ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನಂಜೆ ಸಂದರ್ಶನ, ಪುಟ-3

By Staff
|
Google Oneindia Kannada News

ಮೈಶ್ರೀನ : ಇಲ್ಲಿ (ಅಂದರೆ, ಅಮೇರಿಕಾದಲ್ಲಿ) ಬೆಳೆಯುತ್ತಿರುವ ಮಕ್ಕಳಿಗೆ ನಾವು ನಮ್ಮ ಧರ್ಮ, ಸಂಸ್ಕೃತಿ ಇವುಗಳ ಬಗ್ಗೆ ಹೇಗೆ ತಿಳುವಳಿಕೆ ಕೊಡಬೇಕು ? ಹಿಂದೂ ಧರ್ಮದಲ್ಲಿ ಜಾರಿ ಇರುವ ಜಾತಿ ಪದ್ಧತಿ ಬಗ್ಗೆ ಮಕ್ಕಳು ಕೇಳುವ ಅನೇಕ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರಗಳು ಸಿಗುವುದಿಲ್ಲ. ಈ ಬಗ್ಗೆ ನಿಮ್ಮ ಸಲಹೆ ?

ಬನ್ನಂಜೆ : ಪ್ರಶ್ನೆ ಕ್ಲಿಷ್ಟವಾದ್ದು. ಜಾತಿ ಪದ್ಧತಿ, ವರ್ಣ ಪದ್ಧತಿ ಇವೆರಡೂ ಒಂದೇ ಅಲ್ಲ. ಜಾತಿ ಎಂಬುದು ಹುಟ್ಟಿನಿಂದ ಬಂದದ್ದು. ವರ್ಣ ಎಂಬುದು ಮನುಷ್ಯನ ಸ್ವಭಾವಕ್ಕೆ ಸಂಬಂಧಪಟ್ಟದ್ದು. ಗೀತೆಯಲ್ಲಿ ಕೃಷ್ಣ ಹೇಳುವ ‘‘ ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ’’ (ಗೀತಾ 4.13) ಎಂಬುದು ಮನುಷ್ಯನ ಸ್ವಭಾವದ ವರ್ಗೀಕರಣ. ಈ ಮನಸ್ಸಿನ ಜಾಯಮಾನಗಳು ಜಾತಿಗೆ ಸಂಬಂಧ ಪಟ್ಟಿದ್ದಲ್ಲ. ‘‘ ನ ವರ್ಣಾನಾಂ ಬೇಧಃ ನಾಸ್ತಿ, ಸರ್ವಂ ಬ್ರಾಹ್ಮಂ ಇದಂ ಜಗತ್‌ ’’ ಎನ್ನುವ ಮಹಾಭಾರತದ ಮಾತು ಭೀಷ್ಮ ಧರ್ಮರಾಯನಿಗೆ ತಿಳಿಸುವ ಬುದ್ಧಿ ಮಾತು. (‘‘ ಎಲ್ಲರನ್ನೂ ಒಂದೇ ಸಮನಾಗಿ ಕಾಣು ಏಕೆಂದರೆ ಎಲ್ಲವೂ - ಎಲ್ಲ ವರ್ಣದವರೂ ಭಗವಂತನ ಸೃಷ್ಟಿಯೇ. ’’(ಇಲ್ಲಿ ‘ವರ್ಣ ’ಎಂಬ ಶಬ್ದಕ್ಕೆ ದೇಹದ ಬಣ್ಣ ಎಂಬ ಅರ್ಥವಿಲ್ಲ. ‘‘ ಅವನು ತನ್ನ ನಿಜವಾದ ಬಣ್ಣವನ್ನು ತೋರಿದ ’’ ಎನ್ನುವಾಗ ದೇಹದ ಬಣ್ಣದ ಬಗ್ಗೆ ನಾವು ಮಾತನಾಡುತ್ತಿಲ್ಲ ಎಂಬುದು ಸರ್ವವಿದಿತ. ) ಪ್ರಪಂಚದ ಎಲ್ಲ ಭಾಗಗಳಲ್ಲೂ ಮನುಷ್ಯ ಇರುವಲ್ಲೆಲ್ಲಾ ವರ್ಣ ಪದ್ಧತಿ ಇದ್ದೇ ಇದೆ. ಆದರೆ ಅದಕ್ಕೆ ಒಂದು ರೂಪಕೊಟ್ಟು ಮನುಷ್ಯರನ್ನು ಅವರವರ ಸ್ವಭಾವಕ್ಕೆ ಅನುಗುಣವಾಗಿ ವರ್ಗೀಕರಿಸಿ ಹೆಸರು ಕೊಟ್ಟವರು ಪ್ರಾಚೀನ ಭಾರತದ ಬುದ್ಧಿ ಜೀವಿಗಳು. ಬುದ್ಧಿಯ ಬಲದಿಂದ ಬಾಳುವವರು, ತೋಳ್ಬಲದಿಂದ ಆಳುವವರು, ವ್ಯಾಪಾರ- ವ್ಯವಸಾಯದಲ್ಲಿ ನುರಿತು ನಾಡನ್ನು ಶ್ರೀಮಂತಗೊಳಿಸುವವರು, ಮತ್ತು ಒಂದಲ್ಲ ಒಂದು ಕಸುಬಿನಲ್ಲಿ ಪರಿಣತಿ ಹೊಂದಿದ ಶ್ರಮಜೀವಿಗಳು, ಈ ರೀತಿಯ ನಾಲ್ಕು ವರ್ಗವಿಲ್ಲದ ಸಮಾಜ ಯಾವುದು ? ಆದರೆ ಇಂದು ನಮ್ಮ ದುರ್ದೈವದಿಂದ ಜಾತಿ ಮತ್ತು ವರ್ಣ ಎರಡೂ ಒಂದೇ ಎಂಬ ನಂಬಿಕೆ ಬಂದುಬಿಟ್ಟಿದೆ. ಸಮಾನ ರೀತಿಯ ಆಚಾರ ವಿಚಾರಗಳನ್ನು ಹುಡುಕುತ್ತಾ ತಮ್ಮ - ತಮ್ಮ ಗುಂಪುಗಳಲ್ಲೇ ಮದುವೆಯಾಗುವ ರೂಢಿ ಬಂದು ಸಮಾಜದಲ್ಲಿ ಜಾತಿಯ ಬಿಗಿತ ಬಂದು ಬಿಟ್ಟಿತು. ಇದರ ಪರಿಹಾರ ಕ್ರಮೇಣ ಸಮಾಜ ತನ್ನನು ತಾನೇ ತಿದ್ದಿಕೊಳ್ಳುವ ಮೂಲಕ ಆಗಬೇಕು. ಇನ್ನು ಹಿಂದು ಎನ್ನುವ ಶಬ್ದ ‘ಸಿಂಧು’ ಎಂಬ ಶಬ್ದದಿಂದ ಬಂದದ್ದು. ಈ ಶಬ್ದ ಧರ್ಮದ ಹೆಸರಿಗಿಂತ ಹೆಚ್ಚಾಗಿ ಒಂದು ಪ್ರದೇಶದ ಹೆಸರನ್ನು ಸೂಚಿಸುತ್ತದೆ. ಆ ದೃಷ್ಟಿಯಿಂದ ನೋಡಿದರೆ ಭಾರತವಾಸಿಗಳೆಲ್ಲ- ಅವರು ಯಾವ ಧರ್ಮಕ್ಕೆ ಸೇರಿದವರಾದರೂ- ಹಿಂದುಗಳೆ.

ಮೈಶ್ರೀನ : ಒಂದಾನೊಂದು ಕಾಲದಲ್ಲಿ ಇದ್ದಂತೆ ಮತ್ತೊಮ್ಮೆ ಭಾರತದಲ್ಲಿ ಸಂಸ್ಕೃತ ಕಾವ್ಯದ ಭಾಷೆ, ಆಡುಭಾಷೆ ಮತ್ತು ಸಂಪರ್ಕ ಭಾಷೆ ಆಗಲು ಸಾಧ್ಯವೇ ?

ಬನ್ನಂಜೆ : ಒಂದು ಭಾಷೆಯನ್ನು ಬೆಳೆಸಬೇಕೆಂಬ, ಉಳಿಸಬೇಕೆಂಬ ಕ್ರತು ಶಕ್ತಿ ಇದ್ದರೆ, ನಿರ್ಧಾರ ಇದ್ದರೆ ಸಾಧ್ಯ. ಯೆಹೂದ್ಯರು ಹೀಬ್ರೂ ಭಾಷೆಯನ್ನು ಬೆಳೆಸುವುದು ಸಾಧ್ಯವಾದರೆ ಭಾರತೀಯರು ಸಂಸ್ಕೃತವನ್ನು ಬೆಳೆಸುವುದು ಏಕೆ ಸಾಧ್ಯವಾಗಬಾರದು ? ಆದರೆ ಇಂದು ಭಾರತದಲ್ಲಿ ಅಂಥಾ ನಿರ್ಧಾರವಿಲ್ಲ, ಸಂಘಶಕ್ತಿ ಇಲ್ಲ. ಜೊತೆಗೆ ಸಂಸ್ಕೃತ ಭಾಷೆಯ ಬೆಳವಣಿಗೆಯ ಬಗ್ಗೆ ಸಾಕಷ್ಟು ವಿರೋಧವೂ ಇದೆ. ಕೆಲವೊಂದು ಒಳ್ಳೇ ಪ್ರಯತ್ನಗಳು ಸಣ್ಣ ಪ್ರಮಾಣದಲ್ಲಿ ಅಲ್ಲೊಂದು ಇಲ್ಲೊಂದು ನಡೆದಿವೆಯಾದರೂ ಮತ್ತೊಮೆ ಸಂಸ್ಕೃತ ಹಿಂದಿನ ಮಟ್ಟಕ್ಕೆ ಬರುವುದು ಸಾಧ್ಯವಿಲ್ಲವೆಂದು ತೋರುತ್ತದೆ.


ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X