ವಿವಾಹ ರಜತ ಮಹೋತ್ಸವ-ಮಿಸ್ಸೌರಿಯ ಸೇಂಟ್ ಲೂಯಿ(ಸ್)ನ ನೆನಪುಗಳು
* ಎಸ್.ಕೆ. ಹರಿಹರೇಶ್ವರ, ಸ್ಟಾಕ್‌ಟನ್, ಕ್ಯಾಲಿಫೋರ್ನಿಯಾ
ಮಿಸ್ಸೌರಿ ರಾಜ್ಯದ ಮುಖ್ಯನಗರ, ಸೇಂಟ್ ಲೂಯಿ(ಸ್)ನ್ ಕನ್ನಡ ಸಂಘ ‘ಸಂಗಮ’ಕ್ಕೂ ಶ್ರೀಮತಿ ಹೇಮಾ ಶ್ರೀಕಂಠ ಮತ್ತು ಎನ್.ಎಸ್. ಶ್ರೀಕಂಠ ಅವರಿಗೂ ಏನೋ ಒಂದು ಬಗೆಯ ನಂಟು. ಹಾಗೆ ನೋಡಿದರೆ, 1984 ರಲ್ಲಿ ಅಲ್ಲಿ ಆ ಊರ ಸುತ್ತಮುತ್ತ ಇದ್ದ ಕನ್ನಡ ಮಾತನಾಡುವವರನ್ನೆಲ್ಲ ಕಲೆ ಹಾಕಿ, ‘ಹಾಡುಹಸೆ ಆಟ ಪಾಠಗಳಿಗೊಂದು ನಮ್ಮದೇ ಆದ ವೇದಿಕೆ ಬೇಕು’- ಎಂದು ಅಲ್ಲಿಯ ಕನ್ನಡಿಗರಿಗೆ ಮನವರಿಕೆ ಮಾಡಿಕೊಟ್ಟವರೂ ಹೇಮಾ ಅವರೇ. ಮಧ್ಯವಲಯ ಕನ್ನಡ ಸಮ್ಮಿಳನ ಅಲ್ಲಿ ಜರುಗಿದಾಗ (ಸೆಪ್ಟಂಬರ್ 22, 1990), ಅದರ ನೆನಪಿನಲ್ಲಿ ಹೊರತಂದ ‘ತುರಾಯಿ’ ಸ್ಮರಣ ಸಂಚಿಕೆಯಲ್ಲಿ ಅವರೇ ಬರೆಯುತ್ತಾರೆ: ‘ಆ ದಿನ ರಾತ್ರಿ ಕನ್ನಡ ಗೆಳೆಯರ ಮನೆಯಲ್ಲಿ ಆದ ಕಾರ್ಯಕ್ರಮ ಮುಗಿಸಿ ಮನೆಗೆ ಬರುತ್ತಿದ್ದಾಗ, ಶ್ರೀಕಂಠ, ಸೇಂಟ್ ಲೂಯಿಸ್‌ನಲ್ಲಿ ಕನ್ನಡ ಸಂಘ ಯಾಕೆ ಪ್ರಾರಂಭಿಸಬಾರದು ? ಅಂತ ಮಾತೆತ್ತಿದರು. ನಾನು, ನಾಳೇನೇ ಕನ್ನಡ ಗೆಳೆಯರಿಗೆಲ್ಲ ಫೋನ್ ಮಾಡಿ ಅವರ ಅಭಿಪ್ರಾಯ ಕೇಳೋಣ ಎಂದೆ...’
ಕನ್ನಡ ಸಂಘ ‘ಸಂಗಮ’ ಅಲ್ಲಿ ಹುಟ್ಟಿದ್ದು ಹೀಗೆ, 1985 ಮಾರ್ಚ್ ತಿಂಗಳ ಯುಗಾದಿಯ ದಿನ. ಮೊದಲ ಅಧ್ಯಕ್ಷಿಣಿ ಆಗಿ ‘ಸಂಗಮ’ ದೋಣಿಯ ಚುಕ್ಕಾಣಿ ಹಿಡಿದವರೂ ಹೇಮಾ ಅವರೇ. ಮುಂದಿನ ವರುಷ ಶ್ರೀಕಂಠ ಅವರು ಅಧ್ಯಕ್ಷರಾದರು. ಮುಂದೆ ಮತ್ತೆ ನತ್ತು ಕಟ್ಟಬೇಕೆಂದಾಗ, ಬೆಳೆದ ಹದಿನೈದರ ಹರೆಯದ ಹುಡುಗಿ ‘ಸಂಗಮ’ ಳಿಗೆ ಮುತ್ತಿನಹಾರ ಹಾಕಿದ ಮುತ್ತೆೈದೆಯೂ ಇವರೇನೇ. ಸ್ನೇಹಪರತೆ ಮತ್ತು ಕನ್ನಡಕ್ಕಾಗಿ ನಿಸ್ಪೃಹವಾಗಿ ದುಡಿವ ಪ್ರವೃತ್ತಿ ಹೇಮಾ ಮತ್ತು ಶ್ರೀಕಂಠರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಅವರ ವೈವಾಹಿಕ ಜೀವನದ ಇಪ್ಪತ್ತೆೈದನೆಯ ವಸಂತ ದರ್ಶನದ ಸವಿನೆನಪಿನಲ್ಲಿ , ಒಂದು ಅದ್ದೂರಿಯ ಕಾರ್ಯಕ್ರಮವನ್ನು , ಅವರ ಸ್ನೇಹಿತರ ನೆರವಿನಿಂದ ಅವರ ಮಕ್ಕಳು ಕುಮಾರಿಯರಾದ ದೀಪಾ ಮತ್ತು ಆರತಿ ಇತ್ತೀಚೆಗೆ ಏರ್ಪಡಿಸಿದ್ದರು. ಸಂಜೆ 6 ರಿಂದ ರಾತ್ರಿ 11 ರವರೆಗೆ ನಡೆದ, ಪೂಜೆ, ಹಾಡು, ಅಣಕವಾಡು, ನೃತ್ಯ, ಆಶಿರ್ವಾದ, ಶುಭಾಶಯಗಳು ತುಂಬಿ ತುಳುಕಾಡಿದ ಈ ಸಂತೋಷಕೂಟಕ್ಕೆ ಭಾರತದಿಂದಲೂ, ಅಮೆರಿಕಾದ ದೂರದೂರದ ರಾಜ್ಯಗಳಿಂದಲೂ ನೆಂಟರು, ಇಷ್ಟರು, ಅಭಿಮಾನಿಗಳು, ಗೆಳೆಯರು ಮುನ್ನೂರಕ್ಕೂ ಹೆಚ್ಚು ಮಂದಿ ಬಂದು ಮತ್ತೆ ಹಸೆ ಮಣೆಯ ಮೇಲೆ ವಿರಾಜಿಸಿದ ‘ವಧೂವರ’ರಿಗೆ ಹರಸಿದರು !
ನಾನೂ ಹೋಗಿದ್ದೆ . ಸಭಿಕನಾಗಿ ಕುಳಿತು ಯೋಚಿಸುತ್ತಿದ್ದೆ : ಆಶ್ವಲಾಯನ, ಪಾರಸ್ಕರ, ಆಪಸ್ತಂಬ, ಬೌಧಾಯನ- ಹೀಗೆ ಇರುವ ಹಲವಾರು ಗೃಹ್ಯಸೂತ್ರಗಳಲ್ಲಿ ಯಾವುದರಲ್ಲಿ ಹುಡುಕಿದರೂ ಈ ‘ವಿವಾಹದ ರಜತಮಹೋತ್ಸವ’ದ ವಿಧಿ ವಿಧಾನಗಳ ಸುಳಿವಿಲ್ಲವಲ್ಲ ! ಕಾಲಕ್ಕೆ ತಕ್ಕಂತೆ, ದೇಶಕ್ಕೆ ಹೊಂದಿಕೊಂಡು, ಸವೆದ ಕೆಲವನ್ನು ಬಿಟ್ಟು , ಹೊಳೆವ ಹೊಸದನ್ನು ಸೇರಿಸಿಕೊಂಡು, ವೈದಿಕ ‘ಸಂಸ್ಕಾರ’ಗಳು ರೂಪುಗೊಂಡಿವೆ- ಎಂದೇ ಅಲ್ಲವೇ ಸಂಶೋಧಕರ ಮತ? ಸನಾತನ ಧರ್ಮದ ಅಗ್ನಿಕುಂಡದಿಂದ ಸಿಡಿದು ಬೇರೆಯಾಗಿ ಪ್ರಜ್ವಲಿಸಿದ ಆ ಕಿಡಿಗಳು, ಜೈನ ಬೌದ್ಧ ಸಿಖ್ ಧರ್ಮಗಳೂ ಕೆಲವಾರು ಸಂಸ್ಕಾರಗಳನ್ನು ಹೀಗೆ ಅಲ್ಪಸಲ್ಪ ಮಾರ್ಪಾಟು ಮಾಡಿಕೊಂಡು ತಮ್ಮದನ್ನಾಗಿಸಿಕೊಂಡಿಲ್ಲವೇ ? ವೇದಗಳ ‘ಖಿಲ’ ಸೂಕ್ತಗಳಂತೆ, ಇನ್ನೂ ಸರಿಯಾಗಿ ಸಿಕ್ಕಿಲ್ಲದ ‘ಸ್ಕಂದ ಪುರಾಣದ ರೇವಾಖಂಡದ ಶ್ರೀ ಸತ್ಯನಾರಾಯಣ ವ್ರತ’ ವಿಧಾನದಂತೆ, ಈ ವಿವಾಹ ರಜತ ಮಹೋತ್ಸವ ಸಂಸ್ಕಾರಕ್ಕೆ ವಿಧಿ ವಿಧಾನ ವಿವರಿಸಿ, ‘ಇದಂ ಇತ್ಥಮ್’ ಎನ್ನಲು ಯಾವ ಓಲೆಗರಿ ಹುಡುಕಲಿ ?- ಎಂದು ಯೋಚಿಸುತ್ತಿದ್ದೆ , ಸ್ವಲ್ಪ ಕಾಲ ಕಣ್ಣು ಮುಚ್ಚಿದೆ; ‘ಹನಾಸುನಮ್ (?) ಗೃಹ್ಯಸೂತ್ರದಲ್ಲಿ , ಸಿಕ್ಕಿತು ! (ಮೂಲ ಸಂಸ್ಕೃತದಲ್ಲಿದೆ. ಕನ್ನಡ ಭಾವಾನುವಾದ ಅದರ ಕೆಳಗೇ ಇದೆ.)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications