ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ ಕವಿತೆ ಎಂಬ ಚೆಲುವೆ, ನೀನೇಕೆ ಛಂದಸ್ಸಿನೊಳಗೆ ಅವಿತೆ?

By Staff
|
Google Oneindia Kannada News


ಈಗಿನ ಕವಿಗಳಿಗೆ ತಾವು ಬರೆದದ್ದೆಲ್ಲ ಕವನ ಎನ್ನುವ ಆತ್ಮವಿಶ್ವಾಸ ಮತ್ತು ನಂಬಿಕೆ! ಅವರಿಗೆ ಛಂದಸ್ಸು, ಅಲಂಕಾರ, ಪ್ರಾಸಗಳ ಪರಿವೇ ಇಲ್ಲ! ಇವೆಲ್ಲದರ ಬಗ್ಗೆ ಭೂಮಿಕಾ ಅಂಗಳದಲ್ಲಿ ಡಾ.ರಾಮಪ್ರಿಯನ್‌ ಪ್ರಸ್ತಾಪಿಸಿದರು. ಕವಿಗಳಾಗಲು ಹೊರಟವರು, ಈಗಾಗಲೇ ಕವಿಗಳೆಂದು ಗುರ್ತಿಸಿಕೊಂಡವರು, ಅವರ ಮಾತುಗಳನ್ನು ಕೇಳಿದರೇ ಒಳ್ಳೆಯದು.

H.K. Ramapriyanಭಾರತೀಯ ಚರಿತ್ರೆಯಲ್ಲಿ ನಾವು ಬಹಳ ವಿಶ್ಲೇಷಣಾತ್ಮಕ ಸ್ವಭಾವವನ್ನು, ಅಂದರೆ ಯಾವ ವಿಷಯವನ್ನೇ ಆಗಲಿ, ಅದರ ಬಗ್ಗೆ ಏನನ್ನೂ ಬಿಡದೆ, ಅದರ ಬಗ್ಗೆ ಸಂಜ್ಞೆ, ಸೂತ್ರಗಳೊಂದಿಗೆ ಬರೆದಿಡುವ ಕ್ರಮವನ್ನು ನೋಡುತ್ತೇವೆ. ಪಾಣಿನಿಯ ‘ಅಷ್ಟಾಧ್ಯಾಯಿ’ಯೆಂಬ ಸಂಸ್ಕೃತ ವ್ಯಾಕರಣ, ಕರ್ನಾಟಕ ಸಂಗೀತದಲ್ಲಿ ರಾಗಗಳನ್ನು ಹೆಸರಿಸಿ ವಿಂಗಡಿಸಿರುವ ಬಗೆ, ಕರ್ನಾಟಕ ಸಂಗೀತದ ತಾಳಗಳು ಇತ್ಯಾದಿ. ಹಾಗೆಯೇ ಪದ್ಯಗಳ ಲಕ್ಷಣಗಳನ್ನು ವಿಶ್ಲೇಷಿಸಿ ವಿವರಿಸಿರುವ ‘ಛಂದಶ್ಶಾಸ್ತ್ರ’ ಬಹಳ ವಿವರವಾಗಿರುವುದನ್ನು ಕಾಣಬಹುದು.

ಏಪ್ರಿಲ್‌ 15ರಂದು ಮೇರಿಲ್ಯಾಂಡಿನ ಭೂಮಿಕಾದ ವೇದಿಕೆಯಲ್ಲಿ ‘ಕವಿತೆ ಮತ್ತು ಛಂದಸ್ಸು’ ಎಂಬ ವಿಷಯವಾಗಿ ಮಾತನಾಡಿದವರು ಡಾ।।ರಾಮಪ್ರಿಯನ್‌. ವೃತ್ತಿಯಿಂದ ನಾಸಾ(ಮೇರಿಲ್ಯಾಂಡ್‌)ದಲ್ಲಿ ಎಲೆಕ್ಟ್ರಿಕಲ್‌ ಇಂಜಿನಿಯರ್‌ ಆದ ರಾಮಪ್ರಿಯನ್‌ ಬಾಲ್ಯದಿಂದಲೂ ಸಂಸ್ಕೃತ ಹಾಗೂ ಕನ್ನಡವನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರ ಅನೇಕ ಹಾಸ್ಯಭರಿತ, ವಿಚಾರಪೂರಿತ ಪದ್ಯಗಳು ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿವೆ.

ತಮ್ಮ ಪದ್ಯಗಳಲ್ಲಿ ಅನೇಕ ಛಂದಸ್ಸುಗಳ ಪ್ರಯೋಗವನ್ನು ರಾಮಪ್ರಿಯನ್‌ ಮಾಡಿದ್ದಾರೆ. ಭರ್ತೃಹರಿಯ ನೀತಿಶತಕದ ಪ್ರತೀ ಪದ್ಯಗಳನ್ನು ಅದೇ ಛಂದಸ್ಸನ್ನು ಉಪಯೋಗಿಸಿ ಕನ್ನಡಕ್ಕೆ ಅನುವಾದಿಸಿದ್ದಾರೆ. (ಕಳೆದ ವರ್ಷ ಮಾ.12ರಂದು ಇದೇ ವೇದಿಕೆಯ ಮೇಲೆ ತಮ್ಮ ಅನುವಾದದ ಬಗ್ಗೆ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು).

ವೇದಗಳ ಕಾಲದಲ್ಲೂ ಸಹಾ ಛಂದಸ್ಸಿನ ಪ್ರಯೋಗವಿತ್ತು. ಪಿಂಗಲ ಋಷಿ ಬರೆದ ಸಂಸ್ಕೃತದ ಛಂದಶಾಸ್ತ್ರವನ್ನೇ ಇತ್ತೀಚಿನ ವಿದ್ವಾಂಸರು ಸಹಾ ಹೆಚ್ಚಿಗೆ ಉಪಯೋಗಿಸಿರುವುದನ್ನು ಕಾಣಬಹುದು ಎನ್ನುತ್ತಾ ಛಂದಶಾಸ್ತ್ರದ ಕಿರುಪರಿಚಯ ಮಾಡಿಕೊಟ್ಟರು ರಾಮಪ್ರಿಯನ್‌.

ಮಾತ್ರಾಕಾಲ, ಲಘು, ಗುರು, ಅಕ್ಷರಗಣ, ಅಂಶಗಣ ಮುಂತಾದ ಪಾರಿಭಾಷಕ ಪದಗಳನ್ನು ಅರ್ಥವನ್ನು ಮೊದಲು ಪರಿಚಯಿಸಿ, ನಂತರ ವಿವಿಧ ಪ್ರಕಾರದ ಛಂದಸ್ಸುಗಳನ್ನು, ಅವುಗಳ ನಿಯಮಗಳನ್ನು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು.

ರಾಮಾಯಣದ ಶೇಕಡಾ 90ಕ್ಕೂ ಹೆಚ್ಚು ಪದ್ಯಗಳು 8 ಅಕ್ಷರಗಳ ಅನುಷ್ಟಪ್‌ ಎಂಬ ಸಂಸ್ಕೃತದ ಛಂದಸ್ಸಿನಲ್ಲಿವೆ. ಉದಾಹರಣೆಗೆ ಮೊದಲ ಪದ್ಯ :

ತಪಸ್ಸ್ವಾಧ್ಯಾಯನಿರತಂ
ತಪಸ್ವೀ ವಾಗ್ವಿದಾಂ ವರಂ ।
ನಾರದಂ ಪರಿಪಪ್ರಚ್ಛ
ವಾಲ್ಮೀಕಿರ್ಮುನಿಪುಂಗವಂ ।।

ಅನುಷ್ಟಪ್‌ ಛಂದಸ್ಸಿನ ಪದ್ಯಗಳು ಚಿಕ್ಕದಾಗಿರುವುದರಿಂದ ನಾಲ್ಕು ಪಾದ (ಸಾಲು)ಗಳಿದ್ದರೂ, ಎರಡೇ ಸಾಲಿನಲ್ಲಿ ಬರೆಯುವ ಪದ್ಧತಿಯಿದೆ. ‘ಅನುಷ್ಟಪ್‌ ವಿಲಾಸ’ ಎಂಬ ಕವನವನ್ನು ಪು.ತಿ.ನರಸಿಂಹಾಚಾರ್‌ ಇದೇ ಛಂದಸ್ಸನ್ನು ಕನ್ನಡದಲ್ಲಿ ಪ್ರಯೋಗಿಸಿ ರಚಿಸಿದ್ದಾರೆ. ಅವರ ಒಂದು ಪದ್ಯ :

ಇನ್ತಿರಲ್‌ ನಿರ್ವೃತಂ ದ್ವಾರಂ ಥಟ್ಟನಾದುದನಾವೃತಂ
ಕಣ್ಣಂ ಕೊರೈಸಿ ಮಿನ್ಚೊನ್ದು ಕತ್ತಲಂ ತನ್ದುದೆನ್ನೊಳು

ಹಳೆಗನ್ನಡದ ಕಾವ್ಯಗಳಲ್ಲಿ ಹೆಚ್ಚಾಗಿ ಸಂಸ್ಕೃತದ ಛಂದಸ್ಸುಗಳನ್ನು ಬಳಸಿದ್ದಾರೆ. ಛಂದಸ್ಸುಗಳ ಈ ಕ್ಲಿಷ್ಟ ನಿಯಮಗಳನ್ನು ತಿಳಿದೊಡನೆ ನವೋದಯ, ನವ್ಯ, ನವ್ಯೋತ್ತರಗಳ ಮುಕ್ತ ಅಭಿವ್ಯಕ್ತಿಯನ್ನು ಕಂಡ ನಮಗೆ ‘ಭಾವ ಮುಖ್ಯವೋ, ನಿಯಮಗಳು ಕಟ್ಟುಪಾಡು ಮುಖ್ಯವೋ’’ ಎಂಬ ಪ್ರಶ್ನೆ ಮೂಡುವುದು ಸಹಜ. ಹಾಗೆ ಸಭಿಕರಲ್ಲೂ ಕೆಲವರು ಆ ಪ್ರಶ್ನೆ ಎತ್ತಿದಾಗ ಅದಕ್ಕುತ್ತರವಾಗಿ ರಾಮಪ್ರಿಯನ್‌ ಹಿಂದೊಮ್ಮೆ ದಟ್ಸ್‌ಕನ್ನಡ.ಕಾಂನಲ್ಲಿ ಪ್ರಕಟವಾಗಿದ್ದ ತಮ್ಮದೇ ‘ಭಾವ’ ಕವನದ ಎರಡು ಪದ್ಯಗಳನ್ನು ಓದಿದರು. ಈ ಪದ್ಯದಲ್ಲಿ 15 ಅಕ್ಷರಗಳ ‘ಮಾಲಿನೀ’ ವೃತ್ತವನ್ನು ಅನುಸರಿಸಿದ್ದಾರೆ.

ಹೃದಯದಿ ಮಿಡಿವಂಥಾ ಭಾವವಂ ಬಿಟ್ಟು ಬಿಟ್ಟು
ಪದಗಳ ತಲೆಯಲ್ಲೇ ಪ್ರಾಸ ಬರ್ಪಂತೆ ಕಟ್ಟಿ ।
ಬರೆಯೆ ನಿಯಮವಂ ನಾನ್‌ ಮೀರದಾ ಪದ್ಯವೊಂದಂ
ಬರಡು ಮರವದೆಂಬರ್‌ ಕಾವ್ಯಬಲ್ಲಂಥವರ್ಗಳ್‌ ।।

ಹೃದಯದಿ ಮಿಡಿವಂಥಾ ಭಾವ ಹೊಮ್ಮಿರ್ಪ ಪದ್ಯಂ
ನಯನಗಳೊಳು ನೀರಂ ತುಂಬಿ ಚೆಲ್ವಂತೆ ಮಾಡಿ ।
ಕೊರಳದನಿಯ ಕೇಳಲ್ಕಾಗದಂತಾಗಿಸುತ್ತ
ನವಿರ ತರುವುದಯ್ಯಾ ಭಾವುಕರ್‌ ಮೈಗಳಲ್ಲಿ ।।

ಕನ್ನಡಲ್ಲಿ ಹೆಚ್ಚಾಗಿ ಬಳಸಿರುವ ಛಂದಸ್ಸು ರಗಳೆ. ಇದರಲ್ಲಿ ಒಂದೊಂದು ಸಾಲಿನಲ್ಲೂ ಸಾಮಾನ್ಯವಾಗಿ 4 ಮಾತ್ರಾಗಣಗಳಿರುತ್ತವೆ. ಉತ್ಸಾಹರಗಳೆ, ಮಂದಾನಿಲರಗಳೆ, ಲಲಿತರಗಳೆ ಮುಂತಾದ ಉಪಪ್ರಕಾರಗಳಿವೆ. ಜಿ. ಪಿ. ರಾಜರತ್ನಂ ಅವರ ‘ಬ್ರಹ್ಮಾ ನಿಂಗೇ ಜೋಡಿಸ್ತೀನೀ ಎಂಡಾ ಮುಟ್ಟಿದ್‌ ಕೈನಾ’ ಎನ್ನುವ ಕವನ ಮಂದಾನಿಲ-ರಗಳೆಯಲ್ಲಿದೆ ಎನ್ನಬಹುದು. ‘‘ಕಂದ’’ ಎನ್ನುವ ಛಂದಸ್ಸು ಸಹಾ ಕನ್ನಡದಲ್ಲಿದೆ. ಇನ್ನು ಜಾನಪದ ಗೀತೆಗಳಲ್ಲಿ ಹೆಚ್ಚಾಗಿ ತ್ರಿಪದಿ ಎಂಬ ಅಂಶವೃತ್ತ ಬಹಳವಾಗಿ ಉಪಯೋಗಿಸ್ಪಟ್ಟಿದೆ.

ಇನ್ನೂ ಅನೇಕ ಉದಾಹರಣೆಗಳನ್ನು ಕೊಟ್ಟ ರಾಮಪ್ರಿಯನ್‌ ಛಂದಸ್ಸುಗಳ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿಯುಳ್ಳವರಿಗೆ, ಅ.ರಾ.ಮಿತ್ರರವರ ‘ಛಂದೋಮಿತ್ರ’ದಿಂದ ಪ್ರಾರಂಭಿಸಿ ಎಂಬ ಸಲಹೆ ಕೊಟ್ಟರು. ಬೆಂಗಳೂರಿನ ಜೀವನದ ಬಗ್ಗೆ 19 ಅಕ್ಷರಗಳ ಅತಿಧೃತಿ ವೃತ್ತಗಳಲ್ಲೊಂದಾದ ‘ಶಾರ್ದೂಲವಿಕ್ರೀಡಿತಂ’ ಎಂಬ ನಿಯಮವನ್ನನುಸರಿಸಿ ಬರೆದ ಅವರ ಒಂದು ಪದ್ಯ ಹೀಗಿದೆ :

ನನಗೇಕಿಲ್ಲಿಗೆ ಬೆಂಗಳೂರು-ನಗರಕ್ಕ್‌-ಆಯ್ತಪ್ಪ ವರ್ಗಾಂತರಂ
ಮನೆಯೇ ಸಿಕ್ಕುವುದಿಲ್ಲಿ ಕಷ್ಟ ಮನೆಗಡ್ವಾನ್ಸೇನು ಸಾಮಾನ್ಯವೇ
ಕೊನೆಗಾ ನರ್ಸರಿ ಶಾಲೆಗೂನು ತೆರಬೇಕಲ್ಲಪ್ಪ ಭಾರೀ ಹಣಂ
ಅನುಮಾನಕ್ಕೆಡೆಯಿಲ್ಲದಂಥ ಬದುಕೇ ದುಸ್ತಾರಮೀ ಊರಿನೊಳ್‌

ಸಂಸ್ಕೃತಜನ್ಯ ಛಂದಸ್ಸಿನ ಕ್ಲಿಷ್ಟವಾದ ಸೂತ್ರಗಳನ್ನು ಕನ್ನಡದಲ್ಲಿ ಸಮಕಾಲೀನ ಸಂಗತಿಗಳನ್ನು ಉಪಯೋಗಿಸಿ ಹಾಸ್ಯಭರಿತವಾಗಿ ಬರೆದಿರುವ ಪುಸ್ತಕ ‘ಛಂದೋಮಿತ್ರ’ ಕಲಿಯುವವರಿಗೆ ಉಪಯುಕ್ತವೆನಿಸುತ್ತದೆ. ಒಟ್ಟಿನಲ್ಲಿ, ಪ್ರತಿಭಾವಂತ ಸೃಜನಶೀಲ ಸಾಹಿತ್ಯ ಛಂದಸ್ಸು, ಪ್ರಾಸ ಮುಂತಾದ ನಿಯಮಗಳನ್ನು ಒಳಗೊಂಡಿದ್ದರೆ ಹೆಚ್ಚು ಸುಂದರವಾಗಿರುತ್ತದೆ ಎನ್ನಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X