• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಉಲಿ-ಕನ್ನಡ ಕಲಿ-ಕನ್ನಡ ನಲಿ

By Staff
|

ದಕ್ಷಿಣ ಕ್ಯಾಲಿಫೋರ್ನಿಯದ ಕರ್ನಾಟಕ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಮೊದಲ ಕನ್ನಡ ತರಗತಿ 'ಕನ್ನಡ ಕಲಿ" ಸೆಪ್ಟೆಂಬರ್‌ 2000ದಲ್ಲಿ ಪ್ರಾರಂಭವಾಯಿತು. ಈಗ ಈ ತೆಂಕಣ ನಾಡಿನಲ್ಲಿ ಆರು ಕನ್ನಡ ಕಲಿ ಶಾಲೆಗಳು ಭರದಿಂದ ನಡೆಯುತ್ತಿದ್ದು, ಕನ್ನಡ ಕಲಿ ಒಂದು ಆಂದೋಲನವಾಗಿ ಪರಿಣಮಿಸಿದೆ. ಇಲ್ಲಿ ನಮ್ಮ ಮಕ್ಕಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಪರಿಸರ ನಿರ್ಮಿಸುವ ಜನ-ಮೂಲ ಪ್ರಯತ್ನವೆ ಕನ್ನಡ ಕಲಿ. ಮಕ್ಕಳೆ ಏಕೆ, ಆಸಕ್ತಿ ಉಳ್ಳ ಎಲ್ಲರಿಗು ಇಲ್ಲಿ ಕನ್ನಡ ಕಲಿಯಲು ಅವಕಾಶ ಉಂಟು.

ಲೇಖನ : ವಿಶ್ವೇಶ್ವರ ದೀಕ್ಷಿತ

ಭಾಷೆ ಸಂಸ್ಕೃತಿಯ ತಳಹದಿ : ವ್ಯವಹಾರಕ್ಕಾಗಿ ಇಂಗ್ಲಿಷ್‌ನಲ್ಲಿ ಮುಳುಗಿ, ಕನ್ನಡ ಮಾತನಾಡಲು ಮನೆಯನ್ನು ಬಿಟ್ಟು ಬೇರೆಡೆ ಅವಕಾಶ ಇಲ್ಲದೆ ನಾವು ಕನ್ನಡ ಮರೆತು ಹೋಗುವ ಪರಿಸ್ಥಿತಿ ಬಂದಿದೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದು ಕನ್ನಡದಲ್ಲಿ ಬೇರು ಬಿಟ್ಟ ನಮಗೇ ಹೀಗಾದರೆ, ಹೊರನಾಡಿನಲ್ಲಿ ಬೆಳೆದ ನಮ್ಮ ಮಕ್ಕಳ ಗತಿ ಏನು? ಪ್ರಯತ್ನಪೂರ್ವಕವಾಗಿ ನಾವು, ಅವಕಾಶ ಸಿಕ್ಕಾಗಲೆಲ್ಲ ಕನ್ನಡ ಮಾತನಾಡಿ, ಮನೆಯಲ್ಲಿ ಕನ್ನಡ ವಾತಾವರಣ ಉಳಿಸಿಕೊಳ್ಳದಿದ್ದರೆ ಇಲ್ಲಿ ಕನ್ನಡ ಉಳಿಯದು. ಕನ್ನಡ ಭಾಷೆಯಾಂದಿಗೆ ಕನ್ನಡ ಸಂಸ್ಕೃತಿಯೂ ಅಳಿಯುವುದು ಖಚಿತ.

ಮೊದಲ ಕನ್ನಡ ಕಲಿ : 'ಕನ್ನಡಿಗ" ಆಗಲು ಕನ್ನಡ ಅವಶ್ಯ ಎಂಬ ನಮ್ಮ ದೃಢ ನಂಬಿಕೆಯಾಂದಿಗೆ, ಮೊದಲು ನಮ್ಮ 'ಅರಳು ಮಲ್ಲಿಗೆ" ಬಾಲ ವಿಹಾರದಲ್ಲಿ ಕನ್ನಡ ಕಲಿಸಲು ಪ್ರಾರಂಭಿಸಿದೆವು. ತಿಂಗಳಿಗೆ ಒಂದು ಬಾರಿ 20 ನಿಮಿಷ ಮಾತ್ರ ಪಾಠ ಹೇಳಿ ಕೊಡುವ ಪ್ರಯತ್ನ ನಡೆಯಿತು. ನಮ್ಮ ನಿರೀಕ್ಷೆಗೂ ಮೀರಿ, ಮಾತು, ಸ್ಪಷ್ಟ ಉಚ್ಚಾರ, ಮತ್ತು ಬರೆಯಲು ಬೇಗನೆ ಕಲಿತ ಮಕ್ಕಳು ನಮಗೆ ಸ್ಫೂರ್ತಿ ಬೀಜಗಳಾದರು: ಅರಳು ಮಲ್ಲಿಗೆ ಅಲ್ಲದೆ, ಎಲ್ಲ ಕನ್ನಡ ಮಕ್ಕಳಿಗು ಕನ್ನಡ ಕಲಿಯುವ ಅವಕಾಶ ಏಕೆ ಕಲ್ಪಿಸಬಾರದು ಎಂಬ ವಿಚಾರ ಕನ್ನಡ ಕಲಿಗೆ ನಾಂದಿ ಆಯಿತು. ಕನ್ನಡ ಕೆಲಸಕ್ಕೆ ಮುಹೂರ್ತ ಬೇಕೆ? ಕೂಡಲೆ, ಮೊದಲ ಶಾಲೆ ಸೆಪ್ಟೆಂಬರ್‌ 24, 2000 ದಂದು ಅರ್ವೈನ್‌ನಲ್ಲಿ ಸೇರಿತು. ಅರ್ವೈನ್‌ ನಗರದ ಪಾರ್ಕ್‌ ಅಧಿಕಾರಿಗಳು, ನಮ್ಮ ಸಾಂಸ್ಕೃತಿಕ ಕೊಡುಗೆ, ಪ್ರಯತ್ನಗಳನ್ನು ಮೆಚ್ಚಿ, ತಮ್ಮ ಕಟ್ಟಡವನ್ನು ಕನ್ನಡ ಶಾಲೆಗೆ ತಿಂಗಳಿಗೆ ಎರಡು ಬಾರಿ ಉಚಿತವಾಗಿ ಉಪಯೋಗಿಸಲು ಅನುಮತಿ ನೀಡಿದರು. ಅರಳು ಮಲ್ಲಿಗೆಯ ಉತ್ಸಾಹಿ ಅಧ್ಯಾಪಕರು ಮತ್ತು ಮಕ್ಕಳಿಂದ 'ಕನ್ನಡ ಕಲಿ" ಶುರುವಾಗಿ, ಮೊದಲ ವರ್ಷ ಕನ್ನಡ ಸಂಭಾಷಣೆಗೆ ಆದ್ಯತೆ ನೀಡಲಾಯಿತು.

ಅರ್ವೈನ್‌ನಲ್ಲಿ ಕನ್ನಡ ಶಾಲೆ ತೆರೆಯುವ ಡಂಗುರ ಆಗಲೆ ಹೊಡೆದಾಗಿತ್ತು. ಈ ನಮ್ಮ ಸಾಹಸಕ್ಕೆ ಪ್ರಮಾಣ ದೊರೆತದ್ದು ಹ್ಯೂಸ್ಟನ್‌ನ 2000ದ ಕನ್ನಡ ಸಮ್ಮೇಳನದಲ್ಲಿ ನಡೆದ ಚಿಕ್ಕ ಘಟನೆ ಒಂದರಿಂದ. ಇಳಿದುಕೊಂಡಿದ್ದ ಹೊಟೆಲಿನ ಎಲಿವೇಟರಿನಲ್ಲಿ ನಿಂತ ಹುಡುಗನೊಬ್ಬನಿಗೆ, ' Are you enjoying the Sammelana"" ಎಂದರೆ, 'ಹೌದು. ನಾವು ಇಲಿನಾಯದಿಂದ ತುಂಬ ಜನ ಬಂದಿದ್ದೇವೆ. ಬಹಳ ಮಜ ಬರ್ತಿದೆ. ನಾಲ್ಕನೆ ಮಹಡಿಗೆ ಹೋಗಲು ಈಗ ಗುಂಡಿ ಒತ್ತುತ್ತೀರಾ?" ಎಂದು ಅಚ್ಚ ಕನ್ನಡದಲ್ಲಿ ಹೇಳಬೇಕೆ? ಕೂಲಂಕಷವಾಗಿ, ಅವನ ಕನ್ನಡದ ಬಗ್ಗೆ ವಿಚಾರಿಸಿದೆ. ನಂತರ, ಅಲ್ಲಿ ಒಂದು ಕನ್ನಡ ಶಾಲೆ ನಡೆಸಿದ, ಶಿಕ್ಷಕರು ಮತ್ತು ತಾಯಿ-ತಂದೆಯರ ಜೊತೆ ಮಾತನಾಡಿ ಸಾಕಷ್ಟು ಮಾಹಿತಿ ಗಳಿಸಿಕೊಂಡೆವು.

ಹನಿ ಹನಿ ಹಳ್ಳ : ದೊಡ್ಡದಾದ ಒಂದು ಕನ್ನಡ ಶಾಲೆಯನ್ನು ನಡೆಸುವ ಉದ್ದೇಶ ನಮ್ಮದಾಗಿರಲಿಲ್ಲ ; ತಾಯಿ-ತಂದೆಯರು, ಮತ್ತು ಸ್ವಯಂಸೇವಕರು ಸೇರಿ, ತಮಗೆ ತಿಳಿದಂತೆ, ತಮ್ಮ ಗತಿಗೆ ಅನುಗುಣವಾಗಿ ಅಲ್ಲಲ್ಲಿ ಹಲವಾರು ಚಿಕ್ಕ ಚಿಕ್ಕ ಶಾಲೆಗಳನ್ನು ನಡೆಸಲಿ ಎಂಬ ಆಸೆ ನಮ್ಮದಾಗಿತ್ತು. ಈಗ, ಅರ್ವೈನ್‌, ಡೈಮಂಡ್‌ ಬಾರ್‌, ಸರಿಟೊ, ಅನಹೈಂ ಹಿಲ್ಸ್‌, ಸ್ಯಾನ್‌ ಪರ್ನಾಂಡೊ ಕಣಿವೆ, ಮತ್ತು ಪಾಮಡೇಲ ಗಳಲ್ಲಿ 'ಕನ್ನಡ ಕಲಿ" ಶಾಲೆಗಳು ಮಕ್ಕಳಿಂದ ತುಂಬಿವೆ. ಹತ್ತಕ್ಕು ಹೆಚ್ಚು ಶಿಕ್ಷಕರು ಮತ್ತು 50ಕ್ಕು ಹೆಚ್ಚು ಮಕ್ಕಳು ಈ ಶಾಲೆಗಳಲ್ಲಿ ನಿರತರಾಗಿದ್ದಾರೆ.

ಕನ್ನಡ ಕಲಿ ಚಟುವಟಿಗಳು ವಿವಿಧ :

* ಕನ್ನಡ ಉಲಿ : ಪ್ರಶ್ನೋತ್ತರ, ದೃಶ್ಯ, ನಟನೆ, ಕಥೆ ಮತ್ತು ಜೋಕು ಹೇಳುವುದು

* ಕನ್ನಡ ಕಲಿ : ಓದು - ಪಠ್ಯ, ಕಥೆ, ಕವನ

ಬರೆ - ವರ್ಣಮಾಲೆ, ಕಾಗುಣಿತ, ಸುಲಭ ಶಬ್ದಗಳು, ಒತ್ತಕ್ಕರಗಳು, ಅಂಕಿಗಳು, ವಾಕ್ಯ, ಘಟನೆ, ಪ್ರಬಂಧ

* ಕನ್ನಡ ನಲಿ : ಅಂಕಿ ಮತ್ತು ಪದ್ಯಗಳೊಂದಿಗೆ ವ್ಯಾಯಾಮ; ಶಬ್ದಗಳ ಅಂತ್ಯಾಕ್ಷರಿ, 'ಅದು ಏನು?" ಇತ್ಯಾದಿ ಆಟಗಳು.

ಯಾಹೂ ಗುಂಪುಗಳಲ್ಲಿ ಕನ್ನಡ ಕಲಿ ವಿಭಾಗಕ್ಕೊಂದು ಗುಂಪು ಮಾಡಿ, ಕ್ಯಾಲೆಂಡರ್‌, ಸಂಪರ್ಕ, ಮಾಹಿತಿ ವಿತರಣೆಗೆ ಅನುಕೂಲ ಮಾಡಿಕೊಂಡಿದ್ದೇವೆ. ವರ್ಷಕ್ಕೆ ಎರಡು ಬಾರಿ ಕನ್ನಡ ಶಿಬಿರ ಮತ್ತು ಶಿಕ್ಷಕರ ಮೇಳ ನಡೆಸುವ ಗುರಿ ಇದೆ.

ಕರ್ನಾಟಕದ ಪಠ್ಯ ಪುಸ್ತಕಗಳು ಕನ್ನಡ ಕಲಿಗೆ ಮುಖ್ಯ ಆಕರಗಳಾದರೂ, ಇತರ ಕತೆ, ಕವನ ಸಂಕಲನಗಳಿಂದ ಚಟುವಟಿಕೆಗಳನ್ನು ಬಲಪಡಿಸಿಕೊಂಡಿದ್ದೇವೆ. ಕನ್ನಡ ನಾಡಿನಿಂದ ಭೇಟಿಗಾಗಿ ಬಂದ ಅಜ್ಜಿ-ತಾತಂದಿರು ಮತ್ತು ಜಾಲತಾಣಗಳಲ್ಲಿ ಸಿಕ್ಕುವ ಮಾಹಿತಿ ಉಪಯುಕ್ತ. ಆದರೆ ಕನ್ನಡ ಕಲಿಸಲು ಈಗ ಸಿಗುವ ಕಂಪ್ಯೂಟರ್‌ ಸಿ.ಡಿ. ಮತ್ತು ತಂತ್ರಾಂಶಗಳು ಅನುಪಯುಕ್ತ ಮತ್ತು ಸಮಯ ಹಾಳು ಎಂಬುದು ನಮ್ಮ ಅನುಭವ.

ಚಾಲೆಂಜ್‌ಗಳು : ಕನ್ನಡ ಕಲಿ ಶಿಕ್ಷಕರಿಗೆ ಮತ್ತು ಸಂಯೋಜಕರಿಗೆ ಚಾಲೆಂಜ್‌ಗಳು ಹಲವು. ಇದರಲ್ಲಿ ಮೊದಲ ಮತ್ತು ಮುಖ್ಯ ಅಡೆತಡೆ ತಂದೆ-ತಾಯಿಯರು ಹಾಕುವ ಹಿಂದೇಟು. ಕನ್ನಡ ಕಲಿತು ಗಳಿಸುವುದಾದರೂ ಏನು? ಕನ್ನಡ ಕಲಿತರೆ ಇಲ್ಲಿ ಇಂಗ್ಲಿಷ್‌ ಮತ್ತು ಇತರ ಓದಿನ ಮೇಲೆ ವಿಪರೀತ ಪರಿಣಾಮ ಆಗುವುದಿಲ್ಲವೆ? ಅಮೆರಿಕೆಯಲ್ಲಿ ಬೆರೆತು ಒಂದಾಗಲು ಕಠಿಣವಾಗಬಹುದಲ್ಲವೆ? ಇಂತಹ ನೂರೆಂಟು ಕಲ್ಪಿತ ಪ್ರಶ್ನೆಗಳನ್ನು ಹಾಕುತ್ತಾರೆ. ಮಕ್ಕಳನ್ನು ಕರದುಕೊಂಡು ಬರುವ ಅನನುಕೂಲ, ಇತರ ಚಟುವಟಿಕೆಗಳಲ್ಲಿ ಬಿಜಿಯಾಗಿ ಸಮಯಾಭಾವ ಎಂದು ಸುಲಭ ನೆಪ ಕೊಡುತ್ತಾರೆ. 'ತಾನು ಕನ್ನಡಿಗ" ಎಂದು ಮನಸ್ಸಿನಲ್ಲಿ ಗಟ್ಟಿಯಾಗಿ ತಿಳಿದುಕೊಂಡವರು ಯಾರೂ ಇಂತಹ ಪ್ರಶ್ನೆ ಕೇಳರು, ಇಂತಹ ನೆಪ ಕೊಡರು. ಆದರೂ, ಸಮಾಧಾನದಿಂದ ಅವರ ಸಂಶಯ ನಿವಾರಿಸುವುದು ಅವಶ್ಯ. ಈ ಆತಂಕಗಳಿಗೆ ಯಾವ ಮಾನಸಿಕ, ಸಾಮಾಜಿಕ ಆಧಾರ ಪುರಾವೆಗಳು ಇಲ್ಲ. ನಿಜವಾಗಿ, ಮನೋವಿಜ್ಞಾನಿಗಳು ಮತ್ತು ಸಾಮಾಜಿಕ ಕೆಲಸಗಾರರು ನಡೆಸಿದ ಅಧ್ಯಯನಗಳ ಪ್ರಕಾರ ವಿರುದ್ಧ ನಿರ್ಣಯವೆ ಕಾರಣ ಎಂಬುದು ಎದ್ದು ತೋರುತ್ತದೆ. ಅಂದರೆ, ಮಾತೃಭಾಷೆ ಮತ್ತು ಎರಡನೆ ಭಾಷೆ ಕಲಿತ ಮಕ್ಕಳಿಗೆ ತಿಳಿದುಕೊಳ್ಳುವ ಶಕ್ತಿ ಹೆಚ್ಚು; ಅವರು ಇತರ ಮಕ್ಕಳೊಂದಿಗೆ ಸಲೀಸಾಗಿ ಬೆರೆಯುತ್ತಾರೆ; ಅವರು ಭಿನ್ನತೆಯನ್ನು ಸಹನೆಯಿಂದ ಕಾಣುತ್ತಾರೆ.

ಎರಡನೆಯದಾಗಿ, ಮಕ್ಕಳಲ್ಲಿರುವ ವಯಸ್ಸಿನ ಅಸಮಾನತೆ ನಿಜವಾದ ಚಾಲೆಂಜ್‌. ಹಲವು ತರಗತಿಗಳಲ್ಲಿ ವಿಂಗಡಿಸಲು ಅಷ್ಟು ಮಕ್ಕಳು ಮತ್ತು ಶಿಕ್ಷಕರಿಲ್ಲದೆ, ಒಂದೆ ಗುಂಪಿನಲ್ಲಿ ಎಲ್ಲರನ್ನು ಸೇರಿಸಿ ಪಾಠ ಹೇಳುವುದು ಕಠಿಣ. ಮೇಲಾಗಿ, ಕನ್ನಡ ಶಾಲೆಯನ್ನು - ಮಕ್ಕಳಾಗಲಿ, ತಂದೆ-ತಾಯಿಗಳಾಗಲಿ ಅಥವ ಶಿಕ್ಷಕರಾಗಲಿ- ಗಂಭೀರವಾಗಿ ತೆಗೆದುಕೊಳ್ಳದೆ, ಬೇಕಾದಾಗ ಬಂದು ಬೇಡಾದಾಗ ಬಿಟ್ಟರೆ ಮಕ್ಕಳ ಕಲಿಕೆಯಲ್ಲಿನ ಅಂತರ ಹೆಚ್ಚುತ್ತ ಹೋಗುತ್ತದೆ; ಇಲ್ಲವೆ ಕಲಿಸಿದ್ದನ್ನೆ ಮತ್ತೆ ಮತ್ತೆ ಕಲಿಸುತ್ತ ಮೊದಲ ಪಾಠದಿಂದ ಮುಂದುವರೆಯದೆ ಹೋಗುತ್ತೇವೆ. ಇದನ್ನು ಗಮನದಲ್ಲಿರಿಸಿ, ನಿಯಮದಿಂದ, ಸೂಕ್ತ ಪಾಠ ಹೇಳಿದರೆ ನಿಮ್ಮ ಶ್ರಮ ಫಲ ಕೊಡದೆ ಇರದು.

ಮನೆಯೆ ಕನ್ನಡವಾಗಲಿ : ಕೊನೆಯದಾಗಿ, ಇಲ್ಲಿ ಕನ್ನಡ ಕಲಿಸುವುದು ಕಠಿಣ ಅಲ್ಲ. ಕನ್ನಡ ಕಲಿಯಲು ಕನ್ನಡ ಪರಿಸರವನ್ನು - ಮನೆಯ ಒಳಗೆ ಮತ್ತು ಹೊರಗೆ - ನಾವು ನಿರ್ಮಿಸಬೇಕು. 'ನಾವು ಕನ್ನಡಿಗರು" ಎಂದು ಗಟ್ಟಿಯಾಗಿ ಬಗೆದು, ಕನ್ನಡ ಮಾತನಾಡುವುದರ ಮತ್ತು ಕಲಿಯುವುದರ ಬಗ್ಗೆ ತಪ್ಪು ಕಲ್ಪನೆಗಳನ್ನು ಬಿಡಬೇಕು. ಮನೆಯಲ್ಲಿ ಕನ್ನಡ ಮಾತನಾಡಿ. ನಿಮ್ಮ ಮಕ್ಕಳನ್ನು ಹತ್ತಿರದ ಕನ್ನಡ ಕಲಿ ಶಾಲೆಗೆ ಸೇರಿಸಿ. ಹತ್ತಿರ ಇಲ್ಲವೆ? ಹಾಗಾದರೆ ನೀವೆ, ಚಿಕ್ಕದಾಗಿ ಕೆಲವೆ ಮಕ್ಕಳೊಂದಿಗೆ, ಒಂದು 'ಕನ್ನಡ ಕಲಿ" ಪ್ರಾರಂಭಿಸಿ. ಮುಹೂರ್ತ ಬೇಕೆ? ಬರುವ ವಾರಾಂತ್ಯದ ಪಾರ್ಟಿಗೆ ಎಲ್ಲ ಗ್ರಹಗಳು ನಿಮ್ಮ ಗೃಹದಲ್ಲೆ ಸೇರುತ್ತಿವೆ! ಯಾರಿಗೂ ಆಗ್ರಹ ಬೇಡ; ನಿಮ್ಮ ಸ್ವಗೃಹದಲ್ಲೆ ಕನ್ನಡ ಕಲಿ ಸೇರುತ್ತದೆ ಎಂದು ಗಂಟೆ ಬಾರಿಸಿ. ವರ್ಗಗಳನ್ನು ನಿಯತವಾಗಿ, ನಿಯಮಿತ ಜಾಗ ಮತ್ತು ಸಮಯಗಳಲ್ಲಿ ನಡೆಸಿ. ನಿಮ್ಮ ಕನ್ನಡ ಕಲಿ ಎಲ್ಲೆಲ್ಲು ಕನ್ನಡ ಉಲಿಯಾಗಿ ಕೇಳುವುದರಲ್ಲಿ ಸಂಶಯವಿಲ್ಲ.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕಲಿ

1. ANAHEIM, Homes, 2nd & 4th Saturdays,3:00 PM

Sarva Patil,(714) 2800235, sarvapatil@ hotmail.com

2. CERRITOS, Room 4, Sanatana Dharma Temple, Norwalk

Alternate Saturdays,3:00 PM

Arathi Maganti, (562) 2291974, Arathim@ hotmail.com

3. DIAMOND BAR, Homes, Alternate Sundays, 10:00AM

Vijay Kotrappa (909)6233185 vkotrappa@ guidance.com

4. IRVINE Deerfield Community Center

2nd & 4th Saturdays, 1:00 PM

Vijay Kopparam (949) 5524055 vkopparam@yahoo.com

5. PALMDALE, Home/ Temple, Alternate Saturdays 10AM

Kris Venkatappa (661)5381651 kris_v32@ msn.com

6. San Fernando Valley. Hindu Temple, Every Sunday

Mythili Ramakrishna (818) 346-3221 milliram@yahoo.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more