• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದ ಹೆಣ್ಣಿನ ಅಳಲಿನಲ್ಲಿ ಕಾಮಣ್ಣರು ನೆನಪಾದರು!

By Staff
|
  • ವಾಣಿ ರಾಮದಾಸ್‌, ಸಿಂಗಪೂರ್‌

sosale@singnet.com.sg

Vani Ramdasನವೆಂಬರ್‌ 10ರ 2003 ರಿಂದ ಇಂದಿನವರೆಗೆ ಸಿಂಗಾಪುರದ ಸ್ಟ್ರೈಟ್ಸ್‌ ಟೈಮ್ಸ್‌ ನಲ್ಲಿ ಬಿಸಿ ಬಿಸಿ ಸುದ್ದಿ. ಎಲ್ಲರ ಹಾಗೆ ನಾನು ಕೂಡ ಎಂದೂ ಕಾಯದ ದಿನಪತ್ರಿಕೆಗಾಗಿ ತವಕದಿಂದ ಕಾಯುತ್ತಿದ್ದೆ. ಇದು ಏಕೆ ಎಂದು ಗೊತ್ತೇ? ಶಂಕರ್‌ ಎಂಬಾತನ ಕೇಸಿನಲ್ಲಿ ನೀಡುವ ನ್ಯಾಯಾಲಯದ ತೀರ್ಪಿನ ಬಗ್ಗೆ.

37 ವರುಷದ ವಿದ್ಯಾ ಶಂಕರ್‌ ಅಯ್ಯರ್‌ ಚಾನೆಲ್‌ ನ್ಯೂಸ್‌ ಏಷ್ಯಾದ ಟಿ.ವಿ. ಪ್ರೆಸೆಂಟರ್‌. ದೆಹಲಿಯಲ್ಲಿ ಉನ್ನತ ಶಿಕ್ಷಣ ಪಡೆದು ಇಲ್ಲಿನ ಚಾನೆಲ್‌ನ್ಯೂಸ್‌ ಏಷ್ಯಾದಲ್ಲಿ ಕೆಲಸದಲ್ಲಿದ್ದರು. ಎಲ್‌.ಕೆ. ಅಡ್ವಾಣಿ, ಜನರಲ್‌ ಮುಷರಫ್‌ ಅಲ್ಲದೇ ಇನ್ನೂ ಹಲವಾರು ಕ್ಷೇತ್ರಗಳಲ್ಲಿನ ದಿಗ್ಗಜಗಳನ್ನು ಜನರಿಗೆ ಪರಿಚಯಿಸುತ್ತಿದ್ದರು. ಇವರ ಮಾತಿನ ವೈಖರಿಗೆ, ಕೇಳುವ ಪ್ರಶ್ನೆಗಳಿಗೆ, ಪರಿಚಯಿಸುವ ಮೋಡಿಗೆ ತಲೆದೂಗಿ ಶಹಭಾಷ್‌ ಎಂದು ಹೆಮ್ಮೆಯಿಂದ ತಲೆದೂಗಿದವಳಲ್ಲಿ ನಾನು ಕೂಡ ಒಬ್ಬಳು.

ನವೆಂಬರ್‌ 2002 ರಂದು ಸಂಜೆ ತನ್ನ ಸಹೋದ್ಯೋಗಿಯಾಬ್ಬರ ಮನೆಯಲ್ಲಿ ಪಾರ್ಟಿಗೆ ಈತನನ್ನೂ ಆಹ್ವಾನಿಸಿದ್ದರು. ಅಲ್ಲಿ ಮೂವತ್ತು ವರುಷದ ಸಹೋದ್ಯೋಗಿಯ ಸ್ನೇಹಿತೆಯಾಬ್ಬಳ ಪರಿಚಯವಾಯಿತು. ಮಾತಿನ ನಡುವೆ ಪಾನ ಸಮಾರಾಧನೆಯೂ ನಡೆಯಿತು. ಪಾಶ್ಚಾತ್ಯರಲ್ಲಿ ಹೆಂಗಸರೂ ಮದ್ಯಪಾನ ಮಾಡುವುದು ವಾಡಿಕೆ. ಈಕೆ ಸ್ವಲ್ಪ ಹೆಚ್ಚು ಕುಡಿದಳು. ಪಾರ್ಟಿ ಮುಗಿದು ಸ್ನೇಹಿತೆಯರಿಗೆ ಟಾಟಾ ಹೇಳಿ ಮನೆಗೆ ಹೊರಟಳು. ಮತ್ತೇರಿದ್ದ ಹೆಂಗಸನ್ನು ಅವಳ ಮನೆಗೆ ಬಿಡಲಾಗುವುದೇ ಎಂದು ಕೇಳಿದ ಸ್ನೇಹಿತೆಯ ಕೋರಿಕೆಗೆ ಸಮ್ಮತಿಯನಿತ್ತರು ಶಂಕರ್‌.

ಟ್ಯಾಕ್ಸಿಯಲ್ಲಿ ಕುಳಿತ ಮೇಲೆ ಅವಳು ಮನೆಯ ವಿಳಾಸ ಹೇಳಿದಾಗ ಅದು ಬೇಡವೆಂದು ಡ್ರೈವರನಿಗೆ ತನ್ನ ಮನೆಯ ವಿಳಾಸ ಹೇಳಿ ಮನೆಗೆ ಕರೆದೊಯ್ದರು. ಮತ್ತಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಆಕೆ ವಾಂತಿ ಮಾಡಿಕೊಂಡಾಗ ಅವಳ ಬಟ್ಟೆಗಳನ್ನು ಬಿಚ್ಚಿ ಅವಳೊಂದಿಗೆ ಅಸಭ್ಯತೆಯಿಂದ ವರ್ತಿಸಿದರು. ಮತ್ತಿನಲ್ಲಿದ್ದ ಆಕೆ ನಿದ್ರಾ ವಶಳಾದಳು. ಎಚ್ಚರವಾದಾಗ ಆಕೆ ತನ್ನನ್ನು ನಗ್ನ ಸ್ಥಿತಿಯಲ್ಲಿ ಕಂಡಳಲ್ಲದೆ, ಶಂಕರ್‌ ಕೂಡ ನಗ್ನತೆಯಲ್ಲಿ ಮಲಗಿರುವುದು ಕಂಡು ಹೌಹಾರಿದಳು. ತಕ್ಷಣ ಬಟ್ಟೆ ಹಾಕಿಕೊಂಡು ಮನೆಗೆ ಹೊರಡಲು ತಯಾರಾದಳು. ಇಷ್ಟರಲ್ಲೇ ಎಚ್ಚರವಾದ ಶಂಕರ್‌ ಮತ್ತೆ ಅವಳೊಂದಿಗೆ ಅಸಭ್ಯತೆಯಿಂದ ವರ್ತಿಸಿದರು. ಮನೆಗೆ ಹೋಗಿ ಹೆತ್ತವರಿಗೆ ಆದದ್ದನ್ನು ತಿಳಿಸಿ ಪೋಲೀಸರಿಗೆ ದೂರು ಕೊಟ್ಟಳು. ಪೋಲೀಸರ ದೂರು ಮತ್ತು ನ್ಯಾಯಲಯದ ಕಟಕಟೆ ಹತ್ತಿದ ಶಂಕರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ನ್ಯಾಯಾಲಯದಲ್ಲಿ ನಡೆದ ವಾದ ವಿವಾದ, ಟ್ಯಾಕ್ಸಿ ಡ್ರೈವರ್‌, ಗೆಳತಿಯರು, ವಾಚ್‌ ಮನ್‌ ಇವರುಗಳು ಕೊಟ್ಟ ಪುರಾವೆಗಳ ನಂತರ ನ್ಯಾಯಾಧೀಶರು ಕೊಟ್ಟ ತೀರ್ಪು ಶಂಕರ್‌ ಮಾಡಿದ್ದು ನಂಬಿಕೆ ದ್ರೋಹ ಮತ್ತು ಅಸಹಾಯ ಪರಿಸ್ಥಿತಿಯಲ್ಲಿದ್ದ ಹೆಣ್ಣಿನೊಂದಿಗೆ ಅಸಭ್ಯ ನಡವಳಿಕೆ. ಇದಕ್ಕಾಗಿ ಹದಿನಾರು ತಿಂಗಳು ಜೈಲುವಾಸ ಮತ್ತು ನಾಲ್ಕು ಬೆತ್ತದ ಛಡಿ ಏಟು. (ಇಲ್ಲಿನ ಛಡಿ ಏಟು ಸಾಮನ್ಯದ್ದಲ್ಲ. ಕೈಯ ಮಾಂಸ ಹೊರಬರುವಂತೆ ಮೂಡುತ್ತದೆ ಎಂದು ಕೇಳಿದ್ದೇನೆ.)

ಇಲ್ಲಿ ಹೇಳಲು ಬಯಸಿದ್ದು ಒಂದು ಸುಶಿಕ್ಷಿತನೆಂದು ನಂಬಿದವನ ನಡವಳಿಕೆ, ನೀಡಿದ ಶಿಕ್ಷೆ, ದೊರಕಿದ ನ್ಯಾಯ ಅಲ್ಲದೆ ನ್ಯಾಯದ ಬಾಗಿಲನ್ನು ತಟ್ಟಿ ಕೋರ್ಟಿನ ಕಟ ಕಟೆಯಲ್ಲಿ ನಿಂತ ಹೆಣ್ಣಿನ ಧೈರ್ಯ. ಆಕೆ ಅನುಭವಿಸಿದ ಮಾನಸಿಕ ಯಾತನೆ, ಅವಮಾನಗಳನ್ನು ಪರಿಗಣಿಸಿ ಅವಳಿಗೆ ಹೆತ್ತವರು, ಸಹೋದ್ಯೋಗಿಗಳು, ಸಮಾಜ ನೀಡಿದ ಸಹಾಯ ಹಸ್ತ. ಅದೇ ಅಲ್ಲದೆ ಸಮುದಾಯ ಆಕೆಗೆ ಒತ್ತಾಸೆಯಾಗಿ ನಿಂತದ್ದು.

ತೀರ್ಪು ಓದಿ ಮನದಲ್ಲಿ ಮೂಡಿದ್ದು ಆ ಹೆಣ್ಣು ಮಾಡಿದ್ದು ಸರಿಯೇ? ಹೆಚ್ಚಿಗೆ ಕುಡಿದದ್ದು ಸರಿಯೇ? ಈ ಊರಿನಲ್ಲಿ ರಾತ್ರಿಯ ವೇಳೆಯಲ್ಲಿ ಕೂಡ ಹೆಂಗಸರು ಸುರಕ್ಷಿತವಾಗಿ ಓಡಾಡಬಹುದು, ಹಾಗಿರುವಾಗ ಸ್ನೇಹಿತೆಯ ಮನೆಯಲ್ಲೇ ಮಲಗದೆ ಪರ ಪುರುಷನ ಜೊತೆಗೆ ಮನೆಗೆ ಅವೇಳೆಯಲ್ಲಿ ಹೊರಟಿದ್ದು ಸರಿಯೇ?. ನ್ಯಾಯಾಧೀಶರು ಈ ವಿಷಯದ ಬಗ್ಗೆ ಏಕೆ ಏನೂ ಹೇಳಲಿಲ್ಲ ಎಂದು ಯೋಚಿಸಿದೆ.

ಅಸಹಾಯಕ ಪರಿಸ್ಥಿತಿಯಲ್ಲಿದ್ದ ಒಬ್ಬ ಹೆಣ್ಣನ್ನು ಭೋಗ ವಸ್ತು ಎಂದು ತಿಳಿದು ಕ್ಷಣಿಕ ಸುಖಕ್ಕಾಗಿ ಕೆಲಸ, ಮಾನಗಳನ್ನು ಕಳೆದುಕೊಂಡು ಶಿಕ್ಷೆ ಅನುಭವಿಸುವ ಒಬ್ಬ ಪುರುಷ.....

ಇಂತಹುದೇ ಸಂಭವಗಳು ನಮ್ಮಲ್ಲಿ ನಡೆದಿದ್ದರೆ ಎನ್ನುವ ಪ್ರಶ್ನೆ ಕಾಡಿತು. ಸಹಾಯ ಪಡೆಯಲು ಹೋಗುವ ಹೆಂಗಸರಿಗೆ ಸುರಕ್ಷತೆ ಇದೆಯೇ? ಆಸಿಡ್‌ ಪ್ರಕರಣ... ಒಬ್ಬಳೇ ಹೆಣ್ಣು, ಎಂದು ಅವಳ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಕಣ್ಣೆದುರೇ ಇಲ್ಲವೇ?. ಆದರೆ ನಮ್ಮಲ್ಲಿ ಹೆಂಗಸರಲ್ಲಿ ಮದ್ಯಪಾನ ಬಹಳ ಕಮ್ಮಿ.

ಕಚೇರಿಗಳಲ್ಲಿ, ಬಸ್ಸಿನಲ್ಲಿ , ಹೆಚ್ಚು ಜನ ಸೇರುವೆಡೆ, ನಿರ್ಜನ ಪ್ರದೇಶಗಳಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಅಸಭ್ಯತೆಯಿಂದ ವರ್ತಿಸಿರಬಹುದು. ಎಷ್ಟು ಜನ ಹೆಣ್ಣು ಮಕ್ಕಳು ಕಾಮುಕ ಗಂಡಸಿನ ಅಸಭ್ಯ ನಡವಳಿಕೆಗಳಿಗೆ ತುತ್ತಾಗಿರಬಹುದು. ಇದರ ಬಗ್ಗೆ ಯಾರಾದರು ಚಕಾರವೆತ್ತಿದರೆ ಸಹಕರಿಸುವವರು ಯಾರೂ ಇರುವುದಿಲ್ಲ. ದೂರಿತ್ತರೆ ಹೆಣ್ಣಿಗೆ ನ್ಯಾಯ ಸಿಗುತ್ತದೆಯೇ? ಹೆಣ್ಣು ದೂರು ಕೊಡಲು ಅಕಸ್ಮಾತ್‌ ಮುಂದೆ ಬಂದಲ್ಲಿ ಸಮಾಜ, ಮನೆಯವರು, ಬಂಧುಗಳು ಅವರನ್ನು ಪೋಲೀಸರಿಗೆ ದೂರು ಕೊಡಲು ಬಿಡುವರೇ ಅಥವಾ ಪೋಲೀಸರೇ ಆಕೆಯ ಮಾತನ್ನು ನಂಬುವರೇ? ನಮ್ಮಲ್ಲಿ ಯಾಕೆ ಹೆಣ್ಣು ಮಕ್ಕಳು ಹೀಗೆ ಮುಂದು ಬರುವುದಿಲ್ಲ ಎಂದು ಯೋಚಿಸಿದಲ್ಲಿ ಅವರಿಗೆ ಸಮಾಜದ ಭಯ. ಅಕಸ್ಮಾತ್‌ ಮುಂದೆ ಬಂದಲ್ಲಿ ನ್ಯಾಯ ಸಿಗುವ ಭರವಸೆಯಿಲ್ಲ. ಯಾವ ಗಂಡು ಕೂಡ ಮುಂದೆ ಬಂದು ಅವಳನ್ನು ಮದುವೆ ಆಗುವುದಿಲ್ಲ. ಇದೇ ಅಲ್ಲದೆ ದೂರು ಕೊಡಲು ಹೋಗುವ ಹೆಣ್ಣಿನ, ಮನೆಯವರ ಮೇಲೆ ಬೆದರಿಕೆ ಅಥವಾ ದಬ್ಬಾಳಿಕೆಗಳು. ಜನತೆ ಅವಳನ್ನು ನೋಡುವ ನೋಟ, ಈ ಕಾರಣಗಳೇ ಇರಬಹುದೇನೋ ಯಾರೂ ಅಸಭ್ಯ ವರ್ತನೆಗೆ ಬೇಸತ್ತರೂ ಮುಂದೆ ಬಂದು ದೂರುವುದಿಲ್ಲ.

ನಮ್ಮಲ್ಲಿರುವ ಜನಸಂಖ್ಯೆಗೆ ಕೋರ್ಟು ಕಚೇರಿ ಎಂದು ಅಲೆದರೆ ಜೀವನವಿಡೀ ನ್ಯಾಯಕ್ಕಾಗಿ ಕಾಯ ಬೇಕಾಗುತ್ತದೆ. ಲಂಚತನ, ಸುಳ್ಳು ಪುರಾವೆ, ಅನ್ಯಾಯ ಇವುಗಳನ್ನು ನೋಡಿ ನ್ಯಾಯ ದೇವತೆ ಕಣ್ಣು ಮುಚ್ಚಿ ಕುಳಿತಿದ್ದಾಳೆ. ಅಸಭ್ಯವಾಗಿ ನಡೆದುಕೊಳ್ಳುವ ಗಂಡು ಅಥವಾ ಹೆಣ್ಣು, ಯಾರೇ ಆಗಿರಲಿ- ಅವರಿಗೆ ಸಂಬಳದಲ್ಲಿ ಕಡಿತ, ಕೆಲಸದ ವಜಾ, ಸಮುದಾಯದಿಂದ ಬಹಿಷ್ಕಾರ ಈ ತರಹದ ಶಿಕ್ಷೆಗಳು ಕೊಟ್ಟಲ್ಲಿ ಕಾಮುಕರ ನಡವಳಿಕೆಗಳಿಗೆ ಎಲ್ಲಿಯಾದರೂ ಕಡಿವಾಣ ಬೀಳಬಹುದು ಎಂದು ಅನ್ನಿಸುತ್ತದೆ. ಹಾಗಾಗಲಿ.

ವಾರ್ತಾ ಸಂಚಯ

ಪ್ರೆೃಮರಿ ಶಾಲಾ ಶಿಕ್ಷಕಿ ತಾರಾ ದೊಡ್ಡಮನಿ ಮುಖಕ್ಕೆ ಆ್ಯಸಿಡ್‌!

ಮುಂಬಯಿ: ಆಫ್ರಿಕಾ ನ್ಯಾಯಾಧೀಶರಿಂದ ಯುವತಿಯ ಮಾನಭಂಗ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X