ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ರ ವಸುಧೇಂದ್ರ ಮತ್ತವನ ಛಂದ ಪುಸ್ತಕ

By Staff
|
Google Oneindia Kannada News


ವಸುಧೇಂದ್ರರ ಲಲಿತ ಪ್ರಬಂಧ, ಲೇಖನ ಮತ್ತು ಕತೆಗಳನ್ನು ಓದುವುದೇ ಒಂದು ಖುಷಿ. ಅವರ ಅಕ್ಷರಗಳನ್ನಷ್ಟೇ ಬಲ್ಲವರಿಗೆ ವಸುಧೇಂದ್ರರ ಕುರಿತು ಹೆಚ್ಚಿನ ವಿವರಗಳು...

Vasudhendraಈ ಬಾರಿ ಮೊದಲ ಬಾರಿಗೆ ‘ಛಂದ ಪುಸ್ತಕ’ದ ಚಂದದ ಕಾರ್ಯಕ್ರಮಕ್ಕೆ ಹೋಗಲು ನನಗೆ ಅವಕಾಶವಾಯಿತು. ನನ್ನ ಪುಸ್ತಕವೂ ಬಿಡುಗಡೆಯಾಗುವುದೆನ್ನುವುದು ನಿಮಿತ್ತ. ಛಂದ ಪುಸ್ತಕಗಳನ್ನು ಈ ಮೂರುವರ್ಷದಲ್ಲಿ ನಾನು ಓದಿಕೊಂಡು ಬಂದಿದ್ದೇನೆ. ಪುಸ್ತಕ ತಯಾರಿಯ ಪ್ರಕ್ರಿಯೆಯಲ್ಲಿ ಪರೋಕ್ಷವಾಗಿ ಭಾವನಾತ್ಮಕವಾಗಿ ಭಾಗವಹಿಸಿದ್ದೇನೆ. ಈ ಬಾರಿ ಪ್ರತ್ಯಕ್ಷವಾಗಿ ನಾನು ಬೆಂಗಳೂರಿನಲ್ಲಿದ್ದುದರಿಂದ ಪ್ರತಿಯೊಂದನ್ನೂ ಕೆಲವಷ್ಟು ಮಟ್ಟಿಗಾದರೂ ‘ವರ್ಚ್ಯುವಲ್‌ ರಿಯಾಲಿಟಿ’ಯಿಂದ ಹೊರಗೆ ನಿಂತು ನೋಡುವ ಅವಕಾಶವಾಯಿತು. ಅದೇ ಖುಷಿಯಿಂದ ಈ ನಾಲ್ಕು ಸಾಲು.

ಪ್ರತಿ ಡಿಸೆಂಬರ್‌ ಬಂತಂದರೆ, ವಸುವಿನ ಖುಷಿ, ಉತ್ಸಾಹವನ್ನು ಬರೇ ಫೋನಿನಲ್ಲಿ ಮಾತಾಡಿ ಗ್ರಹಿಸಿದ್ದೆ. ಸ್ವತಃ ಕತೆಗಾರನಾದ ವಸುವಿಗೆ ಹೊಸ ಬರವಣಿಗೆಯನ್ನು ಪ್ರಕಟಿಸುವುದು ಎಷ್ಟು ಕಷ್ಟ ಎಂದು ಗೊತ್ತು. ಅದೇ ರೀತಿ ಎಷ್ಟೋ ಹೊಸ ಬರಹಗಾರರು ಬರವಣಿಗೆ ಬೆಳಕುಕಾಣದೇ ಹೊಸತಾಗೇ ಹಳತಾಗಿಬಿಡುತ್ತಾರೆ ಅನ್ನುವುದೂ ಗೊತ್ತು. ಆದ್ದರಿಂದ ಇಂತ ಹೊಸ ಬರವಣಿಗೆಗೆ ಒಂದು ‘ಛಂದದ ಕಿಟಕಿ’ಯನ್ನು ಇಡಬೇಕೆಂಬ ಹುನ್ನಾರದಿಂದ ಈ ಪುಸ್ತಕ ಪ್ರಕಟಣೆಗೆ ಕಾಲಿಟ್ಟ ವಸು ಇಂದು ತನ್ನ ಅಕ್ಷರ ಪ್ರೀತಿ, ಸೌಜನ್ಯ ಮತ್ತು ಅದಮ್ಯ ಉತ್ಸಾಹದಿಂದ ಕರ್ನಾಟಕದ ಯಾವುದೇ ಪ್ರತಿಷ್ಟಿತ ಪುಸ್ತಕ ಪ್ರಕಾಶನಕ್ಕಿಂತ ಕಡಿಮೆಯಿಲ್ಲದಂತೆ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾನೆ.

ಈ ಬಾರಿಯ ಛಂದ ಪುಸ್ತಕ ಪ್ರಶಸ್ತಿಗೆ ಸುಮಾರು 80 ಕಥಾಸಂಕಲನದ ಹಸ್ತಪ್ರತಿಗಳು ಬಂದಿದ್ದವಂತೆ. ಅವುಗಳನ್ನೆಲ್ಲಾ ಓದಿ, ಪರಾಂಬರಿಸಿ ಶಾರ್ಟ್‌ಲಿಸ್ಟ್‌ ಮಾಡುವ ಕೆಲಸ ಸುಲಭವೇನಲ್ಲ. ಪ್ರತಿಯೊಂದೂ ಪುಸ್ತಕದ ವಸ್ತು, ವಿನ್ಯಾಸ, ಮುಖಪುಟವಾಗಲೀ ಪುಸ್ತಕಕ್ಕೆ ಮುನ್ನುಡಿ ಬರೆಸುವ ಕೆಲಸವಾಗಲೀ, ಪುಸ್ತಕ ಕುರಿತು ನಾಲ್ಕು ಮಾತಾಡಲು ಮಾಡುವ ಪ್ರೀತಿಪೂರ್ವಕವಾಗಿ ಒತ್ತಾಯವಾಗಲೀ ವಸು ಒಂದು ರೀತಿಯ ಸಾತ್ವಿಕ ವಿನಯದಿಂದ, ಸಂಕೋಚದಿಂದ ಮಾಡಿ ಮುಗಿಸುತ್ತಾನೆ. ಪುಸ್ತಕದ ಮುಖಪುಟ ವಿನ್ಯಾಸವಾಗಲೀ, ಒಳಪುಟಗಳ ಜೋಡಣೆಯಾಗಲೀ, ಸಮಾರಂಭಕ್ಕೆ ಸಬಾಂಗಣ ಹುಡುಕುವುದಾಗಲೀ, ಆ ಸಭಾಂಗಣದ ವೇದಿಕೆಗೆ ‘ಛಂದ’ದ ಫೇಸ್‌ಲಿಫ್ಟ್‌ ಕೊಡುವುದಾಗಲೀ ವಸುವಿನ ಪ್ರೀತಿ ಎದ್ದುಕಾಣುತ್ತದೆ.

ಇನ್ನೊಂದು ನನಗೆ ಖುಷಿ ಕೊಟ್ಟ ಸಂಗತಿಯೆಂದರೆ ಪುಸ್ತಕಗಳನ್ನು ಮಾರಾಟಮಾಡುವುದರ ಬಗ್ಗೆ ವಸುವಿಗಿರುವ ಕಾಳಜಿ. ನಾನು ಕೆಲವು ಪುಸ್ತಕ ಬಿಡುಗಡೆಯ ಸಮಾರಂಭಗಳನ್ನು ನೋಡಿದ್ದೇನೆ. ಪುಸ್ತಕಗಳನ್ನು ಪುಕ್ಕಟೆ ಹಂಚಲಾಗುತ್ತದೆ ಅಥವಾ ಪುಸ್ತಕಗಳು ತೀರ ಕಡಿತದ ಬೆಲೆಯಲ್ಲಿ ಮಾರಾಟವಾಗುತ್ತವೆ. ನಿಜ, ಪುಸ್ತಕ ಬಿಡುಗಡೆಗಾಗಿ ಎಲ್ಲಿಂದಲೋ ಬಂದ ಜನಕ್ಕೆ ಸ್ವಲ್ಪವಾದರೂ ರಿಯಾಯಿತಿ ಸಿಗಬೇಕು. ಆದರೆ, ಛಂದದ ಪುಸ್ತಕಗಳನ್ನೇ ನೋಡಿ, ನೂರ ಅರವತ್ತು ಪುಟದ ಪುಸ್ತಕದ ಡೆಮಿ ಪುಸ್ತಕದ ಬೆಲೆ ಕೇವಲ ಅರವತ್ತು ರೂಪಾಯಿ. ಇಂತಹ ಪುಸ್ತಕಕ್ಕೆ ಮುಖಬೆಲೆಗಿಂತ ಇನ್ನೂ ಹತ್ತು ರೂ ರಿಯಾಯಿತಿ, ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ. ಪುಸ್ತಕವನ್ನು ಪುಕ್ಕಟೆ ಕೊಡದಿರುವುದು, ನಿಯಮಿತ ಸಂಖ್ಯೆಯಲ್ಲಿ ಗೌರವ ಪ್ರತಿಗಳನ್ನು ಕೊಡುವುದು ಇವೆಲ್ಲಾ ತನ್ನ ಪ್ರಕಾಶನದ ಬಗ್ಗೆ , ಪುಸ್ತಕಗಳ ಬಗ್ಗೆ ಇರುವ ಒಂದು ಗೌರವವನ್ನು ತೋರಿಸುತ್ತದೆಯಷ್ಟೇ.

ಪುಸ್ತಕಗಳು ಮುಖ್ಯವಾಹಿನಿಯಲ್ಲಿ ಮಾರಾಟವಾಗದಿದ್ದರೆ ಲೇಖಕ ಬೆಲೆಕಳೆದುಕೊಳ್ಳುತ್ತಾನೆ ಅನ್ನುವ ಸತ್ಯದ ಅರಿವು ಮತ್ತು ಪುಸ್ತಕ ಮಾರಾಟಕ್ಕೆ ಬೇಕಾದ ಕನಿಷ್ಠ ಪ್ರಚಾರದ ತುರ್ತಿನ ಅಗತ್ಯದ ಅರಿವು ವಸುವಿಗಿದೆ. ಪುಸ್ತಕಗಳನ್ನು ಕೊಂಡು ಓದುವುದನ್ನು ಬೆಳೆಸುವುದರಿಂದ ಮಾತ್ರ ಕನ್ನಡ ಪುಸ್ತಕೋದ್ಯಮ ಬೆಳೆಯುವುದು ಸಾಧ್ಯ ಅನ್ನುವ ಅರಿವನ್ನು ಇಟ್ಟುಕೊಂಡೇ ಈ ಕೆಲಸವನ್ನು ಆತ ಮಾಡುತ್ತಿರುವುದು ಶ್ಲಾಘನೀಯ.

ಇನ್ನು ವಸುವಿನ ಜತೆಜತೆಗೂ ಕೈಗೂಡಿಸಿ, ಹೆಗಲುಗೂಡಿಸಿ ಕೆಲಸ ಮಾಡುತ್ತಿರುವವ ಅಪಾರ. ಸದಾ ನಗುಮುಖದ ಮೆಲುಮಾತಿನ ವಿಜಯಕರ್ನಾಟಕಿಗ. ಆಕರ್ಷಕವಾದ ಮುಖಪುಟವಿನ್ಯಾಸವಾಗಲೀ, ಬೇರೆ ಯಾವಯಾವುದೋ ಫಾಂಟ್‌ ಗಳಲ್ಲಿರುವ ಕನ್ನಡ ಅಕ್ಷರಗಳನ್ನು ಒಂದೇ ತಹಬಂದಿಗೆ ತಂದು, ಬರಹಗಾರರ ಕಣ್ತಪ್ಪಿದ್ದ ಅಸಂಖ್ಯಾತ ಕಾಗುಣಿತದ ತಪ್ಪುಗಳನ್ನು ತಿದ್ದಿ ಪುಸ್ತಕಕ್ಕೊಂದು ರೂಪು ಕೊಟ್ಟು, ಕರೆಯೋಲೆಗಳನ್ನು ವಿನ್ಯಾಸಗೊಳಿಸಿ ಪುಸ್ತಕ ಬಿಡುಗಡೆಯ ತನಕ ವಸುವಿನ ಕೈಬಿಡದ ಸ್ನೇಹಿತ. ಇವರಿಬ್ಬರ ಕೈ‘ಕಂಪ್ಯೂಟರ್‌’ ಚಳಕವನ್ನು ನಾನು ಈ ಬಾರಿ ಕಣ್ಣಾರೆ ನೋಡಿದ್ದೆ. ತುಂಬುಪ್ರೀತಿಯಿಂದ ವಸುವಿಗೆ ಹೆಗಲುಗೊಟ್ಟು ನಿಲ್ಲುವ ಸ್ನೇಹಿತ.

ಒಂದು ಗಮನಿಸಬೇಕಾದ ವಿಷಯವೆಂದರೆ ವಸುವಿಗೆ ಈ ಪುಸ್ತಕಪ್ರಕಟಣೆ ಮಾಡಲೇಬೇಕಾದ ಅಗತ್ಯವಿಲ್ಲ. ಎಷ್ಟೇ ಹೇಳಬಾರದೆಂದರೂ ಹೇಳಲೇಬೇಕಾದ ವಿಷಯವೆಂದರೆ ಆತನಿಗೆ ನಿಜಕ್ಕೂ ಸಮಯದ ಅಭಾವವಿದೆ. ದಿನಾ ಸುಮಾರು ನಾಲ್ಕುಗಂಟೆಗಳ ಕಾಲ ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಹೊಯ್ದಾಡಿಕೊಂಡು ಕೆಲಸಕ್ಕೆ ಹೋಗಿಬರಬೇಕು. ಆಫೀಸಿನಲ್ಲಿ ಇನ್ನಿಲ್ಲದಂತ ಕೆಲಸ, ಜತೆಗೆ ಕಾರಿನಲ್ಲಿ ಡ್ರೈವರ್‌ ಓಡಿಸುತ್ತಿದ್ದಾಗ ಹಿಂದೆ ಕೂತು ‘ಲ್ಯಾಪ್‌ಟಾಪ್‌’ನಲ್ಲಿ ಬರೆಯುತ್ತಿದ್ದೇನೆ ಅಂತ ಹೇಳಿಕೊಂಡ ಮಾತ್ರಕ್ಕೆ ‘ಧ್ಯಾನಸ್ಥ ಸ್ಥಿತಿಯಲ್ಲಿ ಸಾಹಿತ್ಯ ರಚಿಸುತ್ತಿಲ್ಲ, ಈ ಐಟಿ ಮಂದಿ’ ಎಂದು ಕುಟುಕಿಸುವ ವಿಮರ್ಶಕರಿಗೆ ಒಂದು ರೀತಿ ಸಾತ್ವಿಕವಾಗಿ ಸಡ್ಡುಹೊಡೆಯಲೇಬೇಕಾದ ಪ್ರಸಂಗವನ್ನು ಎದುರಿಸಬೇಕಾಗಿದೆ, ಇಂದಿನ ‘ಐಟಿ ಬಿಟಿ’ಲೇಖಕರು. ಅದಕ್ಕೆ ಈತ ಹೊರತಾಗಿಲ್ಲ ಕೂಡ. ಆದರೆ, ಈತನನ್ನು ಹತ್ತಿರದಿಂದ ನೋಡಿದಾಗ ಮಾತ್ರ ಪುಸ್ತಕಪ್ರಕಟಣೆ ಒಂದು ಅಗತ್ಯವೂ ಅಲ್ಲ, ತುರ್ತೂ ಅಲ್ಲ, ಪ್ರೀತಿ ಮಾತ್ರ ಎನ್ನುವುದು ಅರಿವಾಗುತ್ತದೆ.

ತನ್ನದೇ ಸಣ್ಣ ಪ್ರಪಂಚದಲ್ಲಿ ಅಕ್ಷರಗಳ ಲಗ್ಗೆಯನ್ನು ಸ್ವಾಗತಿಸಲು , ಹೊಸ ಬರಗಾರರಿಗೆ ಗೌರವದಿಂದ ಈ ಸಾಹಿತ್ಯಿಕ ಲೋಕದಲ್ಲಿ ಶಿಸ್ತಿನಿಂದ ಅವರ ಕೃತಿಗಳನ್ನು ಬರಮಾಡಿಕೊಳ್ಳಲು ‘ಛಂದ ಪುಸ್ತಕ’ ಒಂದು ಸುಂದರ ವೇದಿಕೆ. ಆ ಪ್ರಕಾಶನದಲ್ಲಿ ನನ್ನ ‘ಶಕುಂತಳಾ’ ಹೊರಬರುತ್ತಿರುವುದು ನನಗೆ ಬಹಳ ಖುಷಿಯಾದ ವಿಷಯ. ಈ ಬಾರಿಯ ಇನ್ನಿತರ ಕೃತಿಗಳು ‘ಹಟ್ಟಿಯೆಂಬ ಭೂಮಿಯ ತುಣುಕು’(ಲೇ. ಲೋಕೇಶ ಅಗಸನಕಟ್ಟೆ) ಮತ್ತು ‘ಹಕೂನ ಮಟಾಟ’(ಲೇ. ನಾಗರಾಜ ವಸ್ತಾರೆ). ಮೂರೂ ಪುಸ್ತಕಗಳು ಈಗ ಅಮೆರಿಕದಲ್ಲಿ ಲಭ್ಯವಿದೆ. ಬೇಕಾದವರು [email protected]ಗೆ ಇ ಮೈಲ್‌ ಮಾಡಿದಲ್ಲಿ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಪ್ರತೀ ಪುಸ್ತಕದ ಬೆಲೆ ಕೇವಲ ಐದು ಡಾಲರ್‌.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X