ವಿಧಾನಸಭಾ ಚುನಾವಣೆ: ಫೆಬ್ರವರಿ 22 ರಿಂದ ಏಳು ಮೋರ್ಚಾಗಳ ಸಭೆ ನಡೆಸಲಿರುವ ಬಿಜೆಪಿ
ಕೇಂದ್ರ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ಸಚಿವರು, ಶಾಸಕರು, ಎಂಎಲ್‌ಸಿಗಳು, ಮೋರ್ಚಾ ಅಧ್ಯಕ್ಷರು ಮತ್ತು ಪಕ್ಷದ ಸದಸ್ಯರು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾದಗಿರಿ, ಫೆಬ್ರವರಿ.20: ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ ತಳ ಹಂತದಿಂದ ತಮ್ಮ ಪ್ರಚಾರ ಆರಂಭಿಸಿದೆ. ಜಿಲ್ಲಾ ಘಟಕಗಳು ಜನರ ಬಳಿಗೆ ಬಿಜೆಪಿಯ ಕೆಲಸಗಳನ್ನು ತಲುಪಿಸಲು ಸಭೆಗಳನ್ನು ಆಯೋಜಿಸಲಿದೆ.
ಬಿಜೆಪಿಯ ಜಿಲ್ಲಾ ಘಟಕವು ಫೆಬ್ರವರಿ 22 ರಿಂದ ಮಾರ್ಚ್ 15 ರವರೆಗೆ ಯಾದಗಿರಿ ಜಿಲ್ಲೆಯಲ್ಲಿ ತನ್ನ ಎಲ್ಲಾ ಏಳು ಮೋರ್ಚಾಗಳ ಸಭೆಗಳನ್ನು ಆಯೋಜಿಸಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ರೆಡ್ಡಿ ಮತ್ತು ಜಿಲ್ಲಾ ಘಟಕದ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರ್ ತಿಳಿಸಿದ್ದಾರೆ.
ಯಾದಗಿರಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರಣಭೂಪಾಲ ರೆಡ್ಡಿ ಮತ್ತು ವೆಂಕಟರೆಡ್ಡಿ ಅಬ್ಬೆತುಮಕೂರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಪಕ್ಷದ ಎಲ್ಲಾ ಮೋರ್ಚಾಗಳ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಬಿಜೆಪಿಯು ಯುವ ಮೋರ್ಚಾ, ಮಹಿಳಾ ಮೋರ್ಚಾ, ರೈತ ಮೋರ್ಚಾ, ಒಬಿಸಿ ಮೋರ್ಚಾ, ಪರಿಶಿಷ್ಟ ಜಾತಿ ಮೋರ್ಚಾ, ಪರಿಶಿಷ್ಟ ಪಂಗಡ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾದಂತಹ ಏಳು ಮೋರ್ಚಾಗಳನ್ನು ಹೊಂದಿದ್ದು, ಈ ಎಲ್ಲಾ ಏಳು ಮೋರ್ಚಾಗಳ ಸಭೆಯು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ. ಯಾದಗಿರಿಯೊಂದರಲ್ಲೇ ಮೂರು ಸಭೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು, ಸಚಿವರು, ಶಾಸಕರು, ಎಂಎಲ್‌ಸಿಗಳು, ಮೋರ್ಚಾ ಅಧ್ಯಕ್ಷರು ಮತ್ತು ಪಕ್ಷದ ಸದಸ್ಯರು ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಪರಶುರಾಮ ಕುರಕುಂದಿ, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಹುಸೇನ ಭಾಷಾ ಕುರಕುಂದಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಮೋದಿ, ಮಹಿಳಾ ಮೋರ್ಚಾದ ಕಾರ್ಯದರ್ಶಿ ಸ್ನೇಹಾ ರಾಸಲ್ಕರ್, ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ನಾಗರಾಜ ಬೀರನೂರ ಸುದ್ದಿಗೊಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications