ನಂಜುಂಡಸ್ವಾಮಿಯೆನ್ನುವ ಸಾಹಿತ್ಯ ಚಿಕಿತ್ಸಕ
*ಶಿಕಾರಿಪುರ ಹರಿಹರೇಶ್ವರ
ಮೈಸೂರಿನ ಸಾಮಾನ್ಯ ಮಧ್ಯಮವರ್ಗದ ಮನೆತನವೊಂದರಲ್ಲಿ , 1935 ರಲ್ಲಿ ಹುಟ್ಟಿದ ನಂಜುಂಡಸ್ವಾಮಿಯವರ ಪ್ರಾರಂಭಿಕ ವಿದ್ಯಾಭ್ಯಾಸವೆಲ್ಲ ಮೈಸೂರಿನಲ್ಲೇ ಕಳೆಯಿತು. ಮೈಸೂರು ವಿಶ್ವ ವಿದ್ಯಾಲಯದಿಂದ 1959ರಲ್ಲಿ ಎಂಬಿಬಿಎಸ್ ಪದವಿ ಪಡೆದ ಮೇಲೆ, 1961ರಲ್ಲಿ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅವರು ಅಮೇರಿಕಾಕ್ಕೆ ಪಯಣ ಬೆಳೆಸಿದರು. ಪೆನ್ಸಿಲ್ವೇನಿಯಾದಲ್ಲಿರುವ, ಪಿಟ್ಸ್‌ಬರ್ಗ್ ವಿಶ್ವ ವಿದ್ಯಾಲಯದಲ್ಲಿ ಮತ್ತು ಟೊರೊನ್ಟೊ ವಿಶ್ವ ವಿದ್ಯಾಲಯಗಳಲ್ಲಿ ಸಂಬಂಧಪಟ್ಟ ವಿಷಯಗಳಲ್ಲಿ ಅಭ್ಯಸಿಸಿ, ತರಬೇತಿ ಪಡೆದು, ಫೆಲೋಶಿಪ್ ಆಫ್ ಅಮೆರಿಕನ್ ಕಾಲೇಜ್ ಅಫ್ ಸರ್ಜನ್ಸ್ ಮತ್ತು ಫೆಲೋಶಿಪ್ ಆಫ್ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಕೆನಡಾ - ಪದವಿಗಳನ್ನು ಗಳಿಸಿದರು.
ಪ್ರತಿಭೆಯುಳ್ಳವರಿಗೆ ಉದ್ಯೋಗಾವಕಾಶಕ್ಕೆ ತೊಡಕಾಗಲಿಲ್ಲ. ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿಯೇ ಫ್ಲಾರಿಡಾ ವಿಶ್ವ ವಿದ್ಯಾಲಯದಲ್ಲಿ ಮೊದಲು ಅಧ್ಯಾಪಕ ವೃತ್ತಿಯನ್ನು ಕೈಗೊಂಡರು, ನಂತರ ಅದೇ ರಾಜ್ಯದಲ್ಲಿ ಅದೇ ಶಸ್ತ್ರ ಚಿಕಿತ್ಸೆಯ ಕ್ಷೇತ್ರದಲ್ಲಿ ತಮ್ಮ ಖಾಸಗೀ ವೈದ್ಯ ವೃತ್ತಿಯಲ್ಲಿ ತೊಡಗಿದರು. ‘ಜನರಲ್ ಎಂಡ್ ವ್ಯಾಸ್ಕ್ಯುಲರ್ ಸರ್ಜರಿ’ ಯ ಕ್ಷೇತ್ರದಲ್ಲಿ ಡಾ. ಸ್ವಾಮಿ ಅವರು ಪರಿಣತರು. ಸುಮಾರು ನಲ್ವತ್ತು ವರ್ಷಗಳ ನಿರಂತರ, ಅವಿಚ್ಛಿನ್ನ ಅವಧಿಯ ಸಂಶೋಧನೆ, ಅಧ್ಯಾಪಕ ವೃತ್ತಿ ಮತ್ತು ಸ್ವಂತ ವೈದ್ಯಕೀಯ ಉದ್ಯೋಗದ ಯಶಸ್ಸಿನ ಉತ್ತುಂಗ ಶಿಖರ ಮುಟ್ಟಿ , ಇದೀಗ 1999 ರಲ್ಲಿ ನಿವೃತ್ತರಾಗಿದ್ದಾರೆ.
ಯಾರಿಗುಂಟು, ಯಾರಿಗಿಲ್ಲ, ಈ ಎಲ್ಲ ನೆಂಟರ ಬಾಂಧವ್ಯ
ತಮ್ಮ ಸಹಪಾಠಿ ಡಾ. ಲೀಲಾ ಶಾಮರಾವ್ ಅವರನ್ನು ಡಾ. ಸ್ವಾಮಿ ಅವರು ಮದುವೆಯಾದದ್ದು 1964ರಲ್ಲಿ. ಸುಖೀ ಸಂಸಾರದ ಈ ದಂಪತಿಗಳಿಗೆ ಇಬ್ಬರು ಮಕ್ಕಳು : ಸೀತಾ ಅವರು ವೈದ್ಯಕೀಯ ಶುಶ್ರೂಷೆಯಲ್ಲಿ ಪರಿಣತೆ. ಗೋಪಾಲ್‌ಗೆ ಪಾಶ್ಚಾತ್ಯ ಸಂಗೀತದಲ್ಲಿ ಪ್ರಶಸ್ತಿ.
ಡಾ. ಸ್ವಾಮಿ ಅವರು ಹುಟ್ಟಿ ಬೆಳೆದ ಮನೆಯ ಸಾಹಿತ್ಯಕ ವಾತಾವರಣ ಯಾರಿಗಾದರೂ ಅಸೂಯೆ ಹುಟ್ಟಿಸೀತು. ಮಕ್ಕಳ ಸಾಹಿತ್ಯಕ್ಕೆ ಬುನಾದಿ ಹಾಕಿದ ಆ ಹೆಸರಾಂತ ಕವಿ ‘ಹೊಯ್ಸಳ’ ಇವರ ತಾಯಿಯ ಸೋದರ ಮಾವನ ಮಗ. ಕಾಳಿದಾಸನನು ್ನ ಕನ್ನಡಕ್ಕೆ ತಂದ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರು ಇವರ ಭಾವ. ಕನ್ನಡ ರಂಗಭೂಮಿಯ ಬಗ್ಗೆ ಅಧಿಕೃತ ವಿಶ್ವ ಕೋಶದಂತಿರುವ ಹೆಸರಾಂತ ನಾಟಕಕಾರ, ಕಲಾವಿದ ಡಾ. ಎಚ್. ಕೆ. ರಂಗನಾಥ್ ಇವರ ಅಣ್ಣ. ದೆಹಲಿಯ ಆಕಾಶವಾಣಿಯಲ್ಲಿ ‘ಓದುತ್ತಿರುವವರು ರಾಮಕೃಷ್ಣ ’- ಎಂದು ಪ್ರತಿ ಸಂಜೆ ಕನ್ನಡದ ವಾರ್ತಾಪ್ರಸಾರದ ನಾಂದಿಯಾಗಿ ಕೇಳುತ್ತಿದ್ದೆವಲ್ಲ, ಆ ರಾಮಕೃಷ್ಣರು ಇವರ ಇನ್ನೊಬ್ಬ ಅಣ್ಣ. ಎ. ಎನ್. ಮೂರ್ತಿರಾಯರೂ ಇವರ ಬಂಧುಗಳು. ಪ್ರಜಾವಾಣಿಯ ಟಿ. ಎಸ್. ರಾಮಚಂದ್ರ ರಾವ್, ಕತೆಗಾರ್ತಿ ಎಂ.ಕೆ. ಇಂದಿರಾ, ಕನ್ನಡ ಲೇಖಕಿಯರ ಸಂಘದ , ಬರಹಗಾರ್ತಿ ಎಚ್. ಎಸ್. ಪಾರ್ವತಿ ಇವರೆಲ್ಲ ನಮ್ಮ ಸ್ವಾಮಿಗಳ ಕಸಿನ್‌ಗಳು. ಯಾರಿಗುಂಟು, ಯಾರಿಗಿಲ್ಲ, ಈ ಎಲ್ಲ ನೆಂಟರ ಬಾಂಧವ್ಯ ?
ಹೀಗಿದ್ದು, ಈ ಎಲ್ಲ ಸಾಹಿತ್ಯ ಶಿರೋಮಣಿಗಳ ಸಾಂಸ್ಕೃತಿಕ ಪ್ರಭಾವ ಡಾ. ನಂಜುಂಡ ಸ್ವಾಮಿಗಳ ಮೇಲೆ ದಟ್ಟವಾಗಿ ಬಿದ್ದುದು ಅಚ್ಚರಿಯ ವಿಷಯವೇನಲ್ಲ ! ಸ್ವಾಮಿಯವರ ಮಾತುಗಾರಿಕೆ, ಕತೆ ಹೇಳುವ ಗತ್ತು , ನಟನೆ, ಅಭಿನಯ- ಗಳಲ್ಲೆಲ್ಲ ಆ ಪ್ರಭಾವ ಎದ್ದು ಕಾಣುವ ಅಂಶಗಳೇ. ಕಾಲೇಜಿನಲ್ಲಿದ್ದಾಗ ಬರೆದ ಕತೆ, ಕವಿತೆಗಳು ಆ ದಿನಗಳ ಪ್ರಜಾಮತ, ಚಿತ್ರಗುಪ್ತ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕಾಲೇಜಿನ ವಿದ್ಯಾರ್ಥಿ ಸಂಘ ನಡೆಸಿದ ಸ್ಪರ್ಧೆಯಲ್ಲಿ ‘ಕಲಾವಿದ’ ಕಥೆಗೂ ಮತ್ತು ‘ದೋಣಿ ಸಾಗಿತ್ತು ’ ಕವನಕ್ಕೂ ಪ್ರಥಮ ಬಹುಮಾನ ಬಂದಿದ್ದವು. ಹತ್ತು ವರ್ಷ ವಯಸ್ಸು ಆದವರಾಗಿದ್ದಿನಿಂದ ಅಮೆರಿಕಾಕ್ಕೆ ಕಾಲ್ತೆಗೆಯುವವರೆಗೂ, ಚರ್ಚಾ ಸ್ಪರ್ಧೆಗಳಲ್ಲಿ , ಆಶು ಭಾಷಣ ಕೂಟಗಳಲ್ಲಿ , ಸಂಘ- ಸಂಸ್ಥೆಗಳ ನಾಟಕೋತ್ಸವ ಮೇಜುವಾನಿಗಳಲ್ಲಿ ನಂಜುಂಡ ಸ್ವಾಮಿಯವರು ಪಡೆದ ಷಹಬಾಸಗಿರಿ, ಗೆದ್ದ ಢಾಲುಗಳು, ಪಾರಿತೋಷಿಕಗಳಿಗೆ ಲೆಖ್ಖವಿಲ್ಲ . ಅವರ ಈ ಎಲ್ಲ ವಾಗ್‌ಝರಿಯ ಚಟುವಟಿಕೆಗಳಲ್ಲೂ , ಬತ್ತದ ಬಾವಿಯ ನೀರ ಜೀವ ಸೆಲೆಯಂತೆ ಹನಿಸುತ್ತಿದ್ದ ಒಂದು ಪ್ರಧಾನ ಗುಣವೆಂದರೆ - ಅದೇ ಕೇಳುಗರ ಮನ ತಟ್ಟುವ ನವಿರು ಹಾಸ್ಯದ ಲಹರಿ !
ಈ ಗುಣವೇ ಮೆರೆದು ಮಿಂಚುತ್ತಿದೆ, ಡಾ. ನಂಜುಂಡಸ್ವಾಮಿಯವರ ಈಗಿನ್ನೂ ಹೊರಬಂದ, ಹಾಸ್ಯ ಲೇಖನಗಳ ಒಂದು ಜ್ಞಾಪಕ ಚಿತ್ರ ಶಾಲೆ- ‘ನಿಶ್ಯಬ್ದ - ಸಂಗೀತ’ ಪುಸ್ತಕದಲ್ಲಿ.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications