• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪದಿಂದ ದೀಪ ಹಚ್ಚಿ.. ಪ್ರೀತಿಯಿಂದ ಪ್ರೀತಿ ಹಂಚಿ..

By Staff
|

ಪಟಾಕಿ ಸುಡುವುದು, ದೀಪ ಹಚ್ಚುವುದು, ಸಿಹಿ ಊಟ ಮಾಡುವುದು ಇವೆಲ್ಲ ಇದ್ದಿದ್ದೇ. ದೀಪಾವಳಿ ಮಹತ್ವ ಸ್ವಲ್ಪ ತಿಳಿಯೋಣ ಬನ್ನಿ..

  • ವಾಣಿ ರಾಮದಾಸ್, ಸಿಂಗಪುರ

ದೀಪದಿಂದ ದೀಪ ಹಚ್ಚಿ.. ಪ್ರೀತಿಯಿಂದ ಪ್ರೀತಿ ಹಂಚಿ.. ಹಬ್ಬಗಳಲಿ ನಿಮಗ್ಯಾವುದು ಇಷ್ಟ ಎಂದು ಯಾರನ್ನಾದ್ರೂ ಕೇಳಿದೀರಾ? ಕೇಳಿ ನೋಡಿ ಛಟ್ಟನೆ ಬರೋದು ದೀಪಾವಳಿ ಎಂಬ ಉತ್ತರ. ಎಣ್ಣೆ ನೀರು, ಹೊಸಬಟ್ಟೆ, ಪಟಾಕಿಯ ಸಿಡಿ, ದೀಪ ಬೆಳಗುವ ಕ್ರಿಯೆ ಇದೆಯಲ್ಲ ಇದು ಕೊಡುವ ಮುದ, ಮನದ ಭಾವುಕತೆ, ಧನ್ಯತೆಯ ಸಂಕೇತ.

'ನಾಡಿನಂದ ಈ ದೀಪಾವಳಿ ಬಂತು, ಸಂತೋಷ ತಾಳಿ, ನಮ್ಮೀ ಬಾಳ ಕಾರಿರುಳ..' ಎನ್ನುತ್ತಾ ಬರುವ ದೀವಳಿಗೆಯ ಕಾಲ ಅಶ್ವಯುಜ ಮಾಸದ ಕೊನೆ ಹಾಗೂ ಕಾರ್ತಿಕ ಮಾಸದ ಆದಿಯ ಕಾಲ. ಚಳಿಯಪ್ಪ ಚಳಿಯೋ ಪ್ರಾರಂಭದ ದಿನ. ನಮ್ಮದು ಕೃಷಿ ಪ್ರಾಧಾನ್ಯ ದೇಶ. ರೈತಾಪಿಗಳು ಬೆಳೆಯುವ ಧಾನ್ಯಗಳು ಮಾಗಿ ಮನೆಗೆ ಬರುವ ಕಾಲ. ಸಂತಸ ಸಂಭ್ರಮದ ಕಾಲ.

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎನ್ನುತ್ತಾ ದೀಪವ ಬೆಳಗುವ ದೀಪಾವಳಿ ನಾಡಿನಾದ್ಯಂತ ಆಚರಿಸುವ ಹಬ್ಬ. ಬಹುಳ ದ್ವಾದಶಿಯಿಂದ ಧನ ತ್ರಯೋದಶಿ, ನರಕ ಚತುರ್ದಶಿ, ಅಮಾವಾಸ್ಯೆ, ಬಲಿ ಪಾಡ್ಯಮಿ, ಭಾವನ ಬಿದಿಗೆ, ಅಕ್ಕನ ತದಿಗೆ, ಅಮ್ಮನ ಚೌತಿ ಎಂದು ವಾರ ಪೂರ್ತಿ ಭಾರತದ ಭಿನ್ನಭಿನ್ನ ಪ್ರಾಂತ್ಯಗಳಲಿ ಆಚರಿಸುವ ವಿಶೇಷ ಸಾಂಸ್ಕೃತಿಕ ಆಚರಣೆ ಈ ದೀಪಾವಳಿ.

ಜೊತೆಗೆ ದೀಪಾವಳಿಯಂದು ರಾಮ ರಾವಣನು ಕೊಂದು ಸೀತೆ, ಲಕ್ಷ್ಮಣ, ಹನುಮರೊಡಗೂಡಿ ಅಯೋಧ್ಯೆಗೆ ಮತ್ತೆ ಮರಳುವ ದಿನ, ಕೃಷ್ಣನಿಂದ ನರಕಾಸುರ ಸಂಹಾರವಾದ ದಿನ, ಪಾರ್ವತಿಯ ತಪ ಮೆಚ್ಚಿ, ಶಿವನೊಲಿದು ತನ್ನರ್ಧದ ದೇಹವ ತೊರೆದು ಅಲ್ಲಿ ಪಾರ್ವತಿ ಅರ್ಧದೇಹವನು ಕೂಡಿಸಿ ಅರ್ಧನಾರೀಶ್ವರನಾದ ದಿನ, ಬಲಿ ಪೂಜೆ, ವಿಕ್ರಮ ಸಿಂಹಾಸನವನೇರಿದ ದಿನ, ಮಹಾವೀರನ ನಿರ್ವಾಣದ ದಿನ .

ಬರಿ ಇಷ್ಟೇಯೇ ಅಲ್ಲ ದೀಪಾವಳಿಯ ವಿಶೇಷ. ವ್ಯಾವಹಾರಿಕ ಜೀವನದಲಿ ಕೃಷಿಕರ, ವ್ಯಾಪಾರಸ್ಥರ, ವೈದ್ಯರ ಹಬ್ಬ. ಮಕ್ಕಳಿಗೆ ಪಟಾಕಿ ಸುಡುವ ಸಂಭ್ರಮವಾದರೆ, ಹೆಂಗಸರಿಗೆ ಹಣತೆ ಹಚ್ಚುವ ಸಂಭ್ರಮ. ಪ್ರತಿಯೋರ್ವರೂ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಉಡುಗೊರೆ, ಸಿಹಿ ತಿನಿಸುಗಳ ವಿನಿಮಯಿಸಿ ಪ್ರೀತಿ ಹಂಚುವ ಪರ್ವಕಾಲವಿದು. ನಮ್ಮಲ್ಲಿ ಆಚರಣೆ ಇರುವ ಪ್ರತಿಯೊಂದು ಹಬ್ಬಕ್ಕೂ ಒಂದು ಸಂಕೇತವಿದೆ, ಒಂದು ವಿಶಿಷ್ಟ ಮೌಲ್ಯವಿದೆ.

ರಾಮ ರಾವಣನು ಕೊಂದು ಸೀತಾ-ಲಕ್ಷ್ಮಣರೊಡನೆ ಅಯೋಧ್ಯೆಗೆ ಮರಳಿದ ದಿನ. ಅಯೋಧ್ಯಾವಾಸಿಗಳು ಊರ ತುಂಬ ಹಣತೆ ಹಚ್ಚಿ ರಾಮನನ್ನು ಸ್ವಾಗತಿಸಿದರಂತೆ. ಅಂದಿನ ದೀಪಗಳ ಬೆಳಕಿನ ಹಬ್ಬ ದೀಪಾವಳಿ ಎಂದೆನಿಸಿತು ಎಂಬ ಪ್ರತೀತಿ. ಹಾಗೆಯೇ ಕೃಷ್ಣ ನರಕಾಸುರನನು ಸಂಹರಿಸಿದ ದಿನ. ಪುರಾಣ, ಪುಣ್ಯಕಥೆಗಳಿಂದ ನಾವು ಕಲಿಯಬೇಕಾದುದು ರಾಕ್ಷಸನಂತೆ ನಮ್ಮಲ್ಲೇ ಅಡಗಿರುವ ದುರ್ಗುಣಗಳನು ದೈವ, ಭಕ್ತಿ, ಜ್ಞಾನ, ವಿವೇಕದ ಸಹಾಯದಿಂದ ಮನೊನಿರ್ಬಲತೆಯಿಂದ ತಕ್ಕ ಮಟ್ಟಿಗೆ ಅಳಿಸಬಹುದೆಂಬ ಸಂಕೇತವಿರಬೇಕು.

ಹಣವಿದ್ದರೆ ತಾನೆ ಜೀವನ. ದೀಪ ಹಚ್ಚಿ ಲಕುಮಿ ಮಾತೆ, ದುಃಖ ರಹಿತೆ, ಹೇ ಸುಜಾತೆ, ಲಲಿತೆ ಎಂದು ಧನಲಕ್ಷ್ಮಿಯನ್ನು ಮನೆ, ಮನಗಳಲ್ಲಿ ಆಹ್ವಾನಿಸಿ, ನಿರಂತರವಾಗಿ ನಮ್ಮಲ್ಲಿ ನೆಲೆಸು ಎಂದು ಪೂಜಿಪ ದಿನ. ಬಲೀಂದ್ರ ಪೂಜೆ ತ್ಯಾಗದ ಸಂಕೇತ. ಮಹಾಬಲಿ ವಾಮನನೆಂಬ ವಿರಾಟ್ ಶಕ್ತಿಯ ಮುಂದೆ ತಗ್ಗಿದ, ತಗ್ಗಿದ, ತನ್ನದೆಲ್ಲವನೂ ಧಾರೆ ಎರೆದ ಅದೂ ಸಾಲದಾದಾಗ ತನ್ನನ್ನೇ ಸಮರ್ಪಿಸಿದ. ದಾನ ಮನಃಪೂರ್ವಕವಾಗಿ ಕೊಡುವುದು. ನಿಸ್ವಾರ್ಥದಿಂದ, ಒಳಗಿನಿಂದ ಕೊಡುವ ದಾನವದು.

ಕೇರಳ ಹಾಗೂ ಕರ್ನಾಟಕದಲ್ಲಿ ಬಲೀಂದ್ರ ಪೂಜೆ ತ್ಯಾಗದ ಬೀಜ ಬಿತ್ತುವ ಪೂಜೆ. ಉತ್ತರ ಕರ್ನಾಟಕರಿಗೆ ಮಾಗಿಯ ಕಾಲ. ತೆನೆ-ದವಸ-ಧಾನ್ಯಗಳನು ಎಡೆಯಲಿಟ್ಟು ಪೂಜಿಸುತ್ತಾರೆ. ಬೆಳೆದ ಬೆಳೆಗಳನು ಹಂಡೆಯಲಿಟ್ಟು ಸೇವಂತಿ, ಚೆಂಡು ಹೂಗಳಿಂದ ಅಲಂಕರಿಸಿ ಸಗಣಿಯ ಮೇಲೆ ಮಣ್ಣಿನ ಹಣತೆ ಹಚ್ಚಿಟ್ಟು ಮೊದಲ ಬೆಳೆಯನು ದೇವರಿಗೆ ಸಮರ್ಪಿಸುತ್ತಾರೆ. ಗೋವುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಿಸುತ್ತಾರೆ. ಹಬ್ಬದ ದಿನ ರಾತ್ರಿ ಮನೆಯೊಡೆಯ ಬೆಳೆಗೆ ಬೆಳಕಾಗಲಿ ಎಂದು ದೀಪವ ಹೊತ್ತು ಹೊಲ-ಗದ್ದೆಗಳತ್ತ ತೋರುತ್ತಾನೆ. ಅಣ್ಣ-ತಂಗಿಯರ ಅನುಬಂಧ, ವಿಶಿಷ್ಠ ಸಂಬಂಧ, ಮಹಾರಾಷ್ಟ್ರ, ಗುಜರಾತಿಗಳಲ್ಲಿ ಅಣ್ಣ-ತಂಗಿ ದಿನ(ಭಾವ್-ಬೀಜ್).

ಮಲೆನಾಡಿಗರಿಗೆ ದೀಪಾವಳಿಯಲಿ ಅಭ್ಯಂಜನಕ್ಕೆ ಪ್ರಾಮುಖ್ಯತೆ ಯುಗಾದಿಯಲಿ ಉಂಡದ್ದು, ದೀವಳಿಗೆಯಲಿ ಮಿಂದದ್ದು ಎಂಬ ಹೇಳಿಕೆ. ಮಲೆನಾಡ ಜನಪದದಲಿ ಅಂಟಿಗೆ-ಪಂಟಿಗೆ ಆಚರಣೆಯಲಿ ಊರಿನ ಜನ ಹಾಡು ಹೇಳುತ್ತಾ, ತಮಟೆ ಬಡಿಯುತ್ತಾ ಮನೆ, ಮನೆಯವರು ಕೊಟ್ಟ ಕಡುಬು, ಹೋಳಿಗೆ ಪಡೆಯುತ್ತಾ ಮುನ್ನಡೆಯುತ್ತಾರೆ. ದೀಪ್ ದೀಪ್ ದೀವಳಿಗೆ, ಹಬ್ಬಕ್ಕೊಂದು ಹೋಳಿಗೆ ಎನ್ನುತ್ತಾ ಕೊಂಡೊಯ್ಯುವ ಮೇಳಗರ ದೀಪಕ್ಕೆ ಮನೆಯೊಡತಿ ಎಣ್ಣೆ ತುಂಬಿಸಿ ತನ್ನ ಹೊಸ ದೀಪವನು ಹಚ್ಚಿಕೊಳ್ಳುತ್ತಾಳಂತೆ. ಇದು ದೀಪ ಕೊಡುವ ಪದ್ಧತಿ. ಇದು ಪ್ರೀತಿ, ಸಹಬಾಳ್ವೆಯ ಸಂಕೇತ. ದೀಪಾವಳಿಯ ನಿಜಾರ್ಥದ ಸಂಕೇತವಿದು ಅಲ್ಲವೇ? ದೀಪದಿಂದ ದೀಪ ಹಚ್ಚಿ-ಪ್ರೀತಿಯಿಂದ ಪ್ರೀತಿ ಹಂಚಿ.

ವೈದ್ಯರಿಗೆ ಧನ್ವಂತರಿ ಜಯಂತಿಯಾದರೆ, ಬಾಹುಬಲಿ ದಿಗ್ವಿಜಯಿಯಾಗಿ ತನ್ನದೆಲ್ಲವನೂ ಭರತನಿಗೆ ಧಾರೆ ಎರೆದು ಮಹಾವೀರನಾದ. ಅಹಿಂಸೆ ಎಂಬ ಬೆಳಕಿನ ಮಾರ್ಗ ಜನತೆಗೆ ತೋರಿ ನಿರ್ವಾಣಹೊಂದಿದ ದಿನ. ಇನ್ನೊಂದು ಉಜ್ಜಯನಿಯ ವಿಕ್ರಮಾದಿತ್ಯ ದೀಪಾವಳಿಯಂದು ಸಿಂಹಾಸನವನ್ನೇರಿದ. ಅಂದಿನಿಂದಲೇ ವಿಕ್ರಮ ಶಕೆಯ ಪ್ರಾರಂಭ ಎಂದು ಪ್ರತೀತಿ. ಮುಖ್ಯವಾಗಿ ಗುಜರಾತಿಗಳಿಗೆ ದೀಪಾವಳಿಯ ಮರುದಿನ "ಸಾಲ್-ಮುಬಾರಕ್".

ದೀಪಾವಳಿಯಂದು ಮನೆ ಮನೆಗಳಲಿ ದೀಪವ ಬೆಳಗಿ ಆಚರಿಸುತ್ತೇವೆ. ಮನೆಯಲ್ಲಿ, ಸುತ್ತ ಮುತ್ತ ಹಚ್ಚುವ ನಂದಾದೀಪಗಳ ಬೆಳಕು ಎಂತಹ ಮನೆಗಳನ್ನೂ ಅರಮನೆಯನ್ನಾಗಿಸೀತು. ಈ ದೀಪಗಳ ಹಣತೆ ಉರಿದರೆ ಸಾಲದು. ಮನದ ಬೆಳಕಾಗಬೇಕು. ಇಲ್ಲಿ ನೆನಪಾಗುತ್ತದೆ ಕವಿ ಜಿ.ಎಸ್.ಶಿವರುದ್ರಪ್ಪನವರು "ನನ್ನ ಹಣತೆ" ಯಲ್ಲಿನ ಸಾಲು..

ಹಣತೆ ಹಚ್ಚುತ್ತೇನೆ ನಾನೂ

ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ

ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ

ಇದರಲಿ ಮುಳುಗಿ ಕರಗಿರುವಾಗ

ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.

ಕವಿಯ ಪ್ರಕಾರ ಕೊನೆಯಲಿ ದೊರೆತದ್ದು ತಮಸೋಮಾ ಜ್ಯೋತಿರ್ಗಮಯಾ. ಕತ್ತಲನು ಗೆಲ್ಲುವ ಜಿದ್ದಿಲ್ಲ, ಅದನು ದಾಟುವ ಭ್ರಮೆಯಿಲ್ಲ ದೀಪದ ಬೆಳಕು ಇರುವಷ್ಟು ಹೊತ್ತಿನ ಬೆಳಕಲಿ ನಾನೂ-ನೀನೂ ಆತ್ಮೀಯತೆ-ಪರಿಚಯ ಎಂಬ ಬೆಳಕಿನ ಕಿಂಡಿಯಿಂದ ಪರಸ್ಪರ ಮುಖ ನೋಡಬಹುದು ಆನಂತರ ಮತ್ತೆ ಬರೀ ಕತ್ತಲು. ಕವಿ ಚೆನ್ನವೀರ ಕಣವಿಯವರ'ದೀಪಾವಳಿ" ಕವನದಲಿ

ಹತ್ತಿರದರು ದೂರ, ಹೃದಯ ಗಹ್ವರದಲ್ಲಿ

ಮಿಣಿ ಮಿಣಿ ಎನುವ ಪಣತಿ,-ನಮ್ಮ ಜೀವದ ಗೆಣತಿ;

ಹೊಮ್ಮಿ ಹೊಡಕರಿಸಿದರೆ ಹೊಸ ಬೆಳಕಿನಾಕೃತಿ

ಎಂದಿದ್ದಾರೆ. ಎಂತಹ ಸುಂದರ ಹೋಲಿಕೆ ಅದು. ಅಲ್ವಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more