• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಲಿಬ್‌ನ ಬರೆಯದ ಗಜಲ್‌ಗಳು

By Staff
|

*ಎಂ.ಆರ್‌. ದತ್ತಾತ್ರಿ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

Mirza Galibಪುಣೆಯ ಟಾಟ ಕಂಪನಿಯಲ್ಲಿ ಆಗ ನನ್ನ ಕೆಲಸ. ಗಣೇಶ ಚತುರ್ಥಿಗೆ ಊರಿಗೆ ಬಂದವನು ಎರಡು ದಿನವಿದ್ದು ವಾಪಸ್ಸು ಹೊರಟಿದ್ದೆ. ಅಮ್ಮ ಊಟ ಬಡಿಸುತ್ತಾ ಇನ್ನು ಅಷ್ಟು ದೂರ ಹೋಗಬೇಕಲ್ಲ ಮಗು ನೀನು ಎಂದು ಆರ್ತತೆಯಿಂದ ನನ್ನ ನೋಡಿದಳು. ಚಿಕ್ಕಮಗಳೂರಿನಿಂದ ಶಿವಮೊಗ್ಗೆಗೆ ಬಂದು ಅಲ್ಲಿಂದ ಸಾವಕಾರಿ ಬಸ್ಸನ್ನು ಹಿಡಿದು ಕುಳಿತ ಮೇಲೆ ಬೇಸಿಗೆಯ ಹವ ಚೆನ್ನಾಗಿ ನಿದ್ರೆ ಬರಿಸಿತ್ತು.

ಸ್ವಲ್ಪ ತೂಕಡಿಸುವುದು. ಅರೆ ಎಚ್ಚರವಾದಾಗ ಸಾಗಿಹೋಗುವ ಮರಗಳು, ಹಳ್ಳಿಗಳು ಮತ್ತು ಊರುಗಳನ್ನು ನೋಡುವುದು. ಸುಮಾರು ಹದಿನೆಂಟು ಗಂಟೆಗಳು ಇದೇ ತರ ಕಳೆಯಬೇಕು ಪುಣೆಯನ್ನು ತಲುಪಲು. ಹುಬ್ಬಳ್ಳಿಯನ್ನು ದಾಟುವಾಗ ದೂರದ ಬಯಲುಗಳಲ್ಲಿ ಸೂರ್ಯ ಮುಳುಗಿ ಮೆಲ್ಲಗೆ ಕಣ್ಣಿಗೆ ತಂಪೇರಿಸುತ್ತಾ ಕತ್ತಲೆ ಕವಿಯುತ್ತಿರುವಾಗ ಬಸ್ಸಿನ ಪ್ರಯಾಣವೂ ಹಿತವಾಗಿತ್ತು. ಬೆಳಗಾವಿಯಲ್ಲಿ ಊಟ. ಅಲ್ಲಿಂದ ಬಸ್ಸು ಹೊರಟಾಗ ಒಬ್ಬ ತರುಣ ನನ್ನ ಪಕ್ಕದಲ್ಲಿ ಕುಳಿತಿದ್ದ. ಅವನಿಗೂ ಚೆನ್ನಾಗಿ ನಿದ್ರೆ. ಬಸ್ಸು ಮಹಾರಾಷ್ಟ್ರ ರಾಜ್ಯವನ್ನು ಪ್ರವೇಶಿಸಿ ಬಹಳ ಕಾಲವಾಗಿತ್ತು. ಪಕ್ಕದವನ ರೇಡಿಯೋ ಟ್ರಾನ್ಸಿಸ್ಟರ್‌ ಗೊರಗೊರ ಶಬ್ದ ಮಾಡಿದಾಗಲೇ ನನಗೆ ಎಚ್ಚರ. ಮುಂಬಯಿ ಸ್ಟೇಷನ್‌ ಹಾಕಲು ನೋಡುತ್ತಾನೆ. ಅದೋ ಕೇಳಲಾಗದಷ್ಟು ಶಬ್ದದಲ್ಲಿ ನಿಲ್ಲುತ್ತದೆ. ಪುಣೆಯ ವಿವಿಧಭಾರತಿ ಹಿಡಿಯಲು ನೋಡುತ್ತಾನೆ. ನಾನು ಮನಸ್ಸಿನಲ್ಲಿಯೇ ಅವನನ್ನು ಶಪಿಸಿದೆ ನನ್ನ ನಿದ್ರೆಯನ್ನು ಹಾಳುಗೆಡವಿದ್ದಕ್ಕೆ. ಅದ್ಯಾವ ಸ್ಟೇಷನ್ನಿಗೆ ನಿಂತನೋ ಗೊತ್ತಿಲ್ಲ, ಸುಶ್ರಾವ್ಯವಾದ ಹಾಡು:

ದಿಲ್‌-ಇ-ನಾದಾನ್‌ ತುಜೆ ಹುವಾ ಕ್ಯಾ ಹೈ?

ಆಕಿರ್‌ ಇಸ್‌ ದರ್ದ್‌ ಕೀ ದವಾ ಕ್ಯಾ ಹೈ?

ಮಿರ್ಜಾ ಗಾಲಿಬ್‌ನ ಗಜಲ್‌ಗಳನ್ನು ಕೇಳಿದ್ದೆ. ಆದರೆ ಇಷ್ಟು ಮನ ಮುಟ್ಟುವಂತೆ ಕೇಳಿರಲಿಲ್ಲ. ಆ ಹಾಡಿಗೆ ನಾನು ಮೈ ಮರೆತು ಹೋದೆ. ಪ್ರಪಂಚವನ್ನೇ ಸೆಳೆಯುವ ಗಾಲಿಬ್‌ನ ಗಜಲ್ಲಿಗೆ ಒಬ್ಬ ಅವಿವಾಹಿತ ತರುಣನ ಆರ್ದ್ರ ಹೃದಯವನ್ನು ವಶಪಡಿಸಿಕೊಳ್ಳುವುದು ಕಷ್ಟವೇ? ಗಾಲಿಬ್‌ನ ಸಾಹಿತ್ಯದ ಜೊತೆಗೆ ಜಗಜಿತ್‌ ಮತ್ತು ಚಿತ್ರಾ ಸಿಂಗ್‌ರ ಗಾಂಧರ್ವ ಸ್ವರವೂ ಕಾರಣವಿರಬಹುದು. ನನ್ನ ನಿದ್ರೆ ಹಾರಿಹೋಯಿತು. ಮನಸ್ಸಿನಲ್ಲೆಲ್ಲಾ ಗಾಲಿಬ್‌ನ ‘ದಿಲ್‌-ಇ-ನಾದಾನ್‌’ನೇ ತುಂಬಿಹೋಯಿತು. ಪುಣೆ ಬಂದೊಡನೆಯೇ ಮೊದಲು ಮಾಡಿದ ಕೆಲಸ ಗಾಲಿಬ್‌ನ ಗಜಲ್‌ಗಳ ಆಡಿಯೋ ಕ್ಯಾಸೆಟ್ಟುಗಳನ್ನು ಹುಡುಕಿತಂದದ್ದು. ಅವತ್ತಿನಿಂದ ಈ ಹಾಡನ್ನು ಸುಮಾರು ನೂರು ಬಾರಿ ಕೇಳಿರಬಹುದು ನಾನು. ಪ್ರತಿ ಬಾರಿಯೂ ಅದು ನನ್ನನ್ನು ಅಂದು ಬಸ್ಸಿನಲ್ಲಿ ಮರುಳುಗೋಳಿಸಿದಂತೆಯೇ ಹಿಡಿದು ನಿಲ್ಲಿಸಿದೆ.

ಪ್ರೀತಿಯನ್ನು ನಂಬುವ ಮನಸ್ಸಿದೆ

ಗಾಲಿಬ್‌ ನನ್ನೊಬ್ಬನನ್ನೇ ಈ ತರ ಹುಚ್ಚನಾಗಿಸಿಲ್ಲ. ಸುಮಾರು ನೂರೈವತ್ತು ವರ್ಷಗಳ ಹಿಂದಿನ ಅವನ ಈ ಗಜಲ್‌ಗಳು ಲಕ್ಷಾಂತರ ಮಂದಿಯನ್ನು ಮರುಳುಮಾಡಿವೆ. ಅಮೇರಿಕಾದ ಒಬ್ಬ ಪ್ರಖ್ಯಾತ ಕವಿ ರಾಬರ್ಟ್‌ ಬ್ಲೈ ಈ ರೀತಿ ಗಾಲಿಬ್‌ನಿಗೆ ಶರಣಾಗತರಾದವರಲ್ಲಿ ಒಬ್ಬ. ಲಾಸ್‌ ಏಂಜಲೀಸ್‌ನಲ್ಲಿ ನೆಲಸಿರುವ ಬಯಲಾಜಿಸ್ಟ್‌ ಮತ್ತು ಕವಿ ಸುನಿಲ್‌ ದತ್ತ ಎನ್ನುವರೊಂದಿಗೆ ಕೂಡಿ ಗಾಲಿಬ್‌ನ ಅನೇಕ ಪ್ರಖ್ಯಾತ ಗಜಲ್‌ಗಳನ್ನು ರಾಬರ್ಟ್‌ ಬ್ಲೈ ಇಂಗ್ಲೀಷಿಗೆ ತಂದಿದ್ದಾನೆ. ಕಬೀರರ ಅನನ್ಯ ಭಕ್ತಿ ಮತ್ತು ಗಾಲಿಬ್‌ನ ನಿರ್ವ್ಯಾಜ ಪ್ರೇಮವನ್ನು ಸಂಪೂರ್ಣವಾಗಿ ಅರ್ಥೈಸಲಾಗುವುದಿಲ್ಲ ಹಾಗು ಅನುವಾದಿಸಲು ಕೂಡ ಎನ್ನುವುದು ತಿಳಿದಿದ್ದರೂ ಅದರ ಒಂದಂಶವನ್ನಾದರೂ ತಂದರೆ ಅಷ್ಟೇ ಸಾರ್ಥಕ ಎನ್ನುವುದು ಬ್ಲೈನ ನಿಲುವು. ಅಷ್ಟರ ಮಟ್ಟಿಗೆ ರಾಬರ್ಟ್‌ ಬ್ಲೈ ಮತ್ತು ಸುನಿಲ್‌ ದತ್ತ ಯಶಸ್ವಿಯಾಗಿದ್ದಾರೆ ಕೂಡ.

ಟಾಗೂರರಿಂದ ಹಿಡಿದು ಅನೇಕ ಭಾರತೀಯ ಕವಿಗಳು ಇಂಗ್ಲೀಷ್‌ಗೆ ಅನುವಾದಗೊಂಡು ಪಶ್ಚಿಮವನ್ನು ಮುಟ್ಟಿದ್ದರೂ ಗಾಲಿಬ್‌ ಮುಟ್ಟಿದ ರೀತಿ ಮಾತ್ರ ಬಹಳ ವಿಶೇಷವಾದುದು. ಪ್ರೇಮ ಮತ್ತು ಮೋಹಗಳನ್ನು ಸೇರಿ ಭಾವಗಳನ್ನು ಅರ್ಥೈಸುವಾಗ ಇತ್ತೀಚಿನ ಪೌರಾತ್ಯ ಕವಿಗಳಲ್ಲಿ (ಟಾಗೂರರನ್ನೂ ಸೇರಿಸಿ) ಅವರೆಷ್ಟೇ ವಿರೋಧಿಸಿದರೂ ಪಶ್ಚಿಮದ ಸಾಹಿತ್ಯ ಚಳುವಳಿಗಳ ಛಾಪು ಕಂಡುಬರುವುದರಿಂದ ಪಾಶ್ಚಿಮಾತ್ಯ ಓದುಗರಲ್ಲಿ ಅದು ‘ಇದೇ ಪೂರ್ವವನ್ನು ಬಿಂಬಿಸುವಂಥದ್ದು’ ಎನ್ನುವಂತದ್ದನ್ನು ಮೂಡಿಸುವಂತದ್ದಾಗಲೀ, ಅಥವಾ ಪೂರ್ವದ ಸಾಹಿತ್ಯದಲ್ಲಿ ಮೂಡಿದ ರಸಗಳಲ್ಲಿ ವ್ಯಕ್ತವಾದ ಮುಗ್ಧತೆಯನ್ನು ಸಂಪೂರ್ಣವಾಗಿ ತೆರೆದಿಡುವುದಾಗಲೀ ಸಾಧ್ಯವಾಗಿತ್ತು ಎಂದು ನನಗಂತೂ ಅನ್ನಿಸುವುದಿಲ್ಲ. ಗಾಲಿಬ್‌ ಹಾಗಲ್ಲ. ಗಾಲಿಬ್‌ನ ಗಜಲ್‌ಗಳಲ್ಲಿ ಪ್ರೀತಿಯಿದೆ ಜೊತೆಗೆ ಅದನ್ನು ಶೇಕಡಾ ನೂರು ನಂಬಿರುವ ಮನಸ್ಸಿದೆ. ಹಕ್ಕಿಯ ಪುಕ್ಕಕ್ಕಿಂತಾ ಹಗುರವಾದ ಆ ಅನುಭಾವಿ ಮನಸ್ಸು ಪೂರ್ವ ಮತ್ತು ಪಶ್ಚಿಮದ ಎಗ್ಗಿಲ್ಲದೆ ಗಡಿ, ಧರ್ಮ ಮತ್ತು ಜನಗಳ ಸೋಂಕಿಲ್ಲದೆ ಹಾರುತ್ತದೆ.

M. R. Dattatriಬರೀ ಪ್ರೀತಿ ಮತ್ತು ಶರಾಬಿಗಷ್ಟೇ ನಿಯಮಿತವಾಗಿಲ್ಲ ಗಾಲಿಬ್‌ನ ಹಾಡುಗಳು. ಬ್ಲೈನ ಪುಸ್ತಕದಲ್ಲಿ ದೆಹಲಿಯ ಪ್ರೊಫೆಸರ್‌ ಒಬ್ಬರು ಹೀಗೆನ್ನುತ್ತಾರೆ:

‘ನಾನು ವಿದ್ಯಾರ್ಥಿಯಾಗಿದ್ದಾಗ ಗಾಲಿಬ್‌ನನ್ನು ಆರಾಧಿಸುತ್ತಿದ್ದೆ. ಅವನು ಪ್ರೀತಿಯ ಬಗ್ಗೆ ಹೇಳುವುದು ನನಗಾಗಿಯೇ ಎನ್ನುವಂತಹ ತನ್ಮಯತೆಯಿತ್ತು. ಈಗ ಈ ವಯಸ್ಸಿನಲ್ಲಿ ಗಾಲಿಬ್‌ನ ಗಜಲ್‌ಗಳನ್ನು ಕೇಳುತ್ತೇನೆ. ಹರೆಯದಲ್ಲಿ ಪ್ರೀತಿ ತೋರಿದ್ದ ಪದ್ಯಗಳೇ ನನಗೀಗ ದೇವರನ್ನು ತೋರಿಸುತ್ತಿವೆ’.

ಪರ್ಶಿಯನ್‌ ಕವಿಯಾಗುವ ಗಾಲಿಬ್‌ನ ಆಸೆ

ಪ್ರೀತಿ ಮತ್ತು ದೇವರನ್ನು ಒಂದೇ ತಕ್ಕಡಿಯಲ್ಲಿಟ್ಟಿದ್ದಲ್ಲದೆ ಆಗಾಗ ಅದಲು-ಬದಲು ಮಾಡಿ ಆಟವಾಡಿದವ ಗಾಲಿಬ್‌. ಆದರೆ ಅವನ ಬಹುತೇಕ ಉರ್ದು ಗಜಲ್‌ಗಳು ಅವನಿಂದ ಬರೆಸಿಕೊಳ್ಳಲ್ಪಟ್ಟಿದ್ದು ಅವನ ಹದಿನೇಳನೇ ವಯಸ್ಸಿನೊಳಗೇನೇ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೆ ? ಆಮೇಲೆ ಗಾಲಿಬನಿಗೆ ಪರ್ಶಿಯನ್‌ ಭಾಷೆಯ ಲೇಖಕನಾಗುವ ಹುಚ್ಚು ಹತ್ತಿತು. ನೆರಮನೆಯ ಈ ಹುಡುಗನನ್ನು ಪರ್ಶಿಯನ್‌ ಭಾಷೆ ಸರಿಯಾಗಿ ಎತ್ತಿಕೊಳ್ಳಲಿಲ್ಲ. ನಾನು ಉರ್ದುವಿನಲ್ಲೇ ಬರೆಯಬೇಕಿತ್ತು ಎಂದು ಗಾಲಿಬನಿಗೆ ಅನ್ನಿಸುವುದರೊಳಗೆ ಕಾಲದೇವ ಮೂವತ್ತು ವರ್ಷಗಳನ್ನು ಆಚೆಗೆ ಓಡಿಸಿದ್ದ. ಗಾಲಿಬ್‌ ಆಮೇಲೆ ಮತ್ತೆ ಉರ್ದುವಿನಲ್ಲಿ ಗಜಲ್‌ಗಳನ್ನು ಬರೆದ. ಆಶ್ಚರ್ಯವೆಂದರೆ ಮೂವತ್ತು ವರ್ಷಗಳ ಹಿಂದೆ ಬರೆದಷ್ಟೇ ಸುಂದರವಾದ, ಮುಗ್ಧವಾದ ಮತ್ತು ಹಸಿತನದಿಂದ ಕೂಡಿದ ಪದ್ಯಗಳು ಅವು!

ಗಾಲಿಬನನ್ನು ದೂರ ಎಳೆದದ್ದು ಬರೀ ಪರ್ಶಿಯನ್‌ ಭಾಷೆ ಮಾತ್ರ ಅಲ್ಲ, ಬ್ರಿಟೀಷರೂ ಕೂಡ. ಮೊಘಲರ ಕೊನೆಯ ಸುಲ್ತಾನ ಬಹದೂರ್‌ ಷಾಜಫರ್‌ನ ಆತ್ಮೀಯ ಸ್ನೇಹಿತ ಗಾಲಿಬ್‌. ಸ್ವತಃ ಕವಿಯಾಗಿದ್ದ ಸುಲ್ತಾನ ತನ್ನೆಲ್ಲಾ ಸಾಹಿತ್ಯ ಸಂಬಂಧಿ ಚಟುವಟಿಕೆಗಳಲ್ಲಿ ಗಾಲಿಬನನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡುತ್ತಿದ್ದ. ಸುಲ್ತಾನನ ಸಹವಾಸದಲ್ಲಿದ್ದರೂ ಗಾಲಿಬ್‌ ಒಬ್ಬ ಸನ್ಯಾಸಿಯಂತೆ. ಸಾಯುವತನಕ ಸ್ವಂತ ಮನೆಯಲ್ಲಿ ಬಾಳಲಿಲ್ಲ. ಹಣಕ್ಕಾಗಿ ಏನನ್ನೂ ಮಾಡಿದವನಲ್ಲ. ಕೊನೆಗೆ ಹುಟ್ಟಿದ ಮಕ್ಕಳೆಲ್ಲ ನಾನಾ ಕಾರಣಗಳಿಂದಾಗಿ ಚಿಕ್ಕವಯಸ್ಸಿಗೇ ಮೃತರಾದರೂ ತನ್ನ ಹೆಂಡತಿಯ ಸಂಬಂಧಿಯಾಬ್ಬರ ತಬ್ಬಲೀ ಮಕ್ಕಳಿಗೆ ತಂದೆಯಾದ. ಕೊನೆಗೆ ತನ್ನದೇ ಆದ ಪುಸ್ತಕಗಳನ್ನೂ ಹೊಂದದೆ ಸ್ನೇಹಿತರಿಂದ ಎರವಲು ಪಡೆಯುತ್ತಿದ್ದ !

ಒಲ್ಲದ ಸೇವೆ ಮಾಡಿ ಕುಂದಿದ ಆತ್ಮ ಶಕ್ತಿ

ಸಿಪಾಯಿದಂಗೆ ಮೊಘಲರನ್ನು ಸಂಪೂರ್ಣವಾಗಿ ನಾಶಮಾಡಿತು. ಗಾಲಿಬ್‌ನ ಕಣ್ಣಮುಂದೆಯೇ ಸಾವಿರಾರು ಜನ ಅವನ ಸ್ನೇಹಿತರನ್ನು ಬ್ರಿಟೀಷರು ನೇಣಿಗೇರಿಸಿದರು. ಗಾಲಿಬನ ಜೀವನ ನರಕವಾಯಿತು. ತನ್ನ ಮತ್ತು ಕುಟುಂಬದ ಜೀವ ಉಳಿಸಲು ಗಾಲಿಬ್‌ ಬ್ರಿಟೀಷರನ್ನು ಹೊಗಳುವಂತಹ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಚಟುವಟಿಕೆಗಳನ್ನು ತೆಗಳುವಂತಹ ಪುಸ್ತಕವನ್ನು ಬರೆದು ಬ್ರಿಟೀಷರಿಗೆ ಕೊಡಬೇಕಾಯಿತು. ಬ್ರಿಟೀಷರು ಗಾಲಿಬನಿಗೆ ಜೀವದಾನವನ್ನೇನೋ ಮಾಡಿದರು. ಆದರೆ ಗಾಲಿಬ್‌ನ ಆತ್ಮಶಕ್ತಿ ಕುಂದಿಹೋಯಿತು. ದ್ರೋಹದ ಬೆಂಕಿ ಅವನ ಹೃದಯವನ್ನು ದಹಿಸಿತು. ಅವನನ್ನು ಉಳಿಸಿ ಬ್ರಿಟೀಷರು ಅವನ ಕವಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದರು.

ಒಮ್ಮೊಮ್ಮೆ ಯೋಚಿಸುತ್ತೇನೆ - ಎಷ್ಟೊಂದು ಪದ್ಯಗಳು ಗಾಲಿಬನ ಹೃದಯದಿಂದ ಕಾಗದಕ್ಕಿಳಿಯದೆ ಅವನೊಂದಿಗೇ ಚಿರವಾಗಿ ಕಳೆದು ಹೋದವು? ಬ್ರಿಟೀಷರಿಂದ ಆಗಬಹುದಾಗಿದ್ದಂತೂ ಆಗಿಯೇ ತೀರುತ್ತಿತ್ತು. ಪುಸ್ತಕ ಬರೆದರೂ ಬರೆಯದಿದ್ದರೂ ಅದು ಗಾಲಿಬನ ಅಂತ್ಯವೇ ಆಗಿರುತ್ತಿತ್ತು. ಆದರೆ ಪರ್ಶಿಯನ್‌ ಭಾಷೆಯ ವ್ಯಾಮೋಹದಲ್ಲಿ ಮೂವತ್ತು ವರ್ಷಗಳ ಕಾಲ ತನಗೆ ಬೆಳಕು ತಂದ ಉರ್ದು ಗಜಲ್‌ಗಳನ್ನು ಗಾಲಿಬ್‌ ಬರೆಯದೇ ಹೋದನಲ್ಲಾ ?

ಚಿಕ್ಕವಯಸ್ಸಿಗೇ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕವಯಿತ್ರಿ ಸಿಲ್ವಿಯಾ ಪ್ಲಾತ್‌, ತನ್ನ ಹದಿನಾರನೇ ವಯಸ್ಸಿಗೇ ಬರೆದ ಪದ್ಯಗಳಿಂದ ಜಗತ್ಪ್ರಸಿದ್ಧನಾದರೂ ಆಮೇಲೆ ಪ್ರೇಮದ ಭ್ರಮನಿರಸನದಲ್ಲಿ ಜೀವನಾಸಕ್ತಿಯನ್ನೇ ಕಳೆದುಕೊಂಡವನಂತೆ ಸಾಹಿತ್ಯದಾಚೆಗೆ ನಿಂತು ಜೀವನವನ್ನು ಸವೆಸಿದ ಫ್ರೆಂಚ್‌ ಕವಿ ರಾಂಬೋ, ಇಪ್ಪತ್ತಾರಕ್ಕೇ ಕ್ಷಯಕ್ಕೆ ಕ್ಷಯವಾಗಿಹೋದ ಕೀಟ್ಸ್‌, ಅಷ್ಟೇಕೆ, ನಮ್ಮವನೇ ಆದ ಮುದ್ದಣ ಇವರೆಲ್ಲಾ ಬರೀ ಕಿಡಿಯನ್ನು ತೋರಿ ಆರಿಹೋದವರೋ, ಅಥವಾ ದೇದೀಪ್ಯಮಾನವಾಗಿ ಉರಿದುಹೋದವರೋ, ಅವರಿಗೇ ಗೊತ್ತು !

ಗಾಲಿಬ್‌ನ ಒಂದು ಗಜಲಿನ ಕೆಲವು ಸಾಲುಗಳು ಹೀಗಿವೆ:

ಕಹಾ ಮೈನೆ ಕಿತನಾ ಹೈ ಗುಲ್‌ ಕಾ ಸಬಾತ್‌

ಕಾಲಿ ನೆ ಯೆ ಸುನ್ಕರ್‌ ತಬಸ್ಸೂಮ್‌ ಕಿಯಾ!

(‘ಎಷ್ಟು ವರ್ಷ?’ ನಾನು ಕೇಳಿದೆ ಗುಲಾಬಿಯ ಆಯಸ್ಸುಮೊಗ್ಗು ಮೊಗವೆತ್ತಿ ಮುಗುಳ್ನಕ್ಕಿತ್ತಷ್ಟೆ!)

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more