• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾದಲ್ಲೂ ಹೊಸ ಕಾರಿಗೆ ಭಾರಿ ಪೂಜೆ !

By Super
|

*ಡಾ.ಅಶ್ವತ್ಥ ಎನ್‌.ರಾವ್‌

ಸೇಂಟ್‌ ಲೂಯಿಸ್‌, ಮಿಸ್ಸೌರಿ, ಯು.ಎಸ್‌.ಎ

Dr. Ashwatha N. Rao, St. Louis Missoriಅಂದು ಭಾನುವಾರ. ಬೆಳಿಗ್ಗೆಯೇ ಎದ್ದು ನಾಯಿಮರಿ ಗಾತ್ರದ ವಾರ್ತಾಪತ್ರಿಕೆಯ ಸುರುಳಿಯನ್ನು ಬಿಚ್ಚಿ, ‘ಜಾಹಿರಾತು’, ‘ಬೇಕಾಗಿದೆ’ ಭಾಗಗಳನ್ನು ಎಸೆದು, ಬೇಕಾದ ವಾರ್ತೆಗಳ ಪುಟಗಳನ್ನು ಶೋಷಣೆ ಮಾಡಿ ಓದುತ್ತಾ ಕುಳಿತಿರುವಾಗ ನನ್ನ ಪತ್ನಿ ಶಾಲಿನಿಯ ಆಕಾಶವಾಣಿ ಅಡುಗೆ ಮನೆಯಿಂದ ಮೊಳಗಿತು.

‘ಈ ಬೆಳಿಗ್ಗೆ ಕೋಕಿಲಾ ಶ್ಯಾಮಸುಂದರ್‌ ಅವರ ಮನೇಗೆ ಹೋಗಬೇಕು; ಅದನ್ನು ನೀವು ಮರೆತಿಲ್ಲ ತಾನೆ? 11.30ಕ್ಕೆ ಸರಿಯಾಗಿ ಮನೆ ಬಿಡೋಣ’.

ವಾರಕ್ಕೊಂದು ದಿನವಾದರೂ ಆರಾಮವಾಗಿ ಸೋಮಾರಿತನವನ್ನು ಸವಿಯೋಣ ಅಂದರೆ ಅದಕ್ಕೂ ಧಕ್ಕೆ ಬಂತೇ- ಅಂದುಕೊಂಡೆ. ಅಲ್ಲದೆ, ಫುಟ್‌ಬಾಲ್‌ ಮ್ಯಾಚ್‌ನ (ಅದೇ ಅಮೇರಿಕನ್‌ ಮಾದರೀದು) ಟೀವಿ ವಿಕ್ಷಣೆಗೂ ಸಹ ನಕಾರ ಆದಂತಾಯ್ತು !

‘ಇವತ್ತೇನಾ? ಮುಂದಿನ ವಾರ ಅಂದ್ಕೊಂಡಿದ್ದೆ, ಥುತ್‌ ಈ ದಿನ ಆರಾಮವಾಗಿ ಮನೇಲಿರೋಣ- ಅನ್ನೋ ಯೋಜನೆಗೆ ಕಲ್ಲು ಬಿತ್ತು !’-ಎಂದು ಸಿಡುಕಿನಿಂದ ಹೇಳಿದೆ.

‘ನಾಲ್ಕು ವಾರದ ಹಿಂದೆಯೇ ಔತಣದ ಆಹ್ವಾನ ಕಳ್ಸಿದ್ದಾರೆ. ನೀವು ಒಬ್ಬರೇ, ಹೀಗೆ ಕಿರಿ ಕಿರಿ ಮಾಡೋದು; ಉಳಿದ ಯಾವ ಗಂಡಸರೂ ಹೀಗಿಲ್ಲಾ ಅಂತ ನನ್ನ ಭಾವನೆ’.

‘ಉಳಿದ ಗಂಡಸರೆಲ್ಲರ ಪರವಾಗಿ ಮಾತಾಡ್ತೀಯಲ್ಲ, ನೀನು’, ನಾನೆಂದೆ, ‘ಅದು ನಿನಗೆ ಹೇಗೆ ಗೊತ್ತು?’

‘ಅದಿರ್ಲಿ, ಎದ್ದು ಸ್ನಾನ ಮಾಡಿ ಸಿದ್ಧರಾಗಿ. ಬೇಗ ಹೋಗಿ ಊಟ ಮಾಡಿ, ಬೇಗ ಬಂದರಾಯ್ತು’ ಎಂದು ನನ್ನ ಪ್ರಶ್ನೆಯನ್ನು ಪಕ್ಕಕ್ಕೆ ತಳ್ಳಿದಳು.

‘ಅಂದಹಾಗೆ ಶ್ಯಾಮಸುಂದರ್‌ ಅವರ ಮನೇಲಿ ಏನು ವಿಶೇಷ? ಏನು ಅಕೇಷನ್‌ಉ?’

‘ಕಾರ್ವಾರ್ಮಿಂಗು’.

ಏನು? ಯಾವ ಭಾಷೆ ಮಾತಾಡುತ್ತಿದ್ದಾಳೆ? ಎಂದು ತಿಳಿಯದೇ ತಲೆ ಕೆರೆಯುತ್ತ, ‘ಹಾ? ಏನಂದೇ’- ಎಂದೆ.

‘ಕಾ- ರು- ವಾ- ರ್‌- ಮಿಂ- ಗು’

‘ಅಂದರೆ ಅವರು ಅವರ ಕಾರನ್ನು ಬಿಸಿಲಿನಲ್ಲಿ ಬಿಡ್ತಾರ?’

‘ಹಾ! ಹಾ ! ಹಾ ! ಬಹಳ ಫನ್ನೀ’, ಎಂದಳು ಅಣಗಿಸುತ್ತಾ.

‘ಹೊಸ ಮನೆಗೆ ಹೋಗುವಾಗ ಹೌಸ್‌ ವಾರ್ಮಿಂಗ್‌ ಹೇಗೆ ಮಾಡ್ತಾರೋ ಹಾಗೆ ಶ್ಯಾಮಸುಂದರ್‌- ಕೋಕಿಲಾ ಹೊಸಾ ಕಾರ್‌ ತೊಗೊಂಡಿದ್ದಾರೆ. ಅದಕ್ಕೆ Car Warming ಮಾಡಲು ನಮಗೆ ಕರ್ದಿದಾರೆ’.

‘ಈ ವಿಶೇಷ ಅಕೇಷನ್‌ಗೆ ಯಾವ ಉಡುಗೊರೆ ಕೊಡಬೇಕೋ?’

‘ಹೋಗ್ತಾ ದಾರೀನಲ್ಲಿ ಸೂಪರ್‌ ಮಾರ್ಕೆಟ್‌ ಹತ್ತಿರ ನಿಲ್ಲಿಸಿದರೆ, ಒಂದು ಗಿಡವನ್ನೊ, ಹೂವಿನ ಬುಟ್ಟಿಯನ್ನೋ ತೆಗೆದುಕೊಂಡು ಹೋಗೋಣ’ ಎಂಬುದು ಶಾಲಿನಿಯ ಉತ್ತರ.

‘ಕಾರ್‌ ವಾರ್ಮಿಂಗ್‌ಗೆ ಅಷ್ಟೆಲ್ಲಾ ಜಾಸ್ತಿಯಾಯ್ತು; ನನಗೆ ಕೇಳಿದರೆ, ಕಾರಿಡಾರಿನಲ್ಲಿಡೋಕೆ ಒಂದು ಪ್ರಥಮ ಚಿಕಿತ್ಸೆ ಪೆಟ್ಟಿಗೇನೋ, ಹಿಂದಿನ ಸೀಟಿಗೆ ಎಟುಕುವಂತೆ ಇಡಬಹುದಾದ ಕ್ಲೀನೆಕ್ಸ್‌ ಬಾಕ್ಸನ್ನೋ, ಉಪಯೋಗಕ್ಕೆ ಬರೋ ಉಡುಗೊರೆ ಕೊಡೋದು ಒಳ್ಳೇದು ಅಂತ ನನ್ನ ಭಾವನೆ’, ನಾನು ಹೇಳಿದೆ.

‘ಏಳಿ ಈಗ, ಹೀಗೆ ಕುಹಕವಾಗಿ ತಮಾಷೆ ಮಾಡ್ತಾ ಕೂತರೆ ಕೊನೆಯೇ ಇಲ್ಲ, ವೇಳೆ ಆಗ್ತಾ ಬಂತು’.

‘ಅಲ್ಲ, ಯಾಕೆ ಇವತ್ತು ಇಷ್ಟು ಅವಸರ ಮಾಡ್ತಿದ್ದೀಯ?’

‘ಅಲ್ಲಾರೀ ಆಹ್ವಾನಪತ್ರಿಕೆಯಲ್ಲಿ ಏನಿದೆ ನೋಡಿದಿರಾ? ದೇವಸ್ಥಾನದಲ್ಲಿ : ನವವಾಹನ ಪ್ರವೇಶದ ಮುಹೂರ್ತ ಬೆಳಗ್ಗೆ 11.30- 12.00; ಅವರ ಮನೆಯಲ್ಲಿ : ಔತಣ , ಮಧ್ಯಾಹ್ನ 12- ಘಂಟೆಗೆ ಎಂದಿದೆ. ನಾವು ಲೇಟಾಗಿ ಹೋಗುವುದು ಬೇಡ, ಏಳಿ ಸ್ನಾನ ಮಾಡ್ಹೋಗಿ’, ಎಂದಳು.

ಈ ಹೊಸ ಕಾರಿನ ಶಾಂತಿ ಸಮಾರಂಭವನ್ನು ದೇವಸ್ಥಾನದ ಎದುರಿನ ವಾಹನ ನಿಲ್ದಾಣದಲ್ಲಿ ಏರ್ಪಡಿಸಲಾಗಿತ್ತು. ಆಹ್ವಾನಿಸಲ್ಪಟ್ಟ ಅತಿಥಿಗಳು ನಾವಲ್ಲಿಗೆ ಹೋಗುವ ವೇಳೆಗಾಗಲೇ ನೆರೆದಿದ್ದರು. ಪ್ರದರ್ಶನಕ್ಕೆ ಇಂತಹ ಸಮಾರಂಭ ಒಂದು ಸದವಕಾಶವೆಂದು ಹೆಂಗಸರು ಹೊಸದಾಗಿ ಕೊಂಡ ರೇಷ್ಮೆ ಸೀರೆಗಳನ್ನೂ ಆಭರಣಗಳನ್ನೂ ತೊಟ್ಟುಕೊಂಡಿದ್ದರು. ಪರಸ್ಪರ ನೋಟ, ಹೆಂಗಸರಿಗೆ ಮಾತ್ರ ಅರ್ಥವಾಗುವ ಸಾಂಕೇತಿಕ ಪದಗಳ ಮಾತು, ವಿಚಾರ ವಿನಿಮಯಗಳಿಂದ ಒಬ್ಬರನ್ನೊಬ್ಬರು ತೂಗಿ ಅಳೆಯುತ್ತಿದ್ದರು. ಗಂಡಸರೋ ಹವಾಗುಣದಲ್ಲಿ ಪ್ರಾರಂಭಿಸಿ, ಕ್ರೀಡಾವಾರ್ತೆಗಳನ್ನು ಸ್ವಲ್ಪ ಹಾಗೇ ವಿಮರ್ಶಿಸಿ, ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಕೊಂಚ ವಿಶ್ಲೇಷಿಸಿ, ಅಮೇರಿಕಾ ಮತ್ತು/ ಅಥವಾ ಹಿಂದೂ ದೇಶದ ರಾಜಕೀಯಗಳ ಕ್ಲಿಷ್ಟವಾದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ನಿರತರಾಗಿದ್ದರು.

ಸಾಮಾನ್ಯವಾಗಿ, ದೇವಾಲಯದ ಒಳಗಡೆ ದೇವರ ಸನ್ನಿಧಿಯಲ್ಲಿ ನಡೆಯುವ ವಿಶೇಷ ಪೂಜೆಗಳ ಸಂದರ್ಭದಲ್ಲಿ , ನಮ್ಮ ಶ್ಯಾಮಸುಂದರ್‌ ಯಾವಾಗಲೂ ಸರಳವಾದ ಭಾರತೀಯ ಉಡುಗೆಯನ್ನೇ ತೊಟ್ಟಿರುತ್ತಾರೆ. ಅವರ ಹೆಂಡತಿ ಕೋಕಿಲಾ ಕೂಡ ಹಾಗೇನೇ. ವಸ್ತ್ರಾಭರಣಗಳು ಅತಿ ಸರಳವಾಗಿರುತ್ತವೆ. ಮೇಕ್‌- ಅಪ್‌ಉ? ಉಹುಂ. ಇರುವುದಿಲ್ಲಾ. ಕಾರಣ? ದೇವರಿಗೆ, ಅಲ್ಲ ದೇವರೆದುರಿಗೆ ತಾವು ದೀನರು, ನಿಗರ್ವಿಗಳು ಮತ್ತು ಸರಳ ಜೀವಿಗಳು ಎಂಬುದನ್ನು ತಿಳಿಸಲು ಹಾಗೆ ಇರಬೇಕು ಅನ್ನೋದು ಅವರ ಅಭಿಪ್ರಾಯ.

ಆದರೆ ಈ ದಿನ ಈ ಸಮಾರಂಭ ದೇವಸ್ಥಾನದ ಹೊರಗಡೆ ತಾನೆ? ಸರಳತೆಯ ಅವಶ್ಯಕತೆ ಏನೂ ಇರಲಿಲ್ಲ ! ಶ್ಯಾಮಸುಂದರ್‌ ಸೂಟು ಕೋಟು ಧರಿಸಿದ್ದರು. ಕೋಕಿಲಾ ಅವರು ಹೊಸಾ ಮಾಡೆಲ್‌, ಹೊಸ ಡಿಸೈನ್‌ನ ಕಾಂಜೀವರಂ ಸೀರೆ, ತೆಳುವಾದ ಮೂರು ಸುತ್ತಿನ ಮುತ್ತಿನ ಸರ ಹಾಕಿಕೊಂಡು, ಭಕ್ತಿ ಮತ್ತು ನಮ್ರತೆಯಿಂದ ಸುಬ್ಬಾ ಜೋಯಿಸರು ಹೇಳುವುದನ್ನು ಗಮನವಿಟ್ಟು ಕೇಳುತ್ತಾ ನಿಂತಿದ್ದರು.

ಸುಬ್ಬಾ ಜೋಯಿಸ್‌ ಉರುಫ್‌ Subway Joyce

ಸುಬ್ಬಾಜೋಯಿಸರು ಈ ಸಮಾರಂಭವನ್ನು ನೆರವೇರಿಸಲು ಬಂದಿದ್ದನ್ನು ಕಂಡು ನನಗೆ ಆಶ್ಚರ್ಯ. ಮದುವೆ ಮುಂತಾದ ಮುಖ್ಯ ಕಾರ್ಯಗಳಿಗೆ ಮಾತ್ರ ಅವರು, ದೇವಾಲಯದ ಪ್ರಧಾನ ಅರ್ಚಕರು ಭಾಗವಹಿಸುತ್ತಿದ್ದರು; ಇತರ ಸಣ್ಣ ಪುಟ್ಟ ಕಾರ್ಯಗಳಿಗೆ ಮತ್ತೆ ಮೂರು ಕಿರಿಯ ಪುರೋಹಿತರಿದ್ದಾರಲ್ಲ. ಉಳಿದ ಅರ್ಚಕರಿಗಿಂತ ಹಿರಿಯರು ಮತ್ತು ಹಳಬರು ವೇ.ಬ್ರ.ಶ್ರೀ ಸುಬ್ಬಾ ಜೋಯಿಸರು. ಎಷ್ಟು ಹಳಬರು ಎಂದರೆ, ಅವರು ಹತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಮಾತ್ರ ಇರಲು ಬಂದಿದ್ದವರು; ವಾಪಸ್‌ ತೆರಳಬೇಕೆಂದಿದ್ದವರು. ಆದರೆ, ನಂತರ ಮನಸ್ಸು ಬದಲಾಯಿಸಿ, ಇಲ್ಲಿಗೆ ಬಂದ ನಮ್ಮಂಥ ಇತರ ಪರದೇಶದವರಂತೆ ಅಮೇರಿಕಾದ ಕನಸನ್ನು ನನಸಾಗಿ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ಹೆಂಡತಿಯನ್ನು ಮತ್ತು ಮಕ್ಕಳಿಬ್ಬರನ್ನು ಕರೆಸಿಕೊಂಡಿದ್ದರು. ದೇವಸ್ಥಾನದ ಹೊರಗಡೆ ಬ್ಯಾಂಕ್‌ ಆಗಲಿ, ಪೋಸ್ಟ್‌ ಆಫೀಸ್‌ಗಳಲ್ಲೇ ಆಗಲಿ, ಅಮೆರಿಕನ್ನರು ಅವರನ್ನು Subway Joyce ಎಂದು ಪ್ರಾರಂಭದಲ್ಲಿ ಕರೆಯುತ್ತಿದ್ದರಂತೆ; ತಮ್ಮ ಹೆಸರನ್ನು ಹೀಗೆ ಹೇಳುವ ರೀತಿಯನ್ನು ಆಗ ಅವರು ತಿದ್ದುತ್ತಿದ್ದರಂತೆ; ಕೊನೆ ಕೊನೆಗೆ, ‘ಇವರನ್ನು ತಿದ್ದಲು ಭಗವಂತನಿಗೇ ಸಾಧ್ಯವಿಲ್ಲ, ಇನ್ನು ನನ್ನ ಕೈಯಲ್ಲಿ ಆಗತ್ಯೇ’- ಅಂತ, ಈಗ ಯಾರಾದರೂ ಅಮೇರಿಕನ್ನರು ದೂರವಾಣಿಯಲ್ಲಿ Mr.Joyce ಎಂದರೆ, ‘Yes’ ಎಂದೇ ಅನ್ನುತ್ತಾರಂತೆ!

ಇರಲಿ, ಮಾತು ಎಲ್ಲಿ ಎಲ್ಲಿಗೋ ಹೋಯಿತು. ಕಾರ್‌- ವಾರ್ಮಿಂಗ್‌ಗೆ ಬರೋಣ. ನಾನು ಪಕ್ಕದಲ್ಲಿ ನಿಂತಿದ್ದ ನರಸಿಂಹನಿಗೆ ಪಿಸುಗುಟ್ಟಿ ತಿಳಿಸಿದೆ : ‘ನಮ್ಮ ಸುಬ್ಬಾ ಜೋಯಿಸರು ಈ ಸಮಾರಂಭಕ್ಕೆ ಒಪ್ಪಿಕೊಂಡು ಬಂದಿರುವುದು ಆಶ್ಚರ್ಯಕರ !’.

‘ಆಶ್ಚರ್ಯ ಯಾಕೆ ಸಾರ್‌, ಕಾರಿನ ಈ ಶಾಂತಿಪೂಜೆಯಲ್ಲಿ ಬರುವ ದಕ್ಷಿಣೆ ಎಷ್ಟು ಆಕರ್ಷಕ ಗೊತ್ತೆ?’

ತಮಾಷೆಗೆ ಹೇಳುತ್ತಿದ್ದಾನೆ ಎಂದು ನಕ್ಕೆ. ನರಸಿಂಹ ನನ್ನ ಮುಖವನ್ನು ದುರುಗುಟ್ಟಿ ನೋಡಿದ.

ಆತ ಗಂಭೀರವಾಗಿ, ‘ತಮಾಷೆಗೆ ಹೇಳ್ತಿಲ್ಲಾ. ಮೊನ್ನೆ ಏನಾಯ್ತಂತೆ ಗೊತ್ತಾ? ಇಲ್ಲಿನ ಸಾಫ್ಟ್‌ವೇರ್‌ ಕಂಪನಿ ಸಿಇವೋ ಆಗಿದ್ದಾರಲ್ಲಾ, ಮಿಸ್ಟರ್‌ ಖೋಖಾ ಗೊತ್ತಲ್ಲಾ; ಅವರ ಹೊಸ ರೋಲ್ಸ್‌ ರಾಯ್ಸ್‌ ಪೂಜೆ ವೇಳೆಯಲ್ಲಿ ಏನಾಯ್ತಂತೆ ಗೊತ್ತಾ? ನಮ್ಮ ಸಬ್‌ ವೇ ಜೋಯಿಸರು ಬಹು ನಮ್ರತೆಯಿಂದ, ಯಜಮಾನರು ಕೊಟ್ಟ ದಕ್ಷಿಣೆ ಹಣವನ್ನು ನಿರಾಕರಿಸಿ, ‘ಸ್ವಾಮೀ, ಯಜಮಾನರೇ, ಅಷ್ಟೋ ಇಷ್ಟೋ ನಿಮ್ಮ ಕಂಪನಿಯ ಸ್ಟಾಕ್‌ಗಳನ್ನು ನಮ್ಮ ಹೆಸರಿನಲ್ಲಿ ಕೊಟ್ರೆ, ನಿಮಗೆ ಹೀಗೆ ದೇವರು ಆಯುರಾರೋಗ್ಯ ಐಶ್ವರ್ಯಗಳನ್ನು ಯಥೇಷ್ಟವಾಗಿ ಅನುಗ್ರಹಿಸಲಿ ಅಂತ ಪ್ರಾರ್ಥನೆ ಮಾಡ್ತೇನೆ’ ಅಂತ ಅಂದ್ರಂತೆ, ಗೊತ್ತಾ?’

ಮುಂದಿನ ಭಾಗಕ್ಕೆ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Car Warming ritual in developed countries too !! Dr. Ashwath N Rao St. Louis Missori takes a dig at this practice, very familiar in developing countries especially in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more