Vande Bharat Express: ಯಾದಗಿರಿ ಜನರಿಗೆ ಮತ್ತೆ ನಿರಾಸೆ
ಯಾದಗಿರಿ, ಜುಲೈ 27: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಚಾರದಲ್ಲಿ ಯಾದಗಿರಿ ಜಿಲ್ಲೆಯ ಜನರಿಗೆ ಮತ್ತೆ ನಿರಾಸೆಯಾಗಿದೆ. ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲುಗಡೆಗೊಳ್ಳುವುದು ಮತ್ತೆ ರದ್ದುಗೊಳಿಸಲಾಗಿದೆ.
ಭಾರತೀಯ ರೈಲ್ವೆ ಬೆಂಗಳೂರು ನಗರದ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವಿನ ವಂದೇ ಭಾರತ್ ರೈಲನ್ನು ಯಾದಗಿರಿಯಲ್ಲಿ ನಿಲುಗಡೆ ಮಾಡಲು ಒಪ್ಪಿಗೆ ನೀಡಿತ್ತು. ಈ ಹಿಂದಿನ ಆದೇಶದಂತೆ ಜುಲೈ 27ರಿಂದಲೇ ರೈಲು ನಿಲುಗಡೆಯಾಗಬೇಕಿತ್ತು.

ಆದರೆ ಶುಕ್ರವಾರ ರಾತ್ರಿ ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಯಾದಗಿರಿಯಲ್ಲಿ ನಿಲುಗಡೆಗೊಳಿಸುವ ಆದೇಶವನ್ನು ರದ್ದುಗೊಳಿಸಲಾಗಿದೆ. 3ನೇ ಬಾರಿಗೆ ಯಾದಗಿರಿಯಲ್ಲಿ ರೈಲು ನಿಲ್ಲಿಸಲು ಒಪ್ಪಿಗೆ ನೀಡಿ, ಬಳಿಕ ರದ್ದುಗೊಳಿಸಲಾಗಿದೆ.
ಸಂಸದರು ಟ್ವೀಟ್ ಮಾಡಿದ್ದರು: ರಾಯಚೂರು ಸಂಸದ, ಕಾಂಗ್ರೆಸ್ ನಾಯಕ ಜಿ. ಕುಮಾರ ನಾಯಕ್ ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆಗೊಳ್ಳುವ ಕುರಿತು ಟ್ವೀಟ್ ಮಾಡಿದ್ದು, 'ಜುಲೈ 27 ರಿಂದ ಬೆಂಗಳೂರು-ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ನಮ್ಮ ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ ಎಂದು ತಿಳಿಸಲು ನನಗೆ ಖುಷಿಯಾಗುತ್ತಿದೆ' ಎಂದು ಟ್ವೀಟ್ ಮಾಡಿದ್ದರು.
'ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕಾಗಿ ಭಾರತೀಯ ರೈಲ್ವೆ ಪ್ರಾಧಿಕಾರವನ್ನು ನಾನು ಪ್ರಶಂಸಿಸುತ್ತೇನೆ. ಇದರಿಂದಾಗಿ ಯಾದಗಿರಿ ಮತ್ತು ಸುತ್ತಮುತ್ತಲಿನ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಬೆಂಗಳೂರಿಗೆ ತಲುಪುವುದು ಸುಲಭವಾಗುತ್ತದೆ' ಎಂದು ಹೇಳಿದ್ದರು.
ದಕ್ಷಿಣ ರೈಲ್ವೆಯ ಆದೇಶವನ್ನು ಉಲ್ಲೇಖಗೊಳಿಸಿ ನೈಋತ್ಯ ರೈಲ್ವೆ ಪ್ರಕಟಣೆಯೊಂದನ್ನು ಹೊರಡಿಸಿತ್ತು. ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಚ್ಚುವರಿ ನಿಲುಗಡೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿತ್ತು.
ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಸರ್. ಎಂ. ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ ಎಂದು ತಿಳಿಸಿತ್ತು.
ಜುಲೈ 27ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ರಾತ್ರಿ 9.44 ಗಂಟೆಗೆ ಆಗಮಿಸಿ, 9.45ಕ್ಕೆ ಹೊರಡಲಿದೆ.
ಜುಲೈ 28 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 22231 ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ಬೆಳಗ್ಗೆ 5.54ಕ್ಕೆ ಬಂದು, 5:55ಕ್ಕೆ ಹೊರಡಲಿದೆ ಎಂದು ನೈಋತ್ಯ ರೈಲ್ವೆ ಹೇಳಿತ್ತು.
ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಲಬುರಗಿ ನಡುವೆ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. 2024 ಮಾರ್ಚ್ 15ರಿಂದ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಆಗಿನಿಂದಲೂ ಯಾದಗಿರಿಯಲ್ಲಿ ನಿಲುಗಡೆ ನೀಡಬೇಕು ಎಂಬ ಬೇಡಿಕೆ ಇದೆ. ಆದರೆ 3 ಬಾರಿ ನಿಲುಗಡೆಗೆ ಅವಕಾಶ ನೀಡಿ, ಪುನಃ ಅದನ್ನು ರದ್ದುಗೊಳಿಸಿರುವುದು ಯಾದಗಿರಿ ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಗುರುವಾರ ಹೊರತುಪಡಿಸಿ ವಾರದ ಉಳಿದ ದಿನ ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತದೆ. ಈ ರೈಲು ರಾಯಚೂರು ಜಂಕ್ಷನ್, ಮಂತ್ರಾಲಯ ರಸ್ತೆ, ಗುಂತಕಲ್ ಜಂಕ್ಷನ್, ಅನಂತಪುರ ಮತ್ತು ಯಲಹಂಕಹದಲ್ಲಿ ನಿಲುಗಡೆ ಹೊಂದಿದೆ.












Click it and Unblock the Notifications