ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಸ್ವಾತಂತ್ರ್ಯೋತ್ಸವದ ಸಂಭ್ರಮ ಮತ್ತು ಸಡಗರ

By Staff
|
Google Oneindia Kannada News


ಉಡುಪಿ ಸಮೀಪದ ಉದ್ಯಾವರ ನನ್ನ ತಂದೆಯ ಹಿರಿಯರು ಬಾಳಿದ ಊರು. 1947ಆಗಸ್ಟ್ 15ರಂದು ನಮ್ಮ ದೇಶದ ಮೂಲೆಮೂಲೆಯಲ್ಲಿ ಎಲ್ಲರೂ ಸಂಭ್ರಮಿಸಿ ಮೊದಲ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದಂತೆ, ಈ ಊರಿನ ಜನರೆಲ್ಲ ಭೇದಭಾವ ಇಲ್ಲದೆ ಒಟ್ಟಾಗಿ ಆಚರಿಸಿದ ನೆನಪಿನ ಅಪೂರ್ವ ಚಿತ್ರಗಳು ನಿಮ್ಮ ಮುಂದಿದೆ.



Udyavara, 15 Aug 1947 ನನ್ನ ತಂದೆಯವರ ಚಿಕ್ಕಪ್ಪ ಉದ್ಯಾವರ ಅಣ್ಣಯ್ಯ, ಆಚಾರ್ಯರ ಮಠದ ದಿ ರಾಮಚಂದ್ರ ಆಚಾರ್ಯರು ಮುಂಬಯಿಯಿಂದ ಊರಿಗೆ ಬಂದಿದ್ದರು. ತಮ್ಮ ಕೈ ಕೆಮರಾದಲ್ಲಿ ಕೆಲವು ಚಿತ್ರಗಳನ್ನು ತೆಗೆದರು. ಅವರ ಪತ್ನಿ ಅಂದರೆ ನನ್ನ ತಂದೆಯವರ ಚಿಕ್ಕಮ್ಮ ರುಕ್ಮಿಣಿ ಆಚಾರ್ಯರು, ಜತನವಾಗಿ ತಮ್ಮ ಸಂಗ್ರಹದಲ್ಲಿ ಇರಿಸಿಕೊಂಡ ಈ ಚಿತ್ರಗಳು ಒಂದು ಅಪೂರ್ವ ಸ್ಮೃತಿ ಸಂಚಯ.

ಉದ್ಯಾವರ ಎಂಬುದು ಇತಿಹಾಸದ ಪುಟಗಳಲ್ಲಿ ಮಹತ್ವ ಪಡೆದ ಊರು. ಕೋಟೆ ಕೊತ್ತಲಗಳಿಂದ ಶೋಭಿಸುತ್ತಿದ್ದ ರಾಜಧಾನಿ. ದೇಗುಲಗಳ ಐತಿಹಾಸಿಕ ಕೇಂದ್ರ. ಮೃಣ್ಮಯ ದೇವಿಯ ದೇವಸ್ಥಾನ, ರಸಮಹಾಲಿಂಗೇಶ್ವರ ದೇವಸ್ಥಾನ, ಪ್ರಸಿದ್ಧಿಯಾಗಿರುವ ಸಿದ್ಧಿ ವಿನಾಯಕ ಶ್ರದ್ಧಾ ಕೇಂದ್ರ, ಈ ಚಿತ್ರದ ಸ್ವಾತಂತ್ರ್ಯೋತ್ಸವ ನಡೆದ ಚಂಬುಕಲ್ಲು(ಶಂಭು ಶೈಲೇಶ್ವರ-ಸೋಮನಾಥೇಶ್ವರ) ದೇವಸ್ಥಾನ, ಹೀಗೆ ಹತ್ತು ಹಲವು ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರ, ಚರ್ಚು, ಮಸೀದಿಗಳ ಸಹಬಾಳ್ವೆಯ ವಿಶಾಲವಾದ ಊರು.

ಶಿವಲಿಂಗವಿಲ್ಲದ ಬೃಹತ್ ಪಾಣಿಪೀಠ, ವಸ್ತು ಪ್ರದರ್ಶನಾಲಯವನ್ನು ಸೇರಿದ ಭಿನ್ನಗೊಂಡ ಮಹಿಷಮರ್ಧಿನಿಯ ಮೂರ್ತಿ ಯಂಥ ಅನೇಕ ಭಗ್ನ ನೆಲೆಗಳ ಮೂಲಸ್ಥಾನ ಉದ್ಯಾವರ. ಈ ಊರಿನ ಹಿರಿಯರೆಲ್ಲ ಅರುವತ್ತು ವರ್ಷಗಳ ಹಿಂದೆ ಆಚರಿಸಿದ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಇಲ್ಲಿನ ಚಿತ್ರಗಳಲ್ಲಿ ಕಾಣಬಹುದು.

Udyavara, 15 Aug 1947 ಇದೇ ಚಂಬುಕಲ್ಲು ಎಂಬ ಶಿಲೆಯ ಬೆಟ್ಟದ ಕೆಳಗಿರುವ ರಸ್ತೆಯ ಮೂಲಕವೇ ಗಾಂಧೀಜಿಯವರು ಉಡುಪಿಗೆ ಆಗಮಿಸಿದ ಸವಿನೆನಪು ಅಂದು ಅಲ್ಲಿ ಸೇರಿದ್ದ ಅನೇಕ ಹಿರಿಯರ ಸ್ಮೃತಿ ಪಟಲದಲ್ಲಿದ್ದಿರಬಹುದು. ಈಗ ಈ ಬೆಟ್ಟದ ಪೂರ್ವದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 17 ಅಂದಿರಲಿಲ್ಲ. ಈ ದಿವ್ಯ ತಾಣದಲ್ಲಿ ಉದ್ಯಾವರದ ಹಿರಿಯರು, ತಮ್ಮೂರ ಸ್ವಾತಂತ್ರ್ಯೋತ್ಸವವನ್ನು ಸರಳ ಸುಂದರವಾಗಿ ಆಚರಿಸಿದ್ದು ಈ ಚಿತ್ರಗಳಲ್ಲಿ ಒಂದು ನೆನಪಾಗಿ ದಾಖಲೆಗೊಂಡಿದೆ.

ಸೇರಿದ ಜನಸ್ತೋಮ. ತಳಿರುತೋರಣ. ಅಲ್ಲಲ್ಲಿ ಮಿಂಚುವ ಗಾಂಧೀ ಟೋಪಿ, ಶ್ವೇತ ವಸ್ತ್ರ ಸಮೂಹ. ಎಲ್ಲಕ್ಕಿಂತ ಮಿಗಿಲಾಗಿ ಹಿರಿಯರೆಲ್ಲರ ತ್ಯಾಗದಿಂದ ದಕ್ಕಿದ ಸ್ವಾತಂತ್ರ್ಯೋತ್ಸವವನ್ನು ಇನ್ನಷ್ಟು ಮತ್ತಷ್ಟು ಎತ್ತರದಲ್ಲಿ ಆಚರಿಸಲು ಊರ ಮುಗ್ಧರು ಆಯ್ದ ಸ್ಥಳ ಪವಿತ್ರವಾದ ಎತ್ತರದ ಶಂಭು ಶೈಲ. ಆ ಎತ್ತರದಲ್ಲಿ ಇನ್ನಷ್ಟು ಎತ್ತರದ ಬಿದಿರಿನ ತುದಿಯಲ್ಲಿ ಹಾರುವ ಬಾವುಟ.

ಹೌದು. ದೇಶದ ಹಿರಿಯರೆಲ್ಲ ತ್ಯಾಗ ಬಲಿದಾನಗಳಿಂದ ದಕ್ಕಿಸಿಕೊಂಡ ಸ್ವಾತಂತ್ರ್ಯದ ಮೌಲ್ಯವನ್ನು ಇನ್ನಷ್ಟು ಮತ್ತಷ್ಟು ಎತ್ತರಗೊಳಿಸಬೇಕೆಂಬ ದಿವ್ಯ ಸಂಕಲ್ಪದ ಪ್ರತೀಕ ಇದು. ಆ ಎತ್ತರದಿಂದ ಸ್ವಾತಂತ್ರ್ಯದ ಶ್ರೀಮಂತಿಕೆ ಉರುಳಿ ಬೀಳಬಾರದೆಂಬ ಎಚ್ಚರ ನಮ್ಮದಾಗಬೇಕಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X