ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬಗೆಯ ಪುಸ್ತಕ : ಸೂರ್ಯನೆಡೆಗೆ ಸಮುದ್ರಯಾನ

By Staff
|
Google Oneindia Kannada News


ಭೂಮಿಕಾ : ಜನವರಿ ತಿಂಗಳ ಕಾರ್ಯಕ್ರಮ ವರದಿ

Dr.Tonse Krishnarajuವಾಷಿಂಗ್‌ಟನ್‌ ಡಿಸಿ : ಹಿಸ್ಟರಿ ಇಸ್‌ ಎ ಡೆಡ್‌ ಸಬ್ಜೆಕ್ಟ್‌... ಅಂತೊಂದು ಅಭಿಪ್ರಾಯವು, ಶಾಲಾಕಾಲೇಜಿನಲ್ಲಿ ಚರಿತ್ರೆಯನ್ನು ಒಂದು ಪಠ್ಯವಾಗಿ ಅಭ್ಯಸಿಸಬೇಕಾದ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಇಸವಿಗಳನ್ನು ನೆನಪಿಟ್ಟುಕೊಳ್ಳುವುದು, ದುಷ್ಟ ರಾಜನ ಬಗ್ಗೆಯಾದರೆ ’ಆ ಕಾಲದಲ್ಲಿ ತೆರಿಗೆ ಭಾರವಾಗಿತ್ತು, ಶಿಕ್ಷೆ ಕ್ರೂರವಾಗಿತ್ತು...’ ಎಂದೋ, ಒಳ್ಳೆಯ ರಾಜನ ಬಗ್ಗೆಯಾದರೆ ’ಸಾಲುಮರಗಳನ್ನು ನೆಡಿಸಿ ಅರವಟ್ಟಿಗೆಗಳನ್ನು ಕಟ್ಟಿಸಿದ್ದನು...’ ಎಂದೋ ಏಕಮಾದರಿಯ ವಿವರಣೆ. ಇಮ್ಮಡಿ ಮುಮ್ಮಡಿ ನಾಲ್ಮಡಿ ಹೆಸರುಗಳು, ದಿಗ್ವಿಜಯಗಳು, ಯುದ್ಧಗಳು ... ಹಿಸ್ಟರಿ ರಸಪಾಕದಲ್ಲಿ ಸ್ಟಾಂಡರ್ಡ್‌ ಇನ್‌ಗ್ರೇಡಿಯೆಂಟ್ಸ್‌.

ಚರಿತ್ರೆಯ ಉಪನ್ಯಾಸದಲ್ಲಿ ರೋಚಕತೆಯನ್ನು ತರಿಸುವುದು ಕಷ್ಟವೇ. ಒಪ್ಪೋಣ, ಅಪರೂಪದ ಕೆಲ ಅಧ್ಯಾಪಕರು, ಇತಿಹಾಸ ತಜ್ಞರು ಡೆಡ್‌ ಸಬ್ಜೆಕ್ಟ್‌ ಆದ ಹಿಸ್ಟರಿಯನ್ನು ಲೈವ್ಲಿ ಮಾಡಬಲ್ಲರು. ಆದರೆ ಒಬ್ಬ ಮಕ್ಕಳ ಆರೋಗ್ಯತಜ್ಞ ಡಾಕ್ಟರು ಚರಿತ್ರೆಯ ಉಪನ್ಯಾಸವನ್ನು ಅತ್ಯಂತ ಕುತೂಹಲಕಾರಿಯಾಗಿ, ಪರಿಣಾಮಕಾರಿಯಾಗಿ ನಿರೂಪಿಸಬಹುದೇ?!

ಖಂಡಿತವಾಗಿ! ಅವರು ಮೇರಿಲ್ಯಾಂಡ್‌ನಲ್ಲಿನ ’ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಅಫ್‌ ಹೆಲ್ತ್‌’ನಲ್ಲಿ ಮಕ್ಕಳ ಆರೋಗ್ಯ ತಜ್ಞರಾಗಿರುವ ಡಾ।ತೋನ್ಸೆ ಕೃಷ್ಣ ರಾಜು. ಆದರೆ ಇತಿಹಾಸದ ಪುಟಗಳನ್ನು ಓದಿ ಅದರ ಬಗ್ಗೆ ರೋಚಕವಾಗಿ ಭಾಷಣಮಾಡಬಹುದಷ್ಟೇ ಅಲ್ಲ, ಅಷ್ಟೇ ರೋಚಕವಾಗಿ ಕನ್ನಡ ಭಾಷೆಯಲ್ಲಿ, ಕಾದಂಬರಿಯ ಶೈಲಿಯಲ್ಲಿ ಒಂದು ಇತಿಹಾಸಗಾಥೆಯನ್ನು ಬರೆಯಬಲ್ಲರು ಕೂಡ!

’ಸೂರ್ಯನೆಡೆಗೆ ಸಮುದ್ರಯಾನ’ - ಐದುನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಪೋರ್ಚುಗಲ್‌ನಿಂದ ಹೊರಟು ಭಾರತಕ್ಕೆ ಸಮುದ್ರಯಾನ ಮಾಡಿದ ವಾಸ್ಕೊ-ಡ-ಗಾಮನ ಪ್ರವಾಸವಿವರಗಳನ್ನು ಈ ಹೆಸರಿನ ಪುಸ್ತಕರೂಪದಲ್ಲಿ ಹೊರತರುತ್ತಿದ್ದಾರೆ ಡಾ।ಕೃಷ್ಣರಾಜು. ’ವರ್ಕ್‌ ಇನ್‌ ಪ್ರೊಗ್ರೆಸ್‌’ ಹಂತದಲ್ಲೇ ಈಬಗ್ಗೆ ಸಮ ಅಭಿರುಚಿಯ ಸ್ನೇಹಿತರೊಂದಿಗೆ, ಸಾಹಿತ್ಯಪ್ರೇಮಿಗಳೊಂದಿಗೆ ಲೇಖಕರ ವಿಚಾರವಿನಿಮಯದ ಒಂದು ವಿಶಿಷ್ಟ ಕಾರ್ಯಾಗಾರವು ಇಲ್ಲಿನ ’ಭೂಮಿಕಾ’ ವೇದಿಕೆಯಲ್ಲಿ ಜನವರಿ ತಿಂಗಳ ಕಾರ್ಯಕ್ರಮವಾಗಿ ಮೂಡಿಬಂತು.

ಡಾ। ಕೃಷ್ಣರಾಜು ಭೂಮಿಕಾ ಬಳಗಕ್ಕೆ ಹೊಸಬರಲ್ಲ. ಈಹಿಂದೆಯೂ ಕೆಲವು ಒಳ್ಳೊಳ್ಳೆಯ ಉಪನ್ಯಾಸಗಳನ್ನು ಅವರು ನಡೆಸಿಕೊಟ್ಟಿದ್ದರೆ. ಅಲ್ಲದೆ ದಿ। ಗೋಪಾಲಕೃಷ್ಣ ಅಡಿಗರ ಅಳಿಯ, ದಿ। ಎ.ಕೆ.ರಾಮಾನುಜನ್‌ ಅವರ ಒಡನಾಡಿ ಇತ್ಯಾದಿ ವಿಶೇಷತೆಯುಳ್ಳ ಕೃಷ್ಣರಾಜು ಅವರು ಒಬ್ಬ ಸಾಹಿತ್ಯಕೃಷಿಕ, ವಾಗ್ಮಿ, ಮತ್ತು ಮುಖ್ಯವಾಗಿ ಕುತೂಹಲದ ದೃಷ್ಟಿಕೋನವುಳ್ಳವರು. ಹಾಗಾಗಿ ವಾಸ್ಕೊ-ಡ-ಗಾಮನ ನೌಕಾಯಾನದಂತಹ ’ಡೆಡ್‌ ಹಿಸ್ಟರಿ’ ವಿಷಯವನ್ನೂ ಅವರು ಅತಿ ಲವಲವಿಕೆಯಿಂದ, ಪೂರಕ ಮಾಹಿತಿಗಳ ಬಟವಾಡೆಯಿಂದ, ಪವರ್‌ಪಾಯಿಂಟ್‌ ಕನ್ನಡ ಸ್ಲೈಡ್‌ಗಳನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ನಿರೂಪಿಸಬಲ್ಲರು. ಉಪನ್ಯಾಸದ ಮೊದಲು ಸಾಕಷ್ಟು ತಯಾರಿಯನ್ನು ನಡೆಸಿಕೊಂಡುಬಂದು, ಕಾರ್ಯಕ್ರಮವನ್ನು ಪ್ರಶ್ನೋತ್ತರವಾಗಿಸಿ ಮತ್ತಷ್ಟು ಆಸಕ್ತಿಕರಗೊಳಿಸಬಲ್ಲರು.

ಡಾ। ಕೃಷ್ಣರಾಜು ಆ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಭೂಮಿಕಾ ಈಗ ವಾಷಿಂಗ್ಟನ್‌ ಪ್ರಾಂತ್ಯದ ಅಭಿಮಾನಿಗಳಷ್ಟೇ ಅಲ್ಲದೆ ಟೆಲಿಕಾನ್ಫರೆನ್ಸ್‌ ಮೂಲಕ ನ್ಯೂಜೆರ್ಸಿ, ನಾರ್ತ್‌ಕೆರೊಲಿನಾ ಇತ್ಯಾದಿಕಡೆಯ ಸಾಹಿತ್ಯಪ್ರೇಮಿಗಳನ್ನೂ ಸೇರಿಸಿಕೊಂಡಿರುವುದರಿಂದ ದೂರದ ಶ್ರೋತೃಗಳಿಗೂ ಉಪನ್ಯಾಸ ಆಲಿಸಿ ಪ್ರಶ್ನೆ ಕೇಳುವ ಅವಕಾಶ. ಹೆಚ್ಚುಹೆಚ್ಚು ಮಂದಿಗೆ ಜ್ಞಾನದಾಸೋಹ. ವಾಸ್ಕೊ-ಡ-ಗಾಮನ ನೆಪದಲ್ಲಿ ಡಾ।ಕೃಷ್ಣರಾಜು 15ನೇ ಶತಮಾನದ ಚರಿತ್ರೆಯ ರಂಗುರಂಗಿನ ಪುಟಗಳನ್ನು ನಮ್ಮೆದುರು ತೆರೆದಿಟ್ಟರು.

ವಾಸ್ಕೊ-ಡ-ಗಾಮನ ಕ್ರಿ.ಶ 1498ರ ಭಾರತಯಾತ್ರೆ ಬಗ್ಗೆ ನಾವೆಲ್ಲ ಶಾಲೆಯಲ್ಲಿ ಓದಿದವರೇ. ಆದರೆ ಆಗ ಅದು ಪರೀಕ್ಷೆಯಲ್ಲಿ ಪ್ರಶ್ನೆಗುತ್ತರದ ಮಟ್ಟಿಗೆ ಮಾತ್ರ. ವಾಸ್ತವವಾಗಿ ವಾಸ್ಕೊ-ಡ-ಗಾಮ ಒಂದಲ್ಲ ಎರಡಲ್ಲ ಮೂರು ಬಾರಿ ಭಾರತಯಾತ್ರೆ ಮಾಡಿದ್ದಾನೆ. ಆತ ಸತ್ತಿದ್ದೂ ಭಾರತದಲ್ಲೇ! ಅಷ್ಟೇ ಅಲ್ಲ 12-13-14ನೇ ಶತಮಾನದ ಯುರೋಪ್‌ನ ಮತ್ತು ಭಾರತದ ರಾಜಕೀಯ/ವಾಣಿಜ್ಯ ಸ್ಥಿತಿಗತಿಗಳು, ಮಸಾಲೆ ಪದಾರ್ಥಗಳು ಯುರೋಪಿಯನ್ನರಿಗೆ ಯಾಕೆ ಅವಶ್ಯವಾಗಿದ್ದುವು (ಶೀತಲೀಕರಣ ತಂತ್ರಜ್ಞಾನವಿನ್ನೂ ಬೆಳೆಯದಿದ್ದ ಆ ಕಾಲದಲ್ಲಿ ಮಾಂಸವನ್ನು ವರ್ಷವಿಡೀ ಲಭ್ಯವಿರುವಂತೆ ಕಾಪಿಡಲು ಅದಕ್ಕೆ ಜಾಯಿಕಾಯಿ ಮತ್ತಿತರ ಮಸಾಲೆಪದಾರ್ಥಗಳನ್ನು ಸೇರಿಸಿಡುತ್ತಿದ್ದದ್ದು!) ಇತ್ಯಾದಿ ವಿವರಗಳು ಏಳನೇ ತರಗತಿಯ ಸಮಾಜಪರಿಚಯ ಪಠ್ಯದಲ್ಲಿ ಲಭ್ಯವಿರುವುದಿಲ್ಲ.

ಇಂತಹ ಸ್ವಾರಸ್ಯಕರ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ ಸಂಕಲಿಸಿ, ಕನ್ನಡ ಭಾಷೆಯಲ್ಲಿ ಪುಸ್ತಕ ಬರೆಯುತ್ತಿದ್ದಾರೆ ಡಾ।ಕೃಷ್ಣರಾಜು. ಭೂಮಿಕಾದಲ್ಲಿನ ಉಪನ್ಯಾಸದಷ್ಟೇ ಅಥವಾ ಅದಕ್ಕಿಂತಲೂ ಕುತೂಹಲಕರದ್ದಾಗಿರಬಹುದು ಆ ಪುಸ್ತಕ! ಕಾದು ನೋಡೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X