ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯರ ಅಸಾಮಾನ್ಯರನ್ನಾಗಿಸುವ ಉಪನಿಷತ್ ತಿಳಿಯಿರಿ

By Staff
|
Google Oneindia Kannada News

ಸಾಹಿತ್ಯಗೋಷ್ಠಿಯು ತಮ್ಮೆಲ್ಲರನ್ನೂ ನವೆಂಬರ್ ತಿಂಗಳ ಒಂದು ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿದೆ. ಈ ತಿಂಗಳ ಕಾರ್ಯಕ್ರಮದಲ್ಲಿ ನೀವು "ಉಪನಿಷತ್ತಿನ ಸಾರ" ಎಂಬ ವಿಷಯದ ಬಗ್ಗೆ ಒಂದು ಅಧ್ಯಾತ್ಮಿಕ ಉಪನ್ಯಾಸವನ್ನು ಕೇಳಲಿದ್ದೀರಿ. ಪ್ರವಚನಕಾರರು ಸ್ವಾಮಿ ನಿರ್ಭಯಾನಂದ.

ಕಾರ್ಯಕ್ರಮದ ವಿವರಗಳು ಇಂತಿವೆ :

ದಿನ : ನವೆಂಬರ್ 10, 2007(ಶನಿವಾರ)
ಕಾಲ : ಮಧ್ಯಾಹ್ನ 3:೦೦ ರಿಂದ 6:೦೦ ರವರೆಗೆ
ಸ್ಥಳ : ಸಾರಟೋಗ ವಾಚನಾಲಯದ ಸಾರ್ವಜನಿಕ ಸಭಾಂಗಣ,
೧೩೬೫೦ ಸಾರಟೋಗ ಅವೆನ್ಯು, ಸಾರಟೋಗ ಕ್ಯಾಲಿಫೋರ್ನಿಯ

1. ಪ್ರಾರ್ಥನೆ: ಅನ್ನಪೂರ್ಣ ವಿಶ್ವನಾಥ್
2. ಉಪನ್ಯಾಸ: "ಉಪನಿಷತ್ತಿನ ಸಾರ" - ಸ್ವಾಮಿ ನಿರ್ಭಯಾನಂದ ಸರಸ್ವತಿ
3. ಕಾರ್ಯಕ್ರಮ ನಿರ್ವಹಣೆ: ಪ್ರದೀಪ ಸಿಂಹ

ಪ್ರವಚನದ ಬಗ್ಗೆ ಪ್ರವೇಶಿಕೆ :

ಓಂವಿದ್ ಎಂಬ ಧಾತುವಿನಿಂದ ಹುಟ್ಟಿದ 'ವೇದ" ಪದದ ಅರ್ಥ ತಿಳಿ ಎಂದು. ಏನನ್ನು ತಿಳಿಯುವುದು? ಮನುಷ್ಯನನ್ನು ಎಲ್ಲ ಇತಿಮಿತಿಗಳಿಂದ ಪಾರುಮಾಡಿ, ಇನ್ನು ನನಗೆ ಯಾವುದರ ಕೊರತೆಯೂ ಇಲ್ಲ, ಯಾವುದರ ತೊಂದರೆಯೂ ಇಲ್ಲ, ಎಂದು ತಲೆ ಎತ್ತಿ, ಎದೆ ಉಬ್ಬಿಸಿ, ಆನಂದಸಾಗರದಲ್ಲಿ ತೇಲಾಡುವ, ಎಲ್ಲ ಜ್ಞಾನವನ್ನು ಪಡೆದಿರುವ, ಪರಿಸ್ಥಿತಿಯ ಕೈಗೊಂಬೆಯಾಗದೆ ಪರಿಸ್ಥಿತಿಯ ಪ್ರಭುವನ್ನಾಗಿಸುವ - ಅರ್ಥಾತ್ ದೇವರನ್ನಾಗಿಸುವ - ದಾರಿಯನ್ನು ತಿಳಿಯುವುದು ಈ "ತಿಳಿ" ಎನ್ನುವುದರ ಅರ್ಥ. ಅಂದರೆ ಸಾಮಾನ್ಯ ಮನುಷ್ಯನನ್ನು 'ಅಸಾಮಾನ್ಯ"ನನ್ನಾಗಿಸುವುದಕ್ಕೆ ಪ್ರಾಚೀನ ಭಾರತದ ಋಷಿಗಳು ಒಂದು ವಿಜ್ಞಾನವನ್ನೇ ಬೆಳೆಸಿದ್ದಾರೆ. ಇದೇ ವೇದಗಳ ಸಾರ ಅಥವಾ ವೇದಾಂತ. ಈ ವೇದಾಂತವನ್ನು ಒಳಗೊಂಡಿರುವುದೇ ಉಪನಿಷತ್ತುಗಳು.

ಈ ಉಪನಿಷತ್ತುಗಳು ಸಂಖ್ಯೆಯಲ್ಲಿ 108ಎಂದಾದರೂ ಪ್ರಧಾನವಾಗಿರುವುದು 10ಅಥವಾ 11. ಈ ಎಲ್ಲಾ ಉಪನಿಷತ್ತುಗಳಲ್ಲಿ ಮನುಷ್ಯನನ್ನು ಮನುಷ್ಯನನ್ನಾಗಿ ನೋಡಿಯೇ, ಅವನ ಸಮಸ್ಯೆಗಳನ್ನು ಚರ್ಚಿಸಿದ್ದಾರೆ; ಅವನನನ್ನು ಭಾರತೀಯ ಎಂತಲೋ, ಹಿಂದೂ ಎಂತಲೋ ಅಲ್ಲ. ಆದ್ದರಿಂದ ಉಪನಿಷತ್ತುಗಳ ತತ್ವ ಎಲ್ಲರಿಗೂ ಅನ್ವಯಿಸುವ ವಿಚಾರ. ಈ ವಿಚಾರವನ್ನು ತಿಳಿಯದೆಯೇ, ನಮ್ಮ ದುಃಖಗಳಿಂದ, ಇತಿಮಿತಿಗಳಿಂದ ಪಾರಾಗುವ ಉಪಾಯವೇ ಇಲ್ಲವೆ? ನಾವು ಬೇರೆ ವಿಧಾನವನ್ನು ಕಂಡುಕೊಳ್ಳುತ್ತೇವೆ ಎಂದರೆ ಉಪನಿಷತ್ತು ಹೇಳುತ್ತದೆ:

"ನಾನ್ಯಃ ಪಂಥಾ ವಿದ್ಯತೇಯನಾಯ" ಅಂದರೆ ಬೇರೆ ದಾರಿ ಇಲ್ಲ! ಏಕೆಂದರೆ ಮನುಷ್ಯ ಯಾವ ಮೂಲವಸ್ತುವಿನಿಂದ ಆಗಿದ್ದಾನೋ, ಆ ಮೂಲವಸ್ತುವಿನ ಜ್ಞಾನವೇ ಇಲ್ಲದೆ, ಆ ವಸ್ತುವನ್ನು ಸರಿಯಾಗಿ ಉಪಯೋಗಿಸುವ ಕಲೆ ಹೇಗೆ ಬಂದೀತು? ಅದೇ ಎಲ್ಲ ಜ್ಞಾನಗಳ ಮೂಲಜ್ಞಾನವೂ ಹೌದು. ಎಲ್ಲ ಜ್ಞಾನಗಳ ಅಂತಿಮಗುರಿಯೂ ಹೌದು. ಇದನ್ನೇ ಕೃಷ್ಣ ಗೀತೆಯಲ್ಲಿ, ಎಲ್ಲ ಕೆಲಸಗಳು, ಎಲ್ಲ ಅನುಭವಗಳೂ ಮನುಷ್ಯನನ್ನು ಈ ಜ್ಞಾನದ ಕಡೆಗೇ ಕರೆದೊಯ್ಯುತ್ತವೆ ಎಂದು ಹೇಳುತ್ತಾನೆ ("ಸರ್ವ ಕರ್ಮಾಖಿಲಂ ಪಾರ್ಥ, ಜ್ಞಾನೇ ಪರಿಸಮಾಪ್ಯತೇ"). ಆದ್ದರಿಂದ ಮನುಷ್ಯನೇ "ಆತ್ಮಾನಂ ವಿದ್ಧಿ". ನಿನ್ನನ್ನು ನೀನು ಅರಿ ಎಂದು ಉಪನಿಷತ್ ಸಾರಿಕೊಂಡೇ ಬಂದಿದೆ.

ಇದೆಲ್ಲಾ ಯಾಕೆ? ನಮ್ಮ ಸ್ವರ್ಗ, ನಮ್ಮ ಭೋಗಗಳಲ್ಲಿ ಏನು ಕಡಿಮೆ ಇದೆ? ಇಂದ್ರಪದವಿಯನ್ನು ಮೀರಿದ್ದು ಯಾವುದು ಇದೆ ಎಂದು ವೇದಗಳ ಪ್ರಾರಂಭದ ಕರ್ಮಕಾಂಡದಲ್ಲಿ ಜನರು ಪ್ರಶ್ನೆ ಹಾಕಿ, ತಮ್ಮ ದಾರಿಯಲ್ಲೇ ಸಾಗಿ ಸುಸ್ತಾಗಿ, ಬುದ್ಧಿ ಕಲಿತು, "ಏನನ್ನು ಪಡೆದರೆ ಎಲ್ಲವನ್ನು ಪಡೆದಂತೆ ಆಗುತ್ತದೆ, ಭಗವನ್?" ಎಂಬ ಪ್ರಶ್ನೆ ಹಾಕಿದಾಗ, ಉಪನಿಷತ್ತಿನ ಋಷಿ, ಪ್ರಶ್ನಿಕರನ್ನು ನಿಮಿತ್ತವಾಗಿ ಇಟ್ಟುಕೊಂಡು, ಇಡೀ ಜಗತ್ತಿಗೆ ಹೇಳುತ್ತಾನೆ: "ಯೋ ವೈ ಭಾಮಾ ತತ್ಸುಖಂ ನ ಅಲ್ತೇ ಸುಖಮಸ್ತಿ." ಯಾವುದು ಅನಂತವಾದದ್ದೋ, ಅದನ್ನು ಪಡೆದರೆ ಮಾತ್ರ ಸುಖ. ಅಲ್ಪದರಲ್ಲಿ ತಾತ್ಕಾಲಿಕ ಉಪಶಮನವೇ ಹೊರತು, ಶಾಶ್ವತ ಪರಿಹಾರವಲ್ಲ. ಇದನ್ನೇ ಅಧುನಿಕರು "Low aim is a crime" ಎನ್ನುತ್ತಾರೆ.

ಈ ತನ್ನನ್ನು ತಾನು ತಿಳಿಯುವುದೇ ಆತ್ಮಜ್ಞಾನ, ವೇದಾಂತ, ಅಧ್ಯಾತ್ಮಿಕತೆ ಅಥವಾ ಉಪನಿಷತ್ತಿನ ಸಾರ. ಇದೊಂದು ಪೂರ್ಣಪ್ರಮಾಣದ ವಿಜ್ಞಾನ - ಭೌತಶಾಸ್ತ್ರ, ಗಣಿತ ಇದ್ದಂತೆ. ಭಾರತೀಯರಿಂದ ಈ ಜ್ಞಾನವನ್ನು ಎರವಲು ಪಡೆದ ಗ್ರೀಕರು ತಮ್ಮ ದೇಶದಲ್ಲಿ, "Man, know thy-self!" ಎಂಬ ಧ್ಯೇಯವಾಕ್ಯವನ್ನೇ ಬಳಸಿಕೊಂಡರು. ಹಾಗಾದರೆ ನಾನು ಎಂದರೇನು? ಈ ಆತ್ಮಜ್ಞಾನ ಎಂದರೇನು? ಈ ಆತ್ಮ ಹೇಗಿದೆ? ಅದರ ವಿಚಾರ ಹೆಚ್ಚು ತಿಳಿಯುವುದೆಂತು? ಹಾಗಾದರೆ, ಉಪನಿಷತ್ತುಗಳು ಏನು ಹೇಳುತ್ತವೆ ಎಂಬುದನ್ನು ಕೇಳೋಣ.

ಪ್ರವಚನಕಾರರ ಕಿರು ಪರಿಚಯ :

ಸ್ವಾಮಿ ನಿರ್ಭಯಾನಂದ ಸರಸ್ವತಿಯವರು ಕರ್ನಾಟಕದವರು. ಪ್ರಸ್ತುತ ಸ್ವಾಮೀಜಿಯವರು ಬಿಜಾಪುರ ಮತ್ತು ಗದಗ ರಾಮಕೃಷ್ಣ - ವಿವೇಕಾನಂದ ಆಶ್ರಮಗಳ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ. 1993ರಲ್ಲಿ ಸನ್ಯಾಸ ಸ್ವೀಕರಿಸಿದ ನಂತರ, ಸ್ವಾಮೀಜಿಯವರು ಸ್ವಾಮಿ ವಿವೇಕಾನಂದರ ತತ್ವಗಳನ್ನು ಉತ್ಕಟ ಪ್ರೀತಿಯಿಂದ ಮತ್ತು ಅಮಿತೋತ್ಸಾಹದಿಂದ ಪಸರಿಸುತ್ತಿದ್ದಾರೆ.

ಕರ್ನಾಟಕದ ಎಲ್ಲೆಡೆ ಕಮ್ಮಟಗಳನ್ನು ಆಯೋಜಿಸುವುದರ ಮೂಲಕ ತರುಣರು, ಶಿಕ್ಷಕರು ಮತ್ತು ಮಹಿಳೆಯರನ್ನು ಕೇಂದ್ರವಾಗಿಟ್ಟುಕೊಂಡು ಅವರ ಆತ್ಮೋದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಬಿಜಾಪುರ ಜಿಲ್ಲೆಯ ಮನಗೋಳಿಯಲ್ಲಿ ನಿರಾಶ್ರಿತ ಮಕ್ಕಳಿಗಾಗಿ ಸ್ವಾಮೀಜಿಯವರು ಶಾಲೆಯೊಂದನ್ನು ನಡೆಸುತ್ತಿದ್ದಾರೆ. ಹಾಗೆಯೇ ಸ್ವಾಮೀಜಿಯವರು ಧಾರವಾಡ, ಹುಬ್ಬಳ್ಳಿ, ರಾಣಿಬೆನ್ನೂರು, ಕಲಬುರ್ಗಿ, ಬೀದರ್, ಶಿವಮೊಗ್ಗ ಮತ್ತು ಚಿತ್ರುದುರ್ಗಗಳ ಆಶ್ರಮಗಳ ಹಿಂದಿನ ಪ್ರೇರಕ ಮತ್ತು ಚಾಲನಶಕ್ತಿಯೂ ಹೌದು.

ಸ್ವಾಮೀಜಿಯವರು ಅನೇಕ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ಹಿಂದು ಧರ್ಮವನ್ನು ಎತ್ತಿಹಿಡಿದಿದ್ದಾರೆ. ಇವರ ಸಾಧನೆಗಳನ್ನು ಗಮನಿಸಿ, ವಿಶ್ವ ಶಾಂತಿ ಸಂಸ್ಥೆ ಇವರಿಗೆ "ಶಾಂತಿದೂತ" ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X