ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

...ಹೀಗೇ, ಒಂದು ಮಾತು

By Staff
|
Google Oneindia Kannada News

*ಡಾ.ಗುರುಪ್ರಸಾದ್‌ ಕಾಗಿನೆಲೆ ಎಂ.ಡಿ.(1109, ಸೆವೆನ್ತ್‌ ಸ್ಟ್ರೀಟ್‌ ಸೌತ್‌, ಬಿ-114, ಮಿನೆಸೊಠಾ, ಯು.ಎಸ್‌.ಎ.)

ಐದು ವರ್ಷದ ಹಿಂದೆ ಬೆಂಗಳೂರಿಗೆ ಹೋಗಿದ್ದೆ. ಹೆಂಡತಿಗೆ ಹಲ್ಲಿನ ತೊಂದರೆಯಿತ್ತು. ಇಲ್ಲಿ ತೋರಿಸಿದಾಗ ‘ರೂಟ್‌ ಕೆನಾಲ್‌’ ಮಾಡಬೇಕೆಂದಿದ್ದರು ಡಾಕ್ಟರುಗಳು. ಆಗಿನ್ನೂ ಅಮೆರಿಕಾಕ್ಕೆ ಬಂದ ಹೊಸತು. ಹೇಗೂ ಬೆಂಗಳೂರಿಗೆ ಹೋಗುತ್ತೀವಲ್ಲ, ಅಲ್ಲಿಯೇ ಮಾಡಿಸಿದರಾಯಿತು ಅಂದಳು ಹೆಂಡತಿ.

ಹೊಸದಾಗಿ ದೇಶಬಿಟ್ಟವರೆಲ್ಲರಂತೆ ನಾನೂ ಬೆಂಗಳೂರಿನಲ್ಲಿ ಹೆಂಡತಿಯ ಹಲ್ಲು ರಿಪೇರಿ ಮಾಡಿಸಲು ಹಿಂದು ಮುಂದು ನೋಡಿದೆ. ಆದರೆ ಹೆಂಡತಿಗೆ ಅಪಾರವಾದ ಅಭಿಮಾನ ಈ ದಂತವೈದ್ಯನ ಮೇಲೆ. ಇರಲಿ, ನೋಡೋಣವೆಂದು ಹೋದೆ, ಗಾಂಧಿಬಜಾರಿನಲ್ಲಿರುವ ಆತನ ಆಫೀಸಿಗೆ. ಮನೆಯ ಒಂದು ಭಾಗವನ್ನೇ ಆಫೀಸಾಗಿ ಬದಲಾಯಿಸಿದ್ದ. ಮುಂದಿನ ಕೋಣೆಯಲ್ಲಿ ಕೂತು ಕಾಯುತ್ತಿದ್ದೆವು. ಗೋಡೆಗಳ ಮೇಲೆ ಅವನ ನಾನಾ ಡಿಗ್ರಿ ಡಿಪ್ಲೋಮಾಗಳು. ಮಿಶಿಗನ್‌ ಸ್ಟೇಟ್‌ ಯುನಿವರ್ಸಿಟಿಯ ಲೋಗೋ ಇರುವ ಫೆಲೋಶಿಪ್ಪಿನ ಸರ್ಟಿಫಿಕೇಟ್‌. ಒಳ್ಳೆ ಫ್ರೇಮಿನಲ್ಲಿ ಕಂಗೊಳಿಸುತ್ತಿತ್ತು. ಪಕ್ಕದಲ್ಲಿ ಗೋಲ್ಡನ್‌ ಗೇಟ್‌ ಸೇತುವೆಯ ಮುಂದೆ ನಿಂತು ತೆಗೆಸಿಕೊಂಡಿರುವ ಆತನ ಇನ್ನೊಂದು ಫೋಟೋ. ಆಗ, ನನಗಿದ್ದ ಅಮೆರಿಕಾ ವ್ಯಾಮೋಹದಲ್ಲಿಈ ಡಾಕ್ಟರ ಮೇಲೆ ಪೂರಾ ನಂಬಿಕೆ ಬರಲು ಇಷ್ಟು ಸಾಕಿತ್ತು.

ನನ್ನ ಹಿನ್ನೆಲೆ ತಿಳಿದಿದ್ದನೆನಿಸುತ್ತದೆ. ಸ್ವಲ್ಪ ಅನುಮಾನಿಸುತ್ತಲೇ ಹೊರಗೆ ಬಂದ. ಪರಸ್ಪರ ಪರಿಚಯವಾದಮೇಲೆ ನೇರವಾಗಿ ವ್ಯವಹಾರಕ್ಕಿಳಿಯೋಣವೆನ್ನಿಸಿತು. ‘ಎಷ್ಟು ದಿನ ಬೇಕಾಗಬಹುದು. ಪೂರಾ ಟ್ರೀಟ್‌ಮೆಂಟ್‌ಗೆ’ -ನೇರವಾಗಿ ಕೇಳಿದೆ. ಸ್ವಲ್ಪ ಹಿಂಜರೆದ. ‘ಹಾಗೆಲ್ಲಾ ಹೇಳೊಕ್ಕಾಗಲ್ಲ. ಒಟ್ಟು ಐದು ಸಿಟ್ಟಿಂಗಿನಲ್ಲಿ ಮಾಡಬೇಕು. ಮಧ್ಯೆ ಏನಾದರೂ ತೊಂದರೆಯಾದರೆ ಮತ್ತೆ ಇನ್ನೂ ಜಾಸ್ತಿ ದಿನ ಬೇಕಾಗಬಹುದು’. ಎಂದು ಕೊಂಚ ಅಸಮಾಧಾನದಿಂದಲೇ ಹೇಳಿದ. ‘ನೋಡಿ, ನಾವಿಲ್ಲಿ ಇರುವುದು ಕೆಲವೇ ಕೆಲವು ದಿನ. ಅದರಲ್ಲೂ ನಾವಿಲ್ಲಿ ಬಂದಿರುವುದು ರಜೆಯ ಮೇಲೆ. ಅವಳದ್ದು ಇನ್ನೂ ಬೇರೆ ಕಾರ್ಯಕ್ರಮಗಳ ಮಧ್ಯೆ ಈ ಟ್ರೀಟ್‌ಮೆಂಟ್‌ನ್ನೂ ಹೊಂದಿಸಬೇಕು ನೋಡಿ’. ಎಂದು ನಿಧಾನವಾಗಿಯೇ ಹೇಳಿದೆ. ಇದ್ದಕ್ಕಿದ್ದ ಹಾಗೆ ಆ ಡಾಕ್ಟರು , ‘ನೀವು ಎಷ್ಟು ಬಲವಂತ ಮಾಡಿದರೂ ಸರಿ, ನಾನು ಹೇಳುವುದು ಇಷ್ಟೇ. ಇದು ಅಮೆರಿಕಾ ಅಲ್ಲ. ಎಲ್ಲವೂ ಗಡಿಯಾರದ ರೀತಿ ಠಕಠಕ ಎಂದು ನಡೆಯುವುದಕ್ಕೆ. ಇಲ್ಲಿ ನಮ್ಮದೇ ಆದ ತೊಂದರೆಗಳಿವೆ. ಯಾವಾಗಂದರೆ ಆಗ ಕರೆಂಟ್‌ ತೆಗೆಯುತ್ತಿರುತ್ತಾರೆ. ಅಸಿಸ್ಟೆಂಟ್‌ಗಳು ಸಿಗುವುದು ಕಷ್ಟ. ನಿಮಗೆ ಅಷ್ಟು ತೊಂದರೆಯಾದರೆ ಬೇರೆ ಕಡೆ ಮಾಡಿಸಿಕೊಳ್ಳಿ’ ಎಂದು ಬಿಟ್ಟ.

ನನ್ನ ಹೆಂಡತಿಗೆ ನನ್ನ ಮೇಲೆಯೇ ಸಿಟ್ಟು. ‘ನೀವು ಎಲ್ಲ ಅಮೆರಿಕಾದ ರೀತಿಯೇ ಅಂದುಕೊಂಡಿದ್ದೀರ. ಇಲ್ಲಿ ನಾವು ಅವರನ್ನು ಅನುಸರಿಸಿಕೊಂಡು ಹೋಗಬೇಕೇ ಹೊರತು ಅವರ್ಯಾಕೆ ನಮ್ಮ ಟೈಮಿಗೆ ಮಾಡುತ್ತಾರೆ. ನಾವಿಲ್ಲದೇ ಇದ್ದರೆ ಇನ್ನೊಬ್ಬರು ಇದ್ದೇ ಇರುತ್ತಾರೆ, ಅವರಿಗೆ. ಇಂಡಿಯಾದಲ್ಲೇನು ಪೇಷಂಟುಗಳಿಗೆ ಕಮ್ಮಿಯೇ. ನೀವು ನಿಮ್ಮ ಮಾತಾಡುವ ಶೈಲಿ ಬದಲಾಯಿಸಿಕೊಳ್ಳದಿದ್ದರೆ, ನಮಗೆ ಯಾವ ಡಾಕ್ಟರು ಸಿಗುವುದಿಲ್ಲ ನೋಡಿ’, ಎಂದು ಆಕ್ಷೇಪಿಸಿದಳು. ನನ್ನ ರಜಾ ಮುಗಿಯಿತೆಂದು ನಾನು ವಾಪಸ್‌ ಬಂದೆ. ತನ್ನ ಹಲ್ಲು ಸರಿಮಾಡಿಸಿಕೊಳ್ಳಲು ಇನ್ನಾರು ವಾರ ಬೆಂಗಳೂರಿನಲ್ಲೇ ಉಳಿದಳು ನನ್ನ ಅರ್ಧಾಂಗಿ.

ನಾಲ್ಕು ವರ್ಷದ ಮೇಲೆ ಮತ್ತೆ ಬೆಂಗಳೂರಿಗೆ ಹೋಗಿದ್ದೆ. ಸಂಬಂಧಿಕರೊಬ್ಬರಿಗೆ ಸಣ್ಣದೊಂದು ಶಸ್ತ್ರ ಚಿಕಿತ್ಸೆ ಮಾಡಿಸಬೇಕಿತ್ತು ಎಂದು ಮನೆಯ ಹತ್ತಿರದ ನರ್ಸಿಂಗ್‌ ಹೋಮಿಗೇ ಹೋದೆವು. ಉಭಯ ಕುಶಲೋಪರಿಯಾದ ನಂತರ ಅಮೆರಿಕಾದ ವೈದ್ಯ ಪದ್ಧತಿಯ ಬಗ್ಗೆ ಕೇಳಲಾರಂಭಿಸಿದ. ನಾನೂ ಉತ್ಸಾಹದಿಂದಲೇ ಹೇಳಿದೆ. ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಹೈಟೆಕ್‌ ಆಸ್ಪತ್ರೆಗಳ ಬಗ್ಗೆ ಮಾತು ತಿರುಗಿತು. ‘ಎಲ್ರೂ ಕಳ್ಳರೇ ಸಾರ್‌, ಬರೀ ದುಡ್ಡು ಮಾಡಬೇಕೆಂತಲೇ ಕಟ್ಟಿದ್ದಾರೆ ನೋಡಿ, ಎಥಿಕ್ಸೆಲ್ಲಾ ಗಾಳಿಗೆ ಬಿಟ್ಟು ಬಿಟ್ಟಿದ್ದಾರೆ ಸಾರ್‌. ಮೊನ್ನೆ ಮೊನ್ನೆ ಏನಾಯ್ತು ಅಂದರೆ ನಮ್ಮ ಕಡೆಯವರೇ ಒಬ್ಬರು, ಬೈಪಾಸ್‌ ಆಗಬೇಕಾಗಿತ್ತು. ನಾನು ಮಾಡೊಲ್ಲ ನೋಡಿ , ದೊಡ್ಡ ಹಾಸ್ಪಿಟಲ್‌ ಅಂತ ಕರೆದುಕೊಂಡು ಹೋದರೆ, ಬರಿ 30 - 40% ಬ್ಲಾಕ್‌ ಇದ್ದರೂ ಸಾಕು ಬೈಪಾಸ್‌ ಮಾಡ್ತಾರೆ ನೋಡಿ. ಅದರಲ್ಲೂ ಸರಿಯಾಗಿ ಹಾರ್ಟ್‌ ಸರ್ಜರಿ ಮಾಡೋರು ಇಡೀ ಬೆಂಗಳೂರಿಗೆ ಇರೋರು ಮೂರೋ, ನಾಲ್ಕೋ, ಜನ ಮಾತ್ರ ಸಾರ್‌. ಉಳಿದವರೆಲ್ಲರೂ ಬೇರೆ ಯಾರನ್ನೋ ಕರೆದು ಮಾಡಿಸೋದು. ನಮಗ್ಯಾಕೆ ಹೇಳಿ, ನಮ್ಮ ಪ್ರಾಕ್ಟೀಸ್‌ ಚೆನ್ನಾಗೇ ಇದೆ. ಈ ಟೀವಿಲೆಲ್ಲಾ ಬರುತ್ತಾರಲ್ಲ ಸಾರ್‌, ಈ ದೊಡ್ಡ ಡಾಕ್ಟರುಗಳು. ಬರೀ ಗಿಮಿಕ್‌ ನೋಡಿ. ನಾವಾರೀತಿ ಮಾಡೊಲ್ಲ . ನಿಮ್ಮ ಕೆಲಸ ನೋಡಿ ಬರಬೇಕು ಜನ. ಹಿಂದೆ ಹೇಳುತ್ತಿದ್ದರಲ್ಲ, ಕೈಗುಣ ಅಂತ. ಎವೆರ್ರಿಥಿಂಗ್‌ ಹ್ಯಾಸ್‌ ಗಾನ್‌ ಟು ಡಾಗ್ಸ್‌ ’ ಎಂದ. ಇರುವಷ್ಟು ಹೊತ್ತು ಕಷ್ಟಪಟ್ಟು ಆತನ ಮಾತು ಸಹಿಸಿಕೊಂಡು ಹೊರಗೆ ಬಂದೆ. ಇಲ್ಲಾದ ತಪ್ಪೇನು?


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X