• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರಳ ಸಮಸ್ಯೆಯನ್ನು ಜಟಿಲವಾಗಿ ಕಂಡಾಗ

By Staff
|
  • ಆಹಿತಾನಲ, ಆರ್ಕೇಡಿಯ, ಕ್ಯಾಲಿಫೋರ್ನಿಯ

nagaaithal@yahoo.com

Naga Aithal, Californiaರಾಮಾಯಣದ ಜಾನಪದ ಕಥೆಯಾಂದರಲ್ಲಿ, ಬಾಲಕ ಶ್ರೀರಾಮ ಆಕಾಶದಲ್ಲಿದ್ದ ಚಂದ್ರನಿಗಾಗಿ ಅತ್ತು ಕರೆದ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದುದೆ! ಅರಮನೆಯ ಎಲ್ಲ ವೈಭೋಗ ಮತ್ತು ಅನುಕೂಲತೆಗಳೂ, ಚಂದ್ರನನ್ನು ಶ್ರೀರಾಮನಿಗೆ ತಂದುಕೊಡಲು ಸಾಧ್ಯವಾಗಿರಲಿಲ್ಲ. ಆದರೆ, ಆ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿದವಳೇ ಕುಬ್ಜೆ ದಾಸಿ, ಮಂಥರೆ! ಅವಳು ಒಂದು ಜಟಿಲವಾದ ಸಮಸ್ಯೆಗೆ ತುಂಬ ಸರಳವಾದ ಪರಿಹಾರವನ್ನು ಒದಗಿಸಿದ್ದಳು.

ಇಲ್ಲಿ ಈ ಕಥೆಯನ್ನು ಪ್ರಸ್ತಾಪಿಸಿದುದರ ಉದ್ದೇಶ ಅಂಥದೇ ಇನ್ನೊಂದು ಸಮಕಾಲೀನ ಸಮಸ್ಯೆಯಾಂದು ಪರಿಹಾರವಾದ ಬಗೆ ವಿವರಿಸುವುದಕ್ಕೆ. ಇಲ್ಲಿ ಸ್ವಲ್ಪ ಉತ್ಪ್ರೇಕ್ಷೆ ಮಾಡಿರುವೆನೆಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೂ, ಮೂಲ ಸಮಸ್ಯೆ ಎಷ್ಟೊಂದು ಸರಳವಾಗಿತ್ತು , ಅದನ್ನು ಎಲ್ಲರೂ ಎಷ್ಟೊಂದು ಜಟಿಲವಾಗಿ ಕಂಡರು ಎಂಬುದನ್ನು ಈ ಕೆಳಗಿನ ಸಂಗತಿಯಿಂದ ತಿಳಿದುಕೊಳ್ಳಬಹುದು.

ಈ ಸಂಗತಿ ನಡೆದುದು ಹ್ಯೂಸ್ಟನ್‌ನಲ್ಲಿದ್ದ ನನ್ನ ಒಬ್ಬ ಸಂಬಂಧಿಗಳ ಮನೆಯಲ್ಲಿ. ಜೆನಿಫರ್‌ ಮತ್ತು ಸುಧೀರ್‌ ಆ ದಂಪತಿಗಳು. ಅವರದು ಪ್ರೇಮ ವಿವಾಹವಾಗಿತ್ತು. ಅವರು ಬಹಳ ಹಣವಂತರು; ದೊಡ್ಡ ಅರಮನೆಯಂತಹ ಬಂಗಲೊ, ಕೆಲಸಕ್ಕೆ ಭಾರತದಲ್ಲಿದ್ದಂತೆ ಸೇವಕರನ್ನೂ ಇಟ್ಟಿದ್ದರು. ಸುಧೀರ್‌ ಒಂದು ಹೆಸರಾಂತ ಸಾಫ್ಟ್‌ವೇರ್‌ ಕಂಪೆನಿಯಾಂದರಲ್ಲಿ ಅತಿ ದೊಡ್ಡ ಹುದ್ದೆಯಲ್ಲಿದ್ದ. ಜೆನಿಫರ್‌ ಒಬ್ಬ ಡಾಕ್ಟರ್‌. ಆ ದಂಪತಿಗಳಿಗೆ, ಬಹಳ ವರ್ಷಗಳ ನಿರೀಕ್ಷೆಯ ಫಲವಾಗಿ ಒಬ್ಬ ಕುಮಾರನ ಜನನವಾಗಿತ್ತು. ಮಗುವನ್ನು ನೋಡಿಕೊಳ್ಳಲೆಂದೇ ಒಬ್ಬ ನ್ಯಾನಿಯನ್ನು ಇಟ್ಟುಕೊಂಡಿದ್ದರು. ಜೆನಿಫರಳ ತಂದೆ-ತಾಯಿಯರು ಅದೇ ಊರಲ್ಲಿ ವಾಸವಾಗಿದ್ದರು. ಸುಧೀರ್‌ಗೆ ಬೇರೆ ಊರಲ್ಲಿ ಕೆಲಸ ಮಾಡುವ ಉತ್ತಮ ಅವಕಾಶವಿದ್ದಿದ್ದರೂ, ಮಡದಿ ಜೆನಿಫರ್‌ಗೆ ಅವಳ ತಂದೆ-ತಾಯಂದಿರಿಂದ ದೂರವಿರಲು ಇಷ್ಟವಿಲ್ಲದಿದ್ದುದರಿಂದ, ಅವನಿಗೆ ಹ್ಯೂಸ್ಟನ್‌ ಬಿಡುವ ಅವಕಾಶವನ್ನೇ ಅವಳು ಕೊಟ್ಟಿರಲಿಲ್ಲ. ಜೆನಿಫರ್‌ಳ ತಂದೆ-ತಾಯಿಯರು (ಬಾಬ್‌ ಮತ್ತು ಸೂಸನ್‌) ಮಗಳ ಮನೆಗೆ ವಾರಕ್ಕೆ 2-3 ಬಾರಿಯಾದರೂ ಭೇಟಿಕೊಡದಿದ್ದರೆ ಅವರಿಗೆ ಸಮಾಧಾನವೇ ಆಗುತ್ತಿರಲಿಲ್ಲ. ಜೆನಿಫರಳಂತೂ ತಾಯಿ ಬರುವುದು ಸ್ವಲ್ಪ ತಡವಾದಲ್ಲಿ ಮಗುವಿನಂತೆ ಚಡಪಡಿಸುತ್ತಿದ್ದಳು.

ಒಂದು ಸಂಜೆ, ಆಗತಾನೇ ಕೆಲಸದಿಂದ ಬಂದ ಜೆನಿಫರ್‌ ಮಗುವಿನೊಡನೆ ಸ್ವಲ್ಪ quality time ಕಳೆಯಲೆಂದು ಅವನೊಡನೆ ಆಡುತ್ತಿದ್ದಳು. ಮನೆಯಲ್ಲಿ ಭಾರತದಿಂದ ಬಂದ ಸುಧೀರನ ತಂದೆ ತಾಯಂದಿರು (ಪ್ರಕಾಶ ರಾವ್‌ ಮತ್ತು ಲಕ್ಷ್ಮಮ್ಮ) ಮತ್ತು ಅವನ ತಂಗಿ ಅನುಪಮ ಇದ್ದಿದ್ದರು. ಆಗ ಇದ್ದಕ್ಕಿದ್ದಂತೆ ಮಗು ಅಳಲು ಪ್ರಾರಂಭಿಸಿತು, ಶ್ರೀರಾಮ ಅಳಲು ಪ್ರಾರಂಭಿಸಿದಂತೆ. ಆಗ ಅಲ್ಲಿ ಅತ್ತೆ-ಸೊಸೆಯರೊಳಗೆ ಸಂಭಾಷಣೆ ಈ ರೀತಿ ನಡೆದಿತ್ತು:

ಲಕ್ಷ್ಮಮ್ಮ : ಯಾಕೇ...... ಮಗು ಅಳುತ್ತಿದೆ? ಅದರ ಹೊಟ್ಟೆಗೇನಾದರೂ ಬೇಕಾಗಿತ್ತೇ?

ಜೆನಿಫರ್‌: ಏನೋಪ್ಪಾ! ಈ ನ್ಯಾನಿಗಳು ಏನು ಮಾಡುತ್ತಾರೆಂದು ಹೇಳಲು ಸಾಧ್ಯವಿಲ್ಲ . ಎಲ್ಲಿ ಹೋದಳು ಆ ನ್ಯಾನಿ ?

ಲ.: ಅವಳಿಗೇನು? ನೀನು ಬಂದು ಎತ್ತಿಕೊಂಡೆಯಲ್ಲ, ಅದೇ ಅವಳಿಗೆ ಬೇಕಿತ್ತು. ಎಲ್ಲೋ ಮಾಯವಾಗಿ ಬಿಟ್ಟಳು.

ಜೆ.: (ನ್ಯಾನಿಯನ್ನು ಹೆಸರಿಸುತ್ತ ಕೂಗಿ) ಹೌದು ನೀವು ಹೇಳಿದ ಹಾಗೆ ಈ ಕೆಲಸದವರ ಅವಸ್ಥೆಯೇ ಹೀಗೆ. ನೋಡಿ, ಈಗ ಮಗುವನ್ನು ನನ್ನ ಕೈಗೆ ಜಾರಿಸಿ ಎಲ್ಲೋ ಹೋಗಿದ್ದಾಳೆ. (ಆದರೂ ನ್ಯಾನಿಯ ಪತ್ತೆ ಇಲ್ಲ)

ಲ.: ಹೌದು. ಅವರನ್ನು ಒಂದು ಹತೋಟಿಯಲ್ಲಿಟ್ಟಿರಬೇಕು. ನೀನು ಅವಳಿಗೆ ಇಲ್ಲದ ಸಲಿಗೆ ಕೊಟ್ಟಿಟ್ಟಿದ್ದೀಯ!

ಜೆ.: ನೀವು ಸುಮ್ಮನಿರಿ. ಈಗ ಇಲ್ಲಿ ನ್ಯಾನಿಗಳು ಸಿಗುವುದೇ ಕಷ್ಟ. ನೀವೆಲ್ಲಾದರೂ ಅವಳಿಗೆ ಏನಾದರೂ ಹೇಳಿ, ಅವಳು ಅದನ್ನು ಕೇಳಿಸಿಕೊಂಡಲ್ಲಿ, ಅವಳು ಕೆಲಸವನ್ನೇ ಬಿಟ್ಟು ಹೋದಾಳು. ಅಷ್ಟೊಂದು ಕೆಲಸ ಮಾಡಬೇಡಿ.

ಲ.: ಅಯ್ಯೋ ಮಾಹಾರಾಯ್ತೀ ನನಗೇನು! ಎಲ್ಲ ಅವಳದೇ ದರ್ಬಾರು. ಕೆಲವೊಮ್ಮೆ ನಮ್ಮ ಮಗುವನ್ನು ನಾನೇ ಎತ್ತಿ ಹಿಡಿಯಲು ಅವಳು ಬಿಡುವುದಿಲ್ಲ. ಮೂರ್ಹೊತ್ತೂ ಅವಳ ಕೈಯಲ್ಲೆ! ನನ್ನನ್ನು ನೋಡಿದರಂತೂ, ನಾನೊಬ್ಬ ಹಳ್ಳಿಯವಳೆಂಬಂತೆ ಅಸಡ್ಡೆ ಮಾಡುತ್ತಾಳೆ.

ಜೆ: ಅದೆಲ್ಲ ನಿಮ್ಮ ಬರಿಯ ಊಹೆ, ಅಷ್ಟೆ . ಅದೆಲ್ಲಾ ಇರಲಿ, ಮಗುವೇಕೆ ಈ ರೀತಿ ಅಳುತ್ತಿದೆ?

ಲ: ನೀನು ಡಾಕ್ಟರ್‌. ಕಲಿತವಳು! ನಿನಗೇ ಗೊತ್ತಿಲ್ಲದ ಮೇಲೆ ನನಗೆ ಹೇಗೆ ತಿಳಿದೀತು?. ಅಲ್ಲದೆ, ನಾನು ಹೇಳಿದ ಮಾತನ್ನು ನೀನು ನಂಬುವವಳೇ?

ಜೆ: (ಲಕ್ಷ್ಮಮ್ಮನ ಕುಹಕದ ಮಾತನ್ನು ಗಮನಕ್ಕೆ ತಂದುಕೊಳ್ಳದೆ) ಏನಾದರೂ ಹೊಟ್ಟೆ ನೋವು ಬಂತೋ ಏನೋ! ನಾಳೆ ಮಗುವಿನ ಪೀಡಿಯಾಟ್ರಿಶಿಯನ್‌ ಹತ್ತಿರ ಕರೆದು ಕೊಂಡು ಹೋಗಬೇಕು.

ಅಷ್ಟರಲ್ಲಿ ಬಾಬ್‌ ಮತ್ತು ಸೂಸನ್‌ರು ಯಾವಾಗಲೂ ಬರುತ್ತಿದ್ದಂತೆ ಅಂದೂ ಅಲ್ಲಿಗೆ ಬಂದರು. ಮಗು ಒಂದೇ ಸಮನೆ ಅಳುತ್ತಿರುವುದನ್ನು ನೋಡಿ ಬಾಬ್‌ ಗಾಬರಿಯಾಗಿ ಮಗುವನ್ನು ಎತ್ತಿಕೊಂಡು ಅಳುವನ್ನು ನಿಲ್ಲಿಸಲು ಪ್ರಯತ್ನ ಪಟ್ಟ. ಆದರೆ ಮಗು ಅಳು ನಿಲ್ಲಿಸಬೇಕಲ್ಲ ! ಇದನ್ನು ನೋಡಿ ಸೂಸನ್‌ ಹೇಳಿದಳು, ‘ಇಲ್ಲಿ ಕೊಡು, ನಿನಗೆ ಮಗುವನ್ನು ಎತ್ತಿ ಆಡಿಸಲೇ ಗೊತ್ತಿಲ್ಲ. ನಾನು ಒಂದು ಗಳಿಗೆಯಲ್ಲಿ ಸುಮ್ಮನಿರಿಸುವೆ.’ ಎಂದು ಗಂಡನ ಕೈಯಿಂದ ಮಗುವನ್ನು ಕಿತ್ತು ಕೊಂಡಳು. ಆಚೀಚೆ ಅವನನ್ನು ತಿರುಗಿಸುತ್ತ, ‘ಇಟ್ಸ್‌ ಓಕೇ ಡಾರ್ಲಿಂಗ್‌, ಣೊ ಕ್ರಾಯಿಂಗ್‌, ಚ್ವೀಟಿ ಪೈ..........’ ಎಂದು ರಾಗವಾಗಿ ಆಡಿದ ಮಗುವಿನ ಮಾತೂ ಆ ಮಗುವಿನ ಅಳು ನಿಲ್ಲಿಸದೆ ಹೋಯ್ತು. ಆಗ ಎಲ್ಲರಿಗೂ ಅದೊಂದು ಸಮಸ್ಯೆಯಾಗಿಬಿಟ್ಟಿತು. ಒಬ್ಬಬ್ಬರು ಒಂದೊಂದು ಸಲಹೆ ಮಾಡಹತ್ತಿದರು. ಸೂಸನ್‌, ‘ನೋಡಿ, ಅವನು ಹೊರಗೆ ತಿರುಗಾಡಲು ಬಯಸುತ್ತಿರಬಹುದು. ಮಕ್ಕಳಿಗೆ ಈ ವಯಸ್ಸಿನಲ್ಲೇ ಹೊರಗೆ ಹೋಗುವ ಅಭ್ಯಾಸ ಮಾಡಿಸಬೇಕು. ಇಲ್ಲದಿದ್ದಲ್ಲಿ ಅವರು ಬರಿಯ ಗೂಬೆ ಹಾಗೆ ಮನೆಯಲ್ಲೆ ಕುಳಿತು, ದಡ್ಡರಾಗುತ್ತಾರೆ.’ ಎಂದು ಹೇಳಿದಳು.

ಅವಳ ಗಂಡ ಅದನ್ನು ಸಮರ್ಥಿಸುತ್ತ , ‘ಹೌದು, ಅವನಿಗೆ ‘ಮಾಲ್‌’ಗೆ ಹೋಗುವುದೆಂದರೆ ಬಲು ಇಷ್ಟ. ಅಲ್ಲಿಯ ಅಂಗಡಿಗಳನ್ನೂ, ಬಣ್ಣ-ಬಣ್ಣದ ಲೈಟ್‌ಗಳನ್ನೂ ನೋಡುತ್ತ ಕೇಕೆ ಹೊಡೆಯುತ್ತಿರುತ್ತಾನೆ. ಮೊನ್ನೆ ಅವನನ್ನು ಕರೆದುಕೊಂಡು ಹೋದಾಗ ಅವನೆಷ್ಟು ಸಂತೋಷ ಪಟ್ಟ ! ನನ್ನನ್ನು ಕೇಳಿದರೆ ಅವನನ್ನು ಈಗ ಮಾಲ್‌ಗೆ ಕರೆದುಕೊಂಡು ಹೋಗುವುದೇ ಉತ್ತಮ. ಆಗ ಅವನ ಅಳು ಖಂಡಿತ ನಿಲ್ಲುವುದು ನೋಡಿ’ ಎಂದು ಹೇಳಿದನು.

ಜೆನಿಫರ್‌ ಈಗ ತಾಯಿಯಾಗಿ ಅಲ್ಲದೆ, ಡಾಕ್ಟರಳಾಗಿ ಹೇಳಿದಳು, ‘ಅಪ್ಪಾ, ಅವನಿಗೆ ಏನೋ ಹೊಟ್ಟೆ ಸರಿಯಿಲ್ಲ. ಸ್ಟೊಮಕ್‌ ಫ್ಲೂ ಇರಬಹುದೇನೋ! ಈಗ ಈ ಊರಲ್ಲೆಲ್ಲ ಅದೊಂದು ವ್ಯಾಪಕವಾಗಿದೆ. ಬಹುಶಃ ಆ್ಯಂಟೈಬಯಾಟಿಕ್ಸ್‌ ಕೊಡಬೇಕಾಗಬಹುದು. ಅಥವಾ ಕಿವಿ ಇನ್‌ಫೆಕ್ಷನ್‌ ಆಗಿರಲೂಬಹುದು. ಹಲ್ಲೂ ಬರುತ್ತಿದೆಯೋ ಏನೋ! ಅದು ಅವನಿಗೆ ಬಾಧೆ ಕೊಡುತ್ತಿರಬಹುದು. ನನ್ನ ಫ್ರೆಂಡ್‌, ಡಾಕ್ಟರ್‌ ಸ್ಮಿತ್‌ರನ್ನು ಕರೆಯಬಹುದೋ ಏನೋ!’

ಇಷ್ಟು ಹೊತ್ತೂ ಸುಮ್ಮನಿದ್ದ ಅನುಪಮ ಈಗ ಬಾಯಿಬಿಟ್ಟಳು. ‘ಈಗ, ಈ ಹೊತ್ತಿನಲ್ಲಿ ಅವರೆಲ್ಲಿ ಸಿಗುತ್ತಾರೆ? ಎಲ್ಲಾದರೂ ಬಾರ್‌ನಲ್ಲೋ, ಹೆಂಡತಿಯ ಜೊತೆಯಲ್ಲಿ ಯಾವುದಾದರೂ ರೆಸ್ಟೊರಾಂಟ್‌ಗೋ ಹೋಗಿ ಕುಳಿತಿರಬಹುದು. ಅಲ್ಲದೆ, ಡಾಕ್ಟರರೆಲ್ಲಾದರೂ ಹೌಸ್‌ ಕಾಲ್‌ ಮಾಡುತ್ತಾರೆಯೇ?’ ಎಂದು ಸೂಸನ್‌ಳ ಮುಖ ನೋಡುತ್ತ ಹೇಳಿದಳು. ಮುಂದುವರಿಯುತ್ತ, ‘ನೀವೆಲ್ಲ ಅವನಿಗೆ ಸುತ್ತುಗಟ್ಟಿ ನಿಂತಿದ್ದೀರ, ಅವನು ಉಸಿರಾಡುವುದಾದರೂ ಹೇಗೆ?’ ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದಳು.

ಪ್ರಕಾಶ್‌ ರಾವ್‌ ತಮ್ಮ ಮೌನವನ್ನು ಮುರಿಯುತ್ತ, ‘ಮನೆಯಲ್ಲಿ ಅವನ ಆಟದ ಸಾಮಾನುಗಳು ಅಷ್ಟೊಂದಿವೆ! ಏನಾದರೂ ಆಟದ ಸಾಮಾನನ್ನು ತೋರಿಸಿರಿ. ಆಗ ಅಳು ನಿಲ್ಲಿಸಿಯಾನು!’ ಎಂದು ಗಂಭೀರವಾಗಿ ಸಲಹೆ ಮಾಡಿದರು.

‘ಅದೂ ಒಳ್ಳೆಯ ಐಡಿಯಾವೇ!’ ಎಂದು ಬಾಬ್‌ ತಲೆಯಾಡಿಸಿದ.

ಸರಿ ಮನೆಯಲ್ಲಿದ್ದ ಎಲ್ಲ ಟಾಯ್ಸ್‌ಗಳೂ ಅಲ್ಲಿಗೆ ಬಂದವು. ಲಕ್ಷ್ಮಮ್ಮ ತಾವು ತರಿಸಿಕೊಟ್ಟ ಒಂದು ಗೊಂಬೆಯನ್ನು ಮಗುವಿನ ಇದಿರು ಹಿಡಿದು, ‘ನೋಡು, ನೋಡು, ನೋಡಿಲ್ಲಿ ಮರೀ, ಈ ಗೊಂಬೆ ನಗುತ್ತ ಕುಣಿಯುವುದನ್ನು ನೋಡು. ನೀನೂ ಹಾಗೆ ಅವನಂತೆ ನಗುತ್ತ ಕುಣಿಯುತ್ತಿಯಾ?’ ಎಂದು ಗೊಂಬೆಯನ್ನು ಕುಣಿಸುತ್ತ ಮಗುವನ್ನು ಸುಮ್ಮನಿರಿಸಲು ಪ್ರಯತ್ನ ಪಟ್ಟರು. ಆದರೂ ಮಗು ಸುಮ್ಮನಾಗಲಿಲ್ಲ. ಸೂಸನ್‌ ತಾನು ಕೊಟ್ಟ ‘ಮಿಕ್ಕಿ ಮೌಸ್‌’ ಗೊಂಬೆಯನ್ನು ತೋರಿಸುತ್ತ ಅದು ಮಾತಾಡುವ ಗುಂಡಿಯನ್ನು ಒತ್ತಿ, ‘ಲುಕ್ಕೀ, ಲುಕ್‌, ಮೈ ಚ್ವೀಟ್‌ ಹಾರ್ಟ್‌, ಮಿಕ್ಕೀ ಇಸ್‌ ಚಾಕಿಂಗ್‌ ಚು ಯೂ........’ ಎಂದು ತಮ್ಮ ಪ್ರಯತ್ನವನ್ನೆಲ್ಲ ಮಾಡಿದರು. ಆಗಲೂ ಅಳು ನಿಲ್ಲದಿರಲು, ಜೆನಿಫರ್‌, ಬಾಬ್‌ ಕೊಡಿಸಿದ ಸಂಗೀತ ಹಾಡುವ ಆಟವನ್ನು ಕೊಟ್ಟು, ‘ಬೇಬೀ, ಇಲ್ಲಿ ನೋಡು. ಇದನ್ನು ನಿನ್ನ ಗ್ರ್ಯಾಂಡ್‌ ಪಾ ತಂದುಕೊಟ್ಟದ್ದು. ಎಷ್ಟೊಂದು ಹಾಡು ಹೇಳುತ್ತದೆ ನೋಡು. ನಿನ್ನ ಗ್ರ್ಯಾಂಡ್‌ ಪಾ ಎಷ್ಟೊಂದು ಒಳ್ಳೆಯವರು! ಹೀ ಲವ್ಸ್‌ ಯೂ ಸೋ ವೆರಿ ಮುಚ್‌. ಯೂ ಲೈಕ್‌ ದಿ ಸಾಂಗ್ಸ್‌’ ಎಂದು ಹತ್ತಾರು ಹಾಡುಗಳನ್ನು ಹಾಡಿಸಿದರೂ ಮಗು ಇನ್ನೂ ಅಳುತ್ತಿರಬೇಕೆ? ‘ಟಾಯ್ಸ್‌ ಆರ್‌ ಅಸ್‌’ ಅಂಗಡಿಯೇ ಅಲ್ಲಿ ಬಿದ್ದಂತಿತ್ತು. ಎಲ್ಲರೂ ಒಂದೊಂದು ಆಟದ ಸಾಮಾನನ್ನು ತೋರಿಸಿ ಪ್ರಯತ್ನ ಪಟ್ಟುದೇ ಬಂತು; ಅಳು ಮಾತ್ರ ನಿಲ್ಲಲೇ ಇಲ್ಲ. ಸಮಸ್ಯೆ ಎಲ್ಲರಿಗೂ ಇನ್ನಷ್ಟು ಜಟಿಲವಾಗಿ ಕಂಡಿತು.

ಆಗ ಲಕ್ಷ್ಮಮ್ಮ ‘ಅದೆಲ್ಲ ಇರಲಿ. ಈಗ ಮಗುವಿನ ಅಳು ನಿಲ್ಲಿಸುವುದಕ್ಕೆ ಉಪಾಯವೇನು? ಹಿಂದೆ ರಾಮಾಯಣದಲ್ಲಿ ಶ್ರೀರಾಮಚಂದ್ರ ಆಕಾಶದಲ್ಲಿನ ಚಂದ್ರನಿಗಾಗಿ ಅಳುತ್ತಿದ್ದುದು ನನಗೀಗ ಜ್ಞಾಪಾಕಕ್ಕೆ ಬರುತ್ತಿದೆ.’ ಎಂದು ಸ್ವರಗೂಡಿಸಿದರು.

‘ಈಗ ನಿಮ್ಮ ಆ ಬರಡು ಪುರಾಣದ ಕಥೆ ನೆನೆಸಿಕೊಂಡು ಪ್ರಯೋಜನವೇನು? ಅವನ ಅಳು ನಿಲ್ಲುವುದೇ?’, ಸೂಸನ್‌ ತಿರಸ್ಕಾರ ಕೂಡಿದ ಸ್ವರದಲ್ಲಿ ಕೇಳಿದಳು.

‘ಬಹುಶಃ ಅವನಿಗೆ ಯಾರದೋ ‘ದೃಷ್ಟಿ’ಯಾದಂತಿದೆ, ನನ್ನನ್ನು ಕೇಳಿದರೆ, ಆ ದೃಷ್ಟಿ ತೆಗೆಯುವಂತೆ ಒಂದು ‘ಅಗ್ಗಿಷ್ಟಿಕೆ’ ಹಾಕಿದಲ್ಲಿ ಎಲ್ಲ ಸರಿ ಹೋಗುತ್ತದೆ’, ಲಕ್ಷ್ಮಮ್ಮ ಸೂಸನ್‌ಳ ತಿರಸ್ಕಾರವನ್ನು ಮನಸ್ಸಿಗೆ ತಂದುಕೊಳ್ಳದೆ ಸಲಹೆ ಮಾಡಿದರು.

‘ಛೀ...., ಛೀ....! ಅದೇನೂ ಅಗತ್ಯವಿಲ್ಲ. ನಾನು ಅದನ್ನೆಲ್ಲ ನಂಬುವುದಿಲ್ಲ. ನೀವು ಸುಮ್ಮ-ಸುಮ್ಮನೆ ಇಲ್ಲದ್ದನ್ನು ಮಾಡಲು ಹೊರಟು, ಫಾಯರ್‌ ಅಲಾರಂನ್ನು ಆ್ಯಕ್ಟಿವೇಟ್‌ ಮಾಡಬೇಡಿ. ಮಗುವಿನ ಕಿರುಚಾಟದ ಜೊತೆಗೆ ಫಾಯರ್‌ ಅಲಾರಾಂನ ಕಿರುಚಾಟ ಬೇರೆ!’, ಎಂದು ಜೆನಿಫರ್‌ ಸ್ವಲ್ಪ ಸಿಡುಕಿನಿಂದಲೇ ತನ್ನ ಅತ್ತೆಗೆ ನುಡಿದಳು. ಅವಳಿಗೆ ಅತ್ತೆಯನ್ನು ನೋಡಿದರೆ ಅಷ್ಟಕ್ಕಷ್ಟೆ ! ಅಂತಹದೇ ಸಲಹೆ ತನ್ನ ತಾಯಿಯಿಂದ ಬಂದಿದ್ದಲ್ಲಿ ಅವಳು ಅದಕ್ಕೆ ಒಪ್ಪುತ್ತಿದ್ದಳೋ ಏನೋ! ಇದರಿಂದ ಅತ್ತೆಗೆ ಬೇಸರವಾದುದಲ್ಲದೆ ಸಿಟ್ಟೂ ಬಂತು. ಆದರೆ, ಅವರು ತಮ್ಮ ಡಾಕ್ಟರ್‌ ಸೊಸೆಗೆ ಅದೇಕೋ ಅಂಜುತ್ತಿದ್ದುದರಿಂದ ಸುಮ್ಮನೆ ಬಾಯಿ ಮುಚ್ಚಿಕೊಂಡರು. ಆದರೆ, ಅವಳ ಮಾವ ಬಿಡಬೇಕಲ್ಲ ! ಸೊಸೆಯ ನಿಷ್ಠೂರದ ಮಾತಿಗೆ ಉತ್ತರವಾಗಿ ‘ಈಗಿನ ಕಾಲದ ನಿಮಗೆ, ನಮ್ಮಂತಹರು ಮಾಡಿದ ಸಲಹೆಗಳೆಲ್ಲ ಕಾಲಿನ ಕಸಕ್ಕೆ ಸಮಾನ. ಎಲ್ಲವನ್ನೂ ನೀವೇ ತಿಳಿದಂತೆ ವರ್ತಿಸುತ್ತೀರಿ. ಹಿರಿಯರ ಮಾತಿಗೆ ಬೆಲೆ ಕೊಡುವುದನ್ನು ಸ್ವಲ್ಪ ಕಲಿತುಕೋ!’ ಎಂದು ಸ್ವರ ಸ್ವಲ್ಪ ಏರಿಸಿ, ಭಾರತದಲ್ಲಿ ಹೈಕೋರ್ಟ್‌ ಜಜ್‌ ಆಗಿ ಈಗ ನಿವೃತ್ತರಾಗಿರುವ ಅವರು ಅಧಿಕಾರ ವಾಣಿಯಲ್ಲಿ ಹೇಳಿದರು.

ಮೆಡಿಕಲ್‌ ಸ್ಕೂಲಿಗೆ ಹೋಗಿ ಓದಿದ ಸೊಸೆ, ಈ ಮುದಿ ಮಾವನ ‘ಬುದ್ಧಿಮಾತು’ಗಳಿಗೆ ಮನ್ನಣೆ ಕೊಟ್ಟಾಳೇ? ಮಾವನ ಕಡೆಗೆ ತಿರುಗಿ ಏನೋ ಹೇಳಲು ಹೊರಟಿದ್ದಳು. ಅಷ್ಟರಲ್ಲಿ ಸುಧೀರ್‌ ಮುಂದೆ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಲೆಂದೋ ಏನೋ, ಮಗುವಿನ ನ್ಯಾನಿಯನ್ನು ಹೆಸರೆತ್ತಿ ಕೂಗಿ ಕರೆದ. ನ್ಯಾನಿ ಓಡಿ ಬಂದಾಗ, ‘ಎಲ್ಲಿಗೆ ಹೋಗಿದ್ದೆ ಇಷ್ಟು ಹೊತ್ತು? ಮಗು ಅಳುತ್ತಿರುವುದು ಕೇಳಿಸಲಿಲ್ಲವೇ?’ ಎಂದು ಸ್ವಲ್ಪ ಸ್ವರವೇರಿಸಿ ನುಡಿದನು.

ನ್ಯಾನಿ ಏನೊಂದೂ ಹೇಳದೆ, ಮಗುವನ್ನು ಎತ್ತಿಕೊಂಡು, ಕೈಯಲ್ಲಿ ಹಾಲಿನ ಬಾಟ್ಲಿಯನ್ನು ತೆಗೆದುಕೊಂಡು, ಮಗುವಿನ ಬೆನ್ನು ತಟ್ಟುತ್ತ ಅದು ಮಲಗುವ ಕೋಣೆಯ ಕಡೆ ಹೊರಟಳು. ಸೂಸನ್‌, ‘ಏನೋ ದೊಡ್ಡ ಕೆಲಸ ಮಾಡುವೆನೆಂಬ ಜಂಬದಿಂದ ಹೊರಟಿದ್ದಾಳೆ, ನೋಡಿ. ಅವನ ಅಳುವನ್ನು ನಿಲ್ಲಿಸಲು ಅವಳಿಗೆಲ್ಲಿ ಸಾಧ್ಯ? ನಾನಿಷ್ಟು ಪ್ರಯತ್ನ ಪಟ್ಟರೂ ನಿಲ್ಲಿಸಲಾಗದಿದ್ದ ಆ ಅಳುವನ್ನು ಈ ಮಹಾರಾಣಿ ಏನು ಮಹಾ ನಿಲ್ಲಿಸುತ್ತಾಳೆ?’ ಎಂದು ಕುಹಕದಿಂದ ಹೇಳಿದಳು.

ಆದರೆ, ಸ್ವಲ್ಪ ಹೊತ್ತಿಗೇ ಮಗುವಿನ ಅಳು ನಿಂತಿತು. ಒಂದೈದು ನಿಮಿಷಗಳ ಮೇಲೆ ನ್ಯಾನಿ ಹೊರಗೆ ಬಂದಾಗ ಎಲ್ಲರೂ ಅವಳ ಕಡೆ ಆಶ್ಚರ್ಯದ ನೋಟ ಬೀರಿದರು. ಆಗ ಅವಳು ಮೆತ್ತಗೆ ಹೇಳಿದಳು, ‘ಮಗುವಿಗೆ ಹಸಿವೆಯಾಗಿತ್ತು. ಅಲ್ಲದೆ ಅವನು ನಿದ್ರೆ ಮಾಡುವ ಹೊತ್ತಿದು. ಅದಕ್ಕೆ ಅವನು ಅಷ್ಟೊಂದು ಅಳುತ್ತಿದ್ದ. ನೀವೆಲ್ಲ ಎತ್ತಿ ಮುದ್ದಾಡಿಸುತ್ತಿದ್ದಿದ್ದರೆಂದು ನಾನು ಸುಮ್ಮನಿದ್ದೆ’, ಎಂದು ಅಡುಗೆ ಮನೆ ಕಡೆ ಜಾರಿದಳು. ಮಗು ಅಳುತ್ತಿರುವಾಗ ತಾನಿಲ್ಲದಿರುವುದಕ್ಕೆ ಕಾರಣವನ್ನು ಆ ಮೂಲಕ ಅವಳು ತಿಳಿಸಿದಂತಿತ್ತು. ಮಗುವಿನ ಅಳು ಈ ನ್ಯಾನಿ ನಿಲ್ಲಿಸಿ, ಅವರೆಣಿಸಿಕೊಂಡ ಜಟಿಲ ಸಮಸ್ಯೆ ನಿವಾರಣೆಯಾದುದು ಎಲ್ಲರಿಗೂ, ಅದರಲ್ಲೂ ಸೂಸನ್‌ಗೆ, ಬಹಳ ಹೆಚ್ಚಿನ ಅವಮಾನವಾದಂತಿತ್ತು ; ಅವರೆಲ್ಲರ ಅಭಿಮಾನಕ್ಕೇ ಧಕ್ಕೆ ತಂದಿತ್ತು. ಯಾಕೆಂದರೆ, ಅಲ್ಲಿರುವವರೆಲ್ಲರೂ ತಾವೇ ಒಂದೊಂದು ರೀತಿಯಲ್ಲಿ ಮಕ್ಕಳ ಮನಶಾಸ್ತ್ರಜ್ಞರೆಂದು ತಿಳಿದು, ಏನೇನೋ ಸಲಹೆ ಮಾಡಿದ್ದರು. ಆದರೆ, ಅವರ ಊಹೆಗಳೆಲ್ಲ ಹುಸಿಯಾಗಿ, ‘ವಿದ್ಯೆ’ಯಿಲ್ಲದ ಆ ನ್ಯಾನಿ ಅಂತಹ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿದಳು. ಅವರೆಲ್ಲರೂ ಒಂದು ಸರಳವಾದ ಸಮಸ್ಯೆಯಲ್ಲಿ ಇಲ್ಲದ ಜಟಿಲತೆಯನ್ನು ಹುಡುಕುತ್ತಿದ್ದರು, ಅಷ್ಟೆ! ಆದರೆ, ನ್ಯಾನಿಗೆ ಸಮಸ್ಯೆಯ ಸರಳತೆ ಅರ್ಥವಾಗಿತ್ತು; ಹಾಗೂ ಅದರ ಪರಿಹಾರವೂ ಅವಳಿಗೆ ತಿಳಿದಿತ್ತು. ಆದರೂ, ಆ ನ್ಯಾನಿಯನ್ನು ಅಭಿನಂದಿಸುವ ಗೋಜಿಗೇ ಯಾರೂ ಹೋಗಿರಲಿಲ್ಲ. ಹಾಗೆ ಮಾಡುವುದು ಅವರ ಅಭಿಮಾನಕ್ಕೆ ಕುಂದು ತರುವುದೆಂಬ ಭಾವನೆ ಅವರೆಲ್ಲರದಿದ್ದಿರಬೇಕು! ಅಲ್ಲದೆ, ಮಗುವಿನ ಆರೈಕೆ ಮಾಡುವುದು ಅವಳ ಕರ್ತವ್ಯವಲ್ಲವೇ!

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X