• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೇ ಏರಿಯಾದಲ್ಲಿ ನಗೆ ಪ್ರವಾಹ !

By Staff
|
 • ಪ್ರತಿಭಾ ಪ್ರಿಯದರ್ಶಿನಿ, ಸ್ಯಾನ್‌ ಹೊಸೆ, ಕ್ಯಾಲಿಫೋರ್ನಿಯ.

Joke fallsPrathibha Priyadarshiniಹಹಹಾ !! ಒಂದು ಕ್ಷಣವೂ ಬಿಡುವಿಲ್ಲ ! ಶುರುವಾದಾಗಿನಿಂದ ಕಾರ್ಯಕ್ರಮ ಮುಗಿಯುವವರೆಗೆ ನಕ್ಕಿದ್ದೇ ನಕ್ಕಿದ್ದು. ಹೊಟ್ಟೆತುಂಬಾ ನಕ್ಕಿದ್ದು. Laughter is the best medicine : Smile, it improves your face value ಎಂಬಂತಹ ಅನುಭವದತ್ತ ಮಾತುಗಳಿಗೆ ಆ ಸಂಜೆ ನಾವೆಲ್ಲ ಮಾತಾದೆವು, ಕಿವಿಯಾದೆವು, ನಕ್ಕು ಹಗುರಾದೆವು.

ಕ್ಯಾಲಿಫೋರ್ನಿಯ- ಬೇಏರಿಯಾದ ಕನ್ನಡಿಗರನ್ನು ನಕ್ಕು ನಗಿಸಲು, ನಗುನಗುತ್ತಾ ಶ್ರಮಿಸಿದ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಮತ್ತು ಸಾಹಿತ್ಯಗೋಷ್ಠಿ ಸಂಸ್ಥೆಗಳಿಗೆ ನಾವು ಮೊದಲು ಧನ್ಯವಾದ ಹೇಳಬೇಕು. ಯಾಕೆಂದರೆ, ಸೋಮವಾರದಿಂದ ಮತ್ತೊಂದು ಸೋಮವಾರ ಬರುವವರೆಗೆ, ಬೆಳಗಿನಿಂದ ರಾತ್ರಿಯವರೆಗೆ ಹೊಟ್ಟೆಪಾಡು, ಕೆಲಸದ ಗೋಳು, ಮಕ್ಕಳ ಹಾಡು-ಪಾಡುಗಳಲ್ಲಿ ಕಳೆದುಹೋಗುವ ನಮ್ಮನ್ನೆಲ್ಲ ಒಂದು ಸಂಜೆ ನಕ್ಕರದೇ ಸ್ವರ್ಗಕ್ಕೆ ಕರೆದೊಯ್ದ ನಗೆಗಾರ ಜತೆಗಾರರಿಗೆಲ್ಲ ಮತ್ತೊಮ್ಮೆ ನಗುನಗುತಾ ಅರ್ಪಿಸೋಣ, ಕೃತಜ್ಞತೆಗಳು J

‘ಹಾಸ್ಯ ಜೀವನದ ಹರಿಗೋಲು’ - ಕಾರ್ಯಕ್ರಮದ ಹೆಸರೇ ಅರ್ಥಪೂರ್ಣ. ಸೆಪ್ಟೆಂಬರ್‌ 27, ಶನಿವಾರ ಸಂಜೆ 4:30ಕ್ಕೆ ಸರಿಯಾಗಿ ಪಾಲೋ ಆಲ್ಟೋನಲ್ಲಿರುವ ಕಬ್ಬರ್ಲಿ ರಂಗಮಂದಿರದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಹರಿಯಿತು ಹಾಸ್ಯದ ಹೊನಲು. ‘ಪ್ರಾಜೆಕ್ಟ್‌ ಡೆಡ್‌-ಲೈನ್‌’ ‘ಸ್ಯಾಗಿಂಗ್‌ ಎಕಾನಮಿ’, ‘ ಸ್ಟಾಕ್‌ ಮಾರ್ಕೆಟ್‌’ ಮತ್ತು ಎಂದೂ ಬಗೆಹರಿಯದ ‘ ಟ್ರ್ಯಾಫಿಕ್‌’ ಸಮಸ್ಯೆಗಳ ನಡುವೆ ಜೀವನ ಮಾಡುವ ಬೇ ಏರಿಯಾದ ಜನರು ಹೇಗೆ ಹಾಸ್ಯಕ್ಕೆ ಹಾತೊರೆಯುತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯೋ ಎಂಬಂತೆ ಸಭಾಂಗಣ ತುಂಬಿ ಮನದುಂಬಿ ನಗುತ್ತಿತ್ತು!

ಕನ್ನಡ ಕೂಟದ ಅಧ್ಯಕ್ಷ ಸುರೇಶ್‌ ಬಾಬು ಮತ್ತು ಸಾಹಿತ್ಯ ಗೋಷ್ಠಿಯ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ಹುಲಿಕಲ್‌ ನಗಲು ಬಂದವರಿಗೆಲ್ಲ ನಗುನಗುತ ಸ್ವಾಗತ ಕೋರಿದರು. 2003ರಲ್ಲಿ ಕನ್ನಡ ಕೂಟ ಹಮ್ಮಿಕೊಂಡ ಪ್ರತಿಯಾಂದು ಕಾರ್ಯಕ್ರಮವು ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ ನಡೆದ ಗುಟ್ಟನ್ನು ಬಿಚ್ಚಿಟ್ಟರು. ಗುಟ್ಟೆಂದರೆ ಅದೇನು National Secret ಅಲ್ಲ. ಒಂದು ಕಾರ್ಯಕ್ರಮ ಕೈಗೆತ್ತಿಕೊಳ್ಳಬೇಕಾದರೆ ಅದಕ್ಕೆ ಪೂರಕವಾದ ಪರಿಕಲ್ಪನೆ, ಯೋಜನೆ, ಜವಾಬ್ದಾರಿಗಳ ಸಮರ್ಪಕ ಹಂಚಿಕೆ ಮತ್ತು ಸದಸ್ಯ ಕುಟುಂಬಗಳ ಹೃತ್ಪೂರ್ವಕ ಪ್ರೋತ್ಸಾಹ. ಇವೆಲ್ಲ ಗುಣಗಳನ್ನು ಮೈಗೂಡಿಸಿಕೊಂಡಿರುವುದು ಬೇ ಏರಿಯಾ ಕನ್ನಡಿಗರ ಹಿರಿಮೆ ಎಂದು ನಾನು ಸಂತೋಷದಿಂದ ಹೇಳುತ್ತೇನೆ. ವಿಶ್ವನಾಥ ಹುಲಿಕಲ್‌ರವರು, ಕೇವಲ 2 ವರ್ಷದ ಹಿಂದಷ್ಟೆ ತಾವು ಮತ್ತು ತಮ್ಮ ಪತ್ನಿ ಶ್ರೀಮತಿ ಅನ್ನಪೂರ್ಣ ವಿಶ್ವನಾಥ್‌ ಪ್ರಾರಂಭಿಸಿರುವ ಸಾಹಿತ್ಯ ಗೋಷ್ಠಿಯ ಧ್ಯೇಯ ಮತ್ತು ಅವರು ಹಮ್ಮಿಕೊಂಡಿರುವ ಹಲವು ಚಟುವಟಿಕೆಗಳ ಬಗ್ಗೆ ಸಭಿಕರಿಗೆ ಸವಿವರ ಪರಿಚಯ ಮಾಡಿಕೊಟ್ಟರು : ಪ್ರತಿ ತಿಂಗಳು ಎರಡು ಕನ್ನಡ ಸಾಹಿತ್ಯಿಕ ಉಪನ್ಯಾಸಗಳನ್ನು ಆಯೋಜಿಸುತ್ತಿರುವ ಜೊತೆಗೆ, ಜಯಂತ ಕಾಯ್ಕಿಣಿಯವರ ‘ಅಮೃತಬಳ್ಳಿ ಕಷಾಯ’ ಕಥೆಯನ್ನು ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ಆಂಗ್ಲಭಾಷೆಗೆ ಅನುವಾದಿಸಿ, ಪುಸ್ತಕವನ್ನು ಪ್ರಕಟಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿಶ್ವನಾಥ್‌ ವಿವರಿಸಿದರು.

ಸ್ವಾಗತ ಭಾಷಣದ ನಂತರ ನಗೆ-ಕಾರ್ಯಕ್ರಮದ ನಿರ್ವಹಣೆ ಮಾಡಿದ ಶ್ರೀಮತಿ ಅಲಮೇಲು ಅಯ್ಯಂಗಾರ್‌ ಅವರು ನಮೆಲ್ಲರನ್ನು ಜೀವ ನದಿಯಲ್ಲಿ ಹಾಸ್ಯವಿಹಾರಕ್ಕೆ ಕರೆದೊಯ್ದರು. ಈ ದೋಣಿಗೆ ನಗೆಯೇ ಹರಿಗೋಲು. ವಿಹಾರ ಹೊರಟ ನಾವು ಅನುಭವಿಸಿದ ಮಧುರ ಕ್ಷಣಗಳು ಒಂದೇ? ಎರಡೇ? ಈ ಸುಂದರ ಸಂಜೆಯ ವರದಿಯನ್ನು ನಿಮಗೆ ಹೇಗೆ ತಲುಪಿಸಲಿ? ಎಲ್ಲಿಂದ ಶುರುಮಾಡಲಿ ? ವರದಿ ಯಾರಿಗೆ ಬೇಕು? ಬಿಡಿ. ಮನಸ್ಸನ್ನು ಮುದಗೊಳಿಸುವ ಹಾಸ್ಯದ ಕೆಲವು ಸನ್ನಿವೇಶಗಳತ್ತ ನಮ್ಮ ದೋಣಿ ಈಗ ಸಾಗಲಿ:

 • ಈ ವಿಹಾರದಲ್ಲಿ ನಾವು ಕಂಡ ಮೊದಲ ಕಾರ್ಯಕ್ರಮವೆ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’. ಅದೊಂದು ವಿಚಾರ ಸಂಕಿರಣ. ವಿಚಾರ ಸಂಕಿರಣ ಅಂದ ಕೂಡಲೆ ಒಂದಷ್ಟು ಜನ ಭಾಷಣ ಕೊರೆದರು ಅಂತ ಮುಖ ಸಿಂಡರಿಸಿಕೊಳ್ಳುವ ಅಗತ್ಯವಿಲ್ಲ. ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಕಂಡು ಬರುವ ಹಾಸ್ಯ ಸನ್ನಿವೇಶಗಳನ್ನು ಕೇವಲ 40 ನಿಮಿಷದಲ್ಲಿ ಅಚ್ಚುಕಟ್ಟಾಗಿ ಪರಿಚಯ ಮಾಡಿಕೊಟ್ಟದ್ದು ಭೇಷ್‌.
 • ಜನಪದ ಸಾಹಿತ್ಯದಲ್ಲಿ ಹಾಸ್ಯದ ಕುರಿತು ಮಾತನಾಡಿದವರು ಮಂಗಳ ಕುಮಾರ್‌. ಬಯಲಾಟ, ಗಾದೆ, ಜನಪದ ಗೀತೆ ಮುಂತಾದೆಡೆಗಳಲ್ಲಿ ತಂತಾನೆ ಮೂಡಿಬರುವ ಹಾಸ್ಯಮಯ ಸನ್ನಿವೇಶಗಳನ್ನು ಅವರು ಬಹಳ ಚೆನ್ನಾಗಿ ನಿರೂಪಿಸಿದರು. ಬಯಲಾಟದಲ್ಲಿ ಒಮ್ಮೆ, ಲಂಕಾ ದಹನ ದೃಶ್ಯಕ್ಕೆ ಬಾಲ ಮರೆತು ಬಂದ ಹನುಮಂತನ ಪ್ರಸಂಗ ಬಣ್ಣಿಸಿದಾಗ ಪ್ರೇಕ್ಷಕರೆಲ್ಲ ನಗೆಗಡಲಿನಲ್ಲಿ ಮುಳುಗಿದರು.
 • ದಾಸ ಸಾಹಿತ್ಯದಲ್ಲಿ ಕಂಡು ಬರುವ ಹಾಸ್ಯದ ಬಗ್ಗೆ ಆಶಾ ಬಾಲಕೃಷ್ಣ ಭಟ್‌ ಮಾತನಾಡಿದವರು. ಪುರಂದರ ದಾಸರು ತಮ್ಮ ಭಕ್ತಿ ಗೀತೆಗಳಲ್ಲಿ ನಗೆ ತರಿಸುವ ಉಪಮೆಗಳ ಮೂಲಕ ಜೀವನದ ತತ್ವಗಳನ್ನು ಜನ ಸಾಮಾನ್ಯರಿಗೆ ಮನಮುಟ್ಟುವಂತೆ ಹೇಗೆ ತಿಳಿಸಿದ್ದಾರೆ ಎನ್ನುವುದನ್ನು ಬಹಳಷ್ಟು ಉದಾಹರಣೆಗಳ ಸಮೇತ ಪರಿಚಯ ಮಾಡಿಕೊಟ್ಟರು. ಪುರಂದರದಾಸರ ‘ಲೊಳಲೊಟ್ಟೆ ಯೆಲ್ಲ್ಲ ಲೊಳಲೊಟ್ಟೆ...’ ಗೀತೆಯನ್ನು ಬೇ ಏರಿಯಾದ ಕನ್ನಡ- ಜನ- ಜೀವನಕ್ಕೆ ಅಳವಡಿಸಿ ಆಶಾ ಬರೆದ ಹಾಡಿಗೆ ಜನರೆಲ್ಲ ನಕ್ಕಿದ್ದೆ ನಕ್ಕಿದ್ದು.

‘ಲೊಳಲೊಟ್ಟೆ ಯೆಲ್ಲ ಲೊಳಲೊಟ್ಟೆ

ಸ್ಟಾಕ್‌ ಮಾರ್ಕೆಟ್‌ ಬಿಸಿನೆಸ್ಸ್‌ ಲೊಳಲೊಟ್ಟೆ

ಬಹು ಮಿಲಿಯನ್‌ ಡಾಲರ್‌ ಲೊಳಲೊಟ್ಟೆ

ಬೆ ಏರಿಯಾದಲ್ಲಿ ಮನೆ ಲೊಳಲೊಟ್ಟೆ

ಮರ್ಸಿಡೀಸ್‌ ವ್ಯಾನು ಲೊಳಲೊಟ್ಟೆ

ಲಾಸ್‌ ವೇಗಸ್‌ ಜೂಜಿನ ಮಜ ಲೊಳಲೊಟ್ಟೆ

ಸ್ಯಾನ್‌ ಮೆಟೇಯಾ ಜ್ಯುವೆಲರಿ ಷೊ ಲೊಳಲೊಟ್ಟೆ

ಲೊಳಲೊಟ್ಟೆ ಯೆಲ್ಲ ಲೊಳಲೊಟ್ಟೆ’

 • ನಮೆಲ್ಲರಿಗು ಚಿರಪರಿಚಿತರಾದ ಸಂಧ್ಯಾ ರವೀಂದ್ರನಾಥ್‌ ಇಂಪಾದ ಕಂಠದಲ್ಲಿ ಹಾಸ್ಯ ಪ್ರಧಾನವಾದ ಗೀತೆಗಳಿಂದ ನಮ್ಮೆಲ್ಲರನ್ನು ರಂಜಿಸಿದ್ದೇ ಅಲ್ಲದೆ, ಸುಗಮ ಸಾಹಿತ್ಯಕ್ಕೆ ಜಿ.ಪಿ. ರಾಜರತ್ನಂ ರವರ ‘ ಕುಡುಕ ’, ಕೆ.ಎಸ್‌. ನರಸಿಂಹಸ್ವಾಮಿಯವರ ‘ರಾಯರು’ ಮತ್ತು ನಿಸಾರ್‌ ಅಹಮದ್‌ ಅವರ ‘ಕುರಿಗಳು’ ಪರಿಚಯ ಮಾಡಿಕೊಟ್ಟರು. ಆ ಕವಿತೆಗಳಲ್ಲಿ ಮೂಡಿಬಂದಿರುವ ಮಾರ್ಮಿಕ ಸನ್ನಿವೇಶಗಳ ಮನೋಜ್ಞ ಚಿತ್ರಣ ಮಾಡಿಕೊಟ್ಟರು.
 • ‘ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ’ ಎಂಬ ಡಿವಿಜಿಯವರ ಮಾತುಗಳು ಇಲ್ಲಿ ನೆನಪಾಗುತ್ತಿದೆ. ನಮ್ಮ ಮಧುಕಾಂತ್‌ರವರು ಪರರನ್ನು ನಗಿಸುವ ಕಲೆಯಲ್ಲಿ ನಿಪುಣರು. ದುಂಡಿರಾಜರ ನಗೆ ಹನಿಗಳು, ಕೈಲಾಸಮ್‌ರವರ ವಾಕ್ಚಾತುರ್ಯ ಮತ್ತು ಬೀಚಿಯವರ ‘ತಿಂಮನ ತಲೆ’ ಯಿಂದ ಆಯ್ದ ನಗೆ ಚಟಾಕಿಗಳು ನಮೆಲ್ಲರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ಸುಸ್ತು ಮಾಡಿತು. ಜೊತೆಯಲ್ಲಿ ಮಧುಕಾಂತ್‌ ನಮ್ಮೆಲ್ಲರಿಗು ಮಹಾಭಾರತದ ಭೀಮನ ಫೋನ್‌ ನಂಬರ್‌ ಕೂಡ ಕೊಟ್ಟರು. ನಿಮಗೂ ಭೀಮನ ನಂಬರ್‌ ಬೇಕಾ ? ಬರೆದುಕೊಳ್ಳಿ : ‘ ಡಬಲ್‌ ಯೇಟು ಫಾರ್‌ ಒನ್‌ ಯೇಟು’ J
 • ಮುಂದಿನ ಕಾರ್ಯಕ್ರಮ ಸುಕುಮಾರ್‌ ರಘುರಾಂ ಅವರು ನಡೆಸಿಕೊಟ್ಟ ‘ ರಸಪ್ರಶ್ನೆ ’ ಸ್ಪರ್ಧೆ. ಇಲ್ಲಿ 5 ಆಹ್ವಾನಿತ ತಂಡಗಳು ಕನ್ನಡ ಸಾಹಿತ್ಯದ ವಿಷಯಗಳನ್ನು ಕುರಿತ ಹಲವಾರು ಕಠಿಣ ಪ್ರಶ್ನೆಗಳಿಗೆ ಲೀಲಾಜಾಲ ಸರಿಯುತ್ತರಗಳನ್ನು ಹೇಳುತ್ತಿದ್ದದ್ದನ್ನು ಸಭಿಕರು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಈ ಸ್ಪರ್ಧೆಯನ್ನು ಗೆದ್ದವರು ಎಂ.ಆರ್‌. ದತ್ತಾತ್ರಿ ಮತ್ತು ಸತ್ಯಪ್ರಕಾಶ್‌ ಕಾಗಿನೆಲೆ. ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೇಕ್ಷಕರೂ ಸಹ ತಾವೇನು ಕಡಿಮೆಯಿಲ್ಲ ಎಂದು ಹಲವು ಪ್ರಶ್ನೆಗಳಿಗೆ ಪೈಪೋಟಿಯಿಂದ ಸರಿ ಉತ್ತರ ನೀಡಿ ಹೋದ ವರ್ಷದ ಕನ್ನಡ ಕೂಟದ ಟೀ-ಶರ್ಟ್‌ ಬಹುಮಾನ ಗಿಟ್ಟಿಸಿದರು.
 • ಹಾಸ್ಯ ಪ್ರಧಾನವಾದ ಸುಗಮ ಸಂಗೀತದ ಗೀತೆಗಳನ್ನು ಹಾಡಿ ರಂಜಿಸಿದ್ದು ಶ್ರೀಮತಿ ಅಪರ್ಣ ರಾವ್‌ ನೇತೃತ್ವದ ವೃಂದಗಾನದ ತಂಡ. ಈ ತಂಡದರು ಹಾಡಿದ ‘ ಕುಂತ್ರೆ ನಿಂತ್ರೆ ಅವನದೆ ಧ್ಯಾನ...’, ‘ ರಾಯರು ಬಂದರು...’, ‘ ಕಾಶಿಗೆ ಹೋದ ನಮ್‌ ಭಾವ...’ ಗೀತೆಗಳು ಬಹಳ ಚೆನ್ನಾಗಿ ಮೂಡಿ ಬಂತು.
 • ಹಾಸ್ಯದ ಹರಿಗೋಲಿನ ಪ್ರಯಾಣದಲ್ಲಿ ಅಭಿನಂದನೆಯ ಕನ್ನಡಕೂಟದ ಸದಸ್ಯರೂ ಬರಹಗಾರರೂ ಆದ ವಿಶ್ವನಾಥ ಹುಲಿಕಲ್‌ ಮತ್ತು ಅಲಮೇಲು ಅಯ್ಯಂಗಾರ್‌ ಅವರನ್ನು ಕನ್ನಡಕೂಟದ ಅಧ್ಯಕ್ಷ ಸುರೇಶ್‌ ಬಾಬು ಅಭಿನಂದನಾ ಫಲಕವನ್ನು ನೀಡಿ ಸನ್ಮಾನಿಸಿದರು. ವಿಶ್ವನಾಥ್‌ ಹುಲಿಕಲ್‌ರ ‘ಹೃದಯ’ ಕಥಾ ಸಂಕಲನ ಹಾಗೂ ಅಲಮೇಲು ಅವರ ‘ಹೈಟೆಕ್‌ ಹದವದಾನಾಚಾರ್‌ ಮತ್ತು ಇತರ ನಾಟಕಗಳು’ ಕೃತಿಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ.

  ನಕ್ಕು ನಕ್ಕು ಸಾಕಾಗಿದ್ದ ನಗೆರಸಿಕರನ್ನು ಇನ್ನಷ್ಟು ನಗಿಸಿದ್ದು ಅಲಮೇಲು ಅಯ್ಯಂಗಾರ್‌ ವಿರಚಿತ ನಗೆನಾಟಕ ‘ನಳಪಾಕ’ ಶ್ರೀಲಕ್ಷ್ಮಿ ಮುದುಗೆರೆ ನಿರ್ದೇಶಿಸಿದ ಈ ನಾಟಕದ ಹಾಸ್ಯ ಸಂಭಾಷಣೆಯನ್ನು ಕೇಳಿಯೇ ನಗಬೇಕು!

  ಹಾಸ್ಯ ಯಾರಿಗೆ ಬೇಡ ಹೇಳಿ? ಊಟದಲ್ಲಿ ಉಪ್ಪಿನಕಾಯಿಯಿದ್ದಂತೆ ಬದುಕಿನಲ್ಲಿ ಹಾಸ್ಯ ಸಂಜೀವಿನಿ. ಆ ಕಾರಣದಿಂದಲೇ ನಗೆಯನ್ನು ಟಾನಿಕ್‌ ಎನ್ನುವುದು! ಎಂತಹ ಸಂಕಟಮಯ ಪರಿಸ್ಥಿತಿಯನ್ನೂ ಹಾಸ್ಯ ತಿಳಿಗೊಳಿಸಬಲ್ಲುದು. ಅಲಮೇಲು ಅಯ್ಯಂಗಾರ್‌ ಅವರು ಹೇಳಿದ ಒಂದು ಸನ್ನಿವೇಶ ಹಾಸ್ಯದ ಹೆಚ್ಚುಗಾರಿಕೆಗೆ ಸಾಕ್ಷಿಯಂತಿದೆ. ಅವರು ಒಮ್ಮೆ ಕ್ಯಾನ್ಸರ್‌ನಿಂದ ನರಳುತ್ತ ಇರುವ, ಕಿಮೋಥೆರಫಿ ಚಿಕಿತ್ಸೆ ಪಡೆಯುತ್ತಿದ್ದ ಹುಡುಗನನ್ನು ಭೇಟಿಯಾಗಲು ಆಸ್ಪತ್ರೆಗೆ ಹೋಗಿದ್ದರಂತೆ. ಕಿಮೋಥೆರಫಿಯಿಂದ ತಲೆ ಮೇಲಿನ ಕೂದಲನ್ನು ಕಳೆದುಕೊಂಡು ಬೋಳಾಗಿದ್ದ ಹುಡುಗನನ್ನು ಹೇಗೆ ಮಾತನಾಡಿಸಲಿ ಎಂದು ಯೋಚಿಸುತ್ತಿದ್ದಾಗ, ಅವರ ಕಣ್ಣಿಗೆ ಒಂದು ಫಲಕ ಕಣ್ಣಿಗೆ ಬಿತ್ತು . ಅದರಲ್ಲಿ ಬರೆದಿದ್ದುದು ಏನಪ್ಪಾ ಅಂದರೆ- God made a few perfect heads and on the rest He put hair.

  ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದ ಅಲಮೇಲು ಅಯ್ಯಂಗಾರ್‌ ತಮ್ಮ ಹಾಸ್ಯಭರಿತ ಮಾತುಗಳಿಂದ ಇಡೀ ಕಾರ್ಯಕ್ರಮಕ್ಕೆ ನಗೆಯ ಚೌಕಟ್ಟು ನಿರ್ಮಿಸಿದರು.

  ನಗುವುದು ಸಹಜ ಧರ್ಮ ಎನ್ನುವ ಮಾತಿಗನುಗುಣವಾಗಿ, ಗೆಳೆಯರೆಲ್ಲ ಸೇರಿ ನಕ್ಕು, ನಗುವಿನ ನಡುವೆ ಒಂದಷ್ಟು ಸಾಹಿತ್ಯವನ್ನು ಮೆಲುಕು ಹಾಕಿದ ಬೇ ಏರಿಯಾದ ಕನ್ನಡಿಗರ ಪುಣ್ಯ ದೊಡ್ಡದು; ಈ ಪುಣ್ಯ ಇತರ ಕನ್ನಡ ಕೂಟಗಳ ಸದಸ್ಯರಿಗೂ ಪಸರಿಸಲಿ. ನಗೆ ಸಾಂಕ್ರಾಮಿಕವಾಗಲಿ !

  ಮುಖಪುಟ / ಎನ್‌ಆರ್‌ಐ

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
  X