ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಕ್ರಮೆಂಟೋದಲ್ಲಿ ಬೇವುಬೆಲ್ಲದ ಸಡಗರ!

By Staff
|
Google Oneindia Kannada News


ಮೆಕ್ಸಿಕೊದ ಗಡಿಯಲ್ಲಿ ಕನ್ನಡಿಗರ ಕಲರವ. ಹಬ್ಬದ ದಿನ ಮಕ್ಕಳು ಆಡಿದ್ದೇ ಆಟ, ದೊಡ್ಡವರು ನೋಡಿದ್ದೆ ನೋಟ, ಕಲೆತು ಉಂಡಿದ್ದೆ ಹೋಳಿಗೆ.

ಸಾಕ್ರಮೆಂಟೋ, ಕ್ಯಾಲಿಫೋರ್ನಿಯ ಕನ್ನಡ ಸಂಘದ ವತಿಯಿಂದ ಇದೇ ಮಾರ್ಚ್‌ 30 ರಂದು ಉಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿನ ರಾಂಚೋಕೋರ್ಡೋವದ ಸ್ಟೋನ್‌ ಕ್ರೀಕ್‌ ಪಾರ್ಕಿನಲ್ಲಿ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 90ಕ್ಕೂ ಹೆಚ್ಚು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಚಿಕ್ಕ ಮಕ್ಕಳ ‘ಕೆರೆ ದಡ’ ಆಟದ ಮೂಲಕ ಕಾರ್ಯಕ್ರಮ ಆರಂಭಿಸಿ, ‘ಮೈಸೂರು ಮಂಗ’ ಆಟದ ಮೂಲಕ ಕುಣಿದು ಕುಪ್ಪಳಿಸಿದರೆ, ‘ಮಂಡಕ್ಕಿ ವೀರ’ ಆಟದಿಂದ ಮಂಡಕ್ಕಿ ರುಚಿಯನ್ನು ಸವಿದರು. ನಂತರ ‘ನಿಧಿ ಹುಡುಕು’ ಕಾರ್ಯಕ್ರಮದಲ್ಲಿ, ವಿವಿಧ ಕಾರ್ಟೂನ್‌ ಕ್ಯಾರಕ್ಟರ್‌ಗಳನ್ನು ತಮ್ಮದಾಗಿಸಿಕೊಂಡರು. ಸುಮಾರು 30ಕ್ಕೂ ಹೆಚ್ಚಿನ ಪುಟಾಣಿಗಳು ಪಾರ್ಕಿನ ‘ಉಯ್ಯಾಲೆ’, ’ಜಾರುವ ಬಂಡಿ’ ಮತ್ತಿತರ ಆಟವಾಡುವ ಮೂಲಕ ಹರ್ಷಪಟ್ಟರು.

‘ಒಗಟುಗಳು ಗೊತ್ತೇ’ ಕಾರ್ಯಕ್ರಮ ಎಲ್ಲರ ಒಗಟುಗಳ ಜ್ಞಾನ ಕೆಣಕಿತು. ‘ಸಿದ್ದಣ್ಣನ ಉಗಾದಿ’ ಬೀದಿ ನಾಟಕ ನೆರೆದಿದ್ದ ಪ್ರೇಕ್ಷಕರಿಗೆ ಉಗಾದಿಯ ಮಹತ್ವವನ್ನು ಹಾಸ್ಯಮಯವಾಗಿ ಪರಿಚಯಿಸಿತು. ನಾಟಕದ ಕೊನೆಯಲ್ಲಿ ಸಿದ್ದಣ್ಣ ‘ಬೇವು ಬೆಲ್ಲ’ ಹಂಚುವ ಮೂಲಕ ‘ಜೀವನ ಕಷ್ಟ ಸುಖಗಳ ಸಮ್ಮಿಶ್ರಣ’ ಎನ್ನುವ ಉಗಾದಿಯ ಸಾರವನ್ನು ಎಲ್ಲರಿಗೂ ಬೀರಿದ.

ಹಬ್ಬದ ಪ್ರಯುಕ್ತ ಮಧ್ಯಾಹ್ನ ಎಲ್ಲರಿಗೂ ಭೂರಿ ಭೊಜನದ ವ್ಯವಸ್ತೆ ಮಾಡಲಾಗಿತ್ತು. ಬಿಸಿಬೇಳೆಭಾತ್‌, ಅನ್ನ, ಸಾಂಬಾರ್‌, ಮಜ್ಜಿಗೆ ಹುಳಿ, ಕೇಸರಿಬಾತ್‌, ಮೊಸರನ್ನ, ಕಲ್ಲಂಗಡಿ ಮತ್ತು ಬನಾಸ್ಪತ್ರೆ ಹಣ್ಣುಗಳು ಸ್ವಾದಿಷ್ಟಕರವಾಗಿದ್ದರೆ, ಸಂಘದ ಕನ್ನಡತಿಯರು ಪಾರ್ಕಿನಲ್ಲೇ ತಯಾಸಿದ್ದ ‘ಒಬ್ಬಟ್ಟು ’ ಎಲ್ಲರ ಮನಸೂರೆಗೊಂಡಿತು. ಸಂಕ್ಷಿಪ್ತವಾಗಿ ಸರ್ವಜಿತ್‌ ಸಂವತ್ಸರದ ಪಂಚಾಂಗ ಶ್ರವಣ ಸಹ ಮಾಡಲಾಯಿತು.

ಭರ್ಜರಿ ಊಟದ ನಂತರ ಎಲ್ಲರನ್ನೂ ಕರ್ನಾಟಕದ ಹೆಮ್ಮೆಯ ನದಿಗಳಾದ ‘ತುಂಗ, ಭದ್ರ, ಹೇಮಾವತಿ ಮತ್ತು ಕಾವೇರಿ’ ಎಂದು 4 ತಂಡಗಳಾಗಿ ವಿಂಗಡಿಸಲಾಯಿತು.‘ಈ ಪದ ನಿಮಗೆ ಗೊತ್ತೇ’ ಎಲ್ಲರ ಕನ್ನಡ ಭಾಷೆಯ ಸಂಪತ್ತನ್ನು ಪರೀಕ್ಷಿಸಿತು.‘ಅಂತ್ಯಾಕ್ಷರಿ’ ಜನರನ್ನು ಕನ್ನಡ ಸಂಗೀತ ಲೋಕಕ್ಕೆ ಕೊಂಡೊಯ್ದಿತು. ಕೊನೆಯಲ್ಲಿ ಕನ್ನಡ ಚಲನಚಿತ್ರಗಳ ಹೆಸರನ್ನು ಮೂಕಾಭಿನಯದ ಮೂಲಕ ಪ್ರಸ್ತುತಪಡಿಸುವದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಸ್ತ ಕನ್ನಡಿಗರಿಗೂ ಕನ್ನಡ ಸಂಘ, ಸಾಕ್ರಮೆಂಟೊ ಧನ್ಯವಾದವನ್ನು ಅರ್ಪಿಸಿ, ಮುಂದಿನ ಕಾರ್ಯಕ್ರಮಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ.


ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಕನ್ನಡ ಸಂಘ ಸಾಕ್ರಮೆಂಟೋ.
(ತಮ್ಮ ಅನಿಸಿಕೆಗಳನ್ನು ಕನ್ನಡ ಸಂಘಕ್ಕೆ ಕಳುಹಿಸಿ.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X