ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡ್ನಿಯಲ್ಲಿ ಸ್ವಾತಂತ್ರ ಷಷ್ಟಿಪೂರ್ತಿ ಶಾಂತಿ

By Staff
|
Google Oneindia Kannada News


ಆಸ್ಟ್ರೇಲಿಯಾದಲ್ಲಿ ಜನಗಣ ಮನ ಮೊಳಗಿದ ಸುಸಂದರ್ಭ. ಅಲ್ಲಿ ಭಾರತ ಸ್ವಾತಂತ್ರ್ಯ ದಿನದ ಸಡಗರ.. ಕಾರ್ಯಕ್ರಮದ ಹೆಚ್ಚಿನ ವಿವರ ಇಲ್ಲಿದೆ.



Colourful Indian Independence Day in Sidney"ನೀನು ಸಂಕುಚಿತ ಮನೋಭಾವ ತಾಳಿ ಸೋಮಾರಿಯಾದರೆ, ಭಾರತ ಕೂಡ ಸಂಕುಚಿತ ಮನೋಭಾವ ತಾಳಿ, ಸೋಮಾರಿ ರಾಷ್ಟ್ರವಾಗುತ್ತದೆ; ನೀನು ವಿಶಾಲ ಮನೋಭಾವವನ್ನು ವೄದ್ಧಿಸಿಕೊಂಡು ಕ್ರಿಯಾಶೀಲನಾದರೆ ಭಾರತಕೂಡ ವಿಶಾಲ ಮನೋಭವವನ್ನು ಪ್ರದರ್ಶಿಸಿ, ಕ್ರಿಯಾಶೀಲ ರಾಷ್ಟ್ರವಾಗುತ್ತದೆ" ಭಾರತದ ಒಂದು ವಿಮಾನ ನಿಲ್ದಾಣದಲ್ಲಿ ಕಂಡ, ನೆಹರೂ ಉವಾಚವನ್ನು ಪುನರುಚ್ಚರಿಸಿದ್ದು ಯಾರು ಗೊತ್ತೆ? ಆಸ್ಟ್ರೇಲಿಯಾದ ವಲಸೆ ಸಚಿವ ಕೆವಿನ್ ಆಂದ್ರೋಸ್ .

ಸಚಿವರು ಮಾತನಾಡಿದ ಸಂದರ್ಭ, ಸಿಡ್ನಿಯಲ್ಲಿ ಇದೇ ಆಗಸ್ಟ್ ಹನ್ನೆರಡರಂದು, ಆಸ್ಟ್ರೇಲಿಯಾದಲ್ಲಿರುವ ಇನ್ನೂರ ಐವತ್ತು ಸಾವಿರ ಭಾರತೀಯರ ಪ್ರತಿನಿಧಿ ಸಭೆ UIA, (United India Associations)ಏರ್ಪಡಿಸಿದ್ದ ಭಾರತ ಆಸ್ಟ್ರೇಲಿಯಾ ಮೈತ್ರಿ ಕೂಟದ ಉತ್ಸವದಲ್ಲಿ. ಇದೊಂದು ವಾರ್ಷಿಕ ಸಮಾರಂಭ, ಭಾರತ ಸ್ವಾತಂತ್ರದ ಷಷ್ಟಿಪೂರ್ತಿ ಶಾಂತಿ ಸಂದರ್ಭದಲ್ಲಿಯೇ ನಡೆದದ್ದು ಒಂದು ವಿಶೇಷ.

ಸಿಡ್ನಿಯ ಒಲಿಂಪಿಕ್ ಪಾರ್ಕ್ ಹೊರಾಂಗಣದಲ್ಲಿ ಈ ಕಾರ್ಯಕ್ರಮ. ವಿಶಾಲವಾದ ಬಯಲು, ಸಿಡ್ನಿಯಲ್ಲಿ ಜರುಗಿದ ಒಲಂಪಿಕ್ಸ್ ನಡೆದದ್ದು ಇಲ್ಲೇ. ಹೇಳುವುದಕ್ಕೆ ಚಳಿಗಾಲವಾದರೂ ಚೆನ್ನಾಗಿ ಬಿಸಿಲು ಬಂದಿತ್ತು. ಎಲ್ಲೆಲ್ಲೂ ಸಡಗರ, ರಂಗು- ಧ್ವಜ ಸ್ತಂಭದ ಮೆಲೆ ತ್ರಿರಂಗ ಧ್ವಜ, ಸುತ್ತೆಲ್ಲಾ ಸಹಸ್ರಾರು ರಂಗುಗಳು. ಸುಮಾರು ಇಪ್ಪತ್ತೈದು ಸಾವಿರ ಜನ ಸೇರಿದ್ದ ಮೇಳ, ಇದು.

Colourful Indian Independence Day in Sidneyಮುಖ್ಯ ಅತಿಥಿ ನ್ಯೂ ಸೌತ್ ವೆಲ್ಸ್ ನ ಪ್ರೀಮಿಯರ್ (ಅರ್ಥಾತ್ ಮುಖ್ಯ ಮಂತ್ರಿ) Morris Iemma ; ಇವರ ಜತೆ ಕೇಂದ್ರ ಸರ್ಕಾರದ ಆಟಾರ್ನಿ ಜನರಲ್ . ಭಾರತದ Consular General ಸುಜನ್ ಚಿನಾಯ್ ಮತ್ತಿತರರು ವೇದಿಕೆಯನ್ನು ಅಲಂಕರಿಸಿದ್ದರು. ಕ್ರಿಕೆಟ್ ಪಟು, ಈಗ "ಪರಮ ಭಾರತೀಯ", ಬ್ರೆಟ್ ಲೀ ಯ ಆಗಮನ ವಿಶೇಷವಾಗಿತ್ತು. ಅಲ್ಲದೆ ಸಿಡ್ನಿಯಲ್ಲೇ ನೆಲೆಸಿರುವ ಬಾಲಿವುಡ್ ತಾರೆ ತಾನಿಯಾ ಸೈತಾ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಕುತೂಹಲಕಾರಿ.

ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಕಮಾಲ್ ಅವರ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. World without Borders, ಎಂತಹ ಧ್ವನಿ! ಎಂತಹ ಹೃದಯ ಸಂವೇದನೆ! ನಂತರ ಶಾಲಾಬಾಲಕ ಬಾಲಕಿಯರು, ವಾದ್ಯವೃಂದದೊಡನೆ ಉಭಯದೇಶಗಳ ರಾಷ್ಟ್ರಗೀತೆಗಳನ್ನು ಹಾಡಿ ಎಲ್ಲರ ಶಹಭಾಶ್ ಪಡೆದರು. ಸಂಸ್ಮರಣ ಸಂಚಿಕೆಯನ್ನು (ಸಂಪಾದಕರು ಓಂಕಾರ ಸ್ವಾಮಿ) ಬಿಡುಗಡೆ ಮಾಡಿದಾಗ ಕುಲಜೀತ್ ಸಿಂಗ್ ಹಾಡಿದ ಭಗತ್ ಸಿಂಗ್ ಕುರಿತ ಹಾಡು; ನಿಜವಾಗಿಯೂ ಮುಗಿಲು ಮುಟ್ಟಿತು. ದೇಶಪ್ರೇಮ, ಕಳಕಳಿ ಸೂಸಿ ಬರುತ್ತಿದ್ದುವು.

UIAಗೆ ವಿಶೇಷ ಕುಮ್ಮಕ್ಕು ಕೊಡುತ್ತಿರುವ ಅದರ ಅಧ್ಯಕ್ಷ ರಾಜ್ ನಟರಾಜನ್ ಅವರ ಸ್ವಾಗತ ಭಾಷಣ. ಇದಾದನಂತರ ಆಗಮಿಸಿದ್ದ ಮಂತ್ರಿವರ್ಯರು ಮಾತನಾಡಿ "ನಮಗೆ ಭಾರತೀಯರ ಬಗ್ಗೆ, ಅದರಲ್ಲೂ ಭಾರತೀಯ ವೈದ್ಯರುಗಳ ಬಗ್ಗೆ ತೀರ ಹೆಮ್ಮೆ, ಭಾರತೀಯರು ಆಸ್ಟ್ರೇಲಿಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ" ಎಂದು ಘಂಟಾ ಘೋಷವಾಗಿ, ಪ್ರಚಂಡ ಕರತಾಡನದ ಮಧ್ಯೆ ಸಾರಿದರು. ವೇದಿಕೆಯ ಮೇಲಿದ್ದ ಗಣ್ಯರಾಗಲಿ, ಮುಂದೆ ಕುಳಿತಿದ್ದ ಜನರಾಗಲೀ ಡಾ. ಮಹಮದ್ ಹನೀಫ್ ವಿಷಯ ಎತ್ತದೇ ಹೋದದ್ದು ಭಾರತೀಯರ ಗಾಂಭೀರ್ಯತೆಗೆ ಸಾಕ್ಷಿ ಆಯಿತು.

ಇನ್ನು ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ಹೇಳಲೇ ಬೇಕಾಗಿಲ್ಲ. ಈ ಚಿಕ್ಕ ಹುಡುಗಿ ಶಾಸ್ತ್ರೀಯವಾಗಿ, ತಿಲ್ಲಾನ ನೃತ್ಯ ಮಾಡಿದರೆ, ಅಲ್ಲಿ ಬಾಂಗ್ರಾ ನೆಲದಿಂದ ಮುಗಿಲವರೆಗೆ ಹೆಜ್ಜೆ ಹಾಕಿತ್ತು. ಚಿಕ್ಕ ಮಕ್ಕಳು "ಚಲುವಯ್ಯ ಚಲುವೋ ತಾನಿ ತಂದನ" ಈಗಾದರೆ, ನಂತರ ಬಂಗಾಳದ ನೃತ್ಯ; ಮುಂದೆ ಗುಜರಾತ, ಮರಾಠ. ಇನ್ನು ಬಾಲಿವುಡ್ ಕುಣಿತಕ್ಕೆ ಯಾವುದೇ ಕೊರತೆ ಇಲ್ಲ, ಯಥೇಚ್ಚ. ಬೆಳಗಿನಿಂದ ಸಂಜೆಯವರೆಗೆ ನಿರಂತರ ಕಾರ್ಯಕ್ರಮಗಳು. ನಿಮಗೆ ಸಾಕೆನಿಸಿದರೆ ದೂರ ಅಲ್ಲಿ ನೋಡಿ. ಒಂಟೆಗಳನ್ನು ತರಿಸಿದ್ದಾರೆ. ಹೊರಡಿ ಒಂದು ಸವಾರಿ ಅನ್ನುವಷ್ಟು ಚೆಂದದ ಪರಿಸರ.

ನೂರಾರು ಮಳಿಗೆಗಳು. ಅವುಗಳಲ್ಲಿ ಹಲವಾರು ಮೃಷ್ಟಾನ್ನ ಭೋಜನ ನೀಡುವುದಕ್ಕೆ ಸಜ್ಜಾಗಿದ್ದವು. ಮಸಾಲೆ ದೋಸೆ ಬೇಕೆ? ಇಡ್ಲಿ, ವಡೆ ಸಾಂಬಾರ್, ಲಾಡು, ಜಾಮೂನ್, ಚಾಟ್ ಮಸಾಲಾ ಹೀಗೆ ಹತ್ತಾರು ವೈವಿಧ್ಯ. ಕ್ಯೂ ಉದ್ದವಿತ್ತು. ಬಹಳಹೊತ್ತು ಕಾಯಬೇಕು.

ಇನ್ನು ಸೀರೆ ಅಂಗಡಿ, ಒಡವೆ ಅಂಗಡಿ ಹತ್ತಾರು. ಮಿಕ್ಕ ಮಳಿಗೆಗಳಲ್ಲಿ ಆಶ್ರಮ, ಯೋಗ, ಅನೇಕ ಟೀವಿ ಗಳು. OAMGA ಮಳಿಗೆಯಲ್ಲಿ ನಮ್ಮವರೇ ಆದ ಡಾ. ಪ್ರಕಾಶ್ ಇದ್ದರು. ನಿಮ್ಮ ಬಿಪಿ, ರಕ್ತದ ಒತ್ತಡ ನೋಡುವುದಕ್ಕೆ.

ಅತ್ತ ಡಾ. ನಾಗಮ್ಮ ಪ್ರಕಾಶ್ ಅತಿಥಿಗಳನ್ನು ಯೋಗದತ್ತ ಕೊಂಡೊಯ್ಯುತ್ತಿದ್ದರು. ಓಂಕಾರ ಸ್ವಾಮಿ ಮತ್ತು ಮಹೇಶ್ ಬಾಬು ಬಯಸಿದಾಗ , ಬಯಸಿದಲ್ಲಿ ಪ್ರತ್ಯಕ್ಷ ವಾಗುತ್ತಿತ್ತರು. ವೇದಿಕೆ ಮುಂದೆ ಈಗಿನ UIA ಅಧ್ಯಕ್ಷ ರಾಜ್ ನಟರಾಜರ ಪತ್ನಿ ಪ್ರತಿಮಾ ಮತ್ತು ಮಾಜಿ ಅಧ್ಯಕ್ಷ ಡಾ.ಸಿದ್ಧಲಿಂಗೇಶ್ವರ ಒರಕೊಂಡಿ ಅವರ ಪತ್ನಿ ನಳಿನಿ, ಎಲ್ಲರನ್ನೂ ನಗುನಗುತ್ತಾ ಮಾತನಾಡಿಸುತ್ತಿದ್ದರು. ಮತ್ತೇನು ಬೇಕು ಹೇಳಿ - ಅದು ನಿಜಕ್ಕೂ ಒಂದು ಸುಂದರ ದಿನ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X