ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಲ್ಲಿ ಪಿಬಿಎಸ್‌ : ನೋಟ-2ಗಾನಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್‌ ರಸಸಂಜೆ

By Staff
|
Google Oneindia Kannada News


ಇಂತಹ ಒಂದು ಸುಂದರ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಕೆ.ಕೆ.ಎನ್‌.ಸಿಗೆ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಉತ್ತರ ಕ್ಯಾಲಿಫೋರ್ನಿಯಾದ ಮಿಲ್‌ ಪಿಟಾಸ್ನ ಜೈನ ದೇವಾಲಯದಲ್ಲಿ ದಕ್ಷಿಣ ಭಾರತದ ಸುಪ್ರಸಿದ್ದ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‌ ಅವರ ಸಂಗೀತ ರಸಸಂಜೆ ಮೇ 5ರಂದು ಯಶಸ್ವಿಯಾಗಿ ನಡೆಯಿತು.

ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಶುರುವಾಯಿತು. ಜನರೆಲ್ಲಾ ಕಾತರದಿಂದ ನಿರೀಕ್ಷಿಸುತ್ತಿದ್ದ ಸಮಯ ಬಂದೇ ಬಿಟ್ಟಿತು. ವೇದಿಕೆ ಮೇಲೆ ರಾಮ್‌ ಪ್ರಸಾದ್‌ರವರು ಡಾ.ಪಿ.ಬಿ.ಶ್ರೀನಿವಾಸ್‌ ಅವರನ್ನು ಸ್ವಾಗತಿಸಿದಾಗ ಜನರೆಲ್ಲಾ ಎದ್ದು ನಿಂತು ತಮ್ಮ ಕರತಾಡನದಿಂದ ಅಭಿನಂದನೆ ಸೂಚಿಸಿದರು. ಇದು ಆ ಕಲಾಪುತ್ರನಿಗೆ ಸಲ್ಲಿಸಿದ ಒಂದು ಅಪೂರ್ವವಾದ ಅಭಿನಂದನೆಯಾಗಿತ್ತು.

ಪಿ.ಬಿ.ಶ್ರೀನಿವಾಸ್‌ ಅವರು ವೇದಿಕೆ ಮೇಲೆ ನಿಂತು ‘ನಾನು ಕರ್ನಾಟಕದಲ್ಲಿದ್ದೇನೋ ಏನೋ ಅಂತ ಅನುಮಾನವಾಗ್ತಿದೆ’ ಎಂದು ಅಚ್ಚಕನ್ನಡದಲ್ಲಿ ನುಡಿದಾಗ ಮತ್ತೊಮ್ಮೆ ಜನರಿಂದ ಕರತಾಡನ. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಸಂಘಕ್ಕೆ ತಮ್ಮ ಅಭಿನಂದನೆಯನ್ನು ಸಲ್ಲಿಸುತ್ತಾ ಪಿ.ಬಿ.ಎಸ್‌ ರವರು ತಮ್ಮ ಕಾರ್ಯಕ್ರಮವನ್ನು ಅತ್ಯಂತ ಜನಪ್ರಿಯ ಗೀತೆಯಾದ ‘ಮೂಷಿಕವಾಹನ.....ಶರಣು ಶರಣಯ್ಯಾ’ ದಿಂದ ಆರಂಭಿಸಿದರು. ನಂತರ ತಾವು ಹಾಡಿದ ಅತ್ಯಂತ ಜನಪ್ರಿಯ ಗೀತೆಗಳನ್ನು ಒಂದೊಂದಾಗಿ ಹಾಡುತ್ತಾ ಕಲಾರಸಿಕರನ್ನು ಮತ್ತೆ ಆ ಹಳೆಯ ಬಂಗಾರದ ದಿನಗಳತ್ತ ಕೊಂಡೊಯ್ದರು.

ಅವರ ಜನಪ್ರಿಯ ಗೀತೆಗಳೂ ಮತ್ತು ಕನ್ನಡದ ವರನಟ ರಾಜ್‌ ಕುಮಾರ್‌ ಅವರಿಗೆ ಹಾಡಿದ ‘ಒಲವೇ ಜೀವನ ಸಾಕ್ಷಾತ್ಕಾರ’, ‘ಕಸ್ತೂರಿನಿವಾಸ’ ದ ‘ಆಡಿಸಿನೋಡು ಬೀಳಿಸಿ ನೋಡು’, ‘ಗಂಧದಗುಡಿ’ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’, ‘ಭಕ್ತಕುಂಬಾರ’ ದ ‘ಮಾನವಾ ದೇಹವೂ’, ‘ಸೊಸೆ ತಂದ ಸೌಭಾಗ್ಯ’ ಚಿತ್ರದ ‘ರವಿವರ್ಮನ ಕುಂಚದಾ’, ‘ಎರಡು ಕನಸು’ ಚಿತ್ರದ ‘ಎಂದೆಂದೂ ನಿನ್ನನು ಮರೆತೂ’ ಮತ್ತು ‘ತಂನಂ ತಂನಂ ನನ್ನೀ ಮನಸೂ’ , ಈ ಎಲ್ಲಾ ಗೀತೆಗಳು ಕೇಳುಗರ ಮನಸ್ಸನ್ನು ಅರಳಿಸಿದವು.

ಒಂದೊಂದು ಹಾಡನ್ನು ಹಾಡುವಾಗಲೂ ಮೊದಲು ಆ ಹಾಡಿನ ಬಗ್ಗೆ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ ಆಗ ನಡೆದ ಸನ್ನಿವೇಶದ ಬಗ್ಗೆ ಸ್ವಾರಸ್ಯವಾಗಿ ಹೇಳುತ್ತಿದ್ದರು. ಅವರ ನೆನಪಿನ ಶಕ್ತಿಯನ್ನು ನೋಡಿ ಆಶ್ಚರ್ಯ ಅನ್ನಿಸುತ್ತಿತ್ತು. ಅದರಲ್ಲೂ ರಾಜ್‌ ಮತ್ತು ತಮ್ಮ ಸ್ನೇಹದ ಬಗ್ಗೆ ನೆನಪು ಮಾಡಿಕೊಂಡು ರಾಜ್‌ ತಮ್ಮನ್ನು ಯಾವಾಗ ನೋಡಿದರೂ ‘ನನ್ನ ಶಾರೀರ ಬರುತ್ತಿದೆ ನೋಡಿ’ ಅನ್ನುತ್ತಿದ್ದರೆಂದು ಅಭಿಮಾನದಿಂದ ಹಂಚಿಕೊಂಡರು.

ರಾಜ್‌ಕುಮಾರ್‌ ನಿಧನರಾದಾಗ ಅವರನ್ನು ನೋಡಲು ಆಗದ ನೋವಿನಲ್ಲಿ ಅವರ ಮೇಲೆ ಒಂದು ಕವಿತೆಯನ್ನು ಅಲ್ಲಿಯೇ ರಚಿಸಿದರಂತೆ, ಅದನ್ನೂ ಹಾಡಿದರು. ಅದು ರಾಜ್‌ಕುಮಾರ್‌ರ ‘ನಾಂದಿ’ ಚಿತ್ರದಲ್ಲಿ ಬರುವ ‘ಹಾಡೊಂದ ಹಾಡುವೇ ನೀ ಕೇಳು ಮಗುವೇ’ ಅನ್ನುವುದನ್ನು ಪೂರ್ತಿ ಬದಲಾಯಿಸಿ ಅದೇ ರಾಗದಲ್ಲಿ ತಾವೇ ಬರೆದ ‘ಹಾಡೊಂದ ಹಾಡುವೇ ನೀ ಕೇಳು ಅಣ್ಣಾ’ ಅನ್ನುವ ಹಾಡನ್ನು ಸ್ವಲ್ಪ ಭಾವುಕತೆಯಿಂದಲೇ ಹಾಡಿದರು.

ಅಲ್ಲದೆ ತಮ್ಮನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಆರ್‌.ನಾಗೇಂದ್ರರಾಯರನ್ನು ನೆನಪು ಮಾಡಿಕೊಂಡರು. ತಮ್ಮ ಜೊತೆಯಲ್ಲಿ ಯುಗಳಗೀತೆಯನ್ನು ಹಾಡಿದ ಕಿರಿಯ ಸ್ಥಳೀಯ ಗಾಯಕಿಯರಿಗೆ(ಆರತಿ ಮತ್ತು ಪರಿಮಳ) ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ನಂತರ ಅವರ ಜೊತೆಗೆ ಬಂದಿದ್ದ ಅವರ ಸುಪುತ್ರ ಮತ್ತು ತಮ್ಮನ ಮಗ ಇಬ್ಬರೂ ಕೂಡ ಪಿಬಿಎಸ್‌ ಅವರೇ ಹಾಡಿದ ಒಂದು ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.

ಕನ್ನಡದ ಜನಪ್ರಿಯ ಗೀತೆಗಳನ್ನು ಮಾತ್ರವಲ್ಲದೇ ತಾವೇ ರಚಿಸಿದ ಕೆಲವು ಕವಿತೆಗಳನ್ನೂ ಕೂಡಾ ಹಾಡಿದರು. ಅದರಲ್ಲಿ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಗೀತೆಯಂತೂ ತುಂಬಾ ಸುಂದರವಾಗಿ ಮೂಡಿಬಂದಿತ್ತು. ಕಟ್ಟಕಡೆಯದಾಗಿ ತಾವೇ ರಚಿಸಿ ರಾಗಸಂಯೋಜನೆ ಮಾಡಿದ ಕೃಷ್ಣನ ಗೀತೆಯಾಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಳಿಸಿದರು. ನಂತರ ಕೆ.ಕೆ.ಎನ್‌.ಸಿ ಬಗ್ಗೆ ಬರೆದಿದ್ದ ಒಂದು ಕವನವನ್ನು ಸಂಘಕ್ಕೆ ಅರ್ಪಿಸಿದರು.

ಕಾರ್ಯಕ್ರಮ ಅಚ್ಚುಕಟ್ಟಾಗಿದ್ದರೂ ಜಾಗದ ಅಭಾವದಿಂದ ಕೆಲವರು ನಿಂತೇ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿದರು. ಕನ್ನಡ ಕಲಾರಸಿಕರಿಗೆ ಈ ರಸಸಂಜೆ ಒಂದು ಹಬ್ಬದಂತಾಗಿತ್ತು. ಈ 76ರ ಇಳಿವಯಸ್ಸಿನಲ್ಲಿಯೂ ಹಾಡುವುದರಲ್ಲಿ ಅವರಿಗಿರುವ ಆಸಕ್ತಿ, ಉತ್ಶಾಹ, ತಲ್ಲೀನತೆ ಮತ್ತು ಶ್ರದ್ದೆಯನ್ನು ನೋಡಿದವರನ್ನು ಆಶ್ಚರ್ಯಚಕಿತಗೊಳಿಸುವುದರಲ್ಲಿ ಏನೂ ಅತಿಶಯವಿಲ್ಲ. ಒಟ್ಟಿನಲ್ಲಿ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬಂದಿತ್ತು. ಇಂತಹ ಒಂದು ಸುಂದರ ಕಾರ್ಯಕ್ರಮವನ್ನು ಏರ್ಪಡಿಸಿದ್ದಕ್ಕಾಗಿ ಕೆ.ಕೆ.ಎನ್‌.ಸಿಗೆ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ಖುದ್ದು ಪಿಬಿಎಸ್‌ ಮೆಚ್ಚಿದ ಇನ್ನೊಂದು ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X