• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಡೂ ಆಟ ಆಡು... ಕೆಕೆಎನ್‌ಸಿ ರಂಗು

By Staff
|
Ravi Gopala Rao
  • ರವಿ ಗೋಪಾಲ ರಾವ್‌, ಸ್ಯಾನ್‌ ಹೋಸೆ, ಕ್ಯಾಲಿಫೋರ್ನಿಯ.

ravi_gopalarao@hotmail.com

ಆಡೂ ಆಟ ಆಡು, ಆಡೂ ಆಡೂ ನೀ ಆಡಿ ನೋಡು...

ಎರಡು ದಶಕಗಳ ಹಿಂದೆ ಕಿಶೋರ್‌ ಕುಮಾರ್‌ ಕನ್ನಡದಲ್ಲಿ ಹಾಡಿದ ಈ ಸಾಲುಗಳನ್ನ ನೆನಪಿಗೆ ತಂದಿದ್ದು ಈ ವರ್ಷದ ಕ್ರೀಡಾ ದಿನ. ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ಆಶ್ರಯದಲ್ಲಿ ಜೂನ್‌ 7ರಂದು ಸ್ಯಾನ್‌ ಹೋಸೆ ನಗರದ ಮರ್ಡಾಕ್‌ ಪಾರ್ಕಿನಲ್ಲಿ ನಡೆದ ಈ ಕ್ರೀಡಾ ದಿನದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಸ್ಪರ್ಧಾಭಿಮಾನಿಗಳು ಸೇರಿದ್ದರು. ತಾಯ್ನಾಡನ್ನೇ ಹಂಬಲಿಸುವ ಕನ್ನಡಿಗರಿಗೆ ಈ ಕ್ರೀಡಾ ದಿನದಂದು ಮನೆಯಾಳಗೆ ಆಡುವ ಕೆಲವು ವಿಶಿಷ್ಟ ಸಂಪ್ರದಾಯ ಆಟಗಳಾದ ಚೌಕಬಾರ, ಅಡಗುಣಿ ಮಣೆ, ಹಾಗು ಸ್ವದೇಶೀ ಆಟಗಳಾದ ಲಗೋರಿ ಮತ್ತು ಖೊ ಖೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜೊತೆಗೆ ಕ್ರೀಡಾಪಟುಗಳು ವಾಲಿಬಾಲ್‌, ಮಹಿಳೆಯರಿಗಾಗಿ ತ್ರೋಬಾಲ್‌, ರನ್ನಿಂಗ್‌, ವೇಗನಡಿಗೆ ಮುಂತಾದ ಆಟಗಳಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಕ್ರೀಡೆಯಲ್ಲಿ ಗೆಲ್ಲುವುದೊಂದೇ ಗುರಿಯಾಗಿದ್ದಂತೆ ಕಾಣಲಿಲ್ಲ ಈ ಜನ ಸಮೂಹಕ್ಕೆ. ವನಭೋಜನ, ಮನರಂಜನೆ, ವಿನೋದ, ಹಾಸ್ಯ, ಜೊತೆಗೆ ಪರಸ್ಪರ ಸಂಧಿಸಲು ಸಿಗುವ ಈ ಸದಾವಕಾಶಕ್ಕಾಗಿಯೇ ಸೇರಿದ್ದವರು ಹಲವರು.

KKNC Summer Sports- 2003ಉಪ್ಪಿಟ್ಟು, ಡೋನಟ್‌ ಜೊತೆಗೆ ಬಿಸಿ ಬಿಸಿ ಕಾಫಿಯ ಉಪಹಾರ ಮುಗಿದ ನಂತರ ಸಮಯಕ್ಕೆ ಸರಿಯಾಗಿ ಕ್ರೀಡಾ ದಿನ ಆರಂಭವಾಯಿತು. ಕ್ರೀಡಾಂಗಣದಲ್ಲಿ ಆಗಲೇ ಒಂದು ಕಡೆ ನಾಲ್ಕು ವಾಲಿಬಾಲ್‌, ಖೊ ಖೋ ಹಾಗು ಮಕ್ಕಳ ಆಟಗಳ ಆವರಣಗಳು, ಚೌಕಬಾರ, ಅಡಗುಣಿ ಮಣೆ ಆಡಲು ಬೇಕಾದ ಎಲ್ಲ ಸಾಮಗ್ರಿಗಳನ್ನ ಅಚ್ಚುಕಟ್ಟಾಗಿ ಸಜ್ಜು ಮಾಡಲಾಗಿತ್ತು.

ಮಕ್ಕಳ ಕಾರ್ಯಕ್ರಮಗಳ ನಿರ್ವಹಣೆ ಹೊತ್ತ ವೀಣಾ ಗೌಡರವರು ಮಕ್ಕಳಿಗಾಗಿ ಏರ್ಪಡಿಸಿದ್ದ ವೇಗದೋಟ, ಚೀಲದೋಟ, ಕಪ್ಪೆ ಜಿಗಿತದೋಟ, ನಿಂಬೆ-ಚಮಚದೋಟ, ಮುಂತಾದ ಆಟಗಳನ್ನ ತುಂಬ ಉತ್ಸುಕತೆಯಿಂದ ನಡೆಸಿಕೊಟ್ಟರು. ಜೊತೆ ಜೊತೆಗೆ ಹಿರಿಯರು ಕೂಡ ಅವರಿಗಾಗಿ ಏರ್ಪಡಿಸಿದ್ದ ವೇಗ ನಡಿಗೆ, ಸಂಗೀತ ಕುರ್ಚಿ, ಮೊದಲಾದ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ತಮಗಿರುವ ದೃಢಚಿತ್ತ ಹಾಗು ದೈಹಿಕ ಆರೋಗ್ಯದ ಬಗ್ಗೆ ಹೆಮ್ಮೆ ಪಟ್ಟದ್ದಲ್ಲದೆ ಈಗಿನ ಜನಾಂಗದವರನ್ನೂ ಅಚ್ಚರಿಗೊಳಿಸಿದರು. ವಯಸ್ಕರೂ ಮಕ್ಕಳಂತೆ ಲಂಗು ಲಗಾಮಿಲ್ಲದೆ ಲಗೋರಿ ಆಟದಲ್ಲಿ ಮೈಮರೆತದ್ದನ್ನ ಅಮೇರಿಕದಲ್ಲಿ ಮೊದಲನೇ ಬಾರಿ ನೋಡುವ ಅವಕಾಶ ಈ ಕ್ರೀಡಾ ದಿನದಂದು ದೊರೆಯಿತು. ಒಂದೆಡೆ ಹಿರಿಯರು ಚೌಕಬಾರದಲ್ಲಿ ಮಗ್ನರಾಗಿ ಆಡುತ್ತಿದರೆ ಯುವಕರ ವಾಲಿಬಾಲ್‌ ಆಟದ ಕರತಾಡನ ಮತ್ತೊಂದೆಡೆ. ಸ್ತ್ರೀಯರೂ ಕೂಡ ಪುರುಷ-ಪ್ರಧಾನವಾದ ವಾಲಿಬಾಲ್‌ ತಂಡದಲ್ಲಿ ಸೇರಿ ಸಮನಾಗಿ ಆಡಿದ್ದೊಂದು ವಿಶೇಷ. ‘ಪುಡಾರಿ,’ ‘ಬಹದ್ದೂರ್‌ ದಂಡು,’ ‘ಆಂಬೊಡೆ,’ ‘ಕಿತ್ತೂರ್‌ ಪಡೆ,’ ಹೀಗೆ ಹಲವಾರು ವಿನೋದ ಹೆಸರಿನ ಹನ್ನೆರೆಡು ವಾಲಿಬಾಲ್‌ ತಂಡಗಳ ಸ್ಪರ್ಧೆ ಅಂತಿಮ ಘಟ್ಟಕ್ಕೆ ತಲುಪಿದಾಗ ಊಟದ ವೇಳೆಯಾಗಿತ್ತು.

ವನಭೋಜನದ ನಂತರ ಜರುಗಿದ ಖೊ ಖೋ, ತ್ರೋಬಾಲ್‌ ಪಂದ್ಯಗಳ ಫೈನಲ್ಸ್‌ ಮತ್ತು ಮಕ್ಕಳ ಉಳಿದ ಸ್ಪರ್ಧೆಗಳು ಬೆಳಗಿನಷ್ಟೆ ಸ್ಫೂರ್ತಿಧಾಯಕವಾಗಿದ್ದವು. ಅದೇ ಕಾರಣದಿಂದಿರಬೇಕು ‘ಸ್ಫೂರ್ತಿ’ ತಂಡ ಖೊ ಖೋ ಗೆದ್ದದ್ದರಲ್ಲಿ ಅತಿಯಶಯ ಕಾಣಲಿಲ್ಲ! ಮಧ್ಯಾಹ್ನದ ವಿರಾಮದಲ್ಲಿ ದಣಿದ ಕ್ರೀಡಾಪಟುಗಳಿಗೆ ಹಾಗು ಬಂದ ಜನ ಸಮೂಹಕ್ಕೆ ‘ರಿಯಲ್‌ ಐಸ್‌ ಕ್ರೀಮ್‌’ ಒದಗಿಸಿದ ತಣ್ಣನೆಯ ವಿವಿಧ ಐಸ್‌ ಕ್ರೀಮುಗಳು ಸಮಯೋಚಿತವಾಗಿತ್ತು. ಕನ್ನಡ ಕೂಟ ‘ರಿಯಲ್‌ ಐಸ್‌ ಕ್ರೀಮ್‌’ನ ಪೋಷಕರಿಗೆ ಕೃತಜ್ಞತೆ ಅರ್ಪಿಸುವುದರೊಂದಿಗೆ ಆ ದಿನದ ಬಹುಮಾನ ವಿತರಣಾ ಸಮಾರಂಭ ಶುರುವಾಯಿತು. ಕೂಟದ ಅಧ್ಯಕ್ಷ ಸುರೇಶ್‌ ಬಾಬುರವರು ಸ್ಪರ್ಧೆಗಳಲ್ಲಿ ಗೆದ್ದವರಿಗೂ ಭಾಗವಹಿಸಿದ ಮಕ್ಕಳಿಗೂ ಬಹುಮಾನ ವಿತರಣೆ ಮಾಡಿದರು. ವಂದನಾರ್ಪಣೆಯ ನಂತರ ಕ್ರೀಡಾ ದಿನದ ಅಂತಿಮ ಸ್ಪರ್ಧೆಗಾಗಿ ಎಲ್ಲರೂ ಉತ್ಸಾಹ, ಉದ್ರೇಕ, ಸಡಗರದಿಂದ ಎದುರು ನೋಡುತ್ತಿದ್ದರು: ಮಕ್ಕಳಿಗಾಗಿ ಹಗ್ಗ ಜಗ್ಗಾಟ (‘ಟಗ್‌ ಆಫ್‌ ವಾರ್‌’) ಮತ್ತು ವಾಲಿಬಾಲ್‌ ಫೈನಲ್ಸ್‌. ‘ಪಂಟರು’ ಮತ್ತು ‘ಬಹದ್ದೂರ್‌ ದಂಡು’ ತಂಡಗಳ ಮಧ್ಯೆ ನಡೆದ ವಾಲಿಬಾಲ್‌ ಫೈನಲ್ಸ್‌ ಕ್ರೀಡಾ ದಿನಕ್ಕೆ ಶೋಭೆ ಕೊಟ್ಟಿತು. ‘ಪಂಟರು’ ತಂಡದವರು ವಿಜಯ ಗಳಿಸಿ ಅಭಿಮಾನಿಗಳ ಹೃದಯ ಗೆದ್ದರು. ವಿಜೇತ ತಂಡಕ್ಕೆ ಬಹುಮಾನ ವಿತರಣೆಯಾದ ನಂತರ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು. ವಂದನಾರ್ಪಣೆ ಸಮಯದಲ್ಲಿ ಈ ಕ್ರೀಡಾ ದಿನದ ಯಶಸ್ಸಿಗೆ ಕಾರಣರಾದ ಎಲ್ಲ ಸ್ವಯಂಸೇವಕರಿಗೂ ಹಾಗು ಕೂಟದ ಕಾರ್ಯಕಾರಿ ಸಮಿತಿಯವರಿಗೆ ಸ್ಪರ್ಧಾಭಿಮಾನಿಗಳಿಂದ ಸಿಕ್ಕ ಕರತಾಡನ ಕಿವಿಗಡಚುಕ್ಕುವಂತಿತ್ತು. ಈ ಪ್ರಶಂಸನೀಯ ಗುಂಪಿನಲ್ಲಿ ತಮ್ಮ ನಿಸ್ವಾರ್ಥ ಸೇವೆಯಿಂದ ಗಮನ ಸೆಳದವರು ಕ್ರೀಡಾ ಸಮಿತಿಯ ಶ್ರೀ ಸುನಿಲ್‌ ಮೂರ್ತಿ ಮತ್ತು ಶ್ರೀನಾಥ್‌ ಹೊನ್ನವಳ್ಳಿ, ಹಾಗು ಕೂಟದ ಕಾರ್ಯದರ್ಶಿ ಮಧುಕಾಂತ ಕೃಷ್ಣಮೂರ್ತಿ.

ಕಾಮೆಂಟ್ಸ್‌

ವರದಿಗಾರ ನೋಡಿದ್ದನ್ನು ಬರೆಯುವುದು ಕರ್ತವ್ಯ ಪರಿಪಾಲನೆ. ಆದರೆ ಈ ಕ್ರೀಡಾ ದಿನದಲ್ಲಿ ಪಾಲ್ಗೊಂಡ ಸ್ಪರ್ಧಾಭಿಮಾನಿಗಳ ಪ್ರತಿಕ್ರಿಯೆಗಳನ್ನು ಅವರಿಂದಲೇ ಕೇಳಿ ತಿಳಿದರೆ ಇನ್ನೂ ಚೆನ್ನ. ಇದೋ ಕೇಳಿ:

‘ಲಗೋರಿ ಸಕತ್ತಾಗಿತ್ತಪ್ಪ.’ ಬಿಸಿಲಿನಲ್ಲಿ ತಾನೊಬ್ಬಳೇ ಅಳುವ ಮಗುವನ್ನು ನೋಡಿಕೊಂಡು ಮುನಿಸಿಕೊಂಡ ಮಡದಿಗೆ ಲಗೋರಿ ಆಟ ಮುಗಿಸಿ ಬಂದ ಜಾಣ ಹೇಳಿದ್ದು.

‘ದೇವರಿಗೊಂದು, ದಿಂಡಿರಿಗೊಂದು, ನನಗೊಂದು.’ ಕವಡೆಗಳ ಝುಳು ಝುಳು ಧ್ವನಿಗಳ ಜೊತೆ ಚೌಕಬಾರ ಆಟದ ಆರಂಭದಲ್ಲಿ ಕೇಳಿ ಬಂದ ಪ್ರಾರ್ಥನೆ.

‘ಕೀಚಕನ ವಧೆ!’ ವಾಲಿಬಾಲ್‌ ಅಂತಿಮ ಸ್ಪರ್ಧೆಯಲ್ಲಿ ವಾದಿರಾಜರವರು ಭೀಮನಂತೆ ಘರ್ಜಿಸಿ ಒಂದು ಉತ್ತಮ ಶಾಟ್‌ ಹೊಡೆದಾಗ ಪ್ರೇಕ್ಷಕರೊಬ್ಬರಿಂದ ಬಂದ ಉದ್ಗಾರ.

‘ಉಪ್ಪಿಟ್ಟು ಬಂಬಾಟಗಿತ್ತು. ನೀವು ಮಿಸ್ಸ್‌ ಮಾಡಿಕೊಂಡುಬಿಟ್ರಿ.’ ಹೊತ್ತು ಮೀರಿ ಬಂದ ಗೆಳಯರಿಗೆ ಆಕ್ಷೇಪಣೆ.

‘ನೀವು ಇನ್ನು ಮುಂದೇನೂ ಇದೇ ರೀತಿ ನಮ್ಮನ್ನು ಅಮೇರಿಕಗೆ ಕರೆಸಿ ಕೊಂಡು.. ಆಟ ಆಡಲು ಅವಕಾಶ ಮಾಡಿಕೊಡಿ..’ ಹಿರಿಯ ಮುತ್ತೈದೆಯಾಬ್ಬರ ಹಾರೈಕೆ!

‘ಪಗಡೆ ಆಟಾನೂ ಆಡಿಸಿದ್ದರೆ ಚೆನ್ನಾಗಿರುತ್ತಿತ್ತು.’ ಮತ್ತೊಬ್ಬ ಹಿರಿಯರ ಬಯಕೆ.

ಆಡೂ ಆಟ ಆಡು, ಆಡೂ ಆಡೂ ನೀ ಆಡಿ ನೋಡು... ಕ್ರೀಡಾ ದಿನದಂದು ಯಾರೂ ಸೋಲಲಿಲ್ಲ. ಗೆದ್ದವರೆಲ್ಲರೂ ಕನ್ನಡಿಗರು!

ಕ್ರೀಡಾ ದಿನದ ಯಶಸ್ಸಿಗೆ ಈ ಕೆಳಕಂಡ ಸ್ವಯಂಸೇವಕರುಗಳನ್ನು ಕನ್ನಡ ಕೂಟ ಕೃತಜ್ಞತೆಯಿಂದ ನಮೂದಿಸುತ್ತದೆ: ಕೆ.ವಿ.ಚಂದ್ರಶೇಖರ್‌, ರಮೇಶ್‌ ಅನಂತರಾಮಯ್ಯ, ಮೀನಾಕ್ಷಿ ಭಟ್‌, ಶ್ರೀವತ್ಸ ದುಗ್ಲಾಪುರ, ಶ್ರೀಧರ ಗೋಪಾಲ್‌, ವೀಣಾ ಗೌಡ, ಸದಾನಂದ ಹೆಬ್ಬಾಳ್‌, ರಾಜೀವ್‌ ಹುರಳಿಕೊಪ್ಪಿ, ವರ್ಷ ಹುರಳಿಕೊಪ್ಪಿ, ಶಾಲಿನಿ ಲಲ್ಸಾಂಗಿ, ಲತ ಮಧುಸೂಧನ್‌, ಕೆ.ಅರ್‌.ಎಸ್‌. ಮೂರ್ತಿ, ರಾಧ ಮೂರ್ತಿ, ಪ್ರಸಾದ್‌ ನಾಗರಾಜ, ರಾಧಿಕ ರಾವ್‌, ಶ್ರೀಧರ ರಾವ್‌, ಸಿದ್ದು ರತಿ, ನವೀನ್‌ ರೆಡ್ಡಿ, ರಷ್ಮಿ ತಿರುಮಲಾಚಾರ್‌, ಶೇಷಾದ್ರಿ ವಾಸುದೇವಮೂರ್ತಿ, ಶರ್ಮಿಳ ವಿದ್ಯಾಧರ, ಮತ್ತು ಇತರರು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X