ಇದಕ್ಕಿಂತಲೂ ಅಚ್ಚರಿ ಹುಟ್ಟಿಸಿದ ವಿಷಯವೆಂದರೆ, ಸುಹಾಸ ವೆಸ್ಟ್‌ವುಡ್‌ ಹೈಸ್ಕೂಲಿನ ಬ್ಯಾಂಡಿನಲ್ಲಿ ಸ್ಯಾಕ್ಸೊಫೋನ್‌ ಮತ್ತು ಕ್ಲಾರಿಯೊನೆಟ್‌ ಬಾರಿಸುತ್ತಾನೆ. ಹಾಗಿದ್ದೂ ಮನೆಯೆಲ್ಲಾ ಕರ್ನಾಟಕ ಶಾಸ್ತ್ರೀಯ ಸಂಗೀತದ ವಾತಾವರಣ. ಹೈಸ್ಕೂಲ್‌ ಬ್ಯಾಂಡಿಗೆ ಸೇರ ಬೇಕಾದರೆ ಮಕ್ಕಳು ವಹಿಸ ಬೇಕಾದ ಶ್ರಮದ ಅರಿವಿದ್ದ ನನಗೆ, ಸುಹಾಸ್‌ ರಾವ್‌ ಲೀಲಾಜಾಲವಾಗಿ ಆ ಜವಾಬ್ದಾರಿಯನ್ನು ನಿರ್ವಹಿಸಿ, ಮನೆಯಲ್ಲಿ ಕೇವಲ ಭಾರತೀಯ ಸಂಗೀತವನ್ನಷ್ಟೇ ಆಲಿಸುವ ಪರಿ, ಈವರೆಗೆ ಕಂಡು ಕೇಳದ, ಈಗ ಕಣ್ಣಾರೆ ನೋಡಿಲ್ಲದಿದ್ದರೆ ನಂಬಲಸಾಧ್ಯವಾದ ವಿಷಯವಾಗಿತ್ತು.

ತಂದೆ ತಾಯಿಗಳ ಪ್ರೋತ್ಸಾಹ ಮತ್ತು ಪ್ರಯತ್ನದಿಂದ ನೃತ್ಯ, ಸಂಗೀತ ಕಲಿತು, ಅದರಲ್ಲಿ ಸಾಕಷ್ಟು ಪರಿಶ್ರಮ, ಸಾಧನೆ ಮಾಡಿದ ಮಕ್ಕಳು ಮುಂದೆ ಆ ಕಲೆಗಳನ್ನು ಮರೆತ ಉದಾಹರಣೆಗಳ ನಡುವೆ, ನಮ್ಮ ಭಾಷೆ ಸಂಸ್ಕೃತಿಯ ಉಳಿವು ಪಾಶ್ಚಿಮಾತ್ಯರ ನಡುವೆ ಕಷ್ಟಸಾಧ್ಯವೆನಿಸುವ ಅನುಭವ ಹೆಚ್ಚಿನವರದು. ಭಾರತದಲ್ಲಿಯೇ ಹರಡುತ್ತಿರುವ ಪಾಪ್‌ ಕಲ್ಚರ್‌ ನೋಡಿದವರಿಗೆ ಸುಹಾಸ್‌ ರಾವ್‌ನನ್ನು ತೋರಿಸಿ ಹೆಮ್ಮೆ ಪಟ್ಟುಕೊಳ್ಳ ಬೇಕೆಂಬ ನಿಶ್ಚಯ ಅಂದೇ ಮಾಡಿಕೊಂಡೆ.

ನಮ್ಮ ಪುಟ್ಟ ಸಂಘದ ದಶಮಾನೋತ್ಸವಕ್ಕೆ ಅರ್ಥ ಭರಿಸುವ ಕಾರ್ಯಕ್ರಮವೆಂದರೆ ಅಪ್ಪಟ ಹದಿಹರೆಯದ ಅಮೆರಿಕನ್ನಡಿಗನ ಕಚೇರಿ, ಎಂದುಕೊಂಡವ, ನಮ್ಮ ಸಂಘದ ಕಾರ್ಯಕಾರಿ ಸಮಿತಿಗೆ ಸಲಹೆ ಕೊಟ್ಟಿದ್ದೆ. ಈಗ ಸಾರ್ಥಕವೆನಿಸಿತು; ಕಚೇರಿ ಮುಗಿಯುವ ಹೊತ್ತಿಗೆ ಎಲ್ಲರ ಮನಸೂರೆಗೊಂಡ ಸುಹಾಸ್‌ ಹದಿನಾರಷ್ಟೆ ಎಂದು ಹೇಳುವುದಕ್ಕೆ ಅರ್ಥವಿರಲಿಲ್ಲ. ಕೇವಲ ಕೈಚಳಕವಷ್ಟೇ ಆಗಿರದೆ, ನಲ್ವತ್ತು ಮೀರಿದ ನನ್ನಂತವರ ಒಣ ಮನಸ್ಸನ್ನೂ ಮೀಟುವ ಪ್ರೌಢಿಕೆ, ಸಂಗೀತ ಜ್ಞಾನ. ತನ್ನ ಕಾರ್ಯಕ್ರಮಕ್ಕೆ ನಿಗದಿಯಾಗಿದ್ದ 60 ನಿಮಿಷಗಳಿಗೆ ಸರಿಯಾಗಿ ಮಂಗಳ ಹಾಡಿದ ಶಿಸ್ತು ಕಂಡು ಭವಿಷ್ಯದ ಬಗ್ಗೆ ಭರವಸೆ ಹುಟ್ಟಿತ್ತು. ಬರಿಯೆ ನಮ್ಮ ಸಂಸ್ಕೃತಿಯ ಉಳಿವಿನ ಬಗ್ಗೆಯಲ್ಲ; ಮನುಷ್ಯನ ಉಳಿವಿನ ಬಗ್ಗೆ. ಸುಹಾಸ್‌ನಂತವರು Harvard, MIT, Stanford, ಅಂತ ಕಡೆ ಹೋಗಿ ಭವಿಷ್ಯದ ದಾರಿ ಹುಡುಕುತ್ತಾರೆ, ಆ ದಾರಿ ಹುಡುಕುವ ರೂವಾರಿಗಳ ಮನಸ್ಸಿನಲ್ಲಿ, ಪೂರ್ವದ ಅಚ್ಚಿದ್ದರೆ, ಪೂರ್ವ ಪಶ್ಚಿಮಗಳ ಸಂಗಮ ಸುಸೂತ್ರವಾದೀತೆಂಬ ಭರವಸೆ ನನ್ನದು.

ಬೆಳಗ್ಗೆಯಷ್ಟೆ ನಮ್ಮ ಮನೆಯಲ್ಲಿ ನನ್ನ ಹತ್ತು ವಯಸ್ಸಿನ ಪೋರನೊಡನೆ ಪ್ಲಾಸ್ಟಿಕ್‌ ಆಟಿಕೆಗಳೋಡನೆ ಮೈ ಮರೆತಿದ್ದ ಮನಸ್ಸೇ ಇದು ಎಂದುಕೊಳ್ಳುತ್ತಿದ್ದಾಗ, ಪಕ್ಕಕ್ಕೆ ಬಂದು, -uncle, Thanks for arranging the concert ಎನ್ನುವಷ್ಟು ವಿನಯವನ್ನೂ ತೋರಿಸಿದ್ದ ಪೋರ. ಪ್ರತಿ ಬಾರಿ ಪ್ರೇಕ್ಷಕರು ಚಪ್ಪಾಳೆ ಬಾರಿಸಿದಾಗಲೂ, ವಿನಯದಿಂದ ಕೈಮುಗಿಯುತ್ತಿದ್ದ ಸಂಗೀತಗಾರನ ವಯಸ್ಸು ತಿಳಿಯುವಂತಿರಲಿಲ್ಲ. ಕಚೇರಿ ಮುಗಿಯುತ್ತಿದ್ದಂತೆಯೇ ನಮ್ಮೂರಿನ ಹುಡುಗರೊಡನೆ ಹರಟೆಗಿಳಿದ ಹುಡುಗು ಮನಸ್ಸು. ನನಗೋ ನನ್ನ ಮಕ್ಕಳೂ ಸೇರಿದಂತೆ, ಇಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೊಂದು ಮಾದರಿ ಸುಹಾಸ್‌ ಆಗಿದ್ದ. ಬರುವ ವರ್ಷ ಕಾಲೇಜಿಗೆ ಹೋಗಬೇಕಾದ ಸುಹಾಸ್‌, ಬೇಸಿಗೆ ರಜೆಯಲ್ಲಿ ಮತ್ತೊಮ್ಮೆ ಭಾರತಕ್ಕೆ ಹೋಗಿ ಅಲ್ಲಿ ಸಂಗೀತ ಕಲಿಯ ಬೇಕೆನ್ನುತ್ತಾನೆ. ಭವಿಷ್ಯದ ಯೋಚನೆಯಲ್ಲಿ ಮುಳುಗಿದ ತಾಯಿಯದು, ಮಗ ಕಾಲೇಜಿಗೆ ಅನುಕೂಲವಾಗುವಂತಹ ಯಾವುದಾದರೂ ಕಾರ್ಯಕ್ರಮಗಳನ್ನು ಇಲ್ಲಿಯೇ ಹಮ್ಮಿಕೊಳ್ಳಲೆಂಬ ಸಲಹೆ. ಮಕ್ಕಳನ್ನು ಹೇಗೆ ಬೆಳೆಸಿದರೆ ಅವರು ಸುಹಾಸ್‌ನಂತೆ ಆದಾರು ಎಂಬುದಕ್ಕೆ ಉತ್ತರ ಮಾತ್ರ ಅವರಮ್ಮ(ಪ್ಪ)(ಇ ವಿಳಾಸ -[email protected])ರಲ್ಲಿ ಇದ್ದೀತಷ್ಟೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X