ಸುರಪುರ ಕ್ಷೇತ್ರದ ಉಪ ಚುನಾವಣೆ: ಕಾಂಗ್ರೆಸ್ ಗೆಲುವು
ಯಾದಗಿರಿ, ಜೂನ್ 04; ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಮೇ 7ರಂದು ಕ್ಷೇತ್ರದ ಉಪ ಚುನಾವಣೆ ನಡೆದಿತ್ತು.
ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕ ಜಯಗಳಿಸಿದ್ದರು. ಈ ವರ್ಷದ ಫೆಬ್ರವರಿ 25ರಂದು ಅವರು ನಿಧನ ಹೊಂದಿದ್ದು, ಉಪ ಚುನಾವಣೆ ಎದುರಾಗಿತ್ತು.

ಈ ಉಪ ಚುನಾವಣೆಗೆ ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ರಾಜಾ ವೇಣುಗೋಪಾಲ ನಾಯಕ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಪ್ರತಿಪಕ್ಷವಾದ ಬಿಜೆಪಿ-ಜೆಡಿಎಸ್‌ನಿಂದ ಮಾಜಿ ಶಾಸಕ, ಸಚಿವ ರಾಜಾ ನರಸಿಂಹ ನಾಯಕ (ರಾಜೂಗೌಡ) ಅಭ್ಯರ್ಥಿಯಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು: ಸುರಪುರ ಉಪ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯಂತೆ 1,14,886 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಬಿಜೆಪಿಯ ರಾಜೂ ಗೌಡ 96,566 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಅಶೋಕ (1612 ಮತ), ವೇಣುಗೋಪಾಲ್ (514 ಮತ), ವೆಂಕಟಪ್ಪ ನಾಯಕ (447 ಮತ), ಶಶಿಕುಮಾರ್ (426) ಮತಗಳನ್ನು ಪಡೆದಿದ್ದಾರೆ. 848 ನೋಟಾ ಮತಗಳು ಕ್ಷೇತ್ರದಲ್ಲಿ ಚಲಾವಣೆಯಾಗಿವೆ.
ರಾಜಾ ವೇಣುಗೋಪಾಲ ನಾಯಕ ಮೊದಲ ಬಾರಿಗೆ ಚುನಾವಣೆ ಎದುರಿಸಿದರು. ಕ್ಷೇತ್ರದ ಮೂರು ಬಾರಿಯ ಶಾಸಕ, ಮಾಜಿ ಸಚಿವ ರಾಜೂ ಗೌಡರನ್ನು ಸೋಲಿಸುವ ಮೂಲಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
2023ರ ಚುನಾವಣೆಯಲ್ಲಿ ಗೆದ್ದಿದ್ದ ರಾಜಾ ವೆಂಕಟಪ್ಪ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿದ್ದರು. ನಾಲ್ಕು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ನಿಧನದ ಬಳಿಕ ಉಪ ಚುನಾವಣೆ ಎದುರಾದಾಗ ಕಾಂಗ್ರೆಸ್ ರಾಜಾ ವೆಂಕಟಪ್ಪ ನಾಯಕ ಹಿರಿಯ ಪುತ್ರ ರಾಜಾ ವೇಣುಗೋಪಾಲ ನಾಯಕ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಆ ಮೂಲಕ ಅನುಕಂಪದ ಅಲೆಯಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲಿತ್ತು.
ಬಿಜೆಪಿ ಕ್ಷೇತ್ರದ ಮೂರು ಬಾರಿಯ ಶಾಸಕ, ಮಾಜಿ ಸಚಿವ ರಾಜೂ ಗೌಡ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಕಾಂಗ್ರೆಸ್ ಶಾಸಕನ ನಿಧನದಿಂದಾಗಿಯೇ ಉಪ ಚುನಾವಣೆ ಎದುರಾಗಿದೆ. ಕ್ಷೇತ್ರವನ್ನು ಕಾಂಗ್ರೆಸ್ ವಶವಾಗಲಿದೆ ಎಂದು ಅಂದಾಜಿಸಲಾಗಿತ್ತು. ಉಪ ಚುನಾವಣೆ ಫಲಿತಾಂಶ ಹಾಗೆಯೇ ಬಂದಿದೆ.
ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾದ ರಾಜೂ ಗೌಡ 2004ರಲ್ಲಿ ಕನ್ನಡ ನಾಡು ಪಕ್ಷದಿಂದ ಕ್ಷೇತ್ರದಲ್ಲಿ ಗೆದ್ದಿದ್ದರು. ಬಳಿಕ 2008, 2018ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ರಾಜೂ ಗೌಡ ಸುರಪುರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರು. ಈಗ 2024ರ ಉಪ ಚುನಾಣೆಯಲ್ಲಿಯೂ ಸೋಲು ಕಂಡಿದ್ದಾರೆ.












Click it and Unblock the Notifications