ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಗನ್ನಡ

By Staff
|
Google Oneindia Kannada News


ನನ್ನ ಹೆಂಡತಿ ಒಂದೊಂದೇ ಮುತ್ತು(?) ಉದುರಿಸುವುದಕ್ಕೆ ಶುರು ಮಾಡಿದ ಮೇಲೇ ನನಗೆ ಹೊಳೆದದ್ದು, ಅವಳು ಆಡೋ ಕನ್ನಡದಲ್ಲಿ ಅರ್ಧಕ್ಕರ್ಧ ಪದಗಳನ್ನು ನನ್ನ ಇಪ್ಪತ್ತು ಚಿಲ್ಲರೆ ವರ್ಷಗಳಲ್ಲಿ ಕೇಳೇ ಇಲ್ಲ ಅಂತ! ಹೌದು, ಭಾಷೆಯಾಳಗೊಂದು ಭಾಷೆಯಿದೆ... ಈ ಸರಸ ಪ್ರಬಂಧ ಓದಿದ ಮೇಲೆ ನಿಮಗೂ ಹಾಗೇ ಅನ್ನಿಸುತ್ತದೆ!

I learnt Kannada from my wife... Sukumar Raghuram in Calif...ಮದುವೆಯ ಗಲಾಟೆಯಲ್ಲಿ, ನನ್ನ ಹೆಂಡತಿ ಹೆಚ್ಚು ಮಾತೇ ಆಡಲಿಲ್ಲ ಎನ್ನುವುದು ಗಮನಕ್ಕೇ ಬರಲಿಲ್ಲ. ಕಾರ್ಯಗಳೆಲ್ಲ ಮುಗಿದ ಮೇಲೆ ಒಂದೊಂದೇ ಮುತ್ತು ಅವಳ ಬಾಯಿಯಿಂದ ಉದುರುವುದಕ್ಕೆ ಶುರು ಆದಮೇಲೆ....ಅಂದಹಾಗೆ ಇಲ್ಲಿ ಮುತ್ತು ಅಂದರೆ ‘ಮುತ್ತು ಉದುರಿಸಿದ ಹಾಗೆ ಮಾತನಾಡುತ್ತಾರೆ’ ಅನ್ನೋ ಪ್ರಯೋಗ ಇದ್ಯಲ್ಲ ಹಾಗೆ. ನೀವು ಏನೇನೋ ತಪ್ಪು ತಿಳಿದುಕೊಂಡು ಬಿಡಬೇಡಿ. ಎಲ್ಲಿದ್ದೆ? ಅದೇ ನನ್ನ ಹೆಂಡತಿ ಒಂದೊಂದೇ ಮುತ್ತು ಉದುರಿಸುವುದಕ್ಕೆ ಶುರು ಮಾಡಿದ ಮೇಲೇ ನನಗೆ ಹೊಳೆದದ್ದು, ಅವಳು ಆಡೋ ಕನ್ನಡದಲ್ಲಿ ಅರ್ಧಕ್ಕರ್ಧ ಪದಗಳನ್ನು ನನ್ನ ಇಪ್ಪತ್ತು ಚಿಲ್ಲರೆ ವರ್ಷಗಳಲ್ಲಿ ಕೇಳೇ ಇಲ್ಲ ಅಂತ.

ಇಷ್ಟರ ಮೇಲೆ ನನ್ನ ಬಂಧುಗಳು, ಸ್ನೇಹಿತರೂ ಎಲ್ಲ ‘‘ಎಷ್ಟು ಚೆನ್ನಾಗಿ ಧಾರವಾಡದ ಕನ್ನಡ ಮಾತಾಡ್ತೀಯ, ನಿಜವಾಗಲೂ ಕೇಳಕ್ಕೆ ಎಷ್ಟು ಹಿತವಾಗಿರತ್ತೆ’’ ಅಂತ ಉಬ್ಬಿಸುವುದಕ್ಕೆ ಸರಿಯಾಗಿ ಇವಳು ವಾರೆಗಣ್ಣಿನಿಂದ ನನ್ನನ್ನು ನೋಡಿ ‘‘ತಿಳ್ಕೊ, ಏನೋ ಮೈಸೂರು, ರಾಜಗನ್ನಡ ಅಂತೆಲ್ಲ ಭಾರಿ ಮಾತಾಡ್ತಿದ್ಯಲ್ಲ, ಹೇಳಿ ಕೇಳಿ ಬೆಂಗಳೂರಿನ ಪಕ್ಕದವರು, ನಿಮ್ಮದೇನು ಠಸ್ಸ ಪುಸ್ಸ ಇಂಗ್ಲೀಷ್‌ ಕಮ್ಮಿ ಇಲ್ಲ’’ ಅನ್ನೊ ಧಾಟಿಯಲ್ಲಿ ಇನ್ನೂ ನಾಲ್ಕು ಹೊಸ ಹೊಸ ಕನ್ನಡ ಪದಗಳನ್ನು ಸೇರಿಸಿ ನನ್ನೊಡನೆ ಮಾತನಾಡ್ತಿದ್ದಳು.

ಮದುವೆ ಆದ ಮೂರು ದಿನಕ್ಕೇ ಭಾಂಡಿ ಅಂದ್ರೆ ಪಾತ್ರೆ, ತಾಟು ಅಂದ್ರೆ ತಟ್ಟೆ, ವಾಟಗ ಅಂದ್ರೆ ಲೋಟ, ಅರಿವೆ ಅಂದ್ರೆ ಬಟ್ಟೆ ಅಂತ ಧಾರವಾಡದ ಕನ್ನಡದ ಪಾಠ ಪ್ರಾರಂಭ ಮಾಡಿದಳು. ಇಷ್ಟಕ್ಕೆ ನಿಂತಿದ್ರೆ ಪರವಾಗಿರಲಿಲ್ಲ, ನನ್ನ ರಾಜಗನ್ನಡವನ್ನೇ ಪ್ರಶ್ನಿಸುವುದಕ್ಕೆ ಶುರುಮಾಡಿಬಿಟ್ಟಳು. ಶರ್ಟ್‌ ಅಲ್ಲ ಅಂಗಿ, ಕರ್ಚೀಫ್‌ ಅಲ್ಲ ವಸ್ತ್ರ, ಟೈಮ್‌ ಅಲ್ಲ ಘಂಟಿ, ಕ್ಲಿನಿಕ್‌ ಅಲ್ಲ ದವಾಖಾನಿ ಅಂತ ಜೋರಾಗಿ ಕನ್ನಡ ಪಾಠ ಪ್ರಾರಂಭವಾಯ್ತು. ನನಗೂ ಕೇಳಿ ಕೇಳಿ ಸುಸ್ತಾಗಿ, ಕೊನೆಗೆ ಸಣ್ಣ ದನಿಯಲ್ಲಿ ‘‘ಅದ್ಸರಿ, ಮಿನೀಟ್‌ ಅಲ್ಲ ನಿಮಿಷ’’ ಅಂತ ಮೆತ್ತಗೆ ಅವಳ ಕನ್ನಡವನ್ನೂ ತಿದ್ದಿ ಜಾಗ ಖಾಲಿ ಮಾಡಿದೆ.

ನಮ್ಮ ಮಧುಚಂದ್ರದಲ್ಲಿ ಕೆಲವು ದಿನಗಳು ಕೇರಳದ ಒಂದು ರೆಸಾರ್ಟ್‌ ನಲ್ಲಿ ಇಳಿದುಕೊಂಡಿದ್ದೆವು. ಒಂದು ದಿನ ಮಧಾಹ್ನ ಊಟಕ್ಕೆ ಹೋದಾಗ ಮೊಸರನ್ನ ತರಿಸಿಕೊಂಡ್ರೆ, ಅದೋ ಬರೀ ಶುಂಠಿಮಯ. ಬಾಯ್ಗಿಡಕ್ಕಾಗಲಿಲ್ಲ. ಮತ್ತೆ ರಾತ್ರಿ ಊಟಕ್ಕೆ ಹೋದಾಗ ಅಲ್ಲಿಯ waiterನನ್ನು ಕರೆದು Can you please get us a plate of curd rice? ಅಂತ ನಾನು ಹೇಳಕ್ಕೆ ಸರಿಯಾಗಿ ಇವಳು ನನ್ನ ಮಾತನ್ನೂ ಕೇಳಿಸಿಕೊಳ್ಳದೆ ‘‘ಅಲ್ಲಾ ಅಲ್ಲಾ’’ ಅಂತ ಜೋರಾಗಿ ನನ್ನ ತೋಳನ್ನು ಗುದ್ದಲು ಶುರುಮಾಡಿದಳು. ‘‘ಹೌದೇ, ನಾನು ಸರಿಯಾಗೇ ಹೇಳ್ದೆ’’ ಎಂದು ನಾನೆಂದರೆ, ಮತ್ತೆ ‘‘ಅಲ್ಲಾ ಅಲ್ಲಾ’’ ಎಂದಳು. ನಾನು ‘‘ಏನು ಅಲ್ಲಾ? ಮೊಸರನ್ನ ಬೇಡ್ವಾ?’’ ಎಂದಾಗ ‘‘ಅಲ್ಲಾ ಅಲ್ಲ ಕಣೊ, ಅಲ್ಲಾ’’ ಎನ್ನಬೇಕೆ? ಕೊನೆಗೆ ನನ್ನ ಪೆಚ್ಚುಮೋರೆ ನೋಡಿ ಅವಳಿಗೆ ಜ್ಞಾನೋದಯವಾಯಿತು. ‘‘ನಮ್ಮ ಭಾಷಾದಲ್ಲಿ ಅಲ್ಲಾ ಅಂದ್ರೆ ಶುಂಠಿ, ಸ್ವಲ್ಪ ಶುಂಠಿ ಕಡಿಮಿ ಹಾಕ್ಲಿಕ್ಕೆ ಹೇಳು’’ ಅಂದಳು.

ಸರಿ ಮದುವೇನೂ ಆಯ್ತು, ಮಧುಚಂದ್ರಾನೂ ಆಯ್ತು, ಜೈ ಅಂತ ಅವಳನ್ನು ಕರೆದುಕೊಂಡು ಅಮೇರಿಕಾಕ್ಕೆ ವಾಪಸ್‌ ಬಂದೆ. ಮೊದಲನೆಯ ದಿನ ಮಧ್ಯಾಹ್ನ ನನ್ನ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದೆವು. ಆಮೇಲೆ ನಾನು ಇವಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದೆ. ಸಂಜೆ ಮನೆಗೆ ಬಂದರೆ ಇವಳು ಠಾಕು ಠೀಕಾಗಿ ಬಟ್ಟೆ ಹಾಕಿಕೊಂಡು ಆಚೆ ಹೊರಡಲು ತಯಾರಾಗಿದ್ದಳು. ‘‘ಲೋ, ಒಂದು ಚೂರು ಪಲ್ಯ ತರಬೇಕು’’ ಅಂದಳು. ನಾನು ದಂಗಾಗಿ ‘‘ಆಞಂ’’ ಅಂದೆ. ‘‘ಯಾಕೆ? ಪಲ್ಯ ಇಲ್ಲದೆ ಹಾಗೇ ಊಟ ಮಾಡ್ತೀಯಾ? ಪಲ್ಯ ಬೇಡ್ವಾ ಊಟಕ್ಕೆ?’’ ಅಂದಳು. ಎಲಾ ಇವಳಾ, ಛೇ ನಮ್ಮಪ್ಪ ಅಮ್ಮ ‘ನಮ್ಮ ಮಗ ಸಿಕ್ಕಾಪಟ್ಟೆ ಚೆನ್ನಾಗಿ ಅಡಿಗೆ ಮಾಡ್ತಾನೆ’ ಅಂತ ಇವಳ ಅಪ್ಪ ಅಮ್ಮನ ಎದುರು ಕೊಚ್ಚಿಕೊಂಡಿದ್ದೆ ತಪ್ಪಾಯ್ತಲ್ಲ ಅಂದುಕೊಳ್ಳುತ್ತ ‘‘ಅಲ್ಲ ಪಲ್ಯ ಆಚೆಯಿಂದ ಯಾಕೆ ತರಬೇಕು?’’ ಅಂತ ಸಣ್ಣ ದನಿಯಲ್ಲಿ ಕೇಳಿದೆ. ‘‘ಮತ್ತೆ?’’ ಅಂತ ಮುಖ ಅಗಲಿಸಿದಳು. ನಾನು ತಕ್ಷಣ ಚೇತರಿಸಿಕೊಂಡು ‘‘ಅಲ್ಲ ಪಾಪ ನಿನಗೆ ಸುಸ್ತಾಗಿದೆ ಅನ್ಸತ್ತೆ. ಇನ್ನೂjetlag ಹೋಗಿಲ್ಲ. ನೀನು ಸುಧಾರಿಸಿಕೊ. ನಾನು ಪಲ್ಯ ಮಾಡ್ತೀನಿ’’ ಎಂದು ಅವಳನ್ನು ಸೋಫಾ ಮೇಲೆ ಕೂರಿಸಿದೆ. ಅವಳು ತಲೆ ತಲೆ ಚಚ್ಚಿಕೊಂಡು ‘‘ಅಲ್ವೋ ಪಲ್ಯ ಅಂದ್ರೆ ನೀವು ತರಕಾರಿ ಅಂತೀರಲ್ಲ ಅದು. ನಾವು ಪಲ್ಯಕಾಯಿ ಅನ್ನುವುದಕ್ಕೆ ಚಿಕ್ಕದಾಗಿ ಪಲ್ಯ ಅಂತೀವಿ’’ ಅಂದಳು. ಜೊತೆಗೆ ‘‘ನಾವು ಪಲ್ಲೆ ಅಂತೀವಿ, ಏನೋ ಪಾಪ ನಿನಗೆ ಅರ್ಥ ಆಗಲಿ ಅಂತ ಪಲ್ಯ ಅಂದೆ’’ ಅಂತೊಂದು ಬಾಲಂಗೋಚಿ ಸೇರಿಸಿದಳು.

ಅಂಗಡಿಗೆ ಹೋದರೆ, ಅಲ್ಲೋ ರಾಶಿ ರಾಶಿ ತರಕಾರಿ. ಇವಳ ಕಣ್ಣುಗಳು ಒಂದೇ ಕ್ಷಣದಲ್ಲಿ ಆ ಮೂಲೆಯಿಂದ ಈ ಮೂಲೆಯವರೆಗೆ ಎಲ್ಲಾ ತರಕಾರಿಗಳನ್ನೂ ಗಮನಿಸಿ ‘‘ಲೋ, ಅಲ್ನೋಡೋ ಅವರೇಕಾಯಿ ಎಷ್ಟು ಚೆನ್ನಾಗಿದೆ’’ ಅಂದಳು. ನನಗೋ ಅವರೇಕಾಯಿ ರೊಟ್ಟಿ, ಉಪ್ಪಿಟ್ಟು, ಉಸಲಿ, ಹಿದಕವರೆ ಎಲ್ಲಾ ಒಟ್ಟಿಗೆ ನೆನಪಾಗಿ, ಇಷ್ಟು ವರ್ಷಗಳಲ್ಲಿ ನಾನೇ ಒಳ್ಳೆಯ ಅವರೇಕಾಯಿಯನ್ನು ಅಮೇರಿಕಾದಲ್ಲಿ ನೋಡಿಲ್ಲ, ಇವಳೆಲ್ಲಿ ನೋಡಿದಳಪ್ಪ ಅಂತ ಆಶ್ಚರ್ಯದಿಂದ ‘‘ಎಲ್ಲೇ?’’ ಅಂದೆ. ಅವಳಿಗೆ ತಕ್ಷಣ ಅರ್ಥವಾಗಿರಬೇಕು. ‘‘ಅದೇ, ನೀವು beans ಅಂತೀರಲ್ಲ ಅದು’’ ಎಂದು ಓಡಿದಳು. ನಾನೂ ಅವಳ ಹಿಂದೆ ಓಡುತ್ತ, ಸದ್ಯ ನನಗೂ ಒಂದು chance ಸಿಕ್ತಲ್ಲ ಎನ್ನುವ ಸಂತೋಷದಿಂದ ‘‘ನಾವೇನೂ beans ಅನ್ನಲ್ಲ, ಅಚ್ಚುಕಟ್ಟಾಗಿ ಹುರಳಿಕಾಯಿ ಅಂತೀವಿ’’ ಅಂತ ನನ್ನ ರಾಜಗನ್ನಡದ ಪ್ರದರ್ಶನ ಮಾಡಿದೆ.

ಮಾರನೆಯ ದಿನ ಬೆಳಿಗ್ಗೆ ‘‘ಅಯ್ಯೋ ಉಳ್ಳಾಗಡ್ಡಿ ಮರೆತುಹೋಯ್ತು, ಬರ್ತಾ ಅಂಗಡಿಯಿಂದ ತರ್ತೀಯ?’’ ಅಂತ ಆಫೀಸಿಗೇ ಫೋನ್‌ ಮಾಡಿದಳು. ಮಧ್ಯಾಹ್ನ ಊಟದ ಸಮಯದಲ್ಲಿ ಆಲೂಗೆಡ್ಡೆ ತೆಗೆದುಕೊಂಡು ಮನೆಗೆ ಹೋದದ್ದೇ ತಡ, ಮತ್ತೆ ಧಾರವಾಡ ಕನ್ನಡದ ಪಾಠ ಪ್ರಾರಂಭವಾಯಿತು. ಉಳ್ಳಾಗಡ್ಡಿ ಅಂದ್ರೆ ಈರುಳ್ಳಿ, ಬಟಾಟಿ ಅಂದ್ರೆ ಆಲೂಗೆಡ್ಡೆ ಇತ್ಯಾದಿ ಇತ್ಯಾದಿ.

ಇದಾದ ಕೆಲವು ವಾರಗಳ ನಂತರ ಆಫೀಸಿಗೆ ಮತ್ತೆ ಇವಳ ಫೋನು!!! ‘‘ಇವತ್ತು ಒಂದು ಚೂರು ಏನೋ ಕೆಲಸ ಇದೆ, ಎಲ್ಲೋ ಹೋಗಬೇಕು, ಸಂಜಿ ಮುಂದ ನೀನು ಕರ್ಕೊಂಡು ಹೋಗ್ತೀಯ?’’ ಅಂತ. ನಾನು ಸರಿ ಅಂತ ಹೇಳಿ ಕೆಟ್ಟೆನೋ ಬಿದ್ದೆನೋ ಅಂತ ಮಧ್ಯಾಹ್ನ ಮೂರು ಘಂಟೆ ಹೊತ್ತಿಗೆ ಎಲ್ಲ ಕೆಲಸ ಮುಗಿಸಿ ಮನೆಯ ಕಡೆ ದೌಡಾಯಿಸಿದೆ. ಮನೆಗೆ ಹೋದರೆ ಇವಳು ಹಾಯಾಗಿ ಟಿ.ವಿ. ನೋಡ್ತಾ ಕುಳಿತಿದ್ದಾಳೆ. ‘‘ಏನು ಇಷ್ಟು ಬೇಗ ಬಂದೆ?’’ ಅಂತ ನನಗೇ ಪ್ರಶ್ನೆ ಬೇರೆ. ‘‘ನೀನೆ ಹೇಳಿದ್ಯಲ್ಲ ಸಂಜೆಗೆ ಮುಂಚೆ ಎಲ್ಲೋ ಹೋಗಬೇಕು ಅಂತ’’ ಅಂದರೆ ‘‘ಅಯ್ಯೋ ಸಂಜಿ ಮುಂದ ಅಂದರ ಸಂಜೆ ಅಂತ ಅಷ್ಟೆ, ಸಂಜೆಗೆ ಮುಂಚೆ ಅಲ್ಲ’’ ಎಂದು ಕಿಸಕ್ಕನೆ ನಕ್ಕಳು. ‘‘ಯಾಕೆ? ನಿಮ್ಮ ಭಾಷೆಯಲ್ಲೇನು ಪದಗಳು ಕಡಿಮೇನಾ? ಸುಮ್ನೆ ಸಂಜೆ ಅಂದ್ರೆ ಆಗಲ್ವಾ, ಇನ್ನೊಂದು ಪದ ಬೇರೆ ಸಂಜೆ ಮುಂದೆ ಅಂತೆ’’ ಎಂದು ಕೋಪಿಸಿಕೊಂಡು ಕುಳಿತೆ.

ಸ್ವಲ್ಪ ಸಮಯದ ನಂತರ ಒಂದು ಮೂಲೆಯಲ್ಲಿ ಕಂಡದ್ದು ದೊಡ್ಡ ಪ್ಲಾಸ್ಟಿಕ್‌ ಕವರಿನ ತುಂಬ ಹಳೆಯ ಟವೆಲ್ಲು, ಹರಕಲು ಬಟ್ಟೆ, ಮನೆಯೆಲ್ಲ ಒರೆಸಿ ಕೊಳಕಾಗಿದ್ದ ವಸ್ತ್ರಗಳು ಇತ್ಯಾದಿ ಇತ್ಯಾದಿ. ಇಪ್ಪತ್ತನಾಲ್ಕೂ ಗಂಟೆಗಳು ನನ್ನ ಕಣ್ಣುಗಳನ್ನೇ ರಣಹದ್ದಿನಂತೆ ಗಮನಿಸುವ ನನ್ನ ಹೆಂಡತಿ ‘‘ಓ! ಅದಾ, ಒಗೀಲಿಕ್ಕೆ’’ ಅಂದಳು. ನನಗೆ ಸರಿಯಾಗಿ ಕೇಳಿಸಲಿಲ್ಲವೇನೋ ಅಂದು ‘‘ಯಾಕೆ?’’ ಅಂತ ಮತ್ತೆ ಪ್ರಶ್ನಿಸಿದೆ. ‘‘ಒಗೀಲಿಕ್ಕೆ. ಅಷ್ಟನ್ನೂ ಒಗೀಬೇಕು’’ ಎಂದಳು. ಅಯ್ಯೋ ರಾಮ, ಎಂತಹ ಜಿಪುಣಿಯನ್ನು ಮದುವೆಯಾದೆನಪ್ಪ ನಾನು, ಇಂತಹ ಕಿತ್ತುಹೋಗಿರುವ ಬಟ್ಟೆಗಳನ್ನು ಒಗೆದು ಏನು ಮಾಡುತ್ತಾಳೆ ಎಂದು ಯೋಚಿಸುತ್ತ ‘‘ಒಗೆದ ಮೇಲೆ ಏನು ಇಸ್ತ್ರಿ ಮಾಡಿಡ್ತೀಯಾ?’’ ಎಂದು ಕೇಳಿದೆ. ‘‘ಥೂ ಹೋಗೋ, ಒಗೆಯೋದು ಅಂದ್ರೆ ಆಚೆ ಒಗೆಯೋದು, ಕಸದ ತೊಟ್ಟಿಯೊಳಗ’’ ಅಂದಳು. ಮತ್ತೆ ಶುರುವಾಯ್ತು ಧಾರವಾಡ ಕನ್ನಡದ ಪಾಠ. ಒಗೆಯೋದು ಅಂದ್ರೆ ಎಸೆಯೋದು, ರಗಡ ಅಂದ್ರೆ ತುಂಬ, ಅಗದಿ ಅಂದ್ರೆ ಸಿಕ್ಕಾಪಟ್ಟೆ.

ಇಂತಹ ಎಷ್ಟೋ ಸನ್ನಿವೇಶಗಳು ಇವತ್ತಿಗೂ ನಡೀತಾನೇ ಇವೆ. ಇನ್ನೂ ಎಷ್ಟು ವರ್ಷ ನಡೆಯತ್ತೋ ಗೊತ್ತಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ನಮಗೂ ಮಕ್ಕಳು ಮರಿ ಅಂತ ಆಗತ್ವೆ. ಅವುಗಳ ಭಾಷೆ, ದೇವರೇ ಕಾಪಾಡಬೇಕು!!!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X