ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಂಗದಲ್ಲಿ ಇದನ್ನು ಓದಿದೆ ; ಎಲ್ಲರಿಗೂ ಗೊತ್ತಾಗಲೆಂದು ಇಲ್ಲಿ ಬರೆದೆ

By Staff
|
Google Oneindia Kannada News

*ಶ್ರೀವತ್ಸ ಜೋಶಿ

ಕೆಲವು ವಾರಗಳ ಹಿಂದೆ ‘ತರಂಗ’ ದಲ್ಲಿ ‘ಕನ್ನಡದ ಸಿರಿ ಸೊರಗುತಿದೆ - ಕೇಳು ಓ ಕನ್ನಡಿಗ ! ’ಎಂಬ ಮುಖಪುಟ ಲೇಖನ ಪ್ರಕಟವಾಗಿತ್ತು. ಕನ್ನಡದ ಈಗಿನ ದುರವಸ್ಥೆಯ ಬಗ್ಗೆ ಚಂದ್ರಶೇಖರ ಪಾಟೀಲರು ಮಾಡಿದ ವಿಶ್ಲೇಷಣೆ ಅರ್ಥಪೂರ್ಣವಾಗಿತ್ತು. ಆ ವಿಶ್ಲೇಷಣೆಯ ವಿಷಯ ತರಂಗ ಓದುಗರಿಗೆ ಮಾತ್ರವಲ್ಲದೆ ಸಮಸ್ತ ಕನ್ನಡಿಗರಿಗೂ (ದಟ್ಸ್‌ ಕನ್ನಡ.ಕಾಂ ಮೂಲಕ ವಿಶ್ವ ವ್ಯಾಪ್ತಿ ) ಗೊತ್ತಾಗಬೇಕೆನ್ನುವ ಉದ್ದೇಶದಿಂದ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.

ಕನ್ನಡಿಗ ಮತ್ತು ಕನ್ನಡ: ನಾನು ಎಸೆಸೆಲ್ಸಿಯವರೆಗೂ ಕನ್ನಡ ಮಾಧ್ಯಮದಲ್ಲೇ ಕಲಿತವನು. ಮುಂದೆ ಪಿಯುಸಿ ಮತ್ತು ಇಂಜಿನಿಯರಿಂಗ್‌ ವಿದ್ಯಾಭ್ಯಾಸದ ನಂತರ ಉದ್ಯೋಗದಲ್ಲಿ ಕರ್ನಾಟಕದಿಂದ ಹೊರಗೆಯೇ ಇದ್ದೇನೆನ್ನಬಹುದು. ನನ್ನ ಕನ್ನಡ ಮಾಧ್ಯಮದ ಕಲಿಕೆ ನನಗೆಂದೂ ತೊಡಕಾಗಿ, ಕೀಳರಿಮೆಯಾಗಿ ಅನುಭವಕ್ಕೆ ಬಂದಿಲ್ಲ. ಬದಲಾಗಿ, ಯಾವಾಗಲೂ ಕನ್ನಡದ ಸಂಪರ್ಕ ಇಟ್ಟುಕೊಂಡೇ ಇದ್ದೇನೆ. ಕನ್ನಡ ಪತ್ರಿಕೆಗಳನ್ನು, ಪುಸ್ತಕಗಳನ್ನು ಓದುತ್ತೇನೆ. ಕನ್ನಡ ವೆಬ್‌ಸೈಟ್‌ಗಳನ್ನು ನೋಡುತ್ತೇನೆ. ಸ್ನೇಹಿತರಿಗೆ, ಬಂಧುಗಳಿಗೆ ಕನ್ನಡದಲ್ಲಿ ಪತ್ರ ಬರೆಯುತ್ತೇನೆ. ಊರಿಗೆ ಭೇಟಿ ನೀಡಿದಾಗ ಕನ್ನಡ ಕ್ಯಾಸೆಟ್‌ಗಳನ್ನು ಖರೀದಿಸುತ್ತೇನೆ. ಇಲ್ಲಿ ಅಮೆರಿಕದಲ್ಲಿ ಕೂಡ ಹೆಚ್ಚಿನ ನಗರಗಳಲ್ಲಿ ‘ ಕನ್ನಡ ಸಂಘ’ಗಳಿದ್ದು ಉತ್ತಮ ಚಟುವಟಿಕೆಗಳಲ್ಲಿ ಅವು ತೊಡಗಿರುವುದನ್ನು ಕಂಡು ಸಂತೋಷಪಡುತ್ತೇನೆ. ಸಾಧ್ಯವಾದಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ.

ಆದರೆ, ಇದಾವುದನ್ನು ನಾನು ‘ಕನ್ನಡದ ಕಟ್ಟಾ ಅಭಿಮಾನಿ ’ ಎಂದು ಹೇಳಿಕೊಳ್ಳುತ್ತ ಮಾಡುತ್ತಿಲ್ಲ. ಅಥವಾ ನವೆಂಬರ್‌ ತಿಂಗಳಲ್ಲಿ ಮಾತ್ರ ನನ್ನ ಕನ್ನಡ ಪ್ರೇಮ ಜಾಗೃತವಾಗುವುದೂ ಅಲ್ಲ. ಕನ್ನಡವನ್ನು ಬೇರೊಂದು ಭಾಷೆಯಾಂದಿಗೆ ಮೇಲು-ಕೀಳು ತೀರ್ಮಾನಿಸಲು ನಾನು ಹೋಲಿಸಿದ್ದೇ ಇಲ್ಲ. ಹಾಗಾಗಿ ಸಹಜವಾಗಿಯೇ ಕನ್ನಡದ ಬಗ್ಗೆ ನನಗೆ ಕೀಳರಿಮೆಯೂ ಇಲ್ಲ. ಬೂಟಾಟಿಕೆಯ ಪೊಳ್ಳು ಅಭಿಮಾನವೂ ಇಲ್ಲ. ನನ್ನ ಬದುಕಿನಲ್ಲಿ ಕನ್ನಡ ಭಾಷೆ ಒಂದು ಅವಿಭಾಜ್ಯ ಅಂಗ. ನಾನು ಹೇಳುವುದೆಂದರೆ ಸಮಸ್ತ ಕನ್ನಡಿಗರಿಗೂ (ಕರ್ನಾಟಕದಲ್ಲಿರುವವರೂ, ಹೊರನಾಡ ಕನ್ನಡಿಗರೂ) ಈ ರೀತಿ ‘ ಅತಿ ’ ಯಲ್ಲದೆ ಸಹಜ ಅಭಿಮಾನ ಇದ್ದರೆ ಸಾಕು, ಕನ್ನಡ ಉಳಿಯುತ್ತದೆ. ಬೆಳೆಯುತ್ತದೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X