ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಕನ್ನಡ ಸಮ್ಮೇಳನ- 2004 ಸಿದ್ಧತೆ ಬದ್ಧತೆ : ಅಮರನಾಥಗೌಡರ ಪತ್ರ

By Staff
|
Google Oneindia Kannada News

Amarnath Gowda, President, AKKAಪ್ರೀತಿಯ ಕನ್ನಡಿಗರೆ,

ನಮಸ್ಕಾರ. 2003ನೇ ಇಸವಿ ಇನ್ನೇನು ಮುಗಿಯುತ್ತಾ ಬಂದಿದೆ. ಹೊಸ ವರ್ಷ ಹೊಸಿತಿಲಲ್ಲಿದೆ. ಹಳೆಯ ವರ್ಷವನ್ನು ಬೀಳ್ಕೊಡುತ್ತಾ , ಹೊಸ ವರ್ಷದ ಮುಂಗಡ ಶುಭಾಶಯಗಳ ಕೋರುತ್ತ ನಿಮ್ಮೊಂದಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳಬಯಸುವೆ. ಇದು ಧನ್ಯವಾದ ಹೇಳುವ ವಾರಾಂತ್ಯವಾದ್ದರಿಂದ, (Thanksgiving weekend) ಒಂದಷ್ಟು ಧನ್ಯವಾದಗಳೊಟ್ಟಿಗೆ ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಕಷ್ಟು ವಿಷಯಗಳೂ ಇವೆ.

ಮೊದಲಿಗೆ, ಆರ್ಲಾಂಡೋ, ಫ್ಲಾರಿಡಾದಲ್ಲಿ 2004ನೇ ಇಸವಿಯಲ್ಲಿ ನಡೆಯಲಿರುವ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ದ ಕುರಿತು : ಸಮ್ಮೇಳನ ಹತ್ತಿರಾಗುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಿದ್ದೇವೆ ಎಂಬುದನ್ನು ಹೇಳಬೇಕಾಗಿದೆ. 2002ರ ವಿಶ್ವ ಕನ್ನಡ ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಕುದೂರ್‌ ಮುರಳಿ, ಪ್ರಚಾರ ಮತ್ತು ವೆಬ್‌ಸೈಟ್‌ ಸಮಿತಿ ಅಧ್ಯಕ್ಷ ರಮೇಶ್‌ ಗೌಡ ಮತ್ತು ‘ಅಕ್ಕ’ ಸದಸ್ಯ ಡಾ. ರಾಮ್‌ ರಾಮನಾಥನ್‌- ಇವರೊಟ್ಟಿಗೆ ನಾನು ಫ್ಲಾರಿಡಾದ ಶ್ರೀಗಂಧ ಕನ್ನಡ ಕೂಟಕ್ಕೆ ಹೋಗಿಬಂದೆ. ‘ಅಕ್ಕ’ನ ಶ್ರೇಯೋಭಿವೃದ್ಧಿ ಪ್ರಜ್ಞೆಯನ್ನು ಇಟ್ಟುಕೊಂಡು ಅಚ್ಚುಕಟ್ಟು ಹಾಗೂ ಸುಲಲಿತವಾಗಿ ಮುಂದಿನ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಕುರಿತು ಮಾತುಕತೆ ನಡೆಸಿದೆವು.

ಈ ನಿಟ್ಟಿನಲ್ಲಿ ಡಾ.ರೇಣುಕಾ ರಾಮಪ್ಪ ಅವರ ದಕ್ಷ ಮುಂದಾಳತ್ವದಲ್ಲಿ ನಡೆಯಲಿರುವ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ- 2004’ ರ ವಿವಿಧ ಸಮಿತಿಗಳ ಅಧ್ಯಕ್ಷರ ಜೊತೆ ಕೆಲಸ ಮಾಡಲು ನಾನು ಹೃತ್ಪೂರ್ವಕ ಸಿದ್ಧನಿದ್ದೇನೆ. ಭಾರತದಿಂದ ಅಮೆರಿಕೆಗೆ ಬಂದು ಕೆಲಸ ಮಾಡುತ್ತಿರುವ ವೈದ್ಯರ ಒಕ್ಕೂಟ (ಎಎಪಿಐ) ದ ಮಾಜಿ ಅಧ್ಯಕ್ಷ ಡಾ. ದಯಾನಂದ ನಾಯಕ್‌ ಅವರು ಕೂಡ ಫ್ಲಾರಿಡಾ ಸಮ್ಮೇಳನಕ್ಕೆ ಯೋಜನೆಗಳನ್ನು ರೂಪಿಸುವಲ್ಲಿ ಸಕ್ರಿಯವಾಗಿರುವುದು ಸಂತೋಷದ ಸಂಗತಿ. ಕುವೆಂಪು ಶತಮಾನೋತ್ಸವ ಆಚರಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮ್ಮೇಳನಕ್ಕಾಗಿ ರೂಪಿಸುತ್ತಿರುವುದನ್ನು ಕೇಳಿ ಬಹಳ ಆನಂದವಾಯಿತು. ಸಂಸಾರಸ್ಥರಿಗೆ ಹೇಳಿ ಮಾಡಿಸಿದಂತಹ, ಎಲ್ಲರಿಗೂ ಮೆಚ್ಚಾಗುವ ಗೇಲಾರ್ಡ್‌ ಪಾಲ್ಮ್ಸ್‌ ರೆಸಾರ್ಟನ್ನು ಸಮ್ಮೇಳನ ನಡೆಸಲು ಸಮ್ಮೇಳನ ಸಮಿತಿ ಆರಿಸಿರುವುದು ಮೆಚ್ಚತಕ್ಕ ವಿಷಯ. ಫ್ಲಾರಿಡಾ ಸಮ್ಮೇಳನದ ಬಗೆಗಿನ ವಿವರಗಳನ್ನು ಆಗಿಂದಾಗ್ಗೆ ನಿಯಮಿತವಾಗಿ www.akkaonline.org ಮೂಲಕ ಕನ್ನಡಿಗರಿಗೆ ಕೊಡಲಾಗುತ್ತಿದೆ.

AKKA- Office Bearers in Orlando-Floridaಕಳೆದ ತಿಂಗಳು ಮೆಸಾಶುಸೆಟ್ಸ್‌ನಲ್ಲಿರುವ ಇಂಗ್ಲೆಂಡ್‌ ಕನ್ನಡ ಕೂಟ ಸೇರಿದಂತೆ ಅನೇಕ ಕನ್ನಡ ಕೂಟಗಳಿಗೆ ನಾನು ಭೇಟಿ ಕೊಟ್ಟು, ಅವುಗಳ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ 2004ನೇ ಇಸವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ ಕುರಿತು ಚರ್ಚಿಸಿದ್ದೇನೆ. ಮಿತ್ರರಲ್ಲಿ ಸಮ್ಮೇಳನದ ಬಗ್ಗೆ ಅಪಾರ ಪ್ರೀತಿ ಮತ್ತು ಉತ್ಸಾಹವಿದೆ. ಡೆಟ್ರಾಯಿಟ್‌ನ ಯಶಸ್ವಿ ಸಮ್ಮೇಳನದ ನಂತರ ಈಗ ಅವರೆಲ್ಲ ಫ್ಲಾರಿಡಾ ಸಮ್ಮೇಳನಕ್ಕೆ ಕಾತುರರಾಗಿದ್ದಾರೆ. ಸಮ್ಮೇಳನದ ಬಗ್ಗೆ ಅವರೆಲ್ಲರ ಉತ್ಸಾಹ, ತುಡಿತಗಳನ್ನು ನಾನು ಸೂಕ್ಷ್ಮವಾಗಿ ಕಲೆಹಾಕಿದ್ದೇನೆ. ಹಾಗೆ ನಾನು ಗಮನಿಸಿದ ಕೆಲವು ಅಂಶಗಳನ್ನು ನಿಮಗೂ ಹೇಳಲು ಬಯಸುತ್ತೇನೆ.

ನಮಗೆಲ್ಲ ಗೊತ್ತಿರುವಂತೆ ‘ಅಕ್ಕ’ ಪದಾಧಿಕಾರಿಗಳ ಚುನಾವಣೆಯ ದಿನ ಬಗಲಿಗೆ ಬಂದು ನಿಂತಿದೆ. ‘ಅಕ್ಕ’ನ ಧ್ಯೇಯೋದ್ದೇಶಗಳನ್ನು ಈಡೇರಿಸಬಲ್ಲ ಬಲಾಢ್ಯ ಪದಾಧಿಕಾರಿಗಳ ದಂಡು ಇವತ್ತು ಬೇಕಾಗಿದೆ. ಹೀಗಾಗಿ ನಾವೆಲ್ಲ ನಾಗರಿಕ ಹೊಣೆಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕಷ್ಟಪಟ್ಟು ಕೆಲಸ ಮಾಡುವಂಥ ಒಳ್ಳೆಯ ಚಿಂತನಶೀಲ ತಂಡವನ್ನು ಆರಿಸಬೇಕಿದೆ.

ಕರ್ನಾಟಕದಲ್ಲಿ ಇವತ್ತು ಕೃಷಿ ಕ್ಷೇತ್ರ ದುಸ್ಥಿತಿಯಲ್ಲಿದೆ. ರೈತರ ಸಾಲುಸಾಲು ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ನಾವು ಅವರತ್ತ ಅನುಕಂಪದ ನೋಟ ಬೀರಬೇಕಾದ್ದು ಇದೇ ಸಮಯದಲ್ಲಿ ಎಂಬುದು ನನ್ನ ನಂಬಿಕೆ. ಈ ಗಂಭೀರ ಸಮಸ್ಯೆಗೆ ಅರ್ಥಪೂರ್ಣವಾಗಿ ಸ್ಪಂದಿಸಲು ನಾವು ಏನು ಮಾಡಬಹುದೆಂದು ‘ಅಕ್ಕ’ ಕಾರ್ಯಕಾರಿ ಸಮಿತಿ ಹೇಳಲಿದೆ.

ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕುಮಾರ್‌ ಮಳವಳ್ಳಿ ಹಾಗೂ ಬಿ.ವಿ.ಜಗದೀಶ್‌ ಅವರಿಗೆ ‘ಅಕ್ಕ’ ಪರವಾಗಿ ತುಂಬು ಹೃದಯದ ಶುಭಕಾಮನೆಗಳು.

ಅಂತಿಮವಾಗಿ, 2004ರಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡೋಣ. ‘ಅಕ್ಕ’ ಬಲಾಢ್ಯವಾಗುವಂತೆ ಪರಸ್ಪರ ಸಹಕಾರದಿಂದಿರೋಣ. ಎಷ್ಟೇ ಆಗಲಿ ‘ಅಕ್ಕ ಕನ್ನಡಿಗರಿಗಾಗಿ ಇರುವ ಕನ್ನಡಿಗರ ಸಂಸ್ಥೆ’.

ವಂದನೆಗಳು
- ಅಮರನಾಥ ಗೌಡ
ಅಕ್ಕ ಅಧ್ಯಕ್ಷ
ಡೆಟ್ರಾಯಿಟ್‌, ಮಿಶಿಗನ್‌, ಅಮೆರಿಕ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X