ಕೆರೊಲಿನಾ ಕನ್ನಡಿಗರು ಕೃಷ್ಣನ ಕಂಡು ಮೂಕರಾದರಯ್ಯಾ

Subscribe to Oneindia Kannada


ಅಚ್ಚ ಕಲಾವಿದನೊಬ್ಬನ ಹೊಸತರ ಹುಡುಕಾಟಕ್ಕೆ ಪ್ರತಿಭೆಯ ಆಯಾಮ ದೊರಕಿದರೆ, ಸೃಷ್ಟಿಯಾಗುವ ಪ್ರಯೋಗಕ್ಕೊಂದು ಉತ್ತಮ ಉದಾಹರಣೆ ಉದ್ಯಾವರ ಮಾಧವಾಚಾರ್ಯ (ಉಮಾ)ರ, ಸೀಳು ಬಿದಿರಿನ ಸಿಳ್ಳುನೃತ್ಯ ರೂಪಕ. ನಾರ್ಥ್ ಕೆರೊಲಿನಾ ಕನ್ನಡಿಗರಿಗೆ ಈ ಮನೋಜ್ಞ ಪ್ರದರ್ಶನ ನೋಡುವ ಭಾಗ್ಯ ಇತ್ತೀಚೆಗೆ ಸಿಕ್ಕಿತ್ತು.


Madhava Acharya in Caryಕವಿ, ಕಥೆಗಾರರಾಗಿ ಆರಂಭದಲ್ಲಿಯೇ ಗುರುತಿಸಲ್ಪಟ್ಟ ಉದ್ಯಾವರ ಮಾಧವಾಚಾರ್ಯ(ಉಮಾ)ರ ಒಳಗೊಬ್ಬ ಯಕ್ಷ ಕಲಾವಿದನಿದ್ದಾನೆ. ಈ ಕಲಾವಿದ ಮನಸ್ಸನ್ನೂ ಜತನದಿಂದ ತಮ್ಮೊಳಗೆ ಪೋಷಿಸಿಕೊಂಡು ಬಂದ ಉಮಾರ ತವರು ಯಕ್ಷಗಾನ, ಬಯಲಾಟ ಮತ್ತು ಇನ್ನಿತರ ಹಲವು ಆರಾಧ್ಯ ಕಲೆಗಳಿಗೆ ಹೆಸರಾದ ಉಡುಪಿ. ತಮ್ಮ ಸುತ್ತಣ ಸಾಂಸ್ಕೃತಿಕ ಪರಿಸರಕ್ಕೆ ಪ್ರತಿಕ್ರಿಯಿಸುತ್ತಲೇ ಬೆಳೆದವರು ಉಮಾ. ಮಠದ ವ್ಯವಸ್ಥೆಯನ್ನು ಠೀಕಿಸಿ ಬರೆದ ಕವನವನ್ನು ಮಠಾಧಿಪತಿಗಳೆಂದಲೇ ಬಿಡುಗಡೆ ಮಾಡಿಸುವ ಪ್ರಾಮಾಣಿಕ ದಾರ್ಷ್ಟ್ಯ ತೋರಿದವರು.

ನೃತ್ಯದ ಮೇಲಿನ ತಮ್ಮ ಒಲವನ್ನು ಸ್ವಪ್ರಯತ್ನದಿಂದ ಪೋಷಿಸಿಕೊಂಡವರು ಉಮಾ. ಸುತ್ತಲೂ ಕೃಷ್ಣಮಯವಾದ ಯಕ್ಷ-ಲೋಕವಿದ್ದರೆ ಅದಕ್ಕೆ ಯಕ್ಷ-ಪಟುವಿನ ಮಾಂತ್ರಿಕ ಮುಗ್ಧತೆಯಿಂದ ತಮ್ಮನ್ನು ತೆರೆದುಕೊಂಡವರು. ಇಂತಹ ಕಲಾವಿದನೊಬ್ಬನ ಬಹುಮುಖ ಪ್ರತಿಭೆ ಸ್ಪಂದಿಸಿದಾಗ, ನಮ್ಮಲ್ಲಿನ ಓದುಗನನ್ನಷ್ಟೇ ಅಲ್ಲದೆ, ನೋಡುಗನನ್ನೂ ತಣಿಸಬಲ್ಲ ಕಲೆಯ ಸೃಷ್ಟಿಯಾಗುತ್ತದೆಂಬುದರ ಪುರಾವೆಯಾಗಿ ಅವರ ನೃತ್ಯರೂಪಕ ಮೂಡಿಬಂದಿದೆ.

ಕೃಷ್ಣನ ಭಗವತ್ಸ್ವರೂಪಿ ವಿಶ್ವರೂಪಕ್ಕೆ ಸಮಾನಾಂತರವಾದ ಪ್ರತಿರೂಪವೊಂದನ್ನೂ ಸಹ ಚಿತ್ರಿಸುವಲ್ಲಿ ನಮಗೆ ಕೇಳಿ ಬರುವುದು, ಕಾಡಿನ ಬಿದಿರ ಸೀಳೊಂದರಲ್ಲಿ ಮೂಡಿ ಬಂದ ಸಿಳ್ಳಿನ ದನಿ. ಕೊಳಲ ಗಾಯನದ ವಿಶ್ವರೂಪದ ವ್ಯಾಖ್ಯೆಗೆ ಪುಷ್ಟಿ ಕೊಡಲೆಂಬಂತೆ ಮೂಡಿದೆ "ಸೀಳು ಬಿದಿರಿನ ಸಿಳ್ಳು" ವಿನ ಪ್ರತಿರೂಪ.

ಕೃಷ್ಣಾಷ್ಟಮಿ ಬಂತು.. ಬಂತು.. ಎಂದರೂ, ಅಮೇರಿಕೆಯಲ್ಲಿ ಅವತರಿಸಬೇಕಾದರೆ ಅರ್ಥಾತ್ ಆಚರಿಸಬೇಕಾದರೆ, ವಾರಾಂತ್ಯಕ್ಕೆ ಕಾಯಬೇಕು. ನಮ್ಮ ಕನ್ನಡ ಸಂಘದ ಚಿಣ್ಣರ ನೃತ್ಯಗಳ ತಯಾರಿ ನಡೆಯುತ್ತಿದ್ದಂತೆಯೇ ಈ ಬಾರಿ ಕೃಷ್ಣನ ಹೊಸ ಅವತಾರವೊಂದು ಕೆರೊಲಿನ ಕನ್ನಡಿಗರಿಗೆ ಲಭ್ಯವಾಗಿದ್ದು, ಹರಟೆಕಟ್ಟೆ, ಸಂಪಿಗೆ (ನಮ್ಮೂರ ಕನ್ನಡ ಸಂಘ) ಮತ್ತು ಸ್ಥಳೀಯ ವೀರ ಶೈವ ಸಂಘಗಳ ಪ್ರಯತ್ನದಿಂದ.

ಸೆಪ್ಟಂಬರ್ 2ರ ವಾರಾಂತ್ಯ ಉದ್ದವಾದ್ದರಿಂದ (ಲಾಂಗ್ ವೀಕ್ ಎಂಡ್) ಕೃಷ್ಣ ಹುಟ್ಟಿದರೂ ಆಚರಿಸಲು ನಾವು ಹಿಂದೇಟು ಹಾಕಬೇಕಾಯಿತು. 2004 ರಿಂದಲೂ ನಮ್ಮಲ್ಲಿಗೆ ಬನ್ನಿ ಎಂದು ಭಯ, ಭಕ್ತಿಯಿಂದ, (ಭಯೋತ್ಪಾದನೆಗೆ ಜಗ್ಗದ, ದುಡ್ಡಿನ ಆಮಿಷಕ್ಕೂ ಒಲ್ಲದ ಶ್ರೀ ಕೃಷ್ಣನ ಮೊಂಡು ಬಂಟನೆನ್ನಿ) ಕರೆದರೂ.. ಕೇಳದಿದ್ದ ಉದ್ಯಾವರ ಮಾಧವಾಚಾರ್ಯರನ್ನು ನಮ್ಮಲ್ಲಿಗೆ ಬರಲು ಒಪ್ಪಿಸಿಯೇ ಬಿಟ್ಟೆವು ನೋಡಿ. ಶಿವಭಕ್ತರ ಬೆನ್ನು ಹತ್ತಿ ಬನ್ನಿ ಬನ್ನಿ ಎಂದವರು ವಿಶ್ವತೇಜ ತರುವೇಸಂಚಿ (ಇವರು ನಮ್ಮ ವೀರ ಶೈವ ಸಂಘದ ಅಧ್ಯಕ್ಷರೂ ಹೌದು; ಸಂಪಿಗೆಯ ಟ್ರಸ್ಟಿಯೂ ಹೌದು) ಹರಿ, ಹರನ ಭಕ್ತರೆನ್ನದೇ ಎಲ್ಲರನ್ನೂ ಕರೆದು ಒಂದೈವತ್ತು ಜನರನ್ನಾದರೂ ಸೇರಿಸೈ ಎಂದು ಪರದಾಟ ಆರಂಭಿಸಿದ್ದು ರಿಶಿ.

ಹಲವಾರು ವರ್ಷಗಳ ಹಿಂದೆಯೇ ತಮ್ಮನ್ನು ಕಾಡಿದ್ದ ಕೃಷ್ಣನ ಪ್ರತಿರೂಪವನ್ನು "ಸೀಳು ಬಿದಿರಿನ ಸಿಳ್ಳು" ಎಂಬ ಕಥೆಯಾಗಿಸಿದ್ದ ಉಮಾ, ಈ ಬಾರಿ ತಮ್ಮ ಮೊಮ್ಮಗನ ಜನ್ಮ ಸಂದರ್ಭದಲ್ಲಿ ಅದನ್ನು ತಮ್ಮೊಳಗಿನ ಯಕ್ಷಪಟುವಿನ ಸಹಾಯದಿಂದ ನೃತ್ಯ ರೂಪಕ್ಕಿಳಿಸಿದ್ದಾರೆ.

ಜುಲೈ ತಿಂಗಳಲ್ಲಿ ನ್ಯೂಜೆರ್ಸಿಯ "ಪ್ರಸ್ತಾಪ" ದ ಆಶ್ರಯದಲ್ಲಿ ಮೊದಲ ಪ್ರಯೋಗ ಕಂಡ ಈ ರೂಪಕದ ಎರಡನೇ ಪ್ರಯೋಗಕ್ಕೆ ನಮ್ಮೂರ ರಂಗವನ್ನು ಉಮಾ ಆರಿಸಿಕೊಂಡದ್ದು ನಮ್ಮ ಸುಯೋಗವೇ.

ಕಾಲಕಾಲಕ್ಕೆ ಕವಿ, ಸಾಹಿತಿಗಳಿಂದ ಒದಗಿರ ಬಹುದಾದ ಕೃಷ್ಣನ ಅರ್ಥ-ವಿಸ್ತಾರಗಳ ಸಂಕಲನವೇ ನಮ್ಮ ಇಂದಿನ ಭಗವಂತನ ಪರಿಕಲ್ಪನೆ ಎಂದರೆ, ಆಧ್ಯಾತ್ಮದ ವಿಕಾಸ ನಡೆಯುತ್ತಿದೆಯೆಂದೇ ಅರ್ಥ. ಈ ನಿಟ್ಟಿನಲ್ಲಿನೊಂದು ಹೊಸ ಪ್ರಯತ್ನ ಉದ್ಯಾವರ ಮಾಧವ ಆಚಾರ್ಯ ರ, "ಸೀಳು ಬಿದಿರಿನ ಸಿಳ್ಳು" ಎಂದರೆ ಅತಿಶಯೋಕ್ತಿ ಆಗಲಾರದು. ಸಣ್ಣ ಕಥೆಯೊಂದರ ಅಳವಿನಲ್ಲಿಯೇ, ಕೃಷ್ಣನ ವಿಶ್ವರೂಪದ ಆಸ್ವಾದನೆಯೊಂದಿಗೆ, ಅದರ ಪ್ರತಿರೂಪವೊಂದನ್ನೂ ಕಲ್ಪಿಸುವ ಪ್ರಯತ್ನ ನಿಚ್ಚಳವಾಗಿ ಮೂಡಿ ಬಂದದ್ದು ಅದೇ ಕಥೆಯನ್ನಾಧರಿಸಿ ಆಚಾರ್ಯರು ಪ್ರಸ್ತುತಿ ಮಾಡಿದ ನೃತ್ಯ ರೂಪಕದಲ್ಲಿ.ಸ್ವತಃ ತಮ್ಮದೇ ಕೃತಿ ಮತ್ತು ಪರಿಕಲ್ಪನೆಯಾದ್ದರಿಂದ, ನಿರ್ದೇಶಕ ಉಮಾ ಅವರಿಗೆ ವಸ್ತುವಿನ ಒಳಹೊಗುವುದು ಸುಲಭವಾಗಿದ್ದರೆ, ನಟ "ಉಮಾ"ರನ್ನು ನಿರ್ದೇಶಿಸುವ ಕಾರ್ಯವೂ ಸುಲಭವೇ ಆಗಿದ್ದಿರಬೇಕು. ಯಕ್ಷಗಾನ, ಬಯಲಾಟ ಹಾಗೂ ಹಲವು ಹತ್ತು ಆರಾಧ್ಯ ಕಲೆಗಳ ತವರಿನ ಮಗುವಾದ "ಉಮಾ" ರಿಗೆ, ನೃತ್ಯ ಸಾಂಸ್ಕೃತಿಕವಾಗಿ ಬಂದ ಬಳುವಳಿ.

ನೃತ್ಯವನ್ನು ಶಾಸ್ತ್ರೀಯವಾಗಿ ತಾನು ಅಭ್ಯಸಿಸಲಿಲ್ಲವೆಂದು ಹೇಳಿಕೊಳ್ಳುವ ಕಲಾವಿದ "ಉಮಾ" , ಮುಕ್ತ ಮನಸ್ಸಿನಿಂದ ಮುದ್ರೆಗಳ ಬಳಕೆ, ನೃತ್ಯದ ಹಾವ ಭಾವಗಳ ಉಪಯೋಗ ಮಾಡಿಕೊಂಡು, ಒಂದು ಘಂಟೆಯ ಕಾಲದಲ್ಲಿ ಕೃಷ್ಣನ ವಿಶ್ವರೂಪದ ದರ್ಶನದೊಂದಿಗೆ ನಮ್ಮ ಮುಂದೊಂದು ಪ್ರತಿರೂಪವನ್ನೂ ಚಿತ್ರಿಸುವ ಅದ್ಭುತ ಕಲಾವಂತಿಕೆಯನ್ನು ಮೆರೆಸುತ್ತಾರೆ.

ಸಾಹಿತ್ಯ, ಕಲೆಗಳು ನಿಂತ ನೀರಾಗಿ ಹೋಗುವ ದಿನಚರಿಯ ಮಧ್ಯೆ ಹೊಸತನ್ನು ಹುಡುಕುವ ಕಲಾವಿದನ ತುಡಿತಕ್ಕೆ ಸಿಕ್ಕಿ ಹುಟ್ಟಿದ ಸಣ್ಣ ಕಥೆ "ಸೀಳು ಬಿದಿರಿನ ಸಿಳ್ಳು" ಎಂಬುದಕ್ಕೆ ಪೂರಕವಾಗಿ ತಮ್ಮನ್ನೇ ತೊಡಗಿಸಿಕೊಂಡು, ಸಂಗೀತ ಸಂಯೋಜಿಸಿ, ಕೃಷ್ಣನ ಪರಕಾಯ ಪ್ರವೇಶ ಮಾಡುವ ಯಕ್ಷನಾಗಿ ನಮ್ಮ ಮುಂದೆ ರೂಪುಗೊಳ್ಳುವ "ಉಮಾ"ರ ಪ್ರಯತ್ನದ ಜೀವಂತಿಕೆ ಇನ್ನೂ ನೂರಾರು ಪ್ರಯತ್ನಗಳನ್ನು ಕಾಣಲೆಂಬುದೇ ಕೆರೊಲಿನ ಕನ್ನಡಿಗರ ಹಾರೈಕೆ.

ಕೃಷ್ಣನ ಸಂಕೇತವಾದ ಕೊಳಲನ್ನು ಬಿದಿರಿನ ಸೀಳಾಗಿಸುವ ಶಬ್ದಗಳಿಂದಲೇ ಕೃಷ್ಣನ ಪ್ರತಿರೂಪ ಒಂದನ್ನು ಕೆತ್ತಲಾರಂಭಿಸುವ ಕಲಾವಿದ, ನಮ್ಮ ಕನ್ಹಯ್ಯನನ್ನು, "ಬಿಳಿಯರ ನಡುವಿನ ಕರಿಯ" ನನ್ನಾಗಿ ಗುರುತಿಸುವ ಪ್ರಕ್ರಿಯೆಗದರದೇ ಸೊಗಸಿದೆ. ದ್ವಾಪರದ ದ್ವಂದ್ವವನ್ನು, ಮಹಾಭಾರತದ ಕಥನದುದ್ದಕ್ಕೂ ಹಾಸುಹೊಕ್ಕಾಗಿರುವ ದ್ವಂದ್ವಗಳ ಆಯಾಮವನ್ನು, ಕೃಷ್ಣನ ಪ್ರತಿರೂಪವಾಗಿ ಗುರುತಿಸುವ ಕ್ರಿಯೆಗೊಂದು ಆಧ್ಯಾತ್ಮಿಕ ಆಯಾಮವೂ ಒದಗಿಬಂದರೆ ಅದಕ್ಕೆ ಕಲಾವಿದನ ಪ್ರೌಢ ಬದುಕೂ ಪೂರಕವಾಗಿ ಬರುತ್ತದೆ.

Madhava Acharya in Caryನೆರೆತ ಮೀಸೆ ಕೂದಲುಗಳು ನಮ್ಮ ಮುಂದೆ ಚಿತ್ರಿಸುವ ಪ್ರತಿರೂಪದ ಸಂಕೇತವಾಗಿ ಬಿಡುತ್ತವೆ. ಯುಗಯುಗಗಳಲ್ಲಿ ಸಂಭವಿಸ ಬೇಕಾದುದರ ಅಗತ್ಯವಾಗಿಯೇ ಚಿತ್ರಿತವಾಗುವ ಈ ಪ್ರತಿರೂಪದಲ್ಲಿ ದ್ವಾಪರದ ಅಂತ್ಯವಿದೆಯೇ ಹೊರತು ಕೃಷ್ಣನದ್ದಲ್ಲ ಎಂಬಂತೆ ವಾಚಿಸುವ ಕರಿಯ ಕೊರಗುವುದು ಕೊನೆಗೂ ತೀರಿಸಲಾರದ ತನ್ನ ಅಮ್ಮನ ಹರಕೆಯ ಸಂಕೇತದೊಂದಿಗೆ. ಅಗಾಧ ಮೌನವೊಂದರ ಅಗತ್ಯವಾಗಿ ತನ್ನ ಹುಟ್ಟಾಯಿತೇನೋ ಎಂದು ಯೋಚಿಸುವ ಕೃಷ್ಣನ ಪ್ರತಿರೂಪವನ್ನು ಭಕ್ತನಾಗಿ ಬೇಕಾದರೆ ಪೂಜಿಸಿ, ಕಲಾಭಿಮಾನಿಯಾಗಿ ಅನುಭವಿಸಿ ಇಲ್ಲ ಯೋಗಿಯಾಗಿ ಅನುಭಾವಿಸಿ ಎಂದು ನಮ್ಮ ಮುಂದೆ ಸೃಷ್ಟಿಯಾಗುವ ಕರಿಯ-ಕೃಷ್ಣನನ್ನು ರಂಗಕ್ಕರ್ಪಿಸಿ ಉದ್ದಂಡ ನಮಸ್ಕರಿಸುವ ಕಲಾವಿದನ ಭಾವುಕ ಸೌಂದರ್ಯವೇ ತಮ್ಮ ಬಂಡವಾಳವೆನ್ನುವ "ಉಮಾ" ರ ಸಂವಹನದ ರೀತಿಯೇ ಚೇತೋಹಾರಿ.

ಶಾಸ್ತ್ರೀಯ ನೃತ್ಯ ತಿಳಿದಿಲ್ಲವೆಂದು ವಿನಯದಿಂದಲೇ ಹೇಳಿಕೊಳ್ಳುವ ಉಮಾ ಸ್ವಪ್ರಯತ್ನದಿಂದ ತಮ್ಮ ಅಗತ್ಯಕ್ಕೆ ಬೇಕಾದಷ್ಟು, ನೃತ ಮತ್ತು ಅಭಿನಯಗಳನ್ನು ಕಲಿತ ನೃತ್ಯಪಟುವಿನಂತೆ ನಮಗೆ ಕಂಡು ಬರುತ್ತಾರೆ. ಸರಳ ಮುದ್ರೆಗಳನ್ನು ಬಳಸಿ ತಮ್ಮ ಭಂಗಿಗಳಿಗೆ ಒತ್ತು ಕೊಡುವುದರ ಮೂಲಕ ಯಶಸ್ವಿಯಾಗಿ ಪ್ರೇಕ್ಷಕನೊಡನೆ ಸಂವಾದಿಸುತ್ತಾರೆ.

ಅಸಲು, ನೃತ್ಯದ ಶಾಸ್ತ್ರೀಯತೆಗಿಂತಲೂ ಕಲಾವಿದನ ತುಡಿತದಿಂದ ವಸ್ತುವಿಗನುಗುಣವಾಗುವಂತೆ ನಿರ್ದೇಶಿಸಲು ಉಮಾರಿಗೆ ದೊರಕುವ ಸ್ವಾತಂತ್ರ್ಯ, ಶಾಸ್ತ್ರೀಯ ನೃತ್ಯಗಾರನೊಬ್ಬನಿಗೆ ಕಷ್ಟವಾದರೆ ಅಚ್ಚರಿಯಿಲ್ಲ. ಅದಕ್ಕೇ ಇರಬೇಕು, ಸಂಗೀತದ ರಾಗ ತಾಳಗಳಿಗೂ ಮೀರಿದ ಕಾವ್ಯ ವಸ್ತುವನ್ನೂ ಸಹ ಹಿನ್ನೆಲೆಗೆ ಬಳಸಿಕೊಂಡು ಆ ಶಬ್ದಗಳಿಗೆ ಜೀವ ಕೊಡುವಂತೆ ರಂಗದ ನಡುವೆ ಚಲಿಸುವ ಕಲಾವಿದ ನಮಗೆ ತಟ್ಟುತ್ತಾನೆ.

ಪ್ರಯೋಗದುದ್ದಕ್ಕೂ ಪ್ರೇಕ್ಷಕನೊಡನೊಂದು ಸಂವಾದದ ಎಳೆ ತಪ್ಪದಂತೆ ಅಭಿನಯ ನೀಡಿ ಪಾತ್ರಗಳು ವರ್ತಮಾನದಲ್ಲಿ, ನಮ್ಮ ಅರಿವಿನಳವಿನಲ್ಲೇ ಸಂವಾದಿಸುತ್ತಿರುವಂತೆ ಭಾಸವಾದರೆ ಅದರ ಯಶಸ್ಸು ಕಲಾವಿದನಿಗೆ ಸಲ್ಲಬೇಕು. ಸಭೆಯಲ್ಲಿದ್ದ ಚಿಣ್ಣರನ್ನು ಪುಟ್ಟ ಕೃಷ್ಣನೆಂದೇ ಪರಿಗಣಿಸಿದವರು "ಅವರನ್ನು ಅವರ ಪಾಡಿಗೆ ಬಿಡಿ, ನಿಯಂತ್ರಿಸ ಬೇಡಿ" ಎಂದದ್ದು ಅರ್ಥಪೂರ್ಣವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...