ಹಂಸಲೇಖಾ ಕ್ಯಾಲಿಫೋರ್ನಿಯಾ ಪ್ರವಾಸ ಅನಿರ್ದಿಷ್ಟ ಕಾಲ ಮುಂದಕ್ಕೆ
ಕ್ಯಾಲಿಫೋರ್ನಿಯಾ : ಬರುವ ಸೆಪ್ಟಂಬರ್- ನವೆಂಬರ್ ತಿಂಗಳ ಹೊತ್ತಿಗೆ ಕ್ಯಾಲಿಫೋರ್ನಿಯಾ ಪ್ರವಾಸ ಕೈಗೊಳ್ಳಬೇಕಿದ್ದ ಸ್ಯಾಂಡಲ್‌ವುಡ್‌ನ ಬೇಡಿಕೆಯ ಸಂಗೀತ ನಿರ್ದೇಶಕ ಹಂಸಲೇಖಾ ಹಾಗೂ ಬಳಗದ ಕಾರ್ಯಕ್ರಮ ಹಲವು ಅನಿವಾರ್ಯ ಅಡೆ ತಡೆಗಳಿಂದಾಗಿ ಮುಂದಕ್ಕೆ ಹೋಗಿದೆ.
ಅಕ್ಟೋಬರ್- ನವೆಂಬರ್ ಸಮಯದಲ್ಲಿ ತಮ್ಮ ಹೊಸ ಡಿಜಿಟಲ್ ಸ್ಟುಡಿಯೋದ ಉದ್ಘಾಟನಾ ಸಮಾರಂಭ ಮತ್ತು ಒಂದೆರಡು ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಬೇಕಿರುವುದರಿಂದ ಕ್ಯಾಲಿಫೋರ್ನಿಯಾಕ್ಕೆ ಬರಲು ಆಗುತ್ತಿಲ್ಲ ಎಂದು ಹಂಸಲೇಖಾ ತಮ್ಮ ಪ್ರವಾಸವನ್ನು ಆಯೋಜಿಸಿದ್ದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟಕ್ಕೆ ತಿಳಿಸಿದ್ದಾರೆ. ಪ್ರವಾಸ ಮುಂದಕ್ಕೆ ಹೋದ ಕಾರಣಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಹಂಸ ಪ್ರವಾಸದ ಮುಂದೂಡಿಕೆಯಿಂದ, ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟಗಳು ಆಯೋಜಿಸಬೇಕೆಂದು ಕೊಂಡಿದ್ದ ಅವರ ಎಲ್ಲ ಕಾರ್ಯಕ್ರಮಗಳೂ ಅನಿರ್ದಿಷ್ಟಾವಧಿಯವರೆಗೆ ಮುಂದೂಡಲ್ಪಟ್ಟಿದೆ. ಜೊತೆಗೆ, ನವೆಂಬರ್ ನಂತರ ಕ್ಯಾಲಿಫೋರ್ನಿಯಾದ ವಾತಾವರಣದಲ್ಲಿ ಮಂಜು ಮುಸುಕಿರುವುದರಿಂದ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ ಎಂದು ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಪ್ರಕಟಣೆ ತಿಳಿಸಿದೆ. ಕೂಟದ ಅಧ್ಯಕ್ಷ ರಾಮ್‌ಪ್ರಸಾದ್ ಈ ಬಗ್ಗೆ ಹೇಳಿಕೆ ಕಳುಹಿಸಿದ್ದಾರೆ.
ಹಂಸಲೇಖಾ ಅವರ ಕಾರ್ಯಕ್ರಮಗಳನ್ನು ಆಯೋಜಿಸಲು ಇಚ್ಛಿಸಿದ್ದ ಎಲ್ಲ ಕನ್ನಡ ಸಂಘಗಳಿಗೂ ಹಂಸಲೇಖಾ ಅವರು ತಮ್ಮ ಪ್ರವಾಸ ವ್ಯತ್ಯಾಸದಿಂದ ಆಗುವ ತೊಂದರೆಗೆ ಕ್ಷಮೆ ಯಾಚಿಸಿದ್ದಾರೆ. ಮುಂದಿನ ಪ್ರವಾಸದ ಬಗ್ಗೆ ಎಲ್ಲ ಕನ್ನಡ ಸಂಘಗಳಿಗೂ ತಿಳಿಸಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications