ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಪ್ರಪಂಚ ಸುತ್ತಿ ಬಂದೆ - ಪುಟ 3

By Staff
|
Google Oneindia Kannada News

*ವಿಜಯ ಗುಂ. ರುಈಕರ
ಅಂಟಿಯೋಕ್‌, ಕ್ಯಾಲಿಫೋರ್ನಿಯ, ಯುಎಸ್‌

Vijay Ruikarಒಮ್ಮೆ ನಾನು ಯೂರೋಪಿಗೆ ಹೊರಟಾಗ, ಅಟ್ಲಾಂಟಿಕ್‌ ಮಹಾಸಾಗರದ ಮೇಲಿನ ಉಡ್ಡಾಣ ಮುಗಿಯುತ್ತಿದ್ದಂತೆ, ವಿಮಾನದ ಇಂಜಿನ್‌ನೊಳಗೆ ಅದೇನೋ ಒಂದು ಕೆಂಪು ದೀಪ ವೈಮಾನಿಕರಿಗೆ ಕಾಣಿಸಿಕೊಂಡಿತು. ತುಂಬಾ ಎಚ್ಚರಿಕೆಯಿಂದ ಅವರು ಕೂಡಲೆ ವಿಮಾನದ ದಿಕ್ಕು ಬದಲಾಯಿಸಿ, ಸಮೀಪದ ಅಥೆನ್ಸ್‌ (ಗ್ರೀಸ್‌) ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿಯೇ ಬಿಟ್ಟರು. ನಿಲ್ದಾಣದತ್ತ ಭೂಮಿಯ ಮೇಲೆ ವಿಮಾನ ಚಲಿಸುತ್ತಿದ್ದಾಗ ಆದ ಘಟನೆಯನ್ನು ಪ್ರಯಾಣಿಕರಿಗೆ ತಿಳಿಸಿದರು.

ಆಗ ಮಧ್ಯರಾತ್ರಿಯಾಗಿತ್ತು. ಬೆಳಗ್ಗೆ 9 ಗಂಟೆಗೆ ಬೇರೊಂದು ವಿಮಾನ ಲಂಡನ್‌ದಿಂದ ಬಂದು, ನಮ್ಮೆಲ್ಲರನ್ನು ಅಥೆನ್ಸ್‌ನಿಂದ ಲಂಡನ್ನಿಗೆ ಕೊಂಡೊಯ್ಯುವ ಏರ್ಪಾಟಾಗಿತ್ತು. ಆದರೆ ರಾತ್ರಿಯಿಡೀ ಅಥೆನ್ಸ್‌ನ transit passangers lounge ದಲ್ಲಿ ಕುಳಿತುಕೊಂಡೇ ಕಳೆಯುವುದು ಅಪರಿಹಾರ್ಯವಾಗಿತ್ತು. ಅಲ್ಲಿ ಕುಳಿತು ನಾವೆಲ್ಲ ತೂಕಡಿಸುತ್ತಿದ್ದೆವು.

ಅಷ್ಟರೊಳಗೆ ಗ್ರೀಕ್‌ ಇಮಿಗ್ರೇಷನ್‌ ಅಧಿಕಾರಿಗಳು ಅಲ್ಲಿ ತಲುಪಿದರು. ಪ್ರತಿಯಾಬ್ಬರ ಪಾಸ್‌ಪೋರ್ಟನ್ನು ಪರೀಕ್ಷಿಸಿ, ಅದರ ಮೇಲೆ ಗ್ರೀಕ್‌ ದೇಶದ stamp ಅನ್ನು ಅಚ್ಚೊತ್ತುವ ಕೆಲಸ ಪ್ರಾರಂಭಿಸಿದರು. ಈ ಅಧಿಕಾರಿಗಳಲ್ಲಿ 4 ಮಂದಿ ಹುರಿಮೀಸೆಯ ತರುಣರು ಹಾಗೂ ಇಬ್ಬರು ತರುಣಿಯರಿದ್ದರು. ಅವರೆಲ್ಲರೂ ನಮ್ಮ ಪರಿಸ್ಥಿತಿಯನ್ನು ತುಂಬಾ ಸಹಾನುಭೂತಿಯಿಂದ ತಿಳಿದುಕೊಂಡು, ನಮ್ಮನ್ನು ಸಾಲಾಗಿ ನಿಲ್ಲಿಸದೆ, ಕುಳಿತಲ್ಲಿಯೇ ಸಾಲಾಗಿ ಕೂರುವಂತೆ ಅನುಮತಿಕೊಟ್ಟರು. ತಾವೇ ಒಬ್ಬೊಬ್ಬರ ಹತ್ತಿರ ಬಂದು ಪಾಸ್‌ ಪೋರ್ಟ್‌ ಪರೀಕ್ಷಿಸಿ, ಸೀಲು ಹಾಕುತ್ತಿದ್ದರು. ಅವರಾರಿಗೂ ಇಂಗ್ಲಿಷ್‌ ಭಾಷೆಯು ಸರಿಯಾಗಿ ಬರುತ್ತಲೇ ಇರಲಿಲ್ಲ. ಒಬ್ಬ ತರುಣ ಮಾತ್ರ ತಕ್ಕಮಟ್ಟಿಗೆ ಮಾತನಾಡಬಲ್ಲವನಾಗಿದ್ದ.

ಬರಬರುತ್ತಾ ಈ ತರುಣ ಅಧಿಕಾರಿ ನಿದ್ದೆಗೆಟ್ಟು ಕಂಗಾಲಾದ ಒಬ್ಬ ಭಾರತೀಯ ಅರ್ಧವಯಸ್ಸಿನ ಪುರುಷ ಪ್ರಯಾಣಿಕನ ಬಳಿ ತಲುಪಿದ. ಹೆಗಲಿನ ಮೇಲೆ ನಿಧಾನಕ್ಕೆ ತಟ್ಟಿ ಭಾರತೀಯನನ್ನು ಎಚ್ಚರಿಸಿ, ಪಾಸ್‌ಪೋರ್ಟ್‌ ಕೊಡಲು ವಿನಂತಿಸಿದ. ಆಗತಾನೇ ಭಾರತೀಯನಿಗೆ ಸ್ವಲ್ಪ ನಿದ್ದೆ ಹತ್ತಿತ್ತು. ಅಷ್ಟರೊಳಗೇ ಏಳಬೇಕಾದುದರಿಂದ ಆತ ಕೋಪದಿಂದ ಕಿಡಿಕಿಡಿಯಾದ. ‘ what is this ? where am I ? I dont know where I have come, and I dont know when I will be going to where !! (‘ ಇದೇನಿದು, ನಾನೆಲ್ಲಿದ್ದೇನೆ ? ಎಲ್ಲಿಂದ ಬಂದೆ, ಎಲ್ಲಿಗೆ ಯಾವಾಗ ಹೋಗಲಿರುವೆ ಏನೂ ಗೊತ್ತಾಗುವುದೇ ಇಲ್ಲ ! ’ ಎಂದು ದೊಡ್ಡ ಧ್ವನಿಯಿಂದ ಹೇಳತೊಡಗಿದ.

ಆದರೆ ಆ ಗ್ರೀಕ್‌ ತರುಣ ಪಾಸ್‌ಪೋರ್ಟ್‌ ಅಧಿಕಾರಿಯ ವಿನೋದ ಬುದ್ಧಿ ತುಂಬಾ ಹರಿತವಾಗಿತ್ತು. ಅವನಿಗೆ ಸ್ವಲ್ಪವೂ ಸಿಟ್ಟು ಬರಲಿಲ್ಲ. ‘ ಸ್ವಾಮೀ, ತಾವು ಭಾರತೀಯರೇ ?’ ಎಂದು ನಮ್ರವಾಗಿ ಕೇಳಿದ. ಪ್ರಯಾಣಿಕ ‘ ಹೌದು ’ ಎಂದಾಗ ನಸುನಗುತ್ತಾ, ಹೇಳಿದ. ‘ ನೋಡಿ, ನೀವು ಭಾರತೀಯರು. ನಾನು ಗ್ರೀಸ್‌ ದೇಶದ ನಾಗರಿಕ. ನಮ್ಮಿಬ್ಬರ ದೇಶಗಳು ಹಲವು ಸಾವಿರ ವರ್ಷಗಳಿಗಿಂತ ಹಳೆಯ ಸಂಸ್ಕೃತಿ, ಸಭ್ಯತೆಗಳನ್ನು ಹೊಂದಿರುವುದು ಜಗತ್ಪ್ರಸಿದ್ಧ. ಈ ಅನೇಕ ಸಹಸ್ರ ವರ್ಷಗಳಲ್ಲಿ ನಮ್ಮಿಬ್ಬರ ದೇಶಗಳಲ್ಲೂ ಅನೇಕಾನೇಕ ಜ್ಞಾನಿಗಳು, ತತ್ವವೇತ್ತರು, ವಾಗ್ಮಿ, ಯುಗ್ಮಿಗಳಾಗಿ, ವಿಜೃಂಭಿಸಿ ಹೋದುದೂ ನಿಜವಷ್ಟೇ. ಈ ಎಲ್ಲ ತತ್ವಜ್ಞಾನಿಗಳು ಸತತವಾಗಿ ಈಗ ನೀವು ಕೇಳಿದ ಪ್ರಶ್ನೆಗಳ ಉತ್ತರಗಳನ್ನು ಹುಡುಕಾಡುತ್ತ, ತಪಸ್ಸು ಮಾಡುತ್ತ, ಇಡೀ ಜೀವಮಾನಗಳನ್ನು, ತಲೆತಲಾಂತರ ತಲೆಮಾರುಗಳನ್ನೇ ಕಳೆದಿದ್ದಾರೆ. ಆದರೆ ಯಾರಿಗೂ ಇನ್ನೂ ಈ ಎಲ್ಲ ಪ್ರಶ್ನೆಗಳ ನಿಶ್ಚಿತವಾದ ಉತ್ತರಗಳು ಸಿಕ್ಕಿದಂತೆ ಕಾಣುವುದಿಲ್ಲ. ಆದ್ದರಿಂದ ದಯಮಾಡಿ ಆ ಪ್ರಶ್ನೆಗಳನ್ನು ಬದಿಗೊತ್ತಿ ತಮ್ಮ ಪಾಸ್‌ಪೋರ್ಟ್‌ ನನಗೆ ಕೊಡಿ ’ ಎಂದು ವಿನಂತಿಸಿದ.

ರಾತ್ರಿ 2 ಗಂಟೆಗೊ ಸಹ ಆ ಪ್ರಶ್ನೋತ್ತರಗಳನ್ನು ಆಲಿಸಿದ ಎಲ್ಲರಿಂದ ಹಾಸ್ಯ ಭೋರ್ಗರೆಯಿತು. ಪ್ರವಾಸ, ದಣಿವು, ಕಷ್ಟ ಎಲ್ಲಿಯೋ ಮರೆತುಹೊಯಿತು !


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X