‘ಶಿವಶಿವನೆಂದರೆ ಭಯವಿಲ್ಲ’ ಅನ್ನೋದು ತಮಾಷೆಯಲ್ಲ!
ಭಟ್ಟರಿಗೆ ದಕ್ಷಿಣೆಗೇನು ಮಾಡಲೆಂದು ಯೋಚಿಸ್ತಿದ್ದೆ ನೋಡು, ಈಶ್ವರ ದಯಪಾಲಿಸಿದ ಎಂದು ಅಪ್ಪ ಹೇಳುವಾಗ ಅನ್ನಿಸುತ್ತಿತ್ತು -ಇದೆಂತಹ ವಿಪರ್ಯಾಸ ವಿಷ್ಣುವಿನ ಪೂಜೆಗೆ ಈಶ್ವರನಿಂದ ಸಹಾಯ!!!
ಅದಕ್ಕೇ ಹೇಳುವುದಿರಬೇಕು;
ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ
ಸೋಮ ಶಂಕರನೆ ಭೈರವ ರುದ್ರನಂತೆ
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ
ಪ್ರೇಮ ಘೋರಗಳೊಂದೆ!!
‘ದೇವನೊಬ್ಬ ನಾಮಹಲವು’ ಪರಮಾತ್ಮನಿಗೆ ನಾವು ಯಾವ ರೂಪ ಕೊಡುತ್ತೇವೋ ಆ ರೂಪ ಪಡೆಯುತ್ತಾನೆ ಆತ ‘ಯದ್ಭಾವಂ ತದ್ಭವತಿ’ ಅಲ್ಲವೆ?.
ಕಾಲೇಜು ಮೆಟ್ಟಿಲೇರಿ ಎ,ಬಿ,ಸಿ,ಡಿ ಯನ್ನು ಗಟ್ಟಿಯಾಗಿ ಹೇಳುವಂತಾದಾಗ ಕೆಲವೊಮ್ಮೆ ಈದೇವರ ಮೇಲೆ ಪ್ರಶ್ನೆಗಳ ಅಲೆಯೆದ್ದುದ್ದೂ ಇದೆ. ಅಲ್ಲದೆ ಮೂರ್ತಿರಾಯರಂತವರ ಒಂದೆರೆಡು ಪುಸ್ತಕಗಳ ಕೆಲವು ಪುಟಗಳನ್ನು ಮಗುಚಿಹಾಕಿದ ಮೇಲೆ ಹೌದಲ್ಲವೆ, ತ್ರಿಕಾಲಜ್ಞಾನಿಯಾದ ಈಶ್ವರನಿಗೆ ಪಾರ್ವತಿಯ ಪ್ರೈವಸಿಯ ಬಗ್ಗೆ ಅರಿವಾಗಲಿಲ್ಲವೇ? ಆನೆಯ ತಲೆಯನ್ನು ಗಣಪತಿಗೆ ಜೋಡಿಸಬಲ್ಲ ಶಿವ, ಅಲ್ಲೇ ಬಿದ್ದಿದ್ದ ಆತನ ಮೊದಲ ಶಿರವನ್ನೇಕೆ ಜೋಡಿಸಲಿಲ್ಲ??? ಎಂಬಿತ್ಯಾದಿಯಾಗಿ ಕೇಳಿಕೊಂಡಿದ್ದೇನೆ.
ಆದರೆ ಹೀಗೆ ಪುರಾಣದ ಕಥೆಗಳ ಮೇಲೆ ನೂರಾರು ಪ್ರಶ್ನೆಮಾಡುವ ಈ ಮನಸ್ಸಿಗೂ ಗೊತ್ತು . ಇವುಗಳೆಲ್ಲದರ ಹಿಂದೆ ಜಗದ ಉಳಿವಿಗೆ ಸಾಕಾರವಾದ ಪ್ರೀತಿ, ಸ್ನೇಹ, ಹೊಂದಾಣಿಕೆಗಳ ಪ್ರಕೃತಿ ತತ್ವದ ಜೊತೆಗೆ ಈ ಪ್ರಾಣಿಗಳ ಸಂಕೇತಗಳು ನಮ್ಮ ಬದಕಿನಲ್ಲಿ ಬಹಳಷ್ಟು ಉತ್ತಮ ಅಂಶಗಳನ್ನು ಹೊತ್ತುಬಂದಿವೆಯೆಂದು.ಇದಕ್ಕೂ ಮೇಲಾಗಿ, ಅಂಥಾ ಬರಗಾಲದಲ್ಲಿಯೂ ಈಶ್ವರ ನಮ್ಮನ್ನು ಉಪವಾಸ ಹಾಕಲಿಲ್ಲ ಎನ್ನುವ ಅಪ್ಪನ ವಿಶ್ವಾಸದ ನುಡಿಯಾಂದೇ ಸಾಕಿತ್ತು ನನ್ನೆಲ್ಲ ದ್ವಂದ್ವಗಳನ್ನು ಓಡಿಸಿ, ಈಶ್ವರನಲ್ಲಿ ಶ್ರದ್ಧೆ ಮೂಡಿಸಲು!!
ನಾವು ಬಯಸಿದ್ದು ಸಿಕ್ಕಾಗ ದೇವನಿದ್ದಾನೆನ್ನುವ, ನಮ್ಮ ಬಯಕೆ ಈಡೇರದಿರುವಾಗ ದೇವನೂ ಇಲ್ಲ ದಿಂಡರೂ ಇಲ್ಲ ಎಂದು ‘ನಂಬಿಯೂ ನಂಬದಿಹ ಇಬ್ಬಂದಿಗಳೇ’ ಹೆಚ್ಚಿರುವ ಈ ಕಾಲದಲ್ಲಿ, ಕಷ್ಟಗಳ ಮೇಲೆ ಕಷ್ಟ, ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಿದ್ದರೂ ಈಶ್ವರನನ್ನೇ ನಂಬಿ ನೇಗಿಲು ಹಿಡಿದು ಭೂಮಿತಾಯಿಯ ಸೇವೆಯಲ್ಲಿ ತಲ್ಲೀನರಾಗುವ ಅಪ್ಪ ಹಾಗು ಅವರ ಹೆಜ್ಜೆಯನ್ನೇ ಅನುಸರಿಸುವ ನನ್ನ ಅಮ್ಮನ ಮುಖಗಳಲ್ಲಿ ಇಂದು ಕಾಣುವ ನಗು, ಸಂತಸಗಳಷ್ಟೇ ಸಾಕಲ್ಲವೆ ನನಗೆ ಶಿವನನ್ನು ಕೊನೆಯವರೆಗೂ ಧ್ಯಾನಿಸಲು.
ಹೌದು, ಶಿವನಷ್ಟು ಸುಲಭವಾಗಿ ಒಲಿವ ದೇವ ಮತ್ತೊಬ್ಬನಿಲ್ಲ! ಮಹಾಶಿವರಾತ್ರಿಯಂದು ಉಪವಾಸವಿದ್ದು, ಜಾಗರಣೆ ಮಾಡಿ, ಶಿವನ ತಲೆಯ ಮೇಲೊಂದು ಬಿಲ್ವಪತ್ರೆಯನಿರಿಸಿದರೂ ಸಾಕು ಶಿವ ಒಲಿಯುತ್ತಾನೆ. ಬೇಡರ ಕಣ್ಣಪ್ಪನಿಗೆ, ಮಾರ್ಕಾಂಡೇಯನಿಗೆ ಒಲಿದ ಶಿವ!












Click it and Unblock the Notifications