• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕಾವೇರಿ’ ಯುಗಾದಿ : ಮರಳಿ ಕೇಳಬೇಕೆನಿಸಿದ ಮೋಹಕ ಮುರಳಿ...

By Staff
|

ಅಮೆರಿಕಾದ ರಾಜಧಾನಿಯಲ್ಲಿ ಚಳಿ ಕರಗಿ ಚಿಗುರು ಹಸುರು ಹೂವು ನಗುವ ಕಾಲವಿದು. ಅಲ್ಲೊಂದು ಚೆರ್ರಿ ಮರ. ಅದರ ಕೆಳಗೊಬ್ಬ ವೇಣು. ಅದೆ ಋತುವಿಲಾಸ.

ವಾಷಿಂಗ್ಟನ್‌ನಲ್ಲಿ ವಸಂತಋತು ಶುರು ಆಯ್ತು, ಇಲ್ಲಿನ ಪ್ರಖ್ಯಾತ ‘ಚೆರ್ರಿ’ಮರಗಳೂ ಹೂಬಿಟ್ಟು ಸಾಲಂಕೃತವಧುವಿನಂತಾದುವು, ಬೇಸ್‌ಬಾಲ್‌ ಮೈದಾನಗಳಲ್ಲಿ ಜನ ಕಾಣಿಸಕೊಳ್ಳತೊಡಗಿದರು... ಇನ್ನೇನು ಕೊರೆಯುವ ಚಳಿ ಮುಗೀತು ಅಂದ್ಕೊಂಡ್ರೆ, ಮತ್ತೆ ಹೋಗುವ ಮುನ್ನ ಟಾಟಾ ಹೇಳಲು ಮರೆತೆ ಎಂದು ಹಲ್ಕಿರಿಯುತ್ತ ಚಳಿರಾಜ ಗಹಗಹಿಸಬೇಕೆ!

Praveen Godkhindi playing flute in WDCಚಳಿಯೋ ಅಥವಾ ಪ್ರೊವರ್ಬಿಯಲ್‌ ‘ತಣ್ಣಗಿನ ಸ್ವಭಾವ’ವೋ - ಕಾವೇರಿ ಸಂಘದ ಕಾರ್ಯಕ್ರಮ ಶನಿವಾರ (ಎ. 7) ಸಂಜೆ ನಾಲ್ಕಕ್ಕೇ ಆರಂಭವಾಗ್ತದೆ ಎಂದು ಸಂಘಾಧ್ಯಕ್ಷರು ಈಮೈಲ್‌ಗಳಲ್ಲಿ ಎಷ್ಟೇ ಬೊಬ್ಬಿಟ್ಟರೂ ಐದು ಗಂಟೆಯಾದರೂ ಪ್ರೇಕ್ಷಕರ ಸಂಖ್ಯೆ ಐವತ್ತು ಮೀರಿರಲಿಲ್ಲ (ಆಮೇಲೆ ಪ್ರವಾಹದೋಪಾದಿಯಲ್ಲಿ ಎಲ್ಲ ಬಂದರೆನ್ನಿ) ಒಂದು ರೀತಿಯಲ್ಲಿ ಅದು ಒಳ್ಳೆಯದೇ ಆಯ್ತು - ಕಾರ್ಯಕ್ರಮ ನಡೆಯಬೇಕಿದ್ದ ಇಲ್ಲಿನ ಬೆಥೆಸ್ಡಾ ಹೈಸ್ಕೂಲ್‌ನ ಸಭಾಂಗಣ ಸಿಕ್ಕಿತ್ತಾದರೂ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ವೇದಿಕೆಯನ್ನು ಸಜ್ಜುಗೊಳಿಸಿ ಸ್ವಾಗತಭಾಷಣಕ್ಕಾಗುವಾಗ ಗಂಟೆ ಐದು ದಾಟಿತ್ತು.

ಇದರಿಂದಾಗಿ ಇಡೀ ಕಾರ್ಯಕ್ರಮವನ್ನು ಸ್ವಲ್ಪ ‘ಓಡಿಸಬೇಕಾಗಿ’ ಬಂತು - ಸರ್ವಜಿತ್‌ ಸಂವತ್ಸರದ ಪಂಚಾಂಗ ಶ್ರವಣ ಮಾಡಿಸಿದ ಅರ್ಚಕ ಹರೀಶ್‌ ಬೈಪಡಿತ್ತಾಯರು ಎಲ್ಲ ರಾಶಿ-ನಕ್ಷತ್ರಗಳವರ ಆಯವ್ಯಯ ವಿವರ ತಿಳಿಸುತ್ತಿದ್ದಾಗ ಅವರು ವ್ಯಯಿಸಬಹುದಾಗಿದ್ದ ನಿಮಿಷಗಳನ್ನು ಮೊಟಕುಗೊಳಿಸುವಲ್ಲಿಂದ ಹಿಡಿದು, ಪೂರ್ತಿ ಎರಡು ಗಂಟೆಗಳ ಸ್ಲಾಟ್‌ ಪಡೆದಿದ್ದ ‘ಗಂಗಾ-ಕಾವೇರಿ’ ಸ್ವರಲಯ ಸಮ್ಮಿಲನ ಕಾರ್ಯಕ್ರಮವನ್ನು ಒಂದು-ಒಂದೂಕಾಲು ಗಂಟೆಯಲ್ಲೇ ಮುಗಿಸಬೇಕಾದ ಅನಿವಾರ್ಯತೆಯವರೆಗೆ.

ಬಹುನಿರೀಕ್ಷಿತ ಗಂಗಾ-ಕಾವೇರಿ ಸ್ವರಲಯಸಮ್ಮಿಲನ ಕಾರ್ಯಕ್ರಮ (ಪ್ರವೀಣ್‌ ಗೋಡ್ಖಿಂಡಿ - ಹಿಂದುಸ್ಥಾನಿ ಕೊಳಲು, ಎಂ.ಕೆ.ಪ್ರಾಣೇಶ್‌ - ಕರ್ನಾಟಕ್‌ ಕೊಳಲು, ಅನಂತಕೃಷ್ಣ‘ಶಿವು’ ಶರ್ಮಾ - ಮೃದಂಗ, ಅರುಣ್‌ ಕುಮಾರ್‌ - ರಿದಂ ಪ್ಯಾಡ್ಸ್‌, ಎಸ್‌.ಮಧುಸೂದನ - ತಬಲಾ) ತುಸು ಮೊಟಕುಗೊಂಡಿತೆನ್ನುವುದನ್ನು ಬಿಟ್ಟರೆ ಅತ್ಯದ್ಭುತವಾಗಿಯೇ ಮೂಡಿ ಬಂತು. ಮೂರೇಮೂರು ಕೃತಿಗಳು - ಹಂಸಧ್ವನಿಯಲ್ಲಿ ನಿತ್ಯಹರಿದ್ವರ್ಣದ ‘ವಾತಾಪಿ ಗಣಪತಿಂ...’, ಅಭೇರಿ (ಹಿಂದುಸ್ತಾನಿ ಭೀಮ್‌ಪಲಾಸ್‌) ರಾಗದಲ್ಲಿ ಶಿವು ಅವರದೇ ಒಂದು ರಚನೆ ಮತ್ತು ಕೊನೆಯಲ್ಲಿ ಮಾಂಡ್‌ ರಾಗದಲ್ಲಿ ‘ಬಾರೋ ಕೃಷ್ಣಯ್ಯ...’ - ಇವಿಷ್ಟು ಮಾತ್ರ ಪ್ರಸ್ತುತಗೊಂಡದ್ದಾದರೂ ಸಭಾಂಗಣದಲ್ಲಿ ರಸಧಾರೆಯ ಭೋರ್ಗರೆತ ಅನುರಣಿಸುವಂತಾಗಲು ಪೂರ್ಣವಾಗಿ ಯಶಸ್ವಿಯಾದವು. ಇದೇ ತಿಂಗಳ 21-22ರಂದು ಇಲ್ಲಿನ ಶಿವವಿಷ್ಣುದೇವಾಲಯದಲ್ಲಿ ನಡೆಯಲಿರುವ ನಾದತರಂಗಣಿ ಸಂಗೀತೋತ್ಸವದ ವೇಳೆ ಇದೇ ಗಂಗಾ-ಕಾವೇರಿ ಸಮ್ಮಿಲನದ ವಿಸ್ತೃತರೂಪ (ಆಗ ಕನಿಷ್ಠ 10-12 ಜನ ಕಲಾವಿದರಿರುತ್ತಾರೆ) ಪ್ರಸ್ತುತಗೊಳ್ಳಲಿರುವುದರಿಂದ ಮೊನ್ನೆಯದು ಜಸ್ಟ್‌ ಕೋಸಂಬರಿ-ಪಲ್ಯಗಳನ್ನು ಸ್ಯಾಂಪಲ್‌ ರುಚಿ ನೋಡಿದಂತಷ್ಟೇ. ರಾಗರಸಗಂಗೆಯ ಪುಷ್ಕಳ ಭೋಜನಕ್ಕೆ ವಾಷಿಂಗ್ಟನ್ನಿಗರು ಇನ್ನೆರಡು ವಾರ ಕಾಯಬೇಕು.

ಸಂಗೀತ ಕಾರ್ಯಕ್ರಮದ ನಂತರ ಸವಿತಾ ರಾವ್‌ ನಿರ್ದೇಶನದಲ್ಲಿ ಕಾವೇರಿ ಪುಟಾಣಿಗಳಿಂದ ಒಂದು ನವ್ಯ ವಿನೂತನ ಪ್ರಸ್ತುತಿಯಿತ್ತು, ಅದೇ ‘ಚಿತ್ರ-ವಿಚಿತ್ರ’ ವೆಂಬ ಕನ್ನಡ ಸಿನೆಮಾ ಅಣಕು. ಇಲ್ಲಿ ಹುಟ್ಟಿಬೆಳೆಯುತ್ತಿರುವ ಎರಡನೇ-ತಲೆಮಾರಿನ ಕನ್ನಡಕಂದಮ್ಮಗಳು ಒಂದು ಕನ್ನಡ ಚಲನಚಿತ್ರ ನಿರ್ಮಿಸಿದರೆ ಅದು ಹೇಗಿರುತ್ತೆ ಎಂಬ ಮನೋರಂಜಕ ಕಲ್ಪನೆ ಮತ್ತು ಪುಟ್ಟ ಮಕ್ಕಳಿಂದ ಅದನ್ನು ಅಚ್ಚುಕಟ್ಟಾಗಿ ಮಾಡಿತೋರಿಸಿದ ಸವಿತಾರಾವ್‌ ತಂಡಕ್ಕೆ ಪ್ರೇಕ್ಷಕವಿಮರ್ಶಕರು ನಾಲ್ಕೂವರೆನಕ್ಷತ್ರಗಳ ವಿಮರ್ಷೆ ಷರಾ ಬರೆದುಕೊಟ್ಟರು! ಮಕ್ಕಳಿಂದ ಇನ್ನೊಂದು ಪ್ರಸ್ತುತಿ ಹಿಂದಿಯ ‘ಗೊರಿ ಗೊರಿ...’ ಹಾಡಿಗೆ ನೃತ್ಯ - ಇದನ್ನು ನಿರ್ದೇಶಿಸಿದ ಸ್ಮಿತಾ ಗಿರೀಶ್‌ ಜಾಣ್ಮೆಯಿಂದ ‘ಎಲ್ಲರಿಗೂ ಸರ್ವಜಿತ್‌ ಸಂವತ್ಸರದ ಯುಗಾದಿ ಶುಭಾಶಯಗಳು’ ಎಂದು ಮಕ್ಕಳಿಂದಲೇ ಶುದ್ಧಕನ್ನಡದಲ್ಲಿ ಹೇಳಿಸಿ, ‘‘ಕನ್ನಡಸಂಘದ ಕಾರ್ಯಕ್ರಮಗಳಲ್ಲಿ ಹಿಂದಿ ಹಾಡುಗಳೇಕೆ?’’ ಎಂದು ಮೂಗುಮುರಿವವರ ಅಸಮಾಧಾನದಿಂದ ಪಾರಾದರು!

ಡಾ। ರವಿ ಹರಪ್ಪನಹಳ್ಳಿ ಮತ್ತು ತಂಡದವರ ‘ಅಮೆರಿಕರಣ’ ನಗೆನಾಟಕದ ಹೊತ್ತಾಗುವಾಗ ಪ್ರೇಕ್ಷಕರಿಗೆ ಹೊಟ್ಟೆಹಸಿವಿಂದ ಊಟದ ಸೆಳೆತವಲ್ಲದಿದ್ದರೆ ಅದು ಕಚಗುಳಿಯಿಡುವ ಸಂಭಾಷಣೆಗಳಿಂದ ಇನ್ನೂ ಹಿಟ್‌ ಆಗುತ್ತಿತ್ತೇನೊ. ಆದರೂ ‘‘ವ್ಯಾನ್‌ನ ಮೇಲೆಯೇ ‘ಹೊಂಡಾ ಓಡಿಸಿ’ ಎಂದು ಬರೆದಿತ್ತಲ್ಲ, ನಾನು ಓಡಿಸಿದೆ. ಆ ದರಿದ್ರ ಪೊಲಿಸ್‌ನವನು ಹಿಡೀಬೇಕಾ ನನ್ನ?’’ ಮುಂತಾದ ಡಯಲಾಗುಗಳಿಗೆ ಸಭಿಕರೆಲ್ಲ ಮನಸಾರೆ ನಕ್ಕಿದ್ದು ಹೌದು. ಅದೊಂಥರ ಮಜಾ ಆದರೆ, ಶಶಿಕಲಾ ಚಂದ್ರಶೇಖರ್‌ ಮತ್ತು ತಂಡದ ‘ಮೂಲಂಗಿ ಕಾಳು ಕೆಂಪಕ್ಕನ್ನ ಕೇಳು’ ಗಾದೆಗಳಾಧಾರಿತ ರೂಪಕವೂ ಗ್ರಾಮೀಣ ಸಂಭಾಷಣೆ ವೇಷಭೂಷಗಳಿಂದ ಮತ್ತೊಂದು ಥರದ ಮಜಾ ಕೊಟ್ಟಿತು.

ಕೊನೆಯಲ್ಲಿ ಮಾದೇಶ ಬಸವರಾಜು ಅವರ ‘ರಾಗ-ಭಾವ’ ಕನ್ನಡಹಾಡುಗಳ ಪ್ರಸ್ತುತಿಯನ್ನು ಆವರು ಅಗಲಿದ ಚೇತನ ಪೂರ್ಣಚಂದ್ರ ತೇಜಸ್ವಿಯವರಿಗೆ ಸಮರ್ಪಣೆ ಎಂದು ಹೇಳಿ ಪ್ರಸಂಗಾವಧಾನತೆಯಿಂದಲೇ ಸೈ ಎನಿಸಿಕೊಂಡರು. ಕಾರ್ಯಕ್ರಮ ಮುಗಿದ ನಂತರ ಹಬ್ಬದೂಟದ ಬಗ್ಗೆ ಪಂಚಾಂಗಶ್ರವಣ ಧಾಟಿಯಲ್ಲೇ ಹೇಳುವುದಾದರೆ ವಡಾ-ಚಟ್ನಿ, ಚಪಾತಿ-ತೊಂಡೆಕಾಯಿಪಲ್ಯ, ಹೋಳಿಗೆ-ತುಪ್ಪ ಇವಿಷ್ಟೂ ‘ಆಯ’ (ತುಂಬಾ ರುಚಿಕರವಾಗಿದ್ದುವು); ಚಿತ್ರಾನ್ನ ಮತ್ತು ಕೋಸಂಬರಿ - ಇವು ‘ವ್ಯಯ’ (ಉಪ್ಪಿಲ್ಲದೆ ಸಪ್ಪೆಯಾಗಿದ್ದುವು)!

ಅಂತೂ ಈವರ್ಷದ ಕಾವೇರಿ ಸಂಘದ ಕಾರ್ಯಕಾರಿ ಸಮಿತಿಯ ಹೊಸಹುರುಪಿನಲ್ಲಿ ಮಾತ್ರ ಒಂಚೂರೂ ವ್ಯಯವಿಲ್ಲ. ಮುಂಬರುವ ದಿನಗಳಲ್ಲಿ ಇದಕ್ಕಿಂತಲೂ ಒಳ್ಳೊಳ್ಳೆಯ ಕಾರ್ಯಕ್ರಮಗಳ ನಿರೀಕ್ಷೆ ಕಾವೇರಿಗರದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X