ನನ್ನ ಪ್ರೀತಿಯ ಭಾರತ ಹಾಗೂ ಪ್ರಜಾಪ್ರಭುತ್ವ ಮಂತ್ರ
ನನ್ನ ಪ್ರೀತಿಯ ಭಾರತ ಹಾಗೂ ಪ್ರಜಾಪ್ರಭುತ್ವ ಮಂತ್ರ
ನನ್ನದು, ಜನರಿಂದ ಜನರಿಗಾಗಿ ಜನರಿಗೋಸ್ಕರ ಎನ್ನುವ ಪ್ರಜಾಪ್ರಭುತ್ವ ಮಂತ್ರವ ಜಗತ್ತಿಗೆ ಸಾರುವ ರಾಜಕೀಯ ಇಚ್ಛಾಶಕ್ತಿಯ ಭಾರತ. ಈ ನನ್ನ ದೇಶದಲ್ಲಿ - ಸಂಪತ್ತಿದೆ, ಬಡತನವಿದೆ. ಹಸುರಿದೆ, ಹಸಿವಿದೆ. ಅರಿವಿದೆ, ಅನಕ್ಷರತೆಯಿದೆ. ಆದರೂ ಇದು ನನ್ನ ಹೆಮ್ಮೆಗೆ ಕಾರಣವಾದ ಭಾರತ. ಆಗಸ್ಟ್ 15 ರ ಆಸುಪಾಸಿನಲ್ಲಿ , ದೇಶದ ಬಗೆಗೆ ಪ್ರೀತಿ ಉಕ್ಕಿಸುವ ಕಾರಣಗಳನ್ನು ಹಂಚಿಕೊಳ್ಳುವ.
- ಲಕ್ಷ್ಮೀನಾರಾಯಣ ಗಣಪತಿ
ಉತ್ತರ ಕೆರೊಲಿನಾ, ಯು. ಎಸ್. ಎ.
[email protected]
ಭಾರತದಲ್ಲಿನ ಭಾರತೀಯರಷ್ಟೇ ಅಲ್ಲ , ಜಗತ್ತಿನೆಲ್ಲೆಡೆಯ ಭಾರತೀಯರೂ ಹೆಮ್ಮೆಯಿಂದ ಆಚರಿಸುವ ಆ.15ರ ದಿನಕ್ಕೆ 56 ವರ್ಷ ತುಂಬಿದ ಸಮಯದಲ್ಲಿ - ಬೆಳ್ಳಿ ಹಬ್ಬ, ಚಿನ್ನದ ಹಬ್ಬ ಇತ್ಯಾದಿ ಹಣೆ ಪಟ್ಟಿಗಳಿರದಿದ್ದರೂ ನಾವೆಲ್ಲ ವಿಶೇಷವಾಗಿ ಗಮನಿಸಿ ಹೆಮ್ಮೆ ಪಟ್ಟುಕೊಂಡು ಆಚರಿಸಲಿಕ್ಕೆ ಬೇಕಾದಷ್ಟು ಕಾರಣಗಳಿವೆ. ಆಫ್ರಿಕಾದ ಲೈಬೀರಿಯಾವೂ ಸೇರಿದಂತೆ ಹಲವೆಡೆಗಳಲ್ಲಿಯ ಅರಾಜಕತೆ, ಇರಾಕಿನಲ್ಲಿನ್ನೂ ಬೇರೂರದ ಪ್ರಜಾಸತ್ತೆ ಇವೆಲ್ಲವನ್ನೂ ಗಮನಿಸಿದಾಗ ಸಂಕೀರ್ಣ ಸಮಾಜವನ್ನೊಳಗೊಂಡ ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆಯುತ್ತಿರುವುದಕ್ಕೆ ಹೆಮ್ಮೆ ಪಟ್ಟುಕೊಳ್ಳಲೇ ಬೇಕು.
ಚೆಷ್ನಿಯಾದಲ್ಲಿ ಮೊನ್ನೆಯಷ್ಟೇ ನಡೆದ ಭಯೋತ್ಪಾದನೆಯ ಕೃತ್ಯ ಎರಡೇ ದಶಕಗಳ ಹಿಂದೆ ‘ಸೂಪರ್ ಪವರ್’ ಎನಿಸಿ ಕೊಂಡಿದ್ದ ರಷ್ಯಾ (ಹಳೆಯ ಸೋವಿಯತ್ ಒಕ್ಕೂಟ) ಇನ್ನೂ ಪ್ರಜಾಪ್ರಭುತ್ವದ ದಾರಿಯಲ್ಲಿ ತಿಣುಕುತ್ತಿದೆ. ಭಾರತದ ಒಂದು ದಶಾಂಶದಷ್ಟೂ ಜನಸಾಂದ್ರತೆಯಿಲ್ಲದ ಸೋವಿಯತ್ ರಷ್ಯಾದಲ್ಲಿ ಹೊಟ್ಟೆಗಿಲ್ಲದ ಸ್ಥಿತಿಯಿತ್ತೆಂದು ತಿಳಿದದ್ದು ಆ ದೇಶಕ್ಕೆ ಹೋಗಿ ಬಂದವರಿಗಷ್ಟೇ. ಆ ದಟಾ ದಾರಿದ್ರ್ಯ ಇಡೀ ಲೋಕಕ್ಕೆ ಬಟಾ ಬಯಲಾದದ್ದು ಇದೀಗ, ಪ್ರಜಾಸತ್ತೆಯ ಮೊಳಕೆಯಾಡೆದ ಮೇಲೆ.
ಸಮಾಜವೊಂದರ ಅಭಿವೃದ್ಧಿಗೆ ಬೇಕಾದ ಎಲ್ಲ ಅಂಶಗಳಿದ್ದೂ (ನೈಸರ್ಗಿಕ ಸಂಪತ್ತು, ಪ್ರತಿಭಾ ಸಂಪತ್ತು, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ), ತನ್ನ ಜನರ ಹೊಟ್ಟೆಯ ಹಸಿವನ್ನೂ ಇಂಗಿಸಲಾರದಂತಹ ಒಂದು ರಾಜಕೀಯ ವ್ಯವಸ್ಥೆಯ ವೈಫಲ್ಯಕ್ಕೆ ರಷ್ಯಾ ಅತ್ಯುತ್ತಮ ಉದಾಹರಣೆ. ರಷ್ಯಾದಲ್ಲಿ ಆಚರಣೆಯಲ್ಲಿದ್ದದ್ದು, ‘ಕಮ್ಯುನಿಸಂ ಅಥವಾ ಸೋಶಿಯಲಿಸಂ’ ಹೌದೋ ಅಲ್ಲವೋ, ಅಥವಾ ಮಾರ್ಕ್ಸ್ ಅಥವಾ ಲೆನಿನರ ಉದಾತ್ತ ತತ್ವ ಹಾಗೂ ಪರಿಕಲ್ಪನೆಗಳು ಅಸಂಗತವೋ ಎನ್ನುವುದರ ವಿಮರ್ಶೆ ಇದಲ್ಲ. ಬದಲು ಸಮಾಜವೊಂದರ ಮೂಲಭೂತ ಅಂಗವಾದ, ‘ವ್ಯಕ್ತಿ’ ಅಥವಾ ‘ಪ್ರಜೆ’ ಪಾಲ್ಗೊಳ್ಳದೆ, ಪ್ರಜೆಯ ಇಚ್ಛೆ ಸಂತುಷ್ಟಿಗಳಿಲ್ಲದ ಯಾವುದೇ ‘ಪ್ರಭುತ್ವ’ವೂ ಯಶಸ್ವಿಯಾಗಲಾರದೆಂಬ ಸತ್ಯ ರಷ್ಯಾದ ಮೂಲಕ ಮತ್ತೆ ಸಾಬೀತಾಗಿದೆ. ರಷ್ಯಾದಲ್ಲಿ ಆಚರಿಸಲ್ಪಟ್ಟ ಸಮಾಜವಾದಕ್ಕಿಂತ ಮಾನವೀಯವಾಗಿ ಭಾರತ ಹಾಗೂ ಭಾರತದಂಥ ಇತರ ರಾಷ್ಟ್ರಗಳ ಪ್ರಾಚೀನ ರಾಜಸತ್ತೆಗಳು ನಡೆದುಕೊಂಡದ್ದು ಇತಿಹಾಸದಲ್ಲಿನ ಅನೇಕ ಚಕ್ರವರ್ತಿಗಳ ಯಶಸ್ಸಿಗೆ ಕಾರಣವಿದ್ದೀತು. ಯಶಸ್ವೀ ರಾಜರುಗಳ ಆಡಳಿತದ ಹಿಂದೆ, ಆ ರಾಜರುಗಳ ಸಮಾಜ ಹಿತದ ಕಾರ್ಯಗಳನ್ನು ಹಾಗೂ ಅದರಿಂದ ಸಂತುಷ್ಟಿಗೊಂಡ ಪ್ರಜೆಗಳನ್ನೂ ಗುರುತಿಸಬಹುದು. ಹಾಗೆಯೇ, ಪ್ರತಿಯಾಂದು ರಾಜ್ಯದ ಅವನತಿಯ ಹಿಂದೆಯೂ, ಪ್ರಜೆಗಳ ಅಸಂತುಷ್ಟಿಯ ಬೀಜವನ್ನ ಸುಲಭವಾಗಿ ಗುರುತಿಸಬಹುದು. ಇದರರ್ಥ ಇಷ್ಟೇ, ಯಾವುದೇ ಆಡಳಿತ ವ್ಯವಸ್ಥೆಯಾದರೂ, ಪ್ರಜೆಯನ್ನ ಅಲಕ್ಷಿಸಿ ಮುಂದುವರಿಯಲಾಗುವುದಿಲ್ಲ , ಮುಂದುವರೆದರೂ ಯಶಸ್ಸು ಗಳಿಸುವುದಿಲ್ಲ . ಹೀಗೆಂದಾಗ ನೋಡಿ-, ‘ಜನರಿಂದ, ಜನರಿಗಾಗಿ ಜನ ರ’ ಎಂಬ ಭಾರತದ ಪ್ರಜಾಪ್ರಭುತ್ವದ ಸರಳ ಸೂತ್ರದ ಔಚಿತ್ಯದ ಅರಿವಾಗುತ್ತದೆ.
ಇರಲಿ, ಭಾರತವೂ ಸಹಾ ಪ್ರಜಾಪ್ರಭುತ್ವದ ದಾರಿಯಲ್ಲಿ ಕಾಲಕ್ಕನುಗುಣವಾಗಿ ನಡೆದು ಪ್ರಸ್ತುತ ಅತೀ ದೊಡ್ಡ ಪ್ರಜಾಪ್ರಭುತ್ವವಾಗಿ ಗುರ್ತಿಸಿಕೊಂಡಿದೆ. 56 ವರ್ಷ ಒಂದು ದೇಶದ ಇತಿಹಾಸದಲ್ಲಿ ಏನೇನೂ ಅಲ್ಲ . ಅದರಲ್ಲೂ ಐದು ಸಹಸ್ರಗಳಿಗೂ ಹಳೆಯ, ಸಾಂಸ್ಕೃತಿಕ ಮತ್ತು ವೇದೋಪನಿಷತ್ತುಗಳ ಪಾರಂಪರ್ಯವಿರುವ ಭಾರತಕ್ಕೆ ಸ್ವಾತಂತ್ರ್ಯಾ ನಂತರದ ಐವತ್ತೂ ಚಿಲ್ಲರೆ ವರ್ಷಗಳು ಸಂಖ್ಯೆಯಲ್ಲಿ ತೀರಾ ಕಡಿಮೆ. ಆದರೂ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಶತಮಾನಗಳಿಂದ ಬೇರೂರಿರುವ ಪ್ರಜಾಪ್ರಭುತ್ವ, ಭಾರತದಲ್ಲಿ ಬೇರೂರಿ ಸುಮಾರು ಮೂರು ತಲೆಮಾರುಗಳ ಜೀವನ ಸಾಗಿರಬೇಕಾದರೆ- ಸರಾಸರಿ ಸುಮಾರು 70 ವರ್ಷ ಬದುಕುವ ವ್ಯಕ್ತಿಯಾಬ್ಬನ ದೃಷ್ಟಿಯಲ್ಲಿ, 56 ವರ್ಷಗಳ ಪ್ರಭಾವ ಗಮನಿಸುವಂತಾದ್ದು. ಸ್ವಾತಂತ್ರ್ಯ ಬಂದು 14 ವರ್ಷದ ನಂತರ ಹುಟ್ಟಿ , ಸ್ವಾತಂತ್ರ್ಯೋತ್ಸವದ ಬೆಳ್ಳಿಹಬ್ಬದ ಕಾಲದಲ್ಲಿ ಹೈಸ್ಕೂಲು ಸಹಾ ದಾಟದ ನನ್ನಂತವರಲ್ಲದೆ ಇನ್ನೂ ಕೆಲವು ಹಿರಿಯ ಮಿತ್ರರುಗಳಿಗೆ ನಾನೊಂದು ಪ್ರಶ್ನೆ ಹಾಕಿದೆ : ‘ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಅತಿ ಪ್ರಮುಖ ಘಟ್ಟ ಅಥವಾ ಘಟನೆ ಯಾವುದು?’. ಈ ಪ್ರಶ್ನೆಗೆ ಬಂದ ಉತ್ತರ ಅತ್ಯಾಶ್ಚರ್ಯಕರ ರೀತಿಯಲ್ಲಿತ್ತು . ಬಹುತೇಕ ಎಲ್ಲರ ಉತ್ತರ ಒಂದೇ ಆಗಿತ್ತು. ‘ತುರ್ತು ಪರಿಸ್ಥಿತಿಯ ಹಿಂದು ಮುಂದಿನ ಕೆಲವು ವರ್ಷಗಳು’ ಸ್ವಾತಂತ್ರ್ಯೋತ್ತರ ಭಾರತದಲ್ಲಿನ ಅತಿ ಪ್ರಮುಖ ಘಟ್ಟ ವಾಗಿ ಅನೇಕರು ಗುರ್ತಿಸಿದ್ದರು. ಅದನ್ನೇ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
1975 ರಿಂದ 77ರ ಚುನಾವಣೆಯವರೆಗಿನ ಭಾರತದ ಬೆಳವಣಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಅತೀ ಪ್ರಮುಖ ಬೆಳವಣಿಗೆಯೆಂದು ಹೇಳಿ ಅದಕ್ಕೆ ಪುಷ್ಟಿಯಾಗುವ ಕೆಲ ಸಂಗತಿಗಳನ್ನು ನೋಡೋಣ. 90ರ ದಶಕದ ಐ. ಟಿ. ಬೆಳವಣಿಗೆ ಮತ್ತು ಲಕ್ಷಾಂತರ ಭಾರತೀಯರು ವಲಸೆ ಹೋಗಿ ಹೊರನಾಡಿನಲ್ಲಿ ಭಾರತದ ತುಣುಕುಗಳನ್ನ ಬಿತ್ತುತ್ತಿರುವಂಥ ಸಂದರ್ಭದಲ್ಲಿ - ಸ್ವಾತಂತ್ರ್ಯಾನಂತರದ ಅತಿ ಪ್ರಮುಖ ಬೆಳವಣಿಗೆ ಏನು ಎಂದು ಕೇಳಿದರೆ ನೀವು ಏನಂತೀರಾ?
ಸ್ವಾತಂತ್ರ್ಯ ಗಳಿಸಿದ ನಂತರದ ಮೊದಲ ಸುಮಾರು ಎರಡು ದಶಕದ ಕಾಲದಲ್ಲಿ ಮೂರು ಯುದ್ಧಗಳ ನಡುವೆ ಬೆಳೆದ ಭಾರತೀಯರು ಕಂಡ ಬದುಕು ಒಂದು ಬಗೆಯದಾದರೆ, 80 ಮತ್ತು 90 ರ ದಶಕದಲ್ಲಿ ರಾಜಕೀಯ ತುಮುಲಗಳ ನಡುವೆ ಭ್ರಷ್ಟ ರಾಜಕಾರಣಿಗಳ ರಾಜಕೀಯದಲ್ಲಿ ಬೆಳೆದು ಬಂದ ಭಾರತದ ಇನ್ನೊಂದು ಸ್ತರದ ಚಿತ್ರಣ ಮತ್ತೊಂದು ಘಟ್ಟವನ್ನ ಗುರುತಿಸಬಹುದು. ಕಳೆದ ಶತಮಾನದ ಕೊನೆಯಲ್ಲಿ ಪ್ರಜ್ವಲಿಸಿ ಈಗ ಬರೇ ಜ್ವಲಿಸಿದ ಬೂದಿಯಂತೆ ಕಾಣುವ, ಡಾಟ್‌ಕಾಮ್ ಜಗತ್ತಿನ ಭಾಗವಾಗಿ ಬೆಳೆದು ಬಂದು ಈಗ ಹೊಸ ಜಗತ್ತಿನ ಐ. ಟಿ. ಆವಿಷ್ಕಾರಗಳಿಗೆ ಹದವಾಗಿ ಬೆಳೆಯುತ್ತಿರುವ ಭಾರತವೇ ಇನ್ನೊಂದು ರೀತಿಯದು. ಇವೆಲ್ಲವುದರುಗಳ ನಡುವೆ ಎಲ್ಲೋ ಕಳೆದು ಹೋದಂತೆ ಕಾಣುವ 75, 76, 77 ರ ಭಾರತವನ್ನು , ಹಾಗೂ ಆ ಕೆಲವು ವರ್ಷಗಳಲ್ಲಿ ಎಣ್ಣೆ ಹಚ್ಚಿದಂತೆ ಜಾರುತ್ತಿದ್ದ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಟ್ಟು ಬಿಡದ ಉಡದಂತೆ ಪ್ರಜಾಸತ್ತೆಯನ್ನು ಆಲಂಗಿಸಿಕೊಂಡು, ಭಾರತದ ಸ್ವಾತಂತ್ರ್ಯದ ಸತ್ವ ಸತ್ಯವನ್ನು ಲೋಕಕ್ಕೇ ಸಾರಿದ ಭಾರತದ ಪ್ರಜೆ ಪ್ರಜಾಪ್ರಭುತ್ವದ ಹಾದಿಯಲ್ಲಿ ಮುಂದೆ ಹೋಗಿ ರಾಜಕೀಯದ ನಿಚ್ಚಳವಾದ ದಾರಿಯನ್ನೂ ಕಂಡುಕೊಂಡ ಕೆಲವೆರಡು ವರುಷಗಳು, ನನ್ನ ಸಣ್ಣ ಬದುಕಿನಲ್ಲಿ ಅಚ್ಚರಿ ಹುಟ್ಟಿಸಿವೆ. ನಮ್ಮವರ ಬಗ್ಗೆ ಧೈರ್ಯ ನಂಬಿಕೆಗಳನ್ನ ಹುಟ್ಟಿಸಿ, ಭಾರತೀಯನೆಂದು ಹೆಮ್ಮೆಯಿಂದ ಹೇಳಿಕೊಳ್ಳಬಯಸುವಂತೆ ಮಾಡಿದ ಆ ವರುಷಗಳು ನನ್ನ ಅತ್ಯಂತ ಪ್ರೀತಿಯ ಭಾರತ.
ಅದು ನನ್ನ ಹೈಸ್ಕೂಲು ವಿದ್ಯಾಭ್ಯಾಸದ ದಿನಗಳು. ಆಗಷ್ಟೇ ಮೈಸೂರು ನಗರಕ್ಕೆ ಬಂದು ಆ ಬದಲಾವಣೆಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದೆ . ಹೈಸ್ಕೂಲಿಗೆ ಹೋಗುತ್ತಿದ್ದ ನನಗೆ, ತುರ್ತು ಪರಿಸ್ಥಿತಿ ಘೋಷಿಸಿಕೊಂಡು ತನ್ನ ಚಿಪ್ಪಿನಡಿಯಲ್ಲಿ ನುಸುಳ ತೊಡಗಿದ ಭಾರತದ ರಾಜಕೀಯದ ಬದುಕು ಅರ್ಥವಾಗುವುದಕ್ಕೂ ಮೊದಲೆ ಭಯವನ್ನ ಹುಟ್ಟಿಸಲಾರಂಭಿಸಿತ್ತು. ನನ್ನ ಸುತ್ತಣ ಬದುಕಿನಲ್ಲಿ , ಕೇವಲ ಒಂದು ಕುಟುಂಬದ ಬಯಕೆಯಾಗಿದ್ದ ತುರ್ತು ಪರಿಸ್ಥಿತಿ ಭಾರತಕ್ಕೆ ಒಳ್ಳೆಯದು ಎಂಬ ಅಭಿಪ್ರಾಯ ಪಟ್ಟವರೂ ಇದ್ದರು. ಬಡತನದ ಶಾಖವೆ ತಟ್ಟುವಷ್ಟಿದ್ದ ನನ್ನ ಪುಟ್ಟ ಬದುಕಿನಲ್ಲಿ ‘ಬಡವಾ ನೀ ಮಡಗ್ದಾಂಗಿರು..’ ಎನ್ನುವ ಮಾತನ್ನು ಅಂದು ಪದೇ ಪದೇ ಜ್ಞಾಪಿಸುತ್ತಿತ್ತು ತುರ್ತು ಪರಿಸ್ಥಿತಿ. ವಾರಕ್ಕೊಂದೆರಡು ಬಾರಿ ಕದ್ದು ಮುಚ್ಚಿ ಸಿಕ್ಕ ‘ಕಹಳೆ ’ ಮತ್ತು ಇತರ ಮೂಲಗಳಿಂದ, ಅರೆಬರೆಯಾಗಿ ಕೇಳುತ್ತಿದ್ದ ಮುಂದೆ ಜಗತ್ತಿಗೇ ತಿಳಿಯಲಿದ್ದ ಕೇರಳದ ರಾಜನ್ ಕಥೆಯ ಆಚೀಚೆಗಿನ ತುಣುಕುಗಳು, ಯಾರು ಸರಿ ಯಾರು ತಪ್ಪೆಂದು ಸಾಧಿಸಿ ತಿಳಿಯಲಾರದ ಪರಿಸ್ಥಿತಿಯಲ್ಲಿಯೂ; ಮುಂದೆ ಲಂಕೇಶ್ ಒಂದಿಗೆ ಚಡ್ಡಿಗಳೆಂದು (ಆರ್. ಎಸ್ಸ್. ಎಸ್ಸ್. ಗೆ ಲಂಕೇಶ್ ಇಟ್ಟ ಈ ಹೆಸರು ಮುಂದೆ ನಮಗೆಲ್ಲಾ ಒಂದು ತಮಾಷೆಯ ವಿಷಯವಾಗಿತ್ತು) ಚಾಣಿಸಿ ತಮಾಷೆ ಮಾಡುತ್ತಿದ್ದ ಕೆಲವು ಚಡ್ಡಿ ಅಂಕಲ್ಗಳು ನಮಗೆ ತಟ್ಟುವಂತಿದ್ದ ಗಂಭೀರ ಭಾವದಿಂದ ಹೇಳುತ್ತಿದ್ದುದನ್ನ ಕೇಳಿಸಿಕೊಳ್ಳುತ್ತಿದ್ದಂತೆಯೇ, ಒಮ್ಮಿಂದೊಮ್ಮೆಗೇ ಈ ಅಂಕಲ್ಗಳು ನಮ್ಮ ಕಣ್ಣಿಂದ ಮರೆಯಾಗಿ ಹೋದಾಗ, ಪರಿಸ್ಥಿತಿಯ ಘೋರತೆ ಸ್ವಲ್ಪ ಸ್ವಲ್ಪವಾಗಿ ನಮಗೆ ಅರ್ಥವಾಗ ಹತ್ತಿರಬೇಕು. ಅರ್ಥಕ್ಕಿಂತ ಹೆಚ್ಚಾಗಿ ಮತ್ತಷ್ಟು ಭಯ ಹುಟ್ಟಿಸಿರಬೇಕು. ಈ ನಡುವೆ ಕಾರಂತರು ಪದ್ಮ ಪ್ರಶಸ್ತಿಯನ್ನ ಮರಳಿಸಿದ್ದು ಹಾಗೂ ‘..ಸಾಹಿತ್ಯದ ಮೇಲೆ ತುರ್ತು ಪರಿಸ್ಥಿತಿ ಪ್ರಭಾವವೇನು..? ಎಂದು ಅನಂತಮೂರ್ತಿಯವರು ಕೇಳಿದ್ದು ಮರೆಯಲಾಗದ ಘಟನೆಗಳು.
ಒಟ್ಟಿನಲ್ಲಿ ಆ ಎರಡೇ ವರ್ಷಗಳಲ್ಲಿ ನ ಭಾರತದ ರಾಜಕೀಯ ದೊಂಬರಾಟದಲ್ಲಿ ಪ್ರಜಾತಂತ್ರ ಮತ್ತು ಪ್ರಾಯಶಃ ತನ್ನ ಸ್ವಾತಂತ್ರ್ಯವನ್ನೂ ಸಹ ಪಣವಾಗಿಟ್ಟು ಆಡಿದ ಭಾರತೀಯ, ಕೊನೆಯಲ್ಲಿ ವಿಜಯಿಯಾಗಿದ್ದ . ತುರ್ತು ಪರಿಸ್ಥಿತಿಯ ಈ ಗೆಲುವು ಅನೇಕ ಕಾರಣಗಳಿಂದ ಮಹತ್ವದ್ದು . ತುರ್ತು ಪರಿಸ್ಥಿತಿಯ ಬಿಕ್ಕಟ್ಟು ಅಗ್ನಿದಿವ್ಯದ ಮಿಂದುಬಂದ ಜಯಪ್ರಕಾಶ್ ನಾರಾಯಣ್‌ರಂಥ ನಾಯಕರುಗಳನ್ನು ಮುಂಚೂಣಿಗೆ ತಂದರೆ, ಚುನಾವಣೆಯಲ್ಲಿ ಭಾಗವಹಿಸಿ ಜೈಲಿನಲ್ಲಿದ್ದ ಜಾರ್ಜ್ ಫರ್ನಾಂಡಿಸ್‌ರಂಥ ರಾಜಕಾರಣಿಗಳಿಗೆ ಮರುಹುಟ್ಟು ನೀಡಿತು. ಜಗತ್ತಿನ ದೃಷ್ಟಿಯಲ್ಲಿ ಅನಕ್ಷರಸ್ಥನೆಂಬ ಪಟ್ಟವಿದ್ದ ಭಾರತೀಯ ಪ್ರಜೆ, 77ರ ಚುನಾವಣೆಯಲ್ಲಿ - ನೆಹರೂ ಕುಟುಂಬ ಹಾಗೂ ಹಳೆಯ ಕಾಂಗ್ರೆಸ್ ಇಬ್ಬರಿಗೂ ಕೊಕ್ ಕೊಟ್ಟು ಮೊದಲ ಬಾರಿಗೆ ಬೇರೆ ಪಕ್ಷವೊಂದನ್ನು ನಂಬಿ ಅದಕ್ಕೆ ಅಧಿಕಾರ ಕೊಡುವುದರ ಮೂಲಕ ಪ್ರಜಾತಂತ್ರದ ಅತೀ ಮುಖ್ಯ ಸ್ತರವೊಂದನ್ನ ಮೊದಲ ಬಾರಿಗೆ ತಲುಪಿದ್ದ . ಈ ಸಂಕ್ರಮಣದ ಗಳಿಗೆ ನನ್ನ ಮಟ್ಟಿಗಂತೂ ಅತೀ ಪವಿತ್ರವಾದದ್ದು . ಆನಂತರದ ರಾಜಕೀಯ ಸರ್ಕಸ್ ಹಾಗೂ ಥೇಟ್ ದೊಂಬರಾಟದವರಂತೆಯೇ ವರ್ತಿಸಿದ ರಾಜನಾರಾಯಣ್ ಅಂಥವರ ವರ್ತನೆಯೇ ಆಗಲಿ, ಅಥವಾ ಜನ ಮಾನ್ಯತೆಯ ದುರುಪಯೋಗ ಮಾಡಿದ ಲಲ್ಲೂ ಅಂಥ ರಾಜಕಾರಣಿಗಳ ಪರ್ವಕ್ಕೆ ನಿಧಾನವಾಗಿಯಾದರೂ ಮಂಗಳ ಹಾಡಲೂ ಬರುತ್ತದೆಯೆಂದು ತೋರಿಸಿಕೊಟ್ಟ ಪ್ರಜಾಪ್ರಭುತ್ವವಾದಿ ಭಾರತದ ಪ್ರಜೆ.
ಅನಕ್ಷರಸ್ಥ ಮತ್ತು ಬಡ ಮತದಾರರಿಂದಲೇ ತುಂಬಿರುವ ಭಾರತದ ಪ್ರಜಾತಂತ್ರವನ್ನು ನಿಕೃಷ್ಟತೆಯಿಂದ ಕಾಣುವ ಯಾರಿಗಾದರೂ ಗೋಚರಿಸುವ ಸುಲಭ ಸತ್ಯಗಳಲ್ಲೊಂದು: ‘ರಷ್ಯಾಗಿಂತ ಹೆಚ್ಚಿನ ಹಸಿದ ಬಾಯಿಗಳಿಗೆ ಅನ್ನವಿತ್ತ ಶಕ್ತಿ ಭಾರತೀಯರದ್ದು’ ಎಂಬ ಅಂಶ. ಸಂಪತ್ಭರಿತ, ಸಂತೃಪ್ತ ಸುಖೀ ಸಮಾಜವೆಂದು ಒಪ್ಪಿಕೊಳ್ಳದಿದ್ದರೂ, ಆ ದಾರಿಯಲ್ಲಿ ಸಾಗುತ್ತಾ ಭಾರತ ಹಿಂದೆ ಬಿಟ್ಟಿರುವ ಇತರ ದೇಶಗಳನ್ನ ಗಮನಿಸಿದಾಗ, ಮತ್ತೊಮ್ಮೆ ನನಗೆ ಅಭಿಮಾನ ಮೂಡುವುದು. ತನ್ನ ಶಕ್ತಿಯಳವಿನಲ್ಲಿಯೆ ಮತ ಚಲಾಯಿಸಿ ಪ್ರಭುತ್ವ ನಡೆಸುವ ಭಾರತೀಯ ಮತದಾರ, ಆ ಕೆಲವು ವರ್ಷಗಳ ಕಠಿಣ ಪರಿಸ್ಥಿಯಿಂದ ಹೊರ ಬಂದ ಪವಾಡ ಸದೃಶ ಮಾಂತ್ರಿಕತೆ ಈಗಲೂ ನನ್ನ ಅಚ್ಚರಿಗೆ ಹಾಗೂ ಹೆಮ್ಮೆಗೆ ಕಾರಣವಾಗಿದೆ.
ಆಗಸ್ಟ್ 15 ಹೊಸ್ತಿಲಲ್ಲಿದೆ.












Click it and Unblock the Notifications