ಶಹಾಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ನೆಪದಲ್ಲಿ ಹಣ ಲೂಟಿ
ಯಾದಗಿರಿ ಮಾರ್ಚ್ 15: ಯಾದಗಿರಿಯಲ್ಲಿ ಬೇಸಿಗೆ ಬಿಸಿಲು ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಜನ ನೀರಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹಾಗೂ ದುರಸ್ತಿ ನೆಪದಲ್ಲಿ ನೀರಿಗಿಂತ ಹೆಚ್ಚಾಗಿ ಹಣ ವೆಚ್ಚ ಮಾಡಿರುವುದು ಶಹಾಪುರಿನಲ್ಲಿ ಬೆಳಕಿಗೆ ಬಂದಿದೆ.
ಹೌದು.... ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಲೆಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು (ಆರ್‌ಒ ಪ್ಲಾಂಟ್) ಸ್ಥಾಪಿಸಲಾಗಿದೆ. ಆದರೆ ಇವುಗಳ ನಿರ್ವಹಣೆ ಹಾಗೂ ದುರಸ್ತಿ ನೆಪದಲ್ಲಿ ನೀರಿಗಿಂತ ಹೆಚ್ಚಾಗಿ ಹಣ ವೆಚ್ಚ ಮಾಡಿರುವುದು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯಿಂದ ತಿಳಿದು ಬಂದಿದೆ.

ಮ್ಯಾಕ್ಸ್ ಅಕ್ವಾ ಹಾಗೂ ವಾಟರ್ ಲೈಫ್ ಗುತ್ತಿಗೆದಾರರು ನಿರ್ಮಿಸಿದ ಘಟಕಗಳನ್ನು ಲಕ್ಷ್ಮೀ ವೆಂಕಟೇಶ್ವರ ಎಂಬ ಏಜೆನ್ಸಿಯಿಂದ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಲಾಗಿದೆ ಎಂದು 2020 ಏಪ್ರಿಲ್ 7ರಂದು ಸಭೆ ನಡವಳಿಕೆಯಲ್ಲಿ ದಾಖಲಾಗಿದೆ. 79.60 ಲಕ್ಷ ದುರಸ್ತಿ ಬಿಲ್ ಪಾವತಿಸುವಂತೆ ಶಹಾಪುರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪ ವಿಭಾಗದ ಎಇ ಅವರು ಯಾದಗಿರಿ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಮನವಿ ಮಾಡಿದ್ದಾರೆ. ಅದರಂತೆ ಬಿಲ್ ಪಾವತಿಯಾಗಿದೆ. ಆದರೆ ವಾಸ್ತವಾಗಿ ಆರ್.ಒ ಪ್ಲಾಂಟ್‌ಗಳಿಂದ ಒಂದೂ ಹನಿ ನೀರು ಸರಬರಾಜು ಮಾಡಿಲ್ಲ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತ ಭೀಮರಾಯ ಬಾರಿಗಿಡ.
ಕಳೆದ ಕೆಲ ವರ್ಷಗಳಿಂದ ಶಹಪುರದ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಗ್ರಾಮೀಣ ಭಾಗದ ಜನ ಒಂದು ಬಿಂದಿಗೆ ನೀರನ್ನು ಪಡೆದಿಲ್ಲ. ಆದರೆ ಇವುಗಳ ದುರಸ್ಥಿಗಾಗಿ ಬರೋಬ್ಬರಿ 79.60 ಲಕ್ಷ ಹಣ ಪಾವತಿಸಲಾಗಿದೆ. ಇದೀಗ ಈ ಅವ್ಯವಹಾರದ ವಿರುದ್ಧ ಜನ ಧ್ವನಿ ಎತ್ತಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕಗಳಿಂದ ನೀರು ಬರುವುದು ಒಂದು ಕಡೆ ಇರಲಿ ಅವುಗಳು ಅಳಿವಿನಂಚಿಗೆ ಬಂದು ತಲುಪಿವೆ. ತಾಲೂಕಿನಲ್ಲಿ 97 ಆರ್.ಒ ಪ್ಲಾಂಟ್‌ಗಳಿವೆ. ಘಟಕಗಳ ನಿರ್ಮಾಣ ಕಂಪನಿಯಿಂದ 2023ರ ಸೆಪ್ಟೆಂಬರ್ 1ರಂದು ಆಯಾ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಳ್ಳುವಾಗ ಆಯಾ ಪಿಡಿಒಗಳು ಘಟಕಗಳು ವಸ್ತುಸ್ಥಿತಿಯನ್ನು ಬರೆದು ಷರಾ ಹಾಕಿದ್ದಾರೆ. ಅದರಂತೆ ಶಹಾಪುರ ತಾಲ್ಲೂಕಿನ ಅಣಬಿ ಗ್ರಾಮದಲ್ಲಿ ಮೂರು ವರ್ಷದಿಂದ ಘಟಕ ಸ್ಥಗಿತವಿದೆ ಎಂದು ನಮೂದಿಸಲಾಗಿದೆ. ಹುರಸಗುಂಡಗಿ , ಹೆಸೂರಲ್ಲೂ ಇದೇ ಸ್ಥಿತಿ ಇದೆ.
ಇಲ್ಲಿ ವಿಚಿತ್ರ ಅಂದರೆ ನೀರು ಸರಬರಾಜು ಮಾಡಲು ವಿದ್ಯುತ್ ಸಂಪರ್ಕ ಬೇಕು. ವಿದ್ಯುತ್ ಬಿಲ್ ಇರಬೇಕು. ಆದರೂ ಕೂಡ ಲಕ್ಷ್ಮೀ ವೆಂಕಟೇಶ್ವರ ಕಂಪನಿಗೆ ಮಾತ್ರ ದುರಸ್ತಿಯ ಹೆಸರಿನಲ್ಲಿ ಹಣ ಸಂದಾಯವಾಗಿರುವುದು ದಾಖಲೆಯಲ್ಲಿ ನಮೂದಿಸಲಾಗಿದೆ. ತಾಲೂಕಿನ ಎಲ್ಲಾ ಗ್ರಾಮೀಣ ಭಾಗಗಳು ಇದೇ ಸ್ಥಿತಿ ಕಂಡು ಬಂದಿದೆ.
ಬೇಸಿಗೆ ಕಾಲ ಬಂದರೆ ಸಾಕು ಯಾದಗಿರಿ ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ನೀರು ಪೂರೈಕೆ ಅವಧಿ ವಿಸ್ತಾರವಾಗುತ್ತಾ ಹೋಗುತ್ತದೆ. ಜನ ನೀರಿಗಾಗಿ ಟ್ಯಾಂಕರ್ ಹಾಗೂ ಬೋರ್‌ವೆಲ್ ಮೊರೆ ಹೋಗುತ್ತಾರೆ. ಇವೆರೆಡರಲ್ಲೂ ನೀರು ಸಿಗದೇ ಇದ್ದಾಗ ಜನ ಸರ್ಕಾರದ ಮೊರೆ ಹೋಗುತ್ತಾರೆ. ಆದರೆ ಕೆಲ ಅಧಿಕಾರಿಗಳ ಹಣದಾಸೆಗೆ ಜನರಿಗೆ ನೀರಿನ ಸಮಸ್ಯೆಗೆ ಪರಿಹಾರವೇ ಸಿಗುತ್ತಿಲ್ಲ. ಹೀಗಾಇ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಂಡ ಎಂಜಿನಿಯರ್‌ಗಳ ಹಾಗೂ ಕಂಪನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಮನವಿ ಮಾಡಿದ್ದಾರೆ.












Click it and Unblock the Notifications