ಒಂದು ದಿನ ಭೂಮಿಗೆ ಸ್ವರ್ಗ ಇಳಿದಿತ್ತು!


ಅಂದು ಎಲ್ಲವೂ ಹಿತಕರ! ಸ್ವರ್ಗದಲ್ಲಿದ್ದಂತೆ ಅನುಭವ! ನನಗೆ ಹುಚ್ಚು ಹಿಡಿದಿಲ್ಲ ಅನ್ನೋದು ಚೆನ್ನಾಗಿ ಗೊತ್ತು! ಇಷ್ಟಕ್ಕೂ ಆ ದಿನ ಏನಾಯ್ತು ಅಂದ್ರೆ? ಓದಿ ಒಂದು ಹಾಸ್ಯ ಲೇಖನ.

Real and Ideal world!ಅನಿಲ್ ಕಪೂರ್ ಅಭಿನಯದ ಚಿತ್ರವೊಂದನ್ನು ಟೀವಿಯಲ್ಲಿ ನೋಡುತ್ತಿದ್ದೆ. ಒಂದು ದಿನದ ಮಟ್ಟಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಬಹಳಷ್ಟು ಒಳ್ಳೆಯ ಕೆಲಸ ಮಾಡುವ ಪರಿ, ಆದರ್ಶ ಜಗತ್ತಿನ ಕಲ್ಪನೆಯನ್ನು ತೋರುತ್ತಿತ್ತು. ಇವೆಲ್ಲ ಸಾಧ್ಯವೇ ಎಂದು ಹುಸಿನಗೆ ಮುಖದ ಮೇಲೆ ಮೂಡಿಬಂದಿತು.

ಅಷ್ಟರಲ್ಲಿ ನನ್ನ ಪತ್ನಿ ಬಿಸಿ ಬಿಸಿ ಕಾಫಿ ತಂದುಕೊಟ್ಟು ಅಲ್ಲೇ ಗಲಾಟೆ ಮಾಡುತ್ತಿದ್ದ ಮಗುವನ್ನು ಕರೆದುಕೊಂಡು ಹೋಗುತ್ತಾ ಮೆಲ್ಲಗೆ ಹೇಳುತ್ತಿದ್ದಳು ಜೋರಾಗಿ ಗಲಾಟೆ ಮಾಡಬೇಡ. ಅಪ್ಪ ಟೀವಿ ನೋಡ್ತಿದ್ದಾರೆ. ಎಂದೂ ಕೇಳದ ಮಾತು ಕೇಳಿ ಅವಳ ಬಗ್ಗೆ ಬಲು ಮೆಚ್ಚಿಗೆಯಾಯಿತು.

ಸ್ವಲ್ಪ ಹೊತ್ತಿನ ನಂತರ ಆಕೆ ಬಂದು ನಿಮ್ಮ ಕೆಲಸ ಆಗಿದ್ದರೆ, ಸ್ವಲ್ಪ ತರಕಾರಿ ತಂದುಕೊಡ್ತೀರಾ? ಆಗದೆ ಇದ್ರೆ ಬೇಡ, ನಾನೇ ಹೋಗ್ತೀನಿ ಅಂದಳು. ನಸುನಗುತ್ತಾ ಇರಲಿ, ನಾನೇ ಹೋಗ್ತೀನಿ’ ಎಂದು ಶುಭ್ರವಸ್ತ್ರಧಾರಿಯಾಗಿ ಹೊರಟೆ.

ತಂಪಾದ ಸಂಜೆಯ ಹೊತ್ತು, ಆಹ್ಲಾದಕರ ಗಾಳಿಯಲ್ಲಿ ಫುಟ್‌ಪಾತಿನ ಮೇಲೆ ಹಾಗೇ ನಡೆದು ಹೋಗುತ್ತಿದ್ದೆ. ಯಾಕೋ ಬಹಳ ಕಸಿವಿಸಿಯಾಯಿತು. ಯಾಕೆ ಇದುವರೆವಿಗೂ ಒಬ್ಬನೂ ಅಡ್ಡ ಸಿಗಲಿಲ್ಲವಲ್ಲ ಎಂದು. ಹಿಂದೆಮುಂದೆ ಯಾರೂ ಓಡಾಡುವ ಲಕ್ಷಣವೂ ಕಾಣುತ್ತಿಲ್ಲ.

ಇವತ್ತೇನಾದರೂ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದಾರೋ ಹೇಗೆ? ಹಾಗೇ ಮುನ್ನಡೆದು ಪೇಟೆ ಬೀದಿಗೆ ಬಂದೆ. ತರಕಾರಿ ಮಾರ್ಕೆಟ್ ಖಾಲಿ ಖಾಲಿ ಇತ್ತು. ಸುಂದರವಾಗಿ ಜೋಡಿಸಿಟ್ಟ ಹಚ್ಚನೆ ಹಸಿರು ತರಕಾರಿಗಳು ಕೂಗಿ ಕರೆದಿತ್ತು.

ಹುರುಳೀಕಾಯಿ ಹೇಗೆ ಎಂದೆ. ಆಕೆ ನಾಲ್ಕು ರೂಪಾಯಿ ಎಂದಳು. ನಾನು ಕೇಳಿದೆ ಎಷ್ಟು ಗ್ರಾಮ್‌ಗೆ?’ ಅಂತ. ಏನ್ ಸ್ವಾಮಿ ಹಂಗಂತೀರಾ? ಕೇಜಿಗೆ ನಾಲ್ಕು ರೂಪಾಯಿ’ ಅನ್ನೋದೇ?

ಟೊಮ್ಯಟೋ, ಕಬ್ಬು, ಈರುಳ್ಳಿ ಇವುಗಳ ಬೆಲೆ ಭೂಮಿಗೆ ಬಿದ್ದು ಹೋಗಿರುವುದು ಗೊತ್ತಿತ್ತು. ಆದರೆ ಹುರುಳಿಕಾಯಿ ಬಗ್ಗೆ ಗೊತ್ತಿರಲಿಲ್ಲ. ಏನಾದರೆ ನನಗೇನು ಎಂದು ’ನಾಲ್ಕು ಕೇಜಿ ಹಾಕು’ ಎಂದು ಇಪ್ಪತ್ತು ರೂಪಾಯಿ ಕೊಟ್ಟೆ, ಆಕೆ ಐದು ರುಪಾಯಿ ವಾಪಸ್ಸು ಕೊಟ್ಟಳು. ಮಿಕ ಮಿಕ ನೋಡಿದ ನನ್ನನ್ನು ಕಂಡು ಹೇಳಿದಳು ’ಶುಕ್ರವಾರ ಸಂಜೆ ದೀಪ ಹಚ್ಚಿದ ಹೊತ್ತಲ್ಲಿ ಬಂದ ಮೊದಲ ಗಿರಾಕಿ ನೀವು. ಅದಕ್ಕೇ ಒಂದು ರೂಪಾಯಿ ದಿಸ್ಕೌಂಟ್’ ಅನ್ನೋದೇ !! ಇಂತಹವರು ಇರೋದ್ರಿಂದಲೇ ಅಂತ ಕಾಣುತ್ತೆ ಭೂಮೀಲಿ ಮಳೆಬೆಳೆ ಎಲ್ಲಾ ಚೆನ್ನಾಗಿ ಆಗ್ತಿರೋದು.

ಹಾಗೇ ಮುನ್ನಡೆದು ಇನ್ನೂ ಕೆಲವು ತರಕಾರಿ ತೆಗೆದುಕೊಂಡು ವಾಪಸ್ಸು ಹೊರಡಲು ಅಣಿಯಾಗಿ ಹಾಗೇ ಗಕ್ಕನೆ ನಿಂತೆ.

ಅಂಗಡಿಯ ಮೂಲೆಯಲ್ಲಿ ವಕ್ರಮೂತಿ ಸುಂದರೇಶ ಕಣ್ಣಿಗೆ ಬಿದ್ದ. ನನ್ನ ಅದೃಷ್ಟವೆಲ್ಲ ಈ ಹೊತ್ತಿಗೆ ಮುಗೀತು ಎಂದುಕೊಂಡೆ. ನಸುನಗುತ್ತಾ ನನ್ನತ್ತಲೇ ಬರುತ್ತಿರುವುದು ಖಾತ್ರಿಯಾಯಿತು. ಈ ಕೆಟ್ಟ ನಗು ನನಗೆ ಬಹಳ ವರ್ಷಗಳಿಂದ ಪರಿಚಯ. ಅದು ಹಣ ಕೇಳುವಾಗ ಬೀರುವ ಕೆಟ್ಟ ನಸುನಗು! ಹತ್ತಿರ ಬಂದವನೇ ’ಏನೋ ಕಿಟ್ಟಿ, ಜೇಬಲಿ ರೊಟ್ಟಿ, ಚೆನ್ನಾಗಿದ್ದೀಯ?’ ಅಂದ. ಅವನು ’ಜೇಬು’ ಅಂದಾಗಲೇ ಗೊತ್ತಾಯಿತು ಹಣ ಕೇಳೇ ಕೇಳ್ತಾನೆ ಅಂತ. ಅಷ್ಟು ಹೇಳಿದವನು, ನನ್ನ ಉತ್ತರಕ್ಕೂ ಕಾಯದೆ ’ಬಾರೋ ಕಾಫಿ ಕುಡಿಯೋಣ’ ಅಂದವನೇ ಹೆಚ್ಚು ಕಮ್ಮಿ ದರದರ ಎಳೆದುಕೊಂಡು ಹೋದವನೇ ಕಾಫಿ ಹಾಕಿಸಿದ.

ಕಾಫಿ ಕುಡಿದ ನಂತರ, ಬಿಲ್ ಕೂಡ ತಾನೇ ತೆತ್ತು ’ಅರ್ಜಂಟ್ ಕೆಲಸ ಇದೆ ಗುರೂ, ಮತ್ತೆ ಸಿಗ್ತೀನಿ’ ಅಂದವನೇ ಬಂದಷ್ಟೇ ವೇಗವಾಗಿ ಹೊರಟುಹೋದ. ಇಷ್ಟು ಹೊತ್ತೂ ಏನು ನಡೆಯಿತು ಎಂದೇ ಅರ್ಥವಾಗಲಿಲ್ಲ.

ಮನೆಯತ್ತ ನಡೆದೆ. ದಾರಿಯಲ್ಲಿ ಒಂದು ಆಟೋ ನಿಂತಿತ್ತು. ಹಣೆಗೆ ವಿಭೂತಿ ಬಳಿದಿದ್ದ ಆ ಡ್ರೈವರ್ ಕೇಳಿದ ’ಸ್ವಾಮಿ ಎಲ್ಲಿಗೆ ಹೋಗಬೇಕು? ಬ್ಯಾಗ್ ಕೊಡಿ, ಕೂತ್ಕೊಳ್ಳಿ’ ಅಂದ.

ಮನಸ್ಸಿನಲ್ಲೇ ಅಂದುಕೊಂಡೆ ’ಆಹಾ, ಹಣೆಗೆ ವಿಭೂತಿ ಇಟ್ಟರೆ ನಾನು ನಿನ್ನ ನಂಬುತ್ತೀನಾ? ಅದೂ, ನೀನಾಗೇ ನನ್ನನ್ನು ಎಲ್ಲಿಗೆ ಹೋಗಬೇಕು ಅಂತ ಕೇಳಿದಾಗ. ಭಲೇ ಆಟ ಕಟ್ತಾನೆ, ಕಳ್ಳಕೊರಮ’ ಅಂದುಕೊಂಡೆ. ಏನು ಮಾಡೋದು, ಕುದುರೇನ ಕಂಡರೆ ಕಾಲು ನೋವಂತೆ. ಎಲ್ಲಿಗೆ ಹೋಗಬೇಕು ಎಂದು ಹೇಳುತ್ತಾ ಆಟೋದಲ್ಲಿ ಕುಳಿತೆ.

ಯಾವುದೋ ಲಕ್ಷುರಿ ಕಾರಿನಲ್ಲಿ ಕುಳಿತಂತಹ ಅನುಭವ. ಹಾಗೆ ಹೇಳುವ ಜನರಿಂದ ಕಲಿತ ಮಾತಿದು ಅಷ್ಟೇ! ನಾನು ನಡೆಯೋದು ಬಿಟ್ಟರೆ, ಬಸ್ಸು ಅಷ್ಟೇ. ತೀರ ಅವಶ್ಯಕತೆ ಇದ್ದರೆ ಆಟೋ. ಬೇರೇ ಗಾಡಿ ಹತ್ತಿ ಅಭ್ಯಾಸವೂ ಇಲ್ಲ. ಏನೂ ಢಡಭಡ ಮಾಡದೆ ಸಾವಧಾನವಾಗಿ ಸಾಗುತ್ತಿದ್ದ ಆಟೋ, ಮನೆ ಬಳಿ ನಿಂತಿತು.

ಮೀಟರ್ ದುಡ್ಡು ಕೊಟ್ಟೆ. ಸರಿಯಾಗಿ ಚಿಲ್ಲರೆ ವಾಪಸ್ಸು ಕೊಟ್ಟ ಅವನಿಗೆ ಧನ್ಯವಾದ ಹೇಳಿ ಮನೆ ಒಳಗೆ ಬಂದೆ

. ಅಡಿಗೆಮನೆಯಲ್ಲಿ ತರಕಾರಿ ಇಟ್ಟು ಬಂದು ಕುಳಿತುಕೊಳ್ಳುವಷ್ಟರಲ್ಲಿ ಕಾಫಿ ಬಂತು. ಎಲ್ಲೋ ಸುಶ್ರಾವ್ಯವಾದ ಭಕ್ತಿಗೀತೆ ಕೇಳಿ ಬರುತ್ತಿತ್ತು. ಯಾಕೋ ಸರಿಹೋಗ್ತ ಇಲ್ಲ. ಅಸಹಜವಾಗಿದೆ ಈ ಜಗತ್ತು ಅನ್ನಿಸಿತು. ಹೀಗೆ ಇರಲಿಲ್ಲ. ಅಥವಾ ನನಗೇನಾದರೂ ಆಗಿ ಹೋಗಿದೆಯಾ? ಸ್ವರ್ಗಲೋಕದಲ್ಲಿ ಇರುವ ಅನುಭವವಾಯಿತು. ಕಾಫಿ ಮುಗಿಸಿ ಕೆಳಗೆ ಇಡಲು ಹೋದರೆ ನೆಲವೇ ಸಿಗ್ತಿಲ್ಲ. ಇನ್ನೂ ಬಗ್ಗಿದೆ. ಇನ್ನೂ ಸಿಗಲಿಲ್ಲ. ಇನ್ನೂ ಸ್ವಲ್ಪ ಬಗ್ಗಲು ಧಡಾರನೆ ಕೆಳಗೆ ಬಿದ್ದೆ.

ಒಳಗಿನಿಂದ ಘರ್ಜನೆ ಕೇಳಿ ಬಂತು ’ಸ್ವಲ್ಪ ದಿನ ಏನೂ ಇರಲಿಲ್ಲ ಅಂದುಕೊಂಡೆ. ಮತ್ತೆ ಶುರುವಾಯಿತಾ ನಿಮ್ಮ ಈ ಹಾಳು ರೋಗ. ಕೂತಲ್ಲೇ ಕನಸು ಕಾಣೋದು. ಎದ್ದು ಮುಸುಡಿ ತೊಳೆದು, ಹೋಗಿ ತರಕಾರಿ ತಂದು ಕೊಡಿ’ ಅಂತ.

ತೊಟ್ಟಿದ್ದ ಕೆಟ್ಟ ಬಣ್ಣದ ಶರ್ಟ್‌ನಲ್ಲೆ ಹೊರ ನಡೆದೆ. ಹೊರಗೆ ಕಾಲಿಡುತ್ತಿದ್ದಂತೆ ರಪ್ಪೆಂದು ಬಾಲ್ ಬಡಿಯಿತು. ’ಥ್ಯಾಂಕ್ಸ್ ಅಂಕಲ್’ ಅಂದ. ಆ ಕಡೆ ಬ್ಯಾಟ್ಸ್ಮನ್ ಗುರಾಯಿಸುತ್ತಿದ್ದ. ಅವನ ಮನಸ್ಸಿನಲ್ಲಿ ’ಹಾಳಾದವನು ಅಡ್ಡ ಬರದೆ ಇದ್ದಿದ್ದರೆ ಗೋಡೆಗೆ ಬಡಿದು ಸಿಕ್ಸರ್ ಆಗಿರುತ್ತಿತ್ತು’ ಅನ್ನುವ ಭಾವ ಎದ್ದು ಕಾಣುತ್ತಿತ್ತು. ಏನಾದರೂ ಮಾತನಾಡಿದರೆ ಬ್ಯಾಟ್ ತೆಗೆದುಕೊಂಡು ಹೊಡೆದು ಬಿಟ್ಟಾನು ಎಂದು ಹಾಗೇ ನಡೆದೆ. ಅನ್ನ-ಸಾರು ತಿಂದು ಬೆಳೆದ ನನಗೆ ಕಾಂಪ್ಲೇನ್ ಬಾಯ್‌ಗಳ ಜೊತೆ ಹೋರಾಡುವ ಶಕ್ತಿ ಇರಲಿಲ್ಲ.

ಕೆಟ್ಟ ಮೋರಿಯ ವಾಸನೆಯನ್ನು ಸೇವಿಸುತ್ತ, ಆಟೋ, ಸೈಕಲ್‌ಗಳ ನಡುವೆ ಸಿಕ್ಕ ಜಾಗದಲ್ಲಿ ನಡೆಯುತ್ತಾ ಪೇಟೆ ಬೀದಿಗೆ ಬಂದು ಸೇರಿದೆ. ಹುರಳೀಕಾಯಿ ರಾಶಿಯ ಹಿಂದೆ ಕುಳಿತು ಎಲೆ ಅಡಿಕೆ ಜಿಗಿಯುತ್ತಿದ್ದ ಹೆಂಗಸನ್ನು ಕೇಳಿದೆ ’ಹುರುಳೀಕಾಯಿ ಹೇಗೆ’ ಅಂತ. ಆಕೆ ’ಐದು ರುಪಾಯಿ’ ಅಂದಳು. ಇನ್ನೂ ಕನಸಿನ ಜಗತ್ತಿನ ಗುಂಗಿನಲ್ಲೇ ಇದ್ದ ನಾನು ಕೇಳಿದೆ ’ಕೇಜಿ ಗಾ ?’ ಅಂತ. ಆಕೆ ಬಾಯಿ ಇದ್ದ ರಸ ತುಪ್ಪೆಂದು ಉಗಿದು ’ನೂರು ಗ್ರಾಮ್’ಗೆ’ ಅಂದಳು. ಉಗಿದಿದ್ದು ನನಗೋ ಅಥವಾ ಪಕ್ಕಕ್ಕೋ ಗೊತ್ತಾಗಲಿಲ್ಲ !

ಕೈಗೆಟುಕುವ ಬೆಲೆಯಿದ್ದ ಕೆಲವು ತರಕಾರಿ ತೆಗೆದುಕೊಂಡು ಗಿಜಿಗಿಜಿ ಜನಗಳ ನಡುವೆ ದಾರಿ ಮಾಡಿಕೊಂಡು ಮುನ್ನೆಡೆದು, ಪಾನಿಪುರಿ ಗಾಡಿಯಿಂದ ಬರುವ ಘಮ್ಮನೆಯ ಪರಿಮಳ ಹೇಗೋ ತಡೆದುಕೊಂಡು, ಮೋರಿ ಬದಿಯಲ್ಲೇ ಕರಕಲಾಗಿದ್ದ ಬಾಂಡ್ಲೆಯಲ್ಲಿ ಕಪ್ಪಿಟ್ಟ ಎಣ್ಣೆಯಲ್ಲಿ ತೇಲಿ ಬಿಡುತ್ತಿದ್ದ ಮೆಣಸಿನಕಾಯಿ ಬೋಂಡ ಪೊಟ್ಟಣ ಕಟ್ಟಿಸಿಕೊಂಡು ತಿನ್ನುತ್ತಾ ವಾಪಸ್ಸು ನಡೆದೆ.

ಎಣ್ಣೆ ಭರಿತ ಕಾಗದ ಫುಟ್ಪಾತಿನ ಮೇಲೆ ಎಸೆಯುವ ಮುನ್ನ ಅದರಲ್ಲಿ ಇದ್ದ ವಾರ್ತೆ ಓದಿದೆ ಸ್ವಚ್ಚತೆಯಲ್ಲಿ ಬೆಂಗಳೂರಿಗೆ ಎರಡನೆ ಸ್ಥಾನ’ !!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+