• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೊತೆಜೊತೆಯಲಿ ಬೇವು-ಬೆಲ್ಲ ಸವಿದ ಫಿಲಡೆಲ್ಫಿಯಾ ಕನ್ನಡಿಗರು

By Staff
|

ಯುಗಾದಿ ನೆಪದಲ್ಲಿ ಫಿಲಡೆಲ್ಫಿಯಾದಲ್ಲಿನ ಕನ್ನಡ ಮನಸ್ಸುಗಳು ಒಂದಾದವು. ಆ ಮೂಲಕ ತವರಿನ ಆನಂದವನ್ನು ದಕ್ಕಿಸಿಕೊಂಡವು. ಮೊದಲ ಕಾರ್ಯಕ್ರಮದಲ್ಲೇ ಅಚ್ಚುಕಟ್ಟುತನ ಮೆರೆದ ಇಲ್ಲಿನ ಕನ್ನಡಿಗರ ಮುಖದಲ್ಲಿ ಸಂತೃಪ್ತ ಭಾವ.

ಕೆಲವು ಸ್ನೇಹಿತರು ಸೇರಿ ನಾವೆಲ್ಲ ಒಂದು ಕನ್ನಡ ಕೂಟ ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದೇವೆ. ನೀವೂ ಸೇರಿಕೊಳ್ಳಬೇಕು ಎಂದು ಹೇಳಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ! ಯುಗಾದಿ ಹಬ್ಬ ಹತ್ತಿರದಲ್ಲೇ ಇದ್ದುದರಿಂದ ಇದೇ ಸರಿಯಾದ ಸಮಯವೆಂದು ಯುಗಾದಿ ಕಾರ್ಯಕ್ರಮದ ಯೋಜನೆ ಹಾಕಲಾಯಿತು.

ನಮಗೆ ಪರಿಚಯವಿರುವ ಕನ್ನಡಿಗರಿಗೆಲ್ಲಾ ವಿಷಯ ತಿಳಿಸಿ ಅವರ ಆಸಕ್ತಿಯನ್ನ ಖಚಿತಪಡಿಸಿಕೊಂಡೆವು. ಮೊದಲು ಸುಮಾರು 60 ಜನ ಹಿಡಿಸುವ ಸ್ಥಳವನ್ನು ಕಾದಿರಿಸಲಾಗಿತ್ತು. ಆದರೆ ಜನರ ಪ್ರತಿಕ್ರಿಯೆ ನೋಡಿ ಇನ್ನೊಂದು ದೊಡ್ಡ ಸ್ಥಳಕ್ಕೆ ಬದಲಾಯಿಸಬೇಕಾಯಿತು. ಈ ಸ್ಥಳದಲ್ಲಿ ವೇದಿಕೆ ಇದ್ದು ಎಲ್ಲ ವ್ಯವಸ್ಥೆ ಚೆನ್ನಾಗಿ ಇದ್ದುದರಿಂದ ಬಣ್ಣಬಣ್ಣದ ಕಾರ್ಯಕ್ರಮಗಳಿಗೆ ತಯಾರಿ ಪ್ರಾರಂಭ ಆಯಿತು.

ಏಪ್ರಿಲ್‌ 14 ಸಂಜೆ 4 ಘಂಟೆಗೆ ಬ್ಲೂ ಬೆಲ್‌-ನಲ್ಲಿ ಇರುವ ಕ್ಯಾಲ್ವರಿ ವಿಷನ್‌ ಚರ್ಚಿನಲ್ಲಿ ಎಲ್ಲರೂ ಬಹಳ ಉತ್ಸಾಹದಿಂದ ಸೇರಿದೆವು. ಜನರೆಲ್ಲ ಬೊಂಬಾಯಿ ಬೊಂಡ ಹಾಗು ಬೇವು ಬೆಲ್ಲ ಸೇವಿಸಿ ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಲು ಕುಳಿತರು.

ಹಿರಿಯರಾದ ಶ್ರೀಮತಿ ಶಮಂತಕ ಶ್ರೀನಿವಾಸನ್‌ ಮತ್ತು ವನಜಾ ಮರಿಸಿದ್ದಯ್ಯ ಅವರಿಂದ ದೀಪ ಬೆಳಗಿಸಿ ಸರ್ವಜಿತ್‌ ಸಂವತ್ಸರದಲ್ಲಿ ಪ್ರಾರಂಭವಾಗುತ್ತಿರುವ ಈ ನಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.

ಪ್ರಾರ್ಥನೆ ‘ಗಜವದನ ಬೇಡುವೆ’ಯನ್ನು ಮಕ್ಕಳಾದ ಅನಿರುದ್ದ ರಾವ್‌, ಅನುರಾಗ್‌ ರಾವ್‌, ಹಿಮವತ್‌ ಜೋಯಿಸ್‌, ಸಂಜನಾ ಜಯರಾಂ, ಮೇಘಾ ಕೇಶವ್‌, ರಶ್ಮಿ ಸಗರಂ ಮತ್ತು ಚೈತ್ರ ನಟರಾಜ್‌ ಬಹಳ ಚೆನ್ನಾಗಿ ಹಾಡಿದರು, ಪೂಜಾ ಅನಂತ ಒಂದು ಗಣಪತಿ ಶ್ಲೋಕನ್ನು ಹಾಡಿದಳು. ನಂತರ ನಮ್ಮ ಕೂಟದ ಉದ್ದೇಶಗಳೇನು, ನಾವು ಹೇಗೆ ಮುಂದೆ ಸಾಗಬೇಕು ಎಂದು ಮಾತನಾಡಿದವರು ಸುದೀಪ್ತಿ ಮೂರ್ತಿ, ಹಾಗೇ ಸದಸ್ಯರೆಲ್ಲರಿಂದ ಅನಿಸಿಕೆ, ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಯಿತು.

ಸುದೀಪ್ತಿ ಮೂರ್ತಿಯವರು ಸುಂದರವಾಗಿ ತಯಾರಿಸಿದ ಕಾರ್ಯಕ್ರಮದ ಕರಪತ್ರ ನೋಡಿ ಬಹಳ ಕುತೂಹಲದಿಂದ ಒಳಗೆ ಬಂದ ಜನರು ಮೊದಲ ಕಾರ್ಯಕ್ರಮ ಮೀನಾ ಭಾಷ್ಯಮ್‌ ಅವರು ಬರೆದ ‘ಯುಗಾದಿ’ ಮಕ್ಕಳ ಕಿರುನಾಟಕ ನೋಡಿ ದಂಗಾಗಿ ಹೋದರು.

ಬಹಳ ಅಚ್ಚುಕಟ್ಟಾಗಿ ಈ ಕಾರ್ಯಕ್ರಮ ನಿರ್ವಹಿಸಿದವರು ಸುದೀಪ್ತಿ ಮೂರ್ತಿ ಮತ್ತು ಪ್ರಿಯಾ ಕೇಶವ್‌. ಭಾಗವಹಿಸಿದ ಮಕ್ಕಳು ನಿರಾಲಿ ಮೂರ್ತಿ, ಪ್ರಣವ್‌ ಕೇಶವ್‌, ಸುನಿಲ್‌ ಸಜ್ಜನ್‌ ಮತ್ತು ಸೀಮಾ ಸಜ್ಜನ್‌. ಒಂದೇ ದಿನದ ಅಭ್ಯಾಸದಲ್ಲಿ ಇಷ್ಟು ಚೆನ್ನಾಗಿ ಕನ್ನಡ ನಾಟಕ ಮಾಡಿತೋರಿಸಿದ ಈ ಮಕ್ಕಳು ನೀವು ಕಲಿಸಿದರೆ ಸುಲಭವಾಗಿ ಕನ್ನಡ ಮಾತನಾಡಬಲ್ಲೆವು ಎಂಬುದನ್ನು ರುಜುವಾತುಪಡಿಸಿದರು.

ಮಹಿಳೆಯರೆಲ್ಲಾ ‘ಯುಗಯುಗಾದಿ ಕಳೆದರೂ’ ಹಾಡಿ ಎಲ್ಲರಿಗೂ ಯುಗಾದಿ ಶುಭಾಶಯಗಳನ್ನು ಕೋರಿದರು. ನಂತರ ಧೈರ್ಯವಾಗಿ ವೇದಿಕೆ ಮೇಲೆ ಬಂದ ಪುಟ್ಟ ಪುಟ್ಟ ಮಕ್ಕಳು ಅತಿನವ್‌ ಮೂರ್ತಿ, ಚಿರಾಗ್‌ ಚಕ್ರವರ್ತಿ, ಯಶಸ್‌ ರಾವ್‌, ಅನುಶ್ಕ ಹರ್ವೆ, ಸೀಮಾ ಸಜ್ಜನ್‌, ನಿರಾಲಿ ಮೂರ್ತಿ, ಅಕಾಂಕ್ಷಾ ಭಟ್‌ ಮತ್ತು ಅನನ್ಯಾ ರಾವ್‌ ‘ಒಂದು ಎರಡು ಬಾಳೆಲೆ ಹರಡು’ ಶಿಶುಗೀತೆಯನ್ನು ಹಾಡಿದರು.

ನೀವು ದೇವರ ಮುಂದೆ ರಂಗೋಲಿ ಇಡೋದನ್ನೇ ಮರೆತಿದ್ದೀರಿ ಎಂದ ಪುಟ್ಟು, ಪದ್ದು, ಶಾರದೆಯರಾಗಿ ಬಂದ ಅಂಕಿತಾ ಭಟ್‌, ಅನುಶ್ಕ ಹರ್ವೆ, ಜಾಹ್ನವಿ ರಾವ್‌, ನಮಿತಾ ಸತೀಶ್‌, ಅಕಾಂಕ್ಷಾ ಭಟ್‌, ಸೀಮಾ ಸಜ್ಜನ್‌ ಮತ್ತು ನಿರಾಲಿ ಮೂರ್ತಿ ಹಾಡುತ್ತಾ, ಕುಣಿಯುತ್ತಾ ರಂಗೋಲಿ ಇಟ್ಟು ಎಲ್ಲರಿಂದ ಬಹಳ ಮೆಚ್ಚುಗೆ ಗಳಿಸಿದರು. ಈ ನೃತ್ಯದ ರೂವಾರಿ ಸುದೀಪ್ತಿ ಮೂರ್ತಿ.

ಯುಗಾದಿ ಹಬ್ಬವೆಂದರೆ ವಸಂತ ಋತುವಿನ ಆಗಮನ, ಎಲ್ಲೆಲ್ಲೂ ಹೊಸ ಚಿಗುರು, ಕೋಗಿಲೆ ದನಿ. ಈ ಋತುವಿನ ಸ್ವಾಗತ ಕೋರಿ ಎನ್‌.ಎಸ್‌.ಲಕ್ಶ್ಮಿನಾರಾಯಣಭಟ್ಟ ಅವರು ರಚಿಸಿದ ಒಂದು ಸುಂದರ ಭಾವಗೀತೆಯನ್ನು ಹಾಡಿದ್ದು ಪ್ರತಿಭಾ ಕೇಶವಮೂರ್ತಿ ಹಾಗು ಪ್ರಿಯಾ ಕೇಶವ್‌.

‘ಜೈ ಭಾರತ ಜನನಿಯ ತನುಜಾತೆ’ ಕರ್ನಾಟಕದ ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡಿದವಳು ಸುಮನ ವೆಂಕಟರಾವ್‌. ಏಳು ವರ್ಷದ ಶ್ರೀರಾಮ್‌ ವೆಂಕಟರಾವ್‌ ‘ತೀನ್‌ ತಾಳ್‌’ ತಬಲ ನುಡಿಸಿ ಪ್ರೇಕ್ಷಕರಿಂದ ಬಹಳ ಕರತಾಡನ ಗಳಿಸಿದ.

‘ಚಿನ್ನಾರಿ ಮುತ್ತ’ ಹಾಡಿಗೆ ಮಿಂಚಿನ ಕುಡಿಗಳಂತೆ ಹೆಜ್ಜೆ ಹಾಕಿದವರು ಹಿಮವತ್‌ ಜೋಯಿಸ್‌, ಪ್ರಣವ್‌ ಕೇಶವ್‌, ಸುನಿಲ್‌ ಸಜ್ಜನ್‌ ಹಾಗು ನೀಲ್‌ ಮರಿಸಿದ್ದಯ್ಯ. ‘ಚೆಲುವಯ್ಯ ಚೆಲುವೋ’ ಕೋಲಾಟ ಮಾಡಿದ ಹುಡುಗಿಯರು ಸುಷಾ ನಟರಾಜ್‌, ಸಂಜನಾ ಜಯರಾಂ, ಮೇಘಾ ಕೇಶವ್‌, ನಿಕಿತಾ ಸತೀಶ್‌, ರಶ್ಮಿ ಸಗರಂ, ಚೈತ್ರ ನಟರಾಜ್‌, ಸುಮನ್‌ ಸಜ್ಜನ್‌ ಮತ್ತು ಆಶಾ ಭಟ್‌. ಇವರ ಬಹಳ ಲಯಬದ್ದವಾದ ಕುಣಿತ ನೋಡಿದ ಪ್ರೇಕ್ಷಕರು ‘ಮತ್ತೊಮ್ಮೆ’ ಎಂದು ಕೂಗಿ, ಇನ್ನೊಂದು ಸಲ ಮಕ್ಕಳಿಂದ ಕೋಲಾಟ ಮಾಡಿಸಿ ನೋಡಿ ಖುಷಿಪಟ್ಟರು.

ಚಿನ್ನಾರಿ ಮುತ್ತ ಮತ್ತು ಕೋಲಾಟ ನೃತ್ಯಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿದ್ದ ಪ್ರತಿಭಾ ಕೇಶವಮೂರ್ತಿ ಅವರಿಗೆ ಈ ಮಕ್ಕಳ ಉತ್ಸಾಹ, ಪ್ರೇಕ್ಷಕರ ಮೆಚ್ಚುಗೆ ನೋಡಿ ಬಹಳ ಸಂತೃಪ್ತಿ ವ್ಯಕ್ತಪಡಿಸಿದರು.

ಶಶಾಂಕ್‌ ನಾರಾಯಣ್‌ ಅವರು ‘ಬಾನಿಗೊಂದು ಎಲ್ಲೆ ಎಲ್ಲಿದೆ’ ಹಾಡನ್ನು ಡಾ।।ರಾಜಕುಮಾರ್‌ ಅವರಂತೆಯೇ ಹಾಡಿ ಗಂಡಸರ ಭಾಗವಹಿಸುವಿಕೆಯ ಕೊರತೆಯನ್ನು ತುಂಬಿದರು. ಕಡೆಯದಾಗಿ ಕೆಲವು ಕನ್ನಡಗೀತೆಗಳನ್ನು ಹಾಡಿದ್ದು ಪ್ರತಿಭಾ ಕೇಶವಮೂರ್ತಿ, ಪ್ರಿಯಾ ಕೇಶವ್‌, ಮೀನಾ ಭಾಷ್ಯಮ್‌, ಸುದೀಪ್ತಿ ಮೂರ್ತಿ, ಕಲ್ಪನಾ ರಾವ್‌, ಕಲಾವತಿ ಸಜ್ಜನ್‌, ಲಕ್ಷ್ಮಿ ಹರೀಶ್‌ ಮತ್ತು ರೂಪ ನಟರಾಜ್‌. ಮೀನಾ ಭಾಷ್ಯಮ್‌ ವಂದನಾರ್ಪಣೆ ಮಾಡಿದರು, ಭಾಗವಹಿಸಿದ ಮಕ್ಕಳಿಗೆಲ್ಲ ಕರಪತ್ರ ನೀಡಲಾಯಿತು.

ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರೂಪಿಸಿದ್ದಕ್ಕಾಗಿ ಪ್ರತಿಭಾ ಕೇಶವಮೂರ್ತಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಭಾರಿ ಭೋಜನ ಬಿಸಿಬೇಳೆಬಾತ್‌, ಮಾವಿನಕಾಯಿ ಚಿತ್ರಾನ್ನ, ಚಪಾತಿ, ಸಾಗು, ಉಸ್ಲಿ, ಕೋಸಂಬರಿ, ರಾಯತ ಮತ್ತು ಜಾಮೂನ್‌ ಎಲ್ಲ ಮಹಿಳೆಯರು ರುಚಿಯಾಗಿ ಮಾಡಿಕೊಂಡು ತಂದಿದ್ದರು.

ನೂರಕ್ಕೂ ಹೆಚ್ಚು ಜನ ಸೇರಿದ್ದ ಕಾರ್ಯಕ್ರಮದಲ್ಲಿ ಪರದೆಯ ಮುಂದೆ ದುಡಿದವರು ಕೆಲವರಾದರೆ ಪರದೆಯ ಹಿಂದೆ ದುಡಿದು ಈ ಕಾರ್ಯಕ್ರಮದ ಯಶಸ್ಸಿಗೆ ಬಹಳವಾಗಿ ಕಾರಣರಾದವರು ಹಲವಾರು ಜನ. ಮೊದಲ ಕಾರ್ಯಕ್ರಮವನ್ನು ಇಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕಾಗಿ ಎಲ್ಲರ ಮುಖದಲ್ಲೂ ಸಂತೃಪ್ತಿಯ ನಗು ತುಂಬಿ ತುಳುಕುತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X