• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯಾದಲ್ಲಿ ಪಿಬಿಎಸ್‌ : ನೋಟ-1‘ಎಂದಿಗು ನಾನು ಹೀಗೇ ಇರುವೆ ಎಂದು ನಗುವುದು... ’

By Staff
|

ಈ ವರದಿಯನ್ನು ಮೆಚ್ಚಿ, ಕರಡುಪ್ರತಿಯಲ್ಲಿದ್ದ ಕೆಲವು ವಿವರಗಳನ್ನು ಸರಿಪಡಿಸಿ, ಕೆಲವು ಓರೆಕೋರೆಗಳನ್ನೂ ಪಿ. ಬಿ. ಶ್ರೀನಿವಾಸ್‌ ಅವರೇ ತಿದ್ದಿರುವುದು ವಿಶೇಷ.

ಅಕ್ಷರ : ಪ್ರಭು ಮೂರ್ತಿ

ಮಸೂರ : ಶ್ರೀವತ್ಸ ದುಗ್ಲಾಪುರ

P B Sreenivas Singing in Californiaಅವರು ನಮ್ಮ ನಾಡಿನ ಮೇರುನಟ. ಒಮ್ಮೆ ಎ.ವಿ.ಎಮ್‌. ಚೆಟ್ಟಿಯಾರ್‌ ಸ್ಟುಡಿಯೋದಲ್ಲಿ ಕೆಲವರೊಂದಿಗೆ ಸಲ್ಲಾಪ ನಡೆಸುತ್ತ ಕುಳಿತಿದ್ದರಂತೆ. ಆಗ ಒಬ್ಬ ವ್ಯಕ್ತಿ ಅಲ್ಲಿಗೆ ಬರುತ್ತಿರುವುದನ್ನು ಕಂಡು ‘‘ಇಲ್ಲಿದೆ ಶರೀರ. ಅಲ್ಲಿಂದ ಬರ್ತಾಯಿದಾರೆ ಈ ಶರೀರದ ಶಾರೀರ.’’ ಎಂದರಂತೆ.

ಬಂದ ಆ ವ್ಯಕ್ತಿ ನಮ್ಮ ನಾಡಿನ ಹೃದಯದಲ್ಲಿ ಎಂದೂ ಮರೆಯದೆ ಉಳಿಯುವ ಒಬ್ಬ ಗಾನಗಂಧರ್ವ. ಆ ಮೇರುನಟನ ಮತ್ತು ಈ ಮೇರುಗಾಯಕನ ನಡುವೆ ಎಂಥಾ ಅವಿನಾಭಾವ ಸಂಬಂಧ! ಕನ್ನಡದ ಕಣ್ಮಣಿ ಕಣ್ಮರೆಯಾದಾಗ ಚರಮದರ್ಶನಕ್ಕೆ ಹಾರಿಬಂದರಂತೆ. ಆದರೆ ನೆರೆದಿದ್ದ ಜನಸಾಗರವನ್ನು ದಾಟಿ ಕೊನೆಯ ಬಾರಿಗೆ ನೋಡಲು ಆಗಲೇ ಇಲ್ಲವಂತೆ.

-ಇಂತಹ ಹಲವಾರು ಸಂಗತಿಗಳನ್ನು ಮೆಲುಕು ಹಾಕುತ್ತಾ ಯಾವತ್ತೋ ಒಮ್ಮೆ ಮನಸ್ಸನ್ನು ಕಲಕಿರುವ, ಯಾವತ್ತೂ ಹೃದಯವನ್ನು ಸೂರೆಗೊಂಡಿರುವ ಕನ್ನಡ ಸಿನಿಮಾದ ಸುವರ್ಣಯುಗದ ಕ್ಷಣಗಳನ್ನು ಮರುಕಳಿಸಿದರು ಅಂದು. ಬೇ ಏರಿಯಾದಲ್ಲಿ ಮೋಡಮುಸುಕಿ ಮಂಕಾಗಿದ್ದ ಕಳೆದ ಕೆಲವು ದಿನಗಳಿಗೆ ಪ್ರಾಯಶ್ಚಿತ್ತವೋ ಎನ್ನುವಂತೆ ಪೋಸ್ಟ್‌ ಕಾರ್ಡಿಗೆ ಹೇಳಿಮಾಡಿಸಿದಂತೆ ಇದ್ದ ವೈಶಾಖದ ಆ ಶನಿವಾರ, ಸಿಂಕೋ ಡಿ ಮಾಯೋ. ಆದರೆ ಅನೇಕ ಕನ್ನಡಿಗರಿಗೆ ಮಿಲ್ಪೀಟಸ್ಸಿನ ಜೈನ ದೇವಾಲಯಕ್ಕೆ ಹೋಗುವ ಕಾತರ.

ತೀರಾ ಆತ್ಮೀಯವಾದ ದನಿ... ಆದರೆ ವ್ಯಕ್ತಿ ಅಪರಿಚಿತ. ಎಷ್ಟೊ ಗಾಯಕರು ತಮ್ಮ ಪ್ರತಿಭೆಯನ್ನು ಪ್ರದರ್ಶನಕಲೆಯಾಗಿ ಮೆರೆಸುವುದು ಸಾಮಾನ್ಯ. ಆದರೆ ಈ ವ್ಯಕ್ತಿ? ಒಂದೋ ಎರಡೊ ಕಪ್ಪು-ಬಿಳಿ ಛಾಯಾಚಿತ್ರಗಳಲ್ಲಷ್ಟೆ ನೋಡಿರುವ ಚಹರೆ. ಆ ಕಂಠಸಿರಿಯನ್ನು ಸವಿದಿದ್ದು ಮೊದಲು ಚಿತ್ರಮಂದಿರಗಳಲ್ಲಿ ಕೇಳಿ. ಬಳಿಕ ಬಾನುಲಿಯಲ್ಲಿ. ಆಮೇಲೆ ಕ್ಯಾಸೆಟ್ಟು, ಸಿ.ಡಿ.ಗಳಲ್ಲಿ. ಈಗೀಗ ಹಾಡಿನ ಜಾಲತಾಣಗಳಲ್ಲಿ. ಇಂತಹ ಧ್ವನಿಯ ಸಾಕಾರರೂಪವನ್ನೂ, ಆ ವ್ಯಕ್ತಿತ್ವದ ಇತರ ಮಗ್ಗಲುಗಳನ್ನೂ ನೋಡಲೋ ಏನೋ, ಕನ್ನಡಕೂಟದ ಆಯೋಜಕರು ಎಣಿಸಿದ್ದಕ್ಕಿಂತ ಮಿಗಿಲಾಗಿ ನೂರಾರು ಮಂದಿ ಜಮಾಯಿಸಿದ್ದರು.

ಟಿಕೆಟ್ಟು ಪಡೆದು ಒಳಹೊಕ್ಕಮೇಲೆ ಸೀಟಿಗಾಗಿ ಪರದಾಟ. ಕೊನೆಗೆ ಯಾವುದೋ ಟೇಬಲ್ಲು ಕಿಟಕಿಗಳಲ್ಲಿ ಜಾಗ ಹುಡುಕಿಯೋ, ಗೋಡೆಗೆ ಆತು ನಿಂತೋ ಹಾಡು ಕೇಳಲು ಕಾದರು. ಯಾವ ಯಾವ ಹಾಡುಗಳನ್ನು ಅವರು ಹೇಳಬಹುದು? ಸಂಧ್ಯಾರಾಗ? ಸಾಕ್ಷಾತಾರ? ಭಕ್ತ ಕನಕದಾಸ? ಕಸ್ತೂರಿನಿವಾಸ? ಎರಡು ಕನಸು? ನಾಗರಹಾವು? ಅವರವರ ನಿರೀಕ್ಷೆ ಅವರವರಿಗೆ. ಜನ ಚಡಪಡಿಸುತ್ತಿದ್ದಂತೆ ಹಿಮ್ಮೇಳದವರೆಲ್ಲ ಸಜ್ಜಾದಮೇಲೆ ತೆರೆಯಮರೆಯಿಂದ ವೇದಿಕೆಗೆ ಬಂದರು.

ಕಾಲದ ಪೆಟ್ಟಿಗೂ ಕುಗ್ಗದ ಚೈತನ್ಯ. ನೊಸಲಿನಲ್ಲಿ ತಿದ್ದಿ ಹಚ್ಚಿದ ಕೆನ್ನಾಮ. ಹಸಿರು ಜರತಾರಿ ಪೇಟ. ಒಂಥರಾ ಅರ್‌. ಕೆ. ಲಕ್ಷ್ಮಣರ ಕಲ್ಪನೆಯ ಶ್ರೀಸಾಮಾನ್ಯ. ಪಿ. ಬಿ. ಶ್ರೀನಿವಾಸ್‌!

‘ಶರಣು ಶರಣಯ್ಯ’ದಿಂದ ಪ್ರಾರಂಭಿಸಿ ‘ಆಕಾಶವೆ ಬೀಳಲಿ ಮೇಲೆ’, ‘ರವಿವರ್ಮನ ಕುಂಚದ’, ‘ಮಾನವ ಮೂಳೆ ಮಾಂಸದ ತಡಿಕೆ’, ‘ಎಂದೆಂದೂ ನಿನ್ನನು ಮರೆತು’, ‘ಜಯತು ಜಯ ವಿಠಲ’, ‘ತಮ್‌ ನಮ್‌ ನಮ್‌ ನಮ್‌ ನನ್ನೀ ಮನಸು’, ‘ಒಲವೆ ಜೀವನ ಸಾಕ್ಷಾತ್ಕಾರ’, ‘ನಾವಾಡುವ ನುಡಿಯೆ’ ಹಾಗೂ ಕೆಲವು ಸ್ವರಚಿತ ಗೀತೆಗಳನ್ನು ಹಾಡಿದರು. ಪ್ರತಿ ಹಾಡಿಗೂ, ಅವರ ಮಾತು ಮಾತಿಗೂ ಕೇಳಿದ ಚಪ್ಪಾಳೆ, ಅನೇಕ ಬಾರಿ ಕಂಡ ನಿಂತುಸಲ್ಲಿಸಿದ ಕರತಾಡನಗಳು ಆ ಹಾಡುಗಳ ಆತ್ಮೀಯತೆಗೆ ಮತ್ತು ಕಾಲಾತೀತತೆಗೆ ಸಾಕ್ಷಿಯಾಗಿತ್ತು.

ದಕ್ಷಿಣಭಾರತಕ್ಕೆ ತಮ್ಮನ್ನು ಪರಿಚಯಿಸಿದ ಕನ್ನಡಿಗ ಆರ್‌. ನಾಗೇಂದ್ರರಾಯರು, ಮದ್ರಾಸಿನಲ್ಲಿ ಈಗಲೂ ಕನ್ನಡ ಕಲಿಸುವ ಶಾಲೆಯನ್ನು ನಡೆಸುತ್ತಿರುವ ಅವರ ಮಗ ಜನಪ್ರಿಯ ಸಾಹಿತಿ ಆರ್‌. ಎನ್‌. ಜಯಗೋಪಾಲ್‌ ಇವರನ್ನೆಲ್ಲ ಸ್ಮರಿಸಿದರು. ಸರೋಜಾದೇವಿಯವರಿಗೆ ‘ಆಕಾಶವೆ ಬೀಳಲಿ ಮೇಲೆ’ ತುಂಬಾ ಇಷ್ಟ ಅಂತೆ.

P B Srinivas with fansಹುಣಸೂರು ಕೃಷ್ಣಮೂರ್ತಿಯವರು ಭಕ್ತ ಕುಂಬಾರದ ‘ಮಾನವಾ ಮೂಳೆ ಮಾಂಸದ ತಡಿಕೆ’ ರಚಿಸಲು ಮಾಡಿದ ಗ್ರಂಥಶೋಧನೆ, ಚಿ. ಉದಯಶಂಕರ್‌ ಹಾಗೂ ಅವರ ತಂದೆ ಎಸ್‌. ಸದಾಶಿವಯ್ಯ, ಜಿ. ಕೆ. ವೆಂಕಟೇಶ್‌, ರಾಜನ್‌-ನಾಗೇಂದ್ರ ಯುಗಳಗೀತೆಗಳಲ್ಲಿ ಹೆಣ್ಣು-ಗಂಡು ದನಿಗಳನ್ನು ಮೇಳೈಸುವ ಸಂಕೀರ್ಣತೆ, ಎಸ್‌. ಜಾನಕಿ, ವಾಣಿಜಯರಾಮ್‌ ಇವರ ಒಡನಾಟ... ಇಂತಹ ಎಷ್ಟೋ ನೆನಪುಗಳನ್ನು ಹಾಡಿಗೆ ಮೊದಲು ಪ್ರಸ್ತಾಪಿಸಿ ತಮ್ಮ ಕಾಲದ ಸಜ್ಜನಿಕೆಯನ್ನೂ, ಶುದ್ಧರಸಿಕತೆಯನ್ನೂ ಮೆರೆದರು.

ಅವರ ಮಗ ನಂದಕಿಶೋರ್‌ ಅವರು ನಡುವೆ ‘ಬಿಂಕದ ಸಿಂಗಾರಿ ಮೈ ಡೊಂಕಿನ ವೈಯ್ಯಾರಿ’ ಮತ್ತು ಅವರ ತಮ್ಮನ ಮಗ ಫಣಿ ಅವರು ವಿಜಯಭಾಸ್ಕರ್‌ ಸಂಗೀತ ನಿರ್ದೇಶನದ ‘ಬಾರೆ ಬಾರೆ ಚೆಂದದ ಚೆಲುವಿನ ತಾರೆ’ ಬಹಳ ಚೆನ್ನಾಗಿ ಹಾಡಿ, ಶ್ರೀನಿವಾಸ್‌ ಅವರಿಗೆ ಕೊಂಚ ಬಿಡುವು ಮಾಡಿಕೊಟ್ಟರು. ನಮ್ಮ ಕೂಟದ ಹೆಮ್ಮೆಯ ಆರತಿ ಮೂರ್ತಿ ಮತ್ತು ಪರಿಮಳ ಮುರಳೀಧರ ಅವರು ತುಂಬಾ ಪ್ರಿಯವಾಗಿ ಯುಗಳಗೀತೆಗಳಿಗೆ ದನಿಗೂಡಿಸಿದರು.

ರಾಮಪ್ರಸಾದ್‌ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕಳೆದ ವಾರ ಅಕಾಲಿಕವಾಗಿ ದಿವಂಗತರಾದ ಕೂಟದ ಸದಸ್ಯೆ ರಾಧಿಕ ಉಪಾಧ್ಯಾಯರ ಆತ್ಮಕ್ಕೆ ಸಭೆಯು ಶಾಂತಿಯನ್ನು ಕೋರಿತು. ಮೇಳದ ಸ್ಥಳೀಯ ಕಲಾವಿದರನ್ನು ಶ್ರೀನಿವಾಸ್‌ ಅವರೇ ಪರಿಚಯ ಮಾಡಿಕೊಟ್ಟರು. ಕೂಟದ ಅಧ್ಯಕ್ಷೆಯಾದ ಕಾವ್ಯ ಅವರು ಮತ್ತು ಮನರಂಜನಾಸಮಿತಿಯ ಕಾರ್ಯದರ್ಶಿ ಸೋಮಶೇಖರ್‌ ಅವರು ಶ್ರೀನಿವಾಸ್‌ ಅವರನ್ನು ಸತ್ಕರಿಸಿದರು.

ಕನ್ನಡಕೂಟವು ಪಿ. ಬಿ. ಶ್ರೀನಿವಾಸ್‌ ಅವರಿಗೆ ಕೊಟ್ಟ ಪ್ರಶಂಸಾಪತ್ರವನ್ನು ಕಾವ್ಯ ಓದಿದರು. ಕನ್ನಡಕೂಟದ ಮೇಲೆ ತಾವೇ ರಚಿಸಿದ ಒಂದು ಕವನವನ್ನು ಪಿ. ಬಿ. ಶ್ರೀನಿವಾಸ್‌ ಓದಿ ಧನ್ಯತೆಯನ್ನು ಅರ್ಪಿಸಿದರು. ಇಂತಹ ಅಪೂರ್ವ ಸಂದರ್ಭಕ್ಕೆ ಒಪ್ಪುವ ಮೈಕು ಧ್ವನಿವರ್ಧಕಗಳ ವ್ಯವಸ್ಥೆ ಇರದೇ ಮೊದಮೊದಲು ಕೊಂಚ ಅಸಹನೀಯವಾಗಿತ್ತಾದರೂ, ಚಿಕ್ಕಂದಿನಲ್ಲಿ ಕೇಳಿದ್ದ ಆ ಹಾಡುಗಳು, ಅದೇ ಕಾಲಕ್ಕೆ ಬಡಾವಣೆಯ ಗಣೇಶ, ರಾಜ್ಯೋತ್ಸವ ಕಾರ್ಯಕ್ರಮಗಳ ಧ್ವನಿವರ್ಧಕದಲ್ಲಿ ಕೇಳಿದ್ದಂತೆ ಆಗಿಯೋ ಏನೋ ಒಟ್ಟಿನಲ್ಲಿ ನೊಸ್ಟಾಲ್ಜಿಯವೇ ಇದನ್ನೆಲ್ಲ ಉಪೇಕ್ಷಿಸುವಂತೆ ಮಾಡಿತು ಎಂದುಕೊಳ್ಳಬಹುದು!

ಸುಮಾರು ಮೂರು ಗಂಟೆಗಳ ಕಾರ್ಯಕ್ರಮದ ನಂತರ ವೇದಿಕೆಯ ಮೇಲೆ ಅಭಿಮಾನಿಗಳೆಲ್ಲಾ ಕಿಕ್ಕಿರಿದರು. ಫೋಟೋಗ್ರಾಫ್‌ ಕ್ಲಿಕ್ಕಿಸಿಕೊಂಡರು. ಆಟೋಗ್ರಾಫ್‌ ಹಾಕಿಸಿಕೊಂಡರು. ಅನೇಕರು ಕಾಲುಮುಟ್ಟಿ ನಮಿಸಿದರು. ಅವರ ಹಾಡುಗಳು ಹೇಗೆ ತಮ್ಮ ಜೀವನದ ಒಂದು ಅಂಗವಾಗಿದೆ ಎಂದು ತಿಳಿಸಿ ಕೃತಜ್ಞರಾದರು. ಕುರ್ಚಿಯ ಮೇಲೆ ಕೂತ ಪಿ. ಬಿ. ಶ್ರೀನಿವಾಸ್‌, ಬಹುಕಾಲದ ನಂತರ ತಮ್ಮನ್ನು ನೋಡಲು ಬಂದ ಕುಟುಂಬದವರನ್ನು ಮಾತನಾಡಿಸುತ್ತಿರುವ ಅಜ್ಜನಂತೆ ಕಂಡರು.

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು

ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು

ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು

ಎಂದಿಗು ನಾನು ಹೀಗೇ ಇರುವೆ ಎಂದು ನಗುವುದು...

ಕಸ್ತೂರಿನಿವಾಸದ ಹಾಡು ಮನೆಗೆ ಮರಳುವಾಗ ಗುಂಯ್‌ಗುಡುತ್ತಿತ್ತು. ‘ಒಂದು ತಲೆಮಾರಿನ ಹೃದಯವನ್ನು ಸೂರೆಗೊಂಡ ಆ ಕೊರಳು ಕಾಲದ ನಿರ್ದಯತೆಗೆ ಎಸೆದ ಸವಾಲೆ?’ ಎನಿಸಿತು.

ಗಾನಗಂಧರ್ವ ಡಾ.ಪಿ.ಬಿ.ಶ್ರೀನಿವಾಸ್‌ ರಸಸಂಜೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more