ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನ್ನಡೆದಿರುವ ಕನ್ನಡ- ಭಾಗ 3

By Super
|
Google Oneindia Kannada News

ಇಂಗ್ಲಿಷ್‌ನಿಂದ ಬಂದಿರುವ ಹಾಗೇ ಅರಬ್ಬೀ ಮತ್ತು ಫಾರಸೀ ಪದಗಳು ಮುನ್ನಡಕ್ಕೆ ಇತ್ತೀಚೆಗೆ ಹೆಚ್ಚಾಗಿ ಬರುತ್ತಿವೆ. ಮುಸ್ಲಿಮರ ಆಳ್ವಿಕೆಯಿಂದ ಮುಕ್ತರಾದ ಮೇಲೆ ಹೀಗೆ ಆಗುತ್ತಿರುವುದು ಆಶ್ಚರ್ಯ. ಆದರೆ ಇದರ ಕಾರಣಗಳು ಸ್ಪಷ್ಟವಾಗಿ ಎದ್ದು ಕಾಣುತ್ತವೆ. ಸೆಕ್ಯುಲರಿಸಮ್‌, ಮುಸ್ಲಿಮರು ವೋಟ್‌ ಬ್ಯಾಂಕುಗಳ ಮಾಲೀಕರಾಗಿರುವುದು ಕನ್ನಡಿಗರಿಗೆ ಸಹಜವಾಗಿ ಬಂದಿರುವ ಆತ್ಮದ್ವೇಷ ಮತ್ತು ಪರಭಾಷಾ ಪ್ರೇಮ ಹೀಗೆ ಇದರ ಅನೇಕ ಕಾರಣಗಳು. ಈಗ ಒಂದು ಸಖತ್‌ ಉದಾಹರಣೆ ಕೊಡುತ್ತೇನೆ, ನೋಡಿ. 'ನಮ್ಮ ಪದ್ಮಿನಿ ಮದುವೆ ಸಖತ್ತಾಗಿ ನಡೆಯಿತು. ಪದ್ಮಿನಿ ಒಳ್ಳೇ ಸಖದ್ರೂಪವತಿ. ಗಂಡೂ ಒಳ್ಳೇ ಸಖತ್ತಾಸಾಮಿ ರೀ. ಆ ಛತ್ರದ ಅಲಂಕಾರ, ಭಾಳಾ ಸಖತ್ರೀ. ಜನಗ್ಳಂತೂ ಸಖತ್‌ ಬಂದಿದ್ರು. ಊಟ ಸಖತ್‌ ಜೋರು, ರೀ. ಲಾಡೂನಂತೂ ಸ ಖ ತ್‌. ಒಂದರ ಮೇಲೊಂದು ಸಖತ್‌ ತಿಂದುಬಿಟ್ಟೆರೀ. ಈಗೇಕೋ ಮೈ ಸಖತ್‌ ಅನಿಸಿಯೇದ್ರೀ. ಸಖತ್‌ ಹೊಟ್ಟೇನೋವ್ರೀ. ಇನ್ಮೇಲೇ ಲಾಡೂ ಸಖತ್‌ ಮುಟ್ಟೂದಿಲ್ರೀ’ ಇದು ಮುನ್ನಡದ ಒಂದು ಸಖತ್‌ ಉದಾಹರಣೆ.

ಈ ಒಂದೆರಡು ವರ್ಷಗಳ ಹಿಂದೆ ಇಲ್ಲಿಗೆ ಬಿ.ವಿ. ಕಾರಂತರ ಕಲಾವಿದರ ತಂಡವೊಂದು ಬಂದಿತ್ತು. ಅವರು ಪ್ರಾಚೀನ ಗ್ರೀಕರ 'ಇಪ್ಪೊಲಿಟಸ್‌’ ಎಂಬ ನಾಟಕವನ್ನು ನ್ಯೂಯಾರ್ಕ್‌ನಲ್ಲಿ ಆಡಿ ತೋರಿಸಿದರು. ಆ ನಾಟಕದ ಸಾಹಿತ್ಯವನ್ನು ಬರೆದ ಬರೆಹಗಾರರ ಜೊತೆ ಹತ್ತಿರ ಕುಳಿತು ಮಾತನಾಡುವ ಒಂದು ಅನಮೋಲ್‌ ಮೌಕಾ ಸಿಕ್ಕಿತು. ಮಾತಿನ ಮೇಲೆ ಮಾತಾಗಿ, ಅವರ ಅನುವಾದದಲ್ಲಿ ತಂದೆ ಮಗ ವಾಗ್ವಾದ ಮಾಡುತ್ತಿರುವ ಒಂದು ಸಂದರ್ಭದಲ್ಲಿ, 'ನಿನಗೆ ತಾಖತ್ತಿದ್ದರೆ ಮಾಡಿ ತೋರಿಸೋ’ ಎಂದು ಮಗ ತಂದೆಯನ್ನು ಮೂದಲಿಸುತ್ತಾನೆ. ಅದು ನನಗೇಕೋ ಸರಿ ಕಂಡಿರಲಿಲ್ಲ. 'ಅಲ್ಲಿ ತಾಖತ್‌ ಅನ್ನೋ ಅರಬ್ಬೀ ಪದ ಯಾಕೆ ಉಪಯೋಗಿಸಿದಿರಿ ? ಶಕ್ತಿ ಅನ್ನೋ ನಮ್ಮ ಭಾಷೆಯ ಪದವನ್ನೇಕೆ ಬಳಸಲಿಲ್ಲ ?’ ಎಂದು ಕೇಳಿದೆ. ಅವರು ನನ್ನ ಬರೆಯುವ ಕಲೆಯ ಅಜ್ಞಾನವನ್ನು ಕಂಡು ನಗುತ್ತಾ ಹೀಗೆ ಹೇಳಿದರು. 'ಶಕ್ತಿ ಪದದಲ್ಲಿ ಶಕ್ತಿಯೇ ಇಲ್ಲ. ಅದು ಪುಳಿಚಾರು ಪದ. ತಾಖತ್‌ ಅನ್ನುವುದರಲ್ಲಿ ನೋಡಿ. ನಿಜವಾದ ತಾಖತ್‌ ಇದೆ’ ಎಂದರು. ಈ ವಿವರಣೆಯ ಸ್ಪಷ್ಟತೆಯನ್ನು ಮೆಚ್ಚುತ್ತಾ ಅದನ್ನು ಒಪ್ಪಿಕೊಂಡು ಸುಮ್ಮನಾದೆ. ಆ ಮೇಲೆ ಒಂದು ಬಾರಿ ಬೆಂಗಳೂರಿನಲ್ಲಿ ಇನ್ನೊಬ್ಬ ಮುನ್ನಡ ಬರಹಗಾರರ ಬಳಿ ಇದೇ ಮಾತಿನ ಚರ್ಚೆಯ ನೌಬತ್ತಿನಲ್ಲಿ 'ತಾಖತ್‌ ಅನ್ನೋ ಪದದಲ್ಲಿ ಇರುವಷ್ಟು ತಾಖತ್‌ ಇನ್ನು ಯಾವ ಪದದಲ್ಲೂ ಇಲ್ಲ ಅಲ್ಲವಾ ?’ ಎಂದು ಕೇಳಿದೆ. ಅದಕ್ಕವರು ನನ್ನ ಕಡೆ ಬೀರಿದ ದೃಷ್ಟಿಯಿಂದ ನಾನು ಎಂತಹ ನಾಲಾಯಖ್ಖು, ಬೇವಕೂಫ ಅನ್ನುವ ಭಾವ ತುಂಬಿ ಸೋರುತ್ತಿತ್ತೆಂದು ನಿಮಗೆ ಬಯಾನ್‌ ಮಾಡಲಿಕ್ಕೆ ಅಸಾಧ್ಯ. 'ನೋಡಿ . ತಾಖತ್ತಿನಲ್ಲಿ ಏನ್‌ ತಾಖತ್‌ ಇದೆ? ಏನೇನೂ ಇಲ್ಲ. ಅದೇ ತ ’ ಆಖತ್‌ ಅಂದರೆ ಆಗ ಅದರಲ್ಲಿ ನಿಜವಾದ ತ’ಆಖತ್ತಿರುತ್ತೆ.’ ಎಂದು ವಿಸ್ತರಿಸಿದರು.

ನಾನೇನೂ ವಿದೇಶೀ ಪದಗಳನ್ನು ಸ್ವೀಕರಿಸಲೊಲ್ಲದ ಹಳೇ ಗೊಡ್ಡೆಂದು ತಿಳಿಯ ಬೇಡಿ. ಪರಭಾಷೆಯ ಪದಗಳನ್ನು ವಿಶೇಷ ರೂಪದಲ್ಲಿ ಬಳಸುವುದು ಎಲ್ಲಾ ಕಾಲದಲ್ಲೂ ನಡೆಯುತ್ತಲೇ ಇದೆ. ಇದರಿಂದಲೇ ಭಾಷೆ ಬೆಳೆಯುವುದು. ಯಾವಾಗ ಉಚಿತ, ಯಾವಾಗ ಅನುಚಿತ, ಅದನ್ನ ತಿಳಿದುಕೊಂಡು ಉಪಯೋಗಿಸುವುದು ನಿಪುಣ ಬರೆಹಗಾರರ ಕಲೆಗೆ ಸೇರಿದ್ದು. ಪ್ರೆಸಿಡೆಂಟ್‌ ಕ್ಲಿಂಟನ್‌ಗೆ ಕಚ್ಚೆ ಭದ್ರವಿಲ್ಲ ಅಂದರೆ, ಸರಿಯಾಗಿ ಹೇಳಿದಿರಿ ಎಂದು ಜನ ಅಂದಾರು. ಅದೇ ಅವನ ಕಚ್ಚೆ ಮಜಬೂತ್‌ ಅಲ್ಲ ಅಂದರೆ ಜನ ನಿಮ್ಮ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿಯಾರು. ಆದರೆ 'ಆ ನರ್ತಕಿಯ ಹಿಂಭಾಗ ಬಲೇ ಮಜಬೂತ್‌’ ಎಂದರೆ ನಿಮ್ಮ ಅರ್ಥ ಸ್ಪಷ್ಟವಾಗಿ ಎಲ್ಲರೂ ತಲೆದೂಗಿ ಕಣ್ಣು ಹೊಳೆಸುವುದರಲ್ಲಿ ಸಂಶಯವಿಲ್ಲ.

ಈಗ ಮುನ್ನಡ ಭಾಷೆಯ ಊ-ಪ್ರತ್ಯಯಪಲ್ಲಟ ನಿಯಮವನ್ನು ವಿವರಿಸುತ್ತೇನೆ. ನಮ್ಮ ಹಳೇ ಕಾಲದ ಕನ್ನಡದಲ್ಲಿ 'ಎರಡು ಕಾಲುಗಳನ್ನೂ ಮಡಿಸಿಕೋ’ ಎಂದು ಹೇಳಬೇಕೆಂದಿಟ್ಟುಕೊಳ್ಳಿ. ಈಗ ಅದನ್ನೇ 'ಎರಡೂ ಕಾಲುಗಳನ್ನು ಮಡಿಸಿಕೋ.’ ಎನ್ನುತ್ತಾರೆ. 'ನಾಲ್ಕೂ ರಸ್ತೆಗಳು ಸೇರುವ ಸ್ಥಳ ’ ಅಂದರೆ ನಾಲ್ಕು ರಸ್ತೆಗಳೂ ಸೇರುವ ಸ್ಥಳ ಎಂದರ್ಥ. ಈ ನಿಯಮವೂ ಉತ್ತರದಿಂದ ಬಂದಿದೆಯೆಂದು ವ್ಯಕ್ತವಾಗುತ್ತದೆ. 'ದೋನೋಂ, ಚಾರೋಂ’ ಇತ್ಯಾದಿ ಸಂಖ್ಯೆಗಳ ಮೇಲೆ ಒತ್ತೆೈಸುವುದನ್ನು ಗಮನಿಸಿ. ಕೆಲವು ಕಡೆ ಊ- ಪ್ರತ್ಯಯವನ್ನು ಉಭಯಪದಗಳಿಗೂ ಲಗತ್ತಿಸುತ್ತಾರೆ. 'ಎರಡೂ ಕಾಲುಗಳನ್ನೂ ಮಡಿಸಿಕೋ’ 'ನಾಲ್ಕೂ ರಸ್ತೆಗಳೂ ಸೇರುವ ಸ್ಥಳ’ ಹೀಗೆ. ಅಧಿಕಸ್ಯ ಅಧಿಕಮ್‌ ಫಲಮ್‌ ಎಂದು ಹೆಚ್ಚು ಒತ್ತೆೈಸುವಿಕೆ ಅದರಿಂದ ಬರುತ್ತದೆಂದು ತಿಳಿದುಕೊಂಡಿರಬಹುದು. ಅಥವಾ ಕನ್ನಡ- ಮುನ್ನಡಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿರುವವರು ಹೀಗೆ ಮಾಡುತ್ತಾರೋ ಏನೋ ತಿಳಿಯದು.

ಇನ್ನು ಗಿನ-ಪ್ರತ್ಯಯದ ವಿಸ್ತುತ ಪ್ರಯೋಗದ ವಿಚಾರ. ಕನ್ನಡದಲ್ಲಿ ಗಿನ-ಪ್ರತ್ಯಯ ಷಷ್ಠೀ- ವಿಭಕ್ತಿ ಪ್ರತ್ಯಯಗಳಲ್ಲೊಂದು. ನಮ್ಮ ಹಳೆ ವ್ಯಾಕರಣಗಳ ಪ್ರಕಾರ ಈಚೆ, ಆಚೆ ಎಂಬ ಕೆಲವೇ ಕೆಲವು ಪದಗಳಿಗೆ ಮಾತ್ರ ಸೇರಿಸುತ್ತಾರೆ. ಈಚೆಗೆ ಅದರ ಪ್ರಯೋಗ ಜಾಸ್ತಿ ಕಾಣಹತ್ತಿದೆ. ಸಾಮಾನ್ಯವಾಗಿ ಎ-ಕಾರಾಂತದ ಪದಗಳಿಗೆ ಅಂಟಿಸುವ ಯ-ಪ್ರತ್ಯಯದ ಬದಲು ಗಿನ-ಪ್ರತ್ಯಯ ಸೇರಿಸುವುದು ಹೆಚ್ಚಾಗುತ್ತಿದೆ. ಉದಾಹರಣೆಗೆ 'ಜತೆಗಿನ, ಕಡೆಗಿನ, ಬಗೆಗಿನ’ ಇತ್ಯಾದಿ. ಈ ಸೂಕ್ಷ್ಮವನ್ನು ತಿಳಿಯದವರು ಕನ್ನಡ-ಮುನ್ನಡಗಳ ಭೇದ ತಿಳಿಯಲಾರರು.

ಕಡೆಯದಾಗಿ, ಬಗ್ಗೆಯ ಬಗ್ಗೆ. ಈ ಪದ ಮುನ್ನಡದ ಪ್ರಧಾನ ಲಕ್ಷಣ. ಅವ್ವಲ್‌ ನಿಶಾನಿ. ಇದಿಲ್ಲದೆ ಯಾವುದರ ಬಗ್ಗೆಯೂ ಏನೂ ಹೇಳುವಂತೆಯೂ ಇಲ್ಲ. ಮುನ್ನಡದ ಬರಹಗಾರರು ಪ್ರಾಯಶಃ ಪ್ರತಿಯಾಂದೂ ವಾಕ್ಯದಲ್ಲಿ (ಹೆ ಹೆ ಹ್ಹೆ ಹೇಗಿದೆ ನನ್ನ ಊ- ಪ್ರತ್ಯಯ ಪ್ರಯೋಗದ ನಿಪುಣತೆ ) ಈ ಪದವನ್ನು ಉಪಯೋಗಿಸುತ್ತಾರೆ. ಭಾಷಣಕಾರರೂ ರಾಜಕಾರಣಿಗಳೂ ಈ ಪದವಿಲ್ಲದೆ ಹೋದರೆ ಬಾಯಿಕಟ್ಟು ಹಾಕಿದ ಬೊಗಳು ನಾಯಿಯಂತೆ ಮೌನವಾಗುತ್ತಾರೆ. ಈ ಪದ ಮೊದ ಮೊದಲು ಅಗ್ಲಿಯಾಗಿ ಕಾಣಿಸುತ್ತದೆ. ಅದನ್ನು ಉಚ್ಚರಿಸಿದರೆ ಹೇಗೆ ಹೇಗೋ ಅನ್ನಿಸುತ್ತದೆ. ಅದೊಂದು 'ಅಕ್ವೆ ೖರ್ಡ್‌ ಟೇಸ್ಟ್‌’. ನಿಮಗೇನಾದರೂ ಹಾಗನ್ನಿಸಿದರೆ ಬಗ್ಗೆ, ಬಗ್ಗೆ, ಬಗ್ಗೆ ಅಂತ ಒಂದು ಹತ್ತು ಸಲ ಹೇಳಿಕೊಳ್ಳಿ. ಆಗ ನೀವಾಗಿಯೇ ಅದನ್ನು ಒಪ್ಪಿಕೊಳ್ಳುತ್ತೀರಿ. ಬಗ್ಗೆ ಅಂದರೆ ವಿಷಯವಾಗಿ, ವಿಷಯವನ್ನು ಕುರಿತು, ಎಂದು ಅರ್ಥೈಸಬಹುದು. ಬಗೆಗೆ ಎಂಬ ಪದ ಬಗ್ಗೆ ಆಗಿದೆ. ಬಗೆ ಪದದ ಚತುರ್ಥೀ ವಿಭಕ್ತಿ ರೂಪ. ಈ ಪದ ಯಾವ ಕಾಲದಲ್ಲಿ ಮೊದಲು ಕಾಣಿಸಿಕೊಳ್ಳಲು ಪ್ರಾರಂಭಿಸಿತೆಂದು ತಿಳಿಯದು. ಯಾವ ಕನ್ನಡಾ ಎಮ್ಮೇ ಭಾವೀ ಪಂಡಿತರೂ ಈ 'ಬಗ್ಗೆ’ ಸಂಶೋಧನೆ ಮಾಡಿರುವಂತೆ ಕಾಣದು. ಈ ಪದದ ವ್ಯುತ್ಪತ್ತಿಯ 'ಬಗ್ಗೆ’ ನನ್ನದೊಂದು ಥೀರಿಯಿದೆ. ಅದೇನೆಂದರೆ , ಈ ಪದ ಸ್ವಾತಂತ್ರ್ಯದ ಚಳುವಳಿಗಳ ದಿನಗಳಲ್ಲಿ ಹುಟ್ಟಿತು ಎಂದು. ಕಾರಣ, ಇದು ರಾಜಕಾರಣಿಗಳಿಗೆ, ಭಾಷಣ ಸಮಯಗಳಲ್ಲಿ ಅತ್ಯಂತ ಉಪಯೋಗಕ್ಕೆ ಬರುವ ಪದ. ನೀವೇ ಯೋಚಿಸಿ. ಬಗೆಗೆ, ಬಗೆಗೆ ಎಂದು ನಿಮಿಷಕ್ಕೆ ಹತ್ತು ಬಾರಿ ಹೇಳಿದರೆ ಇವನಿಗೆ ಉಗ್ಗು ಹಿಡಿದಿದೆಯೆಂದು ಸಭಿಕರು ತಪ್ಪು ತಿಳಿದಾರು. ಅಲ್ಲದೆ ರಂಗ ಮಂಚದ ಮೇಲೆ ನಿಂತು ಮಾತಾಡುವವರಿಗೆ ಸಾವಧಾನವಿರುವುದಿಲ್ಲ. ಬಗೆಗೆ ಬಗ್ಗೆ ಆಗುವುದರಲ್ಲಿ ಸಂದೇಹವಿಲ್ಲ.

ಇದರಂತಹವೇ ಆದ ಇನ್ನೂ ಕೆಲವು ಪದಗಳು ಇವೆ. ಅವು 'ಬೆಳಗ್ಗೆ’ ಮತ್ತು 'ಗೊತ್ತು’. ಬೆಳಗಿಗೆ ಮತ್ತು ಗುರುತು ಪದಗಳ ಅವಸರದ ಪ್ರಯೋಗ ರೂಪಗಳು. ಇವೂ ನಮ್ಮ ಚಿಕ್ಕಂದಿನ ಕನ್ನಡದಲ್ಲಿ ಇನ್ನೂ ಮಾರ್ಪಾಟಿನ ರೂಪದಲ್ಲಿದ್ದವೇನೋ. ಈಗ ಅವುಗಳು ಯಾವ ವಿಧವಾದ ಕುತೂಹಲವನ್ನೂ ಸೆಳೆಯುವುದಿಲ್ಲ. ಕನ್ನಡ ಭಾಷೆ ನಮ್ಮ ಜೀವಮಾನದ ಈಗಿನ ಶತಮಾನದಲ್ಲಿ ಬಹಳ ವೇಗದಿಂದ ಬದಲಾಯಿಸುತ್ತಿದೆ. ಮೇಲಿನ ಪದಗಳಷ್ಟೇ ಅಲ್ಲ. ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. 'ಮಾಡಿದುದು’ 'ಮಾಡಿದ್ದು’ ಆಗಿದೆ. ಅಥವಾ 'ಆಗುತ್ತೆ’(ಆಗುತ್ತದೆ) ಇತ್ಯಾದಿ.

ನಾವು ಕರ್ಣಾಟಕವನ್ನು ಬಿಟ್ಟು ಈಗ ಅಮೇರಿಕಾಕ್ಕೆ ಬಂದು ನೆಲಸಿ ಎರಡು ಮೂರು ದಶಕಗಳು ಆಗಲೇ ಕಳೆದಿವೆ. ಈ ದರ್ಮಿಯಾನದಲ್ಲಿ ನಾವು ಕಂಡ ಕನ್ನಡ ಭಾಷೆ ನಮ್ಮನ್ನು ಬಿಟ್ಟು ಮುಂದೆ ಸಾಗಿದೆ. 'ಕಂಡು ಕಂಡು ನೀನೆಮ್ಮಾ ಕೈ ತೊರೆದೆಯಾ ಕಂಡಾ’ ಎಂದು ಒಂದು ಹೊಸ ಹಾಡು ಕಟ್ಟಬಹುದು. ನಾವು ಇಲ್ಲಿಗೆ ತಂದ ಭಾಷೆಯೇ ನಮ್ಮ ತಾಯಿ, ಅದೇ ಸತ್ಯ, ಅದೇ ನಿತ್ಯ , ಎಂದು ನಮ್ಮಲ್ಲಿ ಕೆಲವರು ಭಾಷಾ ಪ್ರೇಮಿಗಳು ಹೆಮ್ಮೆಗೊಂಡಿದ್ದಾರೆ. ನೀ ಏನೇ ಆಗಿರು, ಎಂತೇ ಇರು, ಎಲ್ಲೇ ಇರು, ನೀ ಕನ್ನಡವಾಗಿರು ಎಂದು ಮಹಾಕವಿ ಪುಟ್ಟಪ್ಪನವರ ಹಾಡೊಂದು ಯಾವಾಗಲೂ ನಮಗೆ ಬೋಧನೆ ಮಾಡುತ್ತಿರುತ್ತದೆ. ಆದರೆ ಕರ್ಣಾಟಕದಲ್ಲೇ ಕನ್ನಡ ಕನ್ನಡವಾಗಿ ಉಳಿದಿಲ್ಲ. 'ನೀನಲ್ಲೇ, ಇರು, ಬದಲಾಗದೆ ಇರು, ಎಂದೆಂದಿಗು ನೀ ಕನ್ನಡವಾಗಿರು’ ಎಂದು ಇನ್ನೊಂದು ಅಣಕು ಹಾಡು ಕಟ್ಟಬೇಕಾಗಿದೆ. ಆದರೆ ಆಗಿರುವುದು ಭಾಷಾ ಶಾಸ್ತ್ರಜ್ಞರಿಗೆ ಬಹಳ ಪರಿಚಿತವಾದ ವಿಷಯವೇ ಸರಿ. ಭಾಷೆಗಳು ಪರಿವರ್ತನೆಗೊಳಗಾಗುವುದು ಅವುಗಳ ಸಹಜ ಧರ್ಮ. ಪರಿವರ್ತನೆಗೆ ಅದರದೇ ಒಂದು ವೇಗವಿರುತ್ತದೆ. ಒಂದು ಭಾಷೆಯನ್ನು ಆಡುವ ಜನರು ತಮ್ಮ ಮೂಲಸ್ಥಾನದಿಂದ ದೂರವಾದ ಬೇರೊಂದು ಪ್ರದೇಶಕ್ಕೆ ವಲಸೆ ಹೋದಾಗ, ಅವರ ಜತೆ ಹೋದ ಭಾಷೆಯ ಪರಿವರ್ತನೆಯ ವೇಗ ಅವರು ಬಿಟ್ಟು ಹೋದ ಜನರ ಭಾಷೆಯ ಪರಿವರ್ತನೆಯ ವೇಗಕ್ಕಿಂತ ಕಡಿಮೆಯಾಗಿರುತ್ತದೆ. ಹೀಗಾಗಿ, ಭಾಷೆಯ ಹಳೆಯ ರೂಪಗಳು ದೂರ ಹೋದವರೊಡನೆ ನಿಲ್ಲುತ್ತವೆ. ಭಾಷೆಯ ಮೂಲಸ್ಥಾನದಲ್ಲಿ ಹೊಸ ಹೊಸ ರೂಪಗಳು ಹುಟ್ಟಿಕೊಳ್ಳುತ್ತವೆ. ಇದೊಂದು ಭಾಷಾ ಧರ್ಮ. ಕನ್ನಡ ಬಾವುಟಗಳನ್ನು ಬೀಸಾಡಿಸಿ ಮೈ ನೋಯಿಸಿಕೊಳ್ಳುತ್ತಿರುವ ಕೆಲವು ನಮ್ಮ ಅಮೇರಿಕನ್ನಡಿಗರಿಗೆ ಕನ್ನಡವು ಈಗ ಮುನ್ನಡವಾಗಿದೆ.

ಅದರ ಸ್ಥೂಲ ರೂಪಗಳನ್ನು ಇಲ್ಲಿ ವಿವರಿಸಲು ಪ್ರಯತ್ನ ಪಟ್ಟಿದ್ದೇನೆ. ಕರ್ಣಾಟಕದಿಂದ ಬಂದು ಭರಭರ ಮಾತನಾಡುವವರ ಮಾತುಗಳನ್ನು ಕೇಳಿ, ಅರ್ಥವಾಗದೇ, ನಮಗೆ ಕನ್ನಡ ಕೈ ಬಿಟ್ಟು ಹೋಯಿತೆಂದು ನಾವು ಎಂದಿಗೂ ವ್ಯಥೆ ಪಟ್ಟುಕೊಳ್ಳಬಾರದು. ನಮ್ಮ ಭಾಷೆ ಕನ್ನಡವಾಗೇ ಉಳಿದಿದೆ. ಊರಿನಿಂದ ಬಂದವರು ಮುನ್ನಡದ ಕೈ ಹಿಡಿದಿದ್ದಾರೆ, ಅಷ್ಟೆ.

English summary
How much Kannada do you know? Dr.H.V.Rangachar, New Jersy writes on the changing experiments in Kannada present days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X