ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇ ಏರಿಯಾದಲ್ಲಿ ಪ್ರೊ.ಶಂಭುಭಟ್ಟರ ಬಾನ್ಸುರಿ ಹೊನಲು

By Staff
|
Google Oneindia Kannada News


ಯಾವ ನಟನೆ, ಅಹಂಕಾರಗಳ ಛಾಯೆಯೂ ಇಲ್ಲದ ಮೃದುಭಾಷಿ ಶಂಭು ಭಟ್ಟರ ಮಾತುಗಳು ಎಲ್ಲರಿಗೂ ಇಷ್ಟವಾದವು. ಶ್ರೋತೃಗಳ ಮನಸ್ಸಿಗೆ ನೇರವಾಗಿ ತಾಗುವಂತೆ ಸುಶ್ರಾವ್ಯವಾಗಿ ತೇಲಿಬಂದ ಅವರ ಬಾನ್ಸುರಿ ವಾದನ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯಿತು.

Shambhu Bhatಭಾರತದಿಂದ ನಮ್ಮೂರಿಗೆ ಸಾಕಷ್ಟು ಕಲಾವಿದರು ಭೇಟಿ ನೀಡಿ, ಇಲ್ಲಿನ ನಮ್ಮ ದಿನನಿತ್ಯದ ಜೀವನಕ್ಕೆ ಹೊಸತನ ನೀಡುತ್ತಾರೆ ಎಂದರೆ ಅದು ಅತಿಶಯೋಕ್ತಿಯಲ್ಲ. ಸಂಗೀತಗಾರರು, ನಟನಟಿಯರು, ಚಿತ್ರಕಲೆ ಮತ್ತಿತರಲ್ಲಿ ನೈಪುಣ್ಯತೆಯುಳ್ಳವರು, ಯಾರು ಬಂದು ಕಾರ್ಯಕ್ರಮಗಳನ್ನು ನೀಡಿದರೂ ನಮಗೆ ಹಿತವೇ. ಆದರಲ್ಲೂ, ಕರ್ನಾಟಕದ ಕಲಾವಿದರು ಎಂದರೆ ಇನ್ನೂ ಹಿತ. ಆಗಸ್ಟ್ ನಾಲ್ಕರಂದು ನಮ್ಮೂರಿನ ಸನಾತನ ಧರ್ಮಕೇಂದ್ರದಲ್ಲಿ ಬಾನ್ಸುರಿಯ ಹೊನಲನ್ನು ಹರಿಸಿ ನಮ್ಮ ಮನಗೆದ್ದವರು ಪ್ರೊಫೆಸರ್ ಕಡತೋಕ ಶಂಭು ಭಟ್ಟರು.

ಪ್ರೊಫೆಸರ್ ಶಂಭು ಭಟ್ಟರ ಸಂಗೀತವನ್ನೇ ಕೇಳಿರದಿದ್ದ ನನ್ನಂಥ ಸಂಗೀತಾಸಕ್ತರಿಗೆ ಅಂದು ತಿಳಿದು ಬಂದ ಸಂಗತಿಗಳು ಹಲವಾರು. ಉತ್ತರ ಕರ್ನಾಟಕದಲ್ಲಿ ಹುಟ್ಟಿ, ಎಂಟು ವರ್ಷದ ಸಣ್ಣ ವಯಸ್ಸಿನಿಂದಲೇ ಬಾನ್ಸುರಿ ಕಲಿಯಲು ಆರಂಭಿಸಿದ ಭಟ್ಟರು, ಕಿರಾಣಾ ಮತು ಗ್ವಾಲಿಯರ್ ಘರಾಣಾ ಶೈಲಿಯ ಸಂಗೀತದಲ್ಲಿ ಉನ್ನತ ಮಟ್ಟದ ಪದವಿಗಳನ್ನು ಪಡೆದಿದ್ದೇ ಅಲ್ಲದೇ, ಜೊತೆಯಲ್ಲೇ ಸಂಸ್ಕೃತ, ಕನ್ನಡ, ಹಿಂದಿ ಭಾಷೆಗಳಲ್ಲಿಯೂ ಸ್ನಾತಕೋತ್ತರ ಪದವಿಗಳನ್ನು ಪಡೆದು, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ, ಸಾಹಿತ್ಯ ಎರಡನ್ನೂ ಧಾರೆ ಎರೆದಿದ್ದಾರೆ.

ಭಾರತದಲ್ಲಷ್ಟೇ ಅಲ್ಲದೇ, ಹೊರಗಿನ ರಾಷ್ಟ್ರಗಳಲ್ಲೂ ಇವರಿಂದ ಪಾಠ ಕಲಿತ ನೂರಾರು ವಿದ್ಯಾರ್ಥಿಗಳಿರುವ, ಮತ್ತು ಒಬ್ಬ ಉನ್ನತ ಮಟ್ಟದ ಕಲಾವಿದರಾಗಿ ದೇಶ, ವಿದೇಶಗಳಲ್ಲೆಲ್ಲ ಕಾರ್ಯಕ್ರಮಗಳನ್ನು ನೀಡಿ, ಹಲವಾರು ಬಗೆಯ ಪ್ರಶಸ್ತಿಗಳನ್ನು ಪಡೆದಿರುವ ಪ್ರೊಫೆಸರ್ ಶಂಭು ಭಟ್ಟರ ಬಗ್ಗೆ ನಮಗೇಕೆ ಗೊತ್ತಿರಲಿಲ್ಲ ಎನ್ನುವುದು ನನ್ನಂತಹ ಹಲವಾರು ಕನ್ನಡಿಗರ, ಸಂಗೀತಾಸಕ್ತರ ಆಸಕ್ತಿಯನ್ನು ಕಾರ್ಯಕ್ರಮದ ಅರಂಭದಲ್ಲಿ ಕೆರಳಿಸಿತು.

ಯಾವ ನಟನೆ, ಅಹಂಕಾರಗಳ ಛಾಯೆಯೂ ಇಲ್ಲದ, ಮೃದುಭಾಷಿ ಶಂಭು ಭಟ್ಟರ ಮಾತುಗಳು, ಮತ್ತು ಶ್ರೋತೃಗಳ ಮನಸ್ಸಿಗೆ ನೇರವಾಗಿ ತಾಗುವಂತೆ ಸುಶ್ರಾವ್ಯವಾಗಿ ತೇಲಿಬಂದ ಬಾನ್ಸುರಿ ವಾದನ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯಿತು. ಆಳವಾದ ಸಂಗೀತ ಜ್ಞಾನವಿದ್ದರೆ ಮಾತ್ರ ಅರ್ಥವಾಗುವಂತಹ ವಿವರಣೆಗಳಿಂದ ಅವರು ನಮ್ಮ ತಲೆಕೆಡಿಸಲಿಲ್ಲ. ಕ್ಲಿಷ್ಟವಾದ ಆಲಾಪಗಳಾಗಲೀ ಅಥವಾ ತಾವೇ ಬರೆದ, ಸಂಯೋಜಿಸಿದ ಚೀಜುಗಳನ್ನಾಗಲೀ ನುಡಿಸಿ ತಮ್ಮ ವಿದ್ವತ್ತನ್ನು "ಪ್ರದರ್ಶಿಸಿ" ಚಪ್ಪಾಳೆ ಗಿಟ್ಟಿಸುವ ಪ್ರಯತ್ನವನ್ನೂ ಮಾಡಲಿಲ್ಲ.

ಅವರು ಸರಳವಾಗಿ, ಸುಶ್ರಾವ್ಯವಾಗಿ ನುಡಿಸಿದ ಹಂಸಧ್ವನಿ, ಬಾಗೇಶ್ರೀ, ಭೂಪಾಲಿ, ದರ್ಬಾರಿ, ಸೋಹಿನಿ ರಾಗಗಳು ಹಿತವಾಗಿ ಹೊಮ್ಮಿಬಂದವು. ಪುರಂದರದಾಸರ "ಭಾಗ್ಯದ ಲಕ್ಷ್ಮಿ ಬಾರಮ್ಮ", "ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ" ಪದಗಳನ್ನು ಆಪ್ಯಾಯಮಾನವಾಗಿ ನುಡಿಸಿದ ಭಟ್ಟರು, ತಮ್ಮ ಕನ್ನಡದ ಬೇರುಗಳ ಹೆಮ್ಮೆಯನ್ನು ಕುವೆಂಪು ರಚಿತ "ನೋಡಲ್ಲಿ ಮೂಡಿಹುದು ಮಳೆಬಿಲ್ಲು" ಕವನವನ್ನು ಶಿವರಂಜನಿ ರಾಗದಲ್ಲಿ ಹೊರತಂದು ರಂಜಿಸಿದರು. ಭಟ್ಟರಿಗೆ ಸಮರ್ಥವಾಗಿ ತಬಲ ಸಾಥಿ ನೀಡಿದವರು ಸತ್ಯನ್ ವೈದ್ಯನಾಥನ್.

ಆಳವಾದ ಸಂಗೀತಜ್ಞಾನ ಮತ್ತು ಪ್ರತಿಭೆ ಎರಡೂ ಉಳ್ಳ ಶಂಭು ಭಟ್ಟರು, ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆ ತರುವಂತಹ ಕಲಾವಿದರು. ಎಲೆಮರೆಯ ಹೂವಿನಂತಿರುವ ಈ ಹಿರಿಯ ಕಲಾವಿದರು ನಮ್ಮಂತಹ ಹೊರನಾಡ ಕನ್ನಡಿಗರ ಸಂಗೀತಾಸಕ್ತಿಯನ್ನು ಉಳಿಸಿ, ಬೆಳೆಸಲು ಕಾರಣ.

ಪ್ರೊಫೆಸರ್ ಶಂಭು ಭಟ್ಟರು ಅಮೆರಿಕಾದ ಹಲವಾರು ಸ್ಥಳಗಳಿಗೆ ಭೇಟಿ ನೀಡಿ ಕೊಟ್ಟಿರುವ ಕಾರ್ಯಕ್ರಮಗಳಲ್ಲಿ ಹೆಸರಿಸಬಹುದಾದಂತಹವು: ಮಿಲ್ಪೀಟಸ್ ಜೈನ ದೇವಾಲಯ (ಜುಲೈ 7), ಫ್ರೀಮಾಂಟಿನಲ್ಲಿ ನಡೆದ ಲಲಿತಾ ಸಹಸ್ರನಾಮ ಕಾರ್ಯಕ್ರಮ (ಜುಲೈ 5), ನ್ಯೂಜರ್ಸಿಯ ಪ್ರಸನ್ನ ಸಭಾ ಭವನ (ಜುಲೈ 14), ವಾಷಿಂಗ್ಟನ್ ಡಿ.ಸಿ.ಯ ಕೆಂಟಿಲಿಯ ಗ್ರಂಥಾಲಯ, ಉತ್ತರ ಕ್ಯಾರೋಲಿನದ ರಾಲಿಯ ಪ್ರಸಾದ್ ಸಭಾಗೃಹ (ಜುಲೈ 21), ಇಸ್ಕಾನ್ ದೇವಾಲಯ (ಜುಲೈ 22) ಮತ್ತು ಸಾಫ್ರಾನ್ ಹೋಟೆಲ್ (ಜುಲೈ 26), ಬೇ ಏರಿಯ (ಆಗಸ್ಟ್ 4) ಮತ್ತು ಲಾಸ್ ಏಂಜಲೀಸ್ (ಆಗಸ್ಟ್ 11).

ನಮ್ಮ ಬೇ ಏರಿಯಾದಲ್ಲಿ ಈ ಕಾರ್ಯಕ್ರಮವನ್ನು ನೀಡಲು ನೆರವಾದವರು ಹವ್ಯಕ ಮಂಡಲಿಯ ಗಜಾನನ ಭಟ್ ಮತ್ತು ಸನಾತನ ಧರ್ಮಕೇಂದ್ರದ ಗಜಾನನ ಜೋಶಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X