ಎಳೆಯುವ ಕೈಗಳೆಷ್ಟಿದ್ದರೂ ಸಾಲದು ಐಟಿ ರಥಕ್ಕೆ
ಅದನ್ನು ಹೇಗೆ ಹೇಳುವುದು, ಕಾಲಜ್ಞಾನಿಗಳಲ್ಲವಲ್ಲ ನಾವು ಎಂದು ನಾನು ಕೇಳಿದರೆ ಅದನ್ನು ಹೇಗೆ ಕೇಳದೇ ಇರುವುದು ಎನ್ನುವುದು ಅವರ ಪ್ರಶ್ನೆ. ಅವರ ಕಡೆಯಿಂದಲೂ ಯೋಚಿಸಬೇಕಾದದ್ದೇ. ಬ್ಯಾಂಕೊಂದರಲ್ಲಿ ಕೆಳಮಟ್ಟದ ಉದ್ಯೋಗಿಯಾಗಿರುವ ಅವರು ಹೊಟ್ಟೆ ಬಟ್ಟೆ ಕಟ್ಟಿ ಗಗನ ಮುಟ್ಟಿರುವ ಕಾಲೇಜು ಫೀ ಕಟ್ಟಿ ಮಗನನ್ನು ಸಾಫ್ಟ್‌ವೇರ್ ಇಂಜಿನಿಯರ್ ಮಾಡಿದರೆ ಅಷ್ಟರೊಳಗೆ ಇಂಟೆಲ್, ಐಬಿಮ್, ಗೂಗಲ್ ಕಂಪನಿಗಳೆಲ್ಲ ಭಾರತದಿಂದ ಗಂಟುಮೂಟೆ ಕಟ್ಟಿದರೆ ಏನು ಗತಿ?
ಒಂದು ಸ್ವಾಭಿಮಾನಿ ಸಮಾಜದ ದೃಷ್ಟಿಯಿಂದ ತೀರಾ ನಿಕೃಷ್ಟವಾದ ರೀತಿಯಲ್ಲಿ ಯೋಚಿಸುವುದಲ್ಲವೆ ಅದು ಎಂದು ನಾನೆಂದೆ. ನಾನು ಹಾಗೆ ಹೇಳಬಾರದಾಗಿತ್ತು. ಬಹುಶಃ ಅದು ವರ್ತಮಾನ ಸ್ಪಂದನೆಯಿರದ ಯಾವುದೋ ಲೋಕದಿಂದ ಆಡಿದ ಆಕಾಶವಾಣಿಯಂತೆ ಇತ್ತು. ಹಾಗೆ ಆಡಬಾರದಿತ್ತು ಎಂದು ಈಗ ಅನ್ನಿಸುತ್ತಿದೆ ಆದರೆ ಆ ಸಂದರ್ಭದಲ್ಲಿ ಅನ್ನಿಸಲಿಲ್ಲ. ಅವರ ಮುಖ ಕೆಂಪಾದರೂ ತಾಳ್ಮೆಯಿಂದಲೇ ಉತ್ತರಿಸಿದರು - ಜನ ಹೋಗೋ ರೀತಿನಲ್ಲಿ ಹೋಗದೆ ಬೇರೆರೀತಿನಲ್ಲಿ ಬದುಕುದಕ್ಕೆ ನಾನೇನು ಗಾಂಧೀ ಮಹಾತ್ಮನೇ? ಗಾಂಧಿ ಜೊತೆ ಎಲ್ಲಾ ಫೋಟೋ ಸೆಷನ್‌ಗಳಲ್ಲು ಇರ್ತಿದ್ದ ನೆಹರೂ ಕೂಡ ಒಂದೇಒಂದು ದಿನ ಅಂಗಿ ಬಿಚ್ಚಲಿಲ್ಲ, ತುಂಡುಪಂಚೆ ಉಡಲಿಲ್ಲ. ಇನ್ನು ನಾವೆಲ್ಲ ಹುಲುಮಾನವರ ಪಾಡೇನು? ಕೇರಿನಲ್ಲಿರೊ ಪ್ರತಿಯೊಬ್ಬರೂ ಮಕ್ಕಳನ್ನ ಇಂಜಿನಿಯರ್‌ಗಳಾಗಿ ಮಾಡಿ ಡಿಸ್ಟ್ರಿಕ್ಟ್ ಕಮಿಷನರ್‌ರ ನಾಲ್ಕರಷ್ಟು ಸಂಬಳಕೊಡೋ ಪರದೇಶೀ ಕಂಪನಿಗಳಿಗೆ ಕೆಲಸಕ್ಕೆ ಸೇರ್ಸೋವಾಗ ನಾನೇನ್ ಮಾಡ್ಲಿ ನನ್ನ ಮಗನ್ನ? ಹಿಸ್ಟ್ರಿ ತಗೊಂಡು ಬಿಎ ಮಾಡು ಅನ್ನಲೇ? ಎಂದರು.
ಅಲ್ಲಿಗೆ ಮಾತು ನಿಲ್ಲಿಸಿದೆ. ಏನಾದರೂ ಮುಂದುವರೆಸಿದ್ದರೆ ಅವರ ಮುಂದಿನವಾಕ್ಯ ಖಂಡಿತವಾಗಿ, ಅಲ್ಲಯ್ಯಾ ಬಹಳ ತಮಾಷೆಯಾಗಿದೆ, ಈ ಸ್ವಾಭಿಮಾನ ನಿರಭಿಮಾನ ಅಂತ ಕೂತಿದ್ದರೆ ನೀನು ಅಮೆರಿಕಾಕ್ಕೆ ಹಾರಿ ಹೋಗಿ ಇಷ್ಟು ವರ್ಷ ದುಡಿಯೋದಕ್ಕೆ ಆಗ್ತಾ ಇತ್ತ ಎಂದಿರುತ್ತಿತ್ತು.
ಈಗಲೂ ನನಗೆ ಈ ಸಂಭಾಷಣೆಗಳು ರಾತ್ರಿಯ ಹೊತ್ತು ಇಲಿಯನ್ನು ಹಿಡಿಯಲು ಚಕ್ಕುಲಿಯ ತುಂಡನ್ನು ಅಂಟಿಸಿಕೊಂಡು ಹೊಂಚುಹಾಕುವ ಬೋನಿನಂತೆ ಕಾಣುತ್ತದೆ. ಹೇಗೆ ಮಾತನಾಡಿದರೂ ಕೊನೆಗೆ ಸಿಕ್ಕಿಹಾಕಿಕೊಳ್ಳುವವನು ನಾನೇ. ಒಂದು ಭೇಟಿಯ ಸಂಧರ್ಭದಲ್ಲಿ ಹಿರಿಯ ಸಾಹಿತಿಗಳೊಬ್ಬರು ನನ್ನ ಮೇಲೆ ರೇಗಿದ್ದರು - ನಿಮ್ಮ ಐಟಿ ಕಂಪನಿಗಳಿಂದಲೇ ನಮ್ಮ ದೇಶದಲ್ಲಿ ಶಿಕ್ಷಣ ನೀರುಕುಡಿದು ಹೋಯ್ತು. ಮೂವತ್ತೈದು ಪರ್ಸೆಂಟು ಬಂದವನನ್ನೂ ಇಂಜಿನಿಯರ್ ಆಗು ಕೈತುಂಬಾ ಹಣ ಕೊಡ್ತಿವಿ ಅನ್ನುತ್ವೆ, ಇವತ್ತು ನಮ್ಮ ಕನ್ನಡ, ಹಿಸ್ಟರಿ, ಎಕನಾಮಿಕ್ಸ್ ಎಂ.ಎ. ಕ್ಲಾಸ್‌ಗಳನ್ನ ಕೇಳೊರೇ ಇಲ್ಲ, ಬಂದವರೂ ಯಾವುದಕ್ಕೂ ಉಪಯೋಗಕ್ಕೆ ಇಲ್ಲದವರು. ಹೀಗಾದರೆ ಒಳ್ಳೆಯ ಇತಿಹಾಸ ತಜ್ಞರು ಹೇಗೆ ಬಂದಾರು, ಒಳ್ಳೆಯ ಸಮಾಜಶಾಸ್ತ್ರಜ್ಞರು ಹೇಗೆ ಬಂದಾರು ಕೊನೆಗೆ ಸರಕಾರಿ ಕಛೇರಿಗಳಲ್ಲಿ ಸ್ವಲ್ಪ ಚುರುಕಾದ ಅಧಿಕಾರಿಗಳಾದರೂ ಎಲ್ಲಿ ಸಿಕ್ಕಾರು, ಎಂದು. ಅವರ ಬೇಸರ, ದುಃಖ ಖಂಡಿತಾ ನನಗೆ ಅರ್ಥವಾಗುತ್ತದೆ. ಆದರದು ಜೈಲಿನಲ್ಲಿರುವ ಕೈದಿಯ ಮುಂದೆ ವಿಶ್ವಪರ್ಯಟನೆಯ ಕನಸನ್ನು ಹಂಚಿಕೊಂಡಂತೆ ಅಸಹಾಯಕತೆಯ ದ್ವನಿಯಲ್ಲಿ ಮುಕ್ತಾಯವಾಗುತ್ತದೆ.
ಒಳ್ಳೆಯ ಇತಿಹಾಸ ತಜ್ಞರನ್ನು ಕಳೆದು ಕೊಳ್ಳೂತ್ತಿದ್ದೀರಲ್ಲೋ ಎಂದು ಆ ಹಿರಿಯ ಜೀವ ರೋದಿಸಿದರೆ ಐಟಿ, ಬಿಟಿ, ಕಾಲ್ ಸೆಂಟರ್, ಬಿಪಿಒ, ಜಾಗತೀಕರಣ ಇವುಗಳನ್ನೆಲ್ಲಾ ನೀವು ಮಿಸ್ ಮಾಡಿಕೊಂಡರೆ ಕೈ ಮೀರಿ ಬೆಳೆಯುತ್ತಿರುವ ಈ ಜನಸಂಖ್ಯೆಗೆ ಎಲ್ಲಿಂದ ಅನ್ನ ಹೊಂದಿಸುತ್ತೀರಿ ಎಂದು ನಾರಾಯಣ ಮೂರ್ತಿಗಳು ಮತ್ತು ಅಜೀಮ್ ಪ್ರೇಮ್‌ಜಿ ಕೇಳುತ್ತಿದ್ದಾರೆ. ಈ ಜಾಗತೀಕರಣ ಮಣ್ಣುಮಸಿ ಇಲ್ಲದೆಯೇ ಹಿಂದೆಲ್ಲಾ ನಾವು ಬದುಕಲಿಲ್ಲವೇ ಎಂದು ಪ್ರೊಫೆಸರ್ ಪ್ರಶ್ನಿಸಿದರೆ, ಅಂದು ಟಿವಿ, ಫೋನ್ ಕೂಡ ಇಲ್ಲದೆಯೇ ಬದುಕಿದ್ದಿರಿ ಇಂದು ಅದೇ ರೀತಿ ಬಾಳಬಲ್ಲಿರಾ ಎಂದು ಇವರು ವಾಪಸ್ಸು ಕೇಳುತ್ತಾರೆ. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?
ಸೋಫೀಸ್ ಚಾಯ್ಸ್ ಸಿನೆಮಾದಲ್ಲಿ ಜರ್ಮನ್ ಯೋಧನೊಬ್ಬ ಒಬ್ಬ ತಾಯಿಗೆ ಆಕೆಯ ಇಬ್ಬರು ಮಕ್ಕಳ್ಳನ್ನು ತೋರಿಸಿ ಇಬ್ಬರಲ್ಲಿ ಒಂದು ಮಗವನ್ನಷ್ಟೇ ನೀನು ಆಯ್ಕೆ ಮಾಡಿಕೊಳ್ಳಬಹುದು ಇನ್ನೊಂದನ್ನು ಕೊಲ್ಲುತ್ತೇನೆ ಎನ್ನುತ್ತಾನೆ. ಆಯ್ಕೆ ಮಾಡದಿದ್ದರೆ ಇಬ್ಬರನ್ನೂ ಕೊಲ್ಲುತ್ತೇನೆ. ಸೋಫಿ ಮುಗಿಲು ಮುಟ್ಟುವಂತೆ ಅಳುತ್ತಾಳೆ. ಇಬ್ಬರನ್ನೂ ಉಳಿಸಿಕೊಡು ಎಂದು ಬೇಡಿಕೊಳ್ಳುತ್ತಾಳೆ. ನಾವೂ ಹಾಗೆಯೇ ದೇವರೇ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಡಪ್ಪ ಎಂದು ಬೇಡಿಕೊಳ್ಳುತ್ತಾ ಇ-ಮೈಲ್ ಕಳಿಸುತ್ತೇವೆ. ಸೋಫಿಯಂತೆಯೇ ಎರಡನ್ನೂ ಉಳಿಸಿಕೊಳ್ಳಲು ಬೋರಾಡಿ ಅಳುತ್ತೇವೆ.
ನನ್ನ ಅಕ್ಕನ ಮಗಳು ಜ್ಯೋತಿ ಕಾಲೇಜು, ಕೋರ್ಸು ಜಿಜ್ಞಾಸೆಯನ್ನು ಗೆದ್ದು ಬೆಂಗಳೂರಿನ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ತೆಗೆದುಕೊಳ್ಳುತ್ತಾಳೆ. ಸೂರ್ಯ ಮುಳುಗದ ಸಾಮ್ರಾಜ್ಯದ ಒಡೆಯ ಬಿಲ್ ಗೇಟ್ಸ್‌ನ ತೇರನ್ನು ಎಳೆಯಲು ನಿಶ್ಯಬ್ದವಾಗಿ ಮತ್ತೆರಡು ಕೈಗಳು ತಯ್ಯಾರಾಗುತ್ತವೆ. ಜ್ಯೋತಿಯ ಎಳೆಯ ಕೈಗಳಷ್ಟೇ ಸಾಲದು ಇನ್ನು 4 ವರ್ಷಗಳಲ್ಲಿ ಒಂಭೈನೂರು ಸಾವಿರ ಜ್ಯೋತಿಗಳು ಬೇಕು ಈ ಭಾರದ ತೇರನ್ನು ಎಳೆಯಲು ಎಂದು ನಾಸ್‌ಕಾಮ್ ರಿಪೋರ್ಟ್ ಬಿಡುಗಡೆ ಮಾಡುತ್ತದೆ. ಕರ್ನಾಟಕ ಸರಕಾರ ಮತ್ತೆ ಮೂವತ್ತಾರು ಇಂಜಿನಿರಿಂಗ್ ಕಾಲೇಜುಗಳನ್ನು ತೆರೆಯುತ್ತದೆಯಂತೆ. ಡಿಗ್ರಿ ಮುಗಿದವರೇ ಏಕೆ ಬೇಕು ಪಿಯುಸಿ ಮುಗಿಸಿದವರನ್ನು ಮೂರುತಿಂಗಳ ಟ್ರೈನಿಂಗ್‌ಕೊಡಿಸಿ ತೇರು ಎಳೆಯುವ ಕೆಲಸಕ್ಕೆ ಹಾಕಿಕೊಳ್ಳಬಹುದಲ್ಲ ಎಂದು ಪ್ರತಿಷ್ಠಿತ ಕಂಪನಿಯೊಂದು ಯೋಚಿಸುತ್ತಿದೆ ಎನ್ನುವ ಸುದ್ದಿ ಬರೀ ಕುಹಕವಂತೆ.












Click it and Unblock the Notifications