ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಳೆಯುವ ಕೈಗಳೆಷ್ಟಿದ್ದರೂ ಸಾಲದು ಐಟಿ ರಥಕ್ಕೆ

By Staff
|
Google Oneindia Kannada News


ಈಗಿನ ಕಿಶೋರ, ಕಿಶೋರಿಯರಿಗೆ ಐಟಿಯೊಂದೆ ಮುಕ್ತಿಮಾರ್ಗ! ಐಟಿಯೇ ಸರ್ವಸ್ವ! ಐಟಿ ಮರೆತರೆ, ಮೆಚ್ಚನು ಆ ಪರಮಾತ್ಮನು ಎನ್ನುವಂತಹ ಸ್ಥಿತಿಯನ್ನು ತಂದವರು ನಾವು. ಸಂಬಂಧಗಳ ಸೂಕ್ಷ್ಮತೆಯನ್ನು ಮರೆಸಿ, ನಮ್ಮ ಮಕ್ಕಳನ್ನು ನಾವು ಡಾಲರ್ ಎಣಿಸುವ ಮಿಷನ್ ಮಾಡುತ್ತಿದ್ದೇವೆಯೇ? ಈ ಪ್ರಶ್ನೆಗೆ ಉತ್ತರ ಕೊಡಲು ಯಾರಿಗೆ ಧೈರ್ಯವಿದೆ?

Dattatri Ramannaಭದ್ರಾವತಿಯಲ್ಲಿರುವ ನನ್ನ ಅಕ್ಕನಿಗೆ ಫೋನ್ ಮಾಡಿದಾಗ ನನಗೆ ಗಾಬರಿಯಾಗುವಷ್ಟು ಮನೆಮಂದಿಯೆಲ್ಲಾ ಬೇಸರದಲ್ಲಿದ್ದರು. ಅಂದೇ ಪಿಯುಸಿ ಪರೀಕ್ಷೆಗಳ ಫಲಿತಾಂಶ ಬಂದಿತ್ತು ಮತ್ತು ನನ್ನ ಅಕ್ಕನ ಮಗಳು ಜ್ಯೋತಿಯ ಅಂಕಗಳು ಆಕೆಯ ಮತ್ತು ಮನೆಯವರ ನಿರೀಕ್ಷೆಯಂತಿರಲಿಲ್ಲ. ಹೆಚ್ಚಿನ ಅಂಕಗಳನ್ನು ಪಡೆಯಲು ಜ್ಯೋತಿ ವರ್ಷಪೂರ್ತಿ ಎಷ್ಟು ಕಷ್ಟಪಟ್ಟಿದ್ದಳು ಎಂದು ನನಗೆ ಗೊತ್ತಿತ್ತು. ಶೇಖಡ ತೊಂಬತ್ತನ್ನು ಮೀರಿ ಅಂಕಗಳನ್ನು ನಿರೀಕ್ಷಿಸುತ್ತಿದ್ದ ಹುಡುಗಿಗೆ ಎಂಭತೈದು ಪರ್ಸೆಂಟ್ ಬಂದದ್ದೇ ತಡೆಯಲಾರದ ದುಃಖವಾಯಿತು. ನಾನು ಫೋನ್ ಮಾಡಿದಾಗಲೆಲ್ಲಾ ಲವಲವಿಕೆ, ಪ್ರೀತಿ ಮತ್ತು ಹುಡುಗಾಟಿಕೆಯಿಂದ ಮಾತನಾಡುತ್ತಿದ್ದವಳು ಅಂದು ಯಾರಿಗೂ ಸಿಗದೆ ತನ್ನ ರೂಮಿನಲ್ಲಿ ಅಡಗಿಕೊಂಡಿದ್ದಳು. ಆಕೆಯ ಅಂಕಗಳನ್ನು ತಿಳಿಯುವ ಮೊದಲು ನನ್ನ ಅಕ್ಕನ ದುಃಖವನ್ನು ನೋಡಿ ನಾನು ಹುಡುಗಿ ಎಲ್ಲೋ ಒಂದೆರಡು ಸಬ್ಜೆಕ್ಟ್‌ಗಳಲ್ಲಿ ಡುಮುಕಿಹೊಡೆದಿದ್ದಾಳೆ ಅಂತಲೇ ತಿಳಿದಿದ್ದೆ!

ಅವರ ಯೋಚನೆ ಇದ್ದದ್ದು ಒಳ್ಳೆಯ ಇಂಜಿನಿರಿಂಗ್ ಕಾಲೇಜು ಸಿಕ್ಕುವುದಿಲ್ಲ, ಒಳ್ಳೆಯ ಕಾಲೇಜು ಸಿಕ್ಕರೆ ಅದರಲ್ಲಿ ಕಂಪ್ಯೂಟರ್ ಸೈನ್ಸ್ ಸಿಗುವುದಿಲ್ಲ ಎನ್ನುವುದರಲ್ಲಿ. ಯಾವುದೋ ಜುಜುಬಿ ಕಾಲೇಜು ಸಿಕ್ಕಿದರೆ ಅಲ್ಲಿಗೆ ಕ್ಯಾಂಪಸ್ ಇಂಟರ್‌ವ್ಯೂಗೆ ಯಾರೂ ಬರುವುದಿಲ್ಲ. ಕಂಪ್ಯೂಟರ್ ಸೈನ್ಸ್ ಬಿಟ್ಟು ಬೇರೆ ವಿಷಯ ಆರಿಸಿಕೊಂಡರೆ ಕ್ಯಾಂಪಸ್‌ನಲ್ಲಿ ಐಟಿ ಕಂಪನಿಗಳಿಗೆ ಆಯ್ಕೆಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅವರ ಗೊಂದಲ ಇದ್ದದ್ದು ಯಾವುದು ಬಿಡೋಣ ಯಾವುದು ಹಿಡಿಯೋಣ ಎನ್ನುವುದರಲ್ಲಿ.

ನನ್ನಿಂದ ಅವರ ನಿರ್ಧಾರಕ್ಕೆ ಹೆಚ್ಚಿನ ಸಹಾಯ ಸಿಗಲಿಲ್ಲ. ಕರ್ನಾಟಕವನ್ನು ಬಿಟ್ಟು ಬಹಳ ದಿನಗಳಿಂದ ಹೊರಗಿರುವವನಾದ್ದರಿಂದ ಯಾವ ಕಾಲೇಜು ಚೆನ್ನಾಗಿದೆ ಯಾವುದು ಚೆನ್ನಾಗಿಲ್ಲ ಎನ್ನುವ ಟಿಪ್ಪಣಿಗಳಿಗೆ ನಾನು ಬಹಳ ಔಟ್‌ಡೇಟ್ ಆಗಿರುವವನು. ನಾನು ಓದುತ್ತಿದ್ದಾಗ ಇದ್ದ ಕಾಲೇಜುಗಳ ಸಂಖ್ಯೆಗಿಂತ ಇವತ್ತಿರುವ ಕಾಲೇಜುಗಳ ಸಂಖ್ಯೆ ಆರೇಳು ಪಟ್ಟು ಹೆಚ್ಚಾಗಿದೆ. ಇವತ್ತು ಬೆಂಗಳೂರು ನಗರದಲ್ಲೇ ಬಹುಶಃ ಐವತ್ತಕ್ಕೂ ಮಿಗಿಲಾಗಿ ಇಂಜಿನಿರಿಂಗ್ ಕಾಲೇಜುಗಳಿವೆ. ಒಂದು ಪತ್ರಿಕೆಯೊಂದು ಬೆಂಗಳೂರನ್ನು ಹೊಗಳುತ್ತಾ ಹೊಗಳುತ್ತಾ ಪ್ರಪಂಚದ ಯಾವ ನಗರಗಳಲ್ಲೂ ಇರದಷ್ಟು ಇಂಜಿನಿರಿಂಗ್ ಕಾಲೇಜುಗಳು ಬೆಂಗಳೂರಿನಲ್ಲಿದೆ ಎಂದು ಬರೆದಿತ್ತು.

‘ಯಾವ ಸಬ್ಜೆಕ್ಟ್ ಆದರೂ ಓದು ಮಗು, ಡಿಗ್ರಿ ಮುಗಿಸುವುದು ಮುಖ್ಯ’ ಎಂದು ಜ್ಯೋತಿಗೆ ಹೇಳುವವನಿದ್ದೆ ಆದರೆ ನಾಲಿಗೆ ತಡೆಯಿತು. ಎಲವೋ ಸೋದರಮಾವಾ, ಒಣ ವೇದಾಂತಿಯಂತೆ ಜ್ಞಾನವೇ ಸತ್ಯ ಅನ್ಯವೆಲ್ಲಾ ಮಿಥ್ಯಾ ಎಂದು ನನಗೆ ಬುದ್ಧಿವಾದ ಹೇಳುವ ನೀನು ಇಲ್ಲೇ ನಾನು ಬಯಸುತ್ತಿರುವಂತೆಯೇ ಇಂಜಿನಿರಿಂಗ್ ಮಾಡಿ ಇದೇ ಸಾಫ್ಟ್‌ವೇರ್‌, ಐಟಿಗಳ ಹಗ್ಗ ಹಿಡಿದು ಸರ್ಕಸ್‌ಮಾಡಿ ಈಗ ಡಾಲರ್‌ನಲ್ಲಿ ಹಣ ಎಣಿಸುತ್ತಿರುವವನಲ್ಲವೇ!! ಎಂದು ಹುಡುಗಿ ಕೇಳಿಬಿಟ್ಟರೆ ಆಗ ನಾನು ತೀರಾ ದೂರ್ತನಂತೆ, ತೀರಾ ಮೂರ್ಖನಂತೆ, ಮೈಸೂರುಪಾಕನ್ನು ಕಚ್ಚಿಕೊಂಡು ಬಿಲದಲ್ಲಿ ಅಡಗಿಕುಳಿತ ಚೋಟುದ್ದದ ಇಲಿಮರಿಯಂತೆ ಕಾಣುತ್ತೇನೆಂದು ನಾಚಿಕೆಯಾಗಿ ಸುಮ್ಮನಾದೆ.

ಹೀಗೆಯೇ ಇನ್ನೊಂದು ಸಂದರ್ಭದಲ್ಲಿ ನನ್ನ ಹಿರಿಯ ಸ್ನೇಹಿತರೊಬ್ಬರು ಇನ್ನೆಷ್ಟು ದಿನ ಐಟಿಯ ಈ ಹುಚ್ಚುಹೊಳೆ ಹರಿತಿರುತ್ತೆ ಎಂದು ಕೇಳಿದ್ದರು. ಅವರ ಮಗ ಆಗತಾನೆ ಇಂಜಿನಿರಿಂಗ್‌ಗೆ ಸೇರಿದ್ದಾನೆ, ಡಿಗ್ರಿ ಮುಗಿಯಲು ಇನ್ನೂ ನಾಲ್ಕು ವರ್ಷಗಳು ಬೇಕು. ಅಷ್ಟರೊಳಗೆ ಐಟಿ ಕಂಪನಿಗಳು ಬೆಂಗಳೂರಿನಿಂದ ಕಾಲ್ಕಿತ್ತರೆ ಇಷ್ಟು ಖರ್ಚು ಮಾಡಿ ಓದಿಸಿದ್ದರ ಫಲವೇನು? ಅವರ ಪ್ರಕಾರ, ಇದೇ ಸಾಫ್ಟ್‌ವೇರ್‌ವರ್ಲ್ಡ್‌ನಲ್ಲಿ ಇಷ್ಟು ವರ್ಷ ಮಣ್ಣುಹೊತ್ತಿರುವ ನನಗೆ ಅವೆಲ್ಲಾ ತಿಳಿಯಬೇಕು. ಗೊತ್ತಿಲ್ಲ ಎಂದೆ. ಒಂದು ಊಹೆ ಮಾಡಿಹೇಳು ಎಂದರು. ಚೀನಾ ದೇಶ ಬಾಗಿಲುತೆರೆದರೆ ಏನಾಗುತ್ತದೆ, ಆದರೂ ನಾರಾಯಣಮೂರ್ತಿಗಳು ಚೀನಾಕ್ಕಿಂತಾ ಭಾರತ ಸಾಫ್ಟ್‌ವೇರ್‌ ಸರ್ವೀಸಸ್‌ನಲ್ಲಿ ಬಹಳ ಮುಂದಿರುವುದಾಗಿ ಹೇಳಿರುವುದು, ಬೆಂಗಳೂರಿನಲ್ಲಿ ಆಫೀಸ್ ರಿಯಲ್ ಎಸ್ಟೇಟ್ ಬೆಳೆಯುತ್ತಿರುವ ವೇಗಕ್ಕೆ ಅಮೆರಿಕದ ಸಿಲಿಕಾನ್ ವ್ಯಾಲಿ ಕಂಪನಿಗಳೂ ಕೂಡ ಬೆಚ್ಚಿಬಿದ್ದಿರುವುದು, ಬರೀ ಅಮೆರಿಕನ್ ಕಂಪನಿಗಳಲ್ಲದೆ ಯುರೋಪಿಯನ್ ಕಂಪನಿಗಳೂ ಕೂಡ ಬೆಂಗಳೂರಿನಲ್ಲಿ ಆಫ್‌ಶೋರ್ ಸೆಂಟರ್‌ಗಳನ್ನು ತೆರೆದು ಹಣ ಉಳಿಸಲು ಮುಗಿಬಿದ್ದಿರುವುದು, ನಮ್ಮ ಮೀನಾ, ರಮ್ಯ, ಮಮತಾರೆಲ್ಲಾ ಮೇರಿ, ಗ್ಲೋರಿಯಾ, ಮಾರ್ತಾರಾಗಿ ರಾತ್ರಿಯ ಪಾಳಿಯಲ್ಲಿ ಫೋನ್‌ಕಾಲ್‌ಗಳಲ್ಲೇ ಕ್ರೆಡಿಟ್‌ಕಾರ್ಡ್ ಮಾರಿ, ಇನ್ಸುರೆನ್ಸ್ ಮಾಡಿಸಿ ಕಂಪನಿಗಳಿಗೆ ಲಕ್ಷ ಲಕ್ಷ ಉಳಿಸುತ್ತಿರುವುದು ಮುಂತಾದವುಗಳ ಬಗ್ಗೆ ಭಾಷಣಮಾಡಿದೆ. ಅವರು ಅಸಹನೆಯಿಂದ ತಲೆ ಅಲ್ಲಾಡಿಸಿದರು. ಇನ್ನು ಎಷ್ಟು ವರ್ಷ ಇದಿರುತ್ತೆ ಹೇಳು. ಅವರಿಗೆ ನನ್ನ ಟೈಂ ವೇಷ್ಟ್ ಭಾಷಣ ಬೇಕಿರಲಿಲ್ಲ. ನನ್ನಿಂದ ಒಂದು ಅಂಕಿ, ನೊಡಪ್ಪಾ, ಇನ್ನು ಎಂಟು ವರ್ಷ ಈ ಸಾಫ್ಟ್‌ವೇರ್‌ ಇರುತ್ತೆ ಅನ್ನುರೀತಿನಲ್ಲಿ ಒಂದು ವಾಕ್ಯದಲ್ಲಿ ಉತ್ತರ ಬೇಕಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X