ಮುಂದಿನ ಎಲ್ಲಾ ಚುನಾವಣೆಗೆ ರಾಹುಲ್ ನೇತೃತ್ವ : ಖರ್ಗೆ
ಯಾದಗಿರಿ, ಅಕ್ಟೋಬರ್ 22 : 'ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವುದು ಶತಃ ಸಿದ್ಧ. ಅವರ ನೇತೃತ್ವದಲ್ಲಿಯೇ ಮುಂಬರುವ ಎಲ್ಲಾ ಚುನಾವಣೆಗಳನ್ನು ಎದುರಿಸಲಾಗುವುದು' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಯಾದಗಿರಿಯಲ್ಲಿ ಭಾನುವಾರ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 'ಜಿಎಸ್‌ಟಿ ಬಿಸಿ ಈಗ ಕೇಂದ್ರ ಸರ್ಕಾರಕ್ಕೆ ತಟ್ಟಿದೆ. ಗುಜರಾತ್ ಚುನಾವಣೆಗೆ ಮುನ್ನವೇ ಆರ್‌ಎಸ್‌ಎಸ್ ಒಂದು ಗುಂಪು ಮನವಿ ಸಲ್ಲಿಸಿದಂತೆ ಮಾಡುತ್ತದೆ. ಆಗ ಕೇಂದ್ರ ಜಿಎಸ್‌ಟಿ ವಾಪಸ್ ಪಡೆಯಬಹುದು' ಎಂದರು.

'ಕೇಂದ್ರ ಚುನಾವಣಾ ಆಯೋಗ ತನ್ನ ಸ್ವಾಯತ್ತತೆ ಕಳೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಕೇಳುತ್ತಿದೆ. ಆದ್ದರಿಂದ ಗುಜರಾತ್ ಚುನಾವಣಾ ದಿನಾಂಕ ಘೋಷಣೆ ಮಾಡಿಲ್ಲ' ಎಂದು ಆರೋಪಿಸಿದರು.
'ಕಲಬುರಗಿ ಪ್ರತ್ಯೇಕ ರೈಲು ವಲಯ ಸ್ಥಾಪನೆ ನೆನೆಗುದಿಗೆ ಬಿದ್ದಿದೆ. ಕೇಂದ್ರ ಸರಕಾರಕ್ಕೆ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬೇಕಾಗಿಲ್ಲ' ಎಂದು ವಾಗ್ದಾಳಿ ನಡೆಸಿದರು.
'ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಅಕ್ಟೋಬರ್ 29ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೀದರ್-ಕಲಬುರಗಿ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ' ಎಂದರು.












Click it and Unblock the Notifications