ಅಮೆರಿಕದಿಂದ ಕೋವಿಶೀಲ್ಡ್ ಲಸಿಕೆಗಾಗಿ ಭಾರತಕ್ಕೆ ಕಚ್ಚಾವಸ್ತುಗಳ ಪೂರೈಕೆ
ವಾಷಿಂಗ್ಟನ್, ಏಪ್ರಿಲ್ 26: ಅಮೆರಿಕವು ಭಾರತಕ್ಕೆ ಕೋವಿಶೀಲ್ಡ್ ಲಸಿಕೆಯ ಉತ್ಪಾದನೆಗಾಗಿ ಕಚ್ಚಾವಸ್ತುಗಳ ತುರ್ತು ಪೂರೈಕೆ ಮಾಡಲು ಮುಂದಾಗಿದೆ.
ಈ ಮೊದಲು ಅಮೆರಿಕವು ಮೊದಲು ಅಮೆರಿಕನ್ನರು ನಂತರ ಬೇರೆ ದೇಶಗಳತ್ತ ಗಮನ ನೀಡುತ್ತೇವೆ ಎಂದು ಕಚ್ಚಾ ವಸ್ತುಗಳ ಸರಬರಾಜನ್ನು ನಿಲ್ಲಿಸಿತ್ತು. ಬಳಿಕ ಭಾರತದ ತಜ್ಞರು ಕಚ್ಚಾವಸ್ತುಗಳನ್ನು ಕಳುಹಿಸುವಂತೆ ಅಮೆರಿಕಕ್ಕೆ ಮನವಿ ಮಾಡಿದ್ದರು.
ಇದೀಗ ಭಾರತದಲ್ಲಿ ಲಸಿಕೆ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳ ತುರ್ತು ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಶ್ವೇತಭವನ ಭಾನುವಾರ ಪ್ರಕಟಿಸಿದೆ.
ಆಸ್ಟ್ರಾಜೆನೆಕಾ ಹಾಗೂ ಜಾನ್ಸನ್ ಆಂಡ್ ಜಾನ್ಸನ್ ಕಂಪನಿಗಳ ಲಸಿಕೆಗಳು ಕೆಲವು ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ವರದಿಯಾಗಿದೆ. ಆದರೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಲಸಿಕೆಗಳಿಗೆ ಅನುಮೋದನೆ ದೊರೆತಿದೆ.

ಅಮೆರಿಕ ಭಾರತಕ್ಕೆ ಏನೇನು ಕಳುಹಿಸಲಿದೆ
ಅಮೆರಿಕವು ಭಾರತಕ್ಕೆ ವೆಂಟಿಲೇಟರ್ಗಳು, ರಕ್ಷಣಾ ಸಾಧನಗಳು, ಚಿಕಿತ್ಸೆ ಹಾಗೂ ಪರೀಕ್ಷೆಗೆ ಅಗತ್ಯ ವಸ್ತುಗಳು ಹಾಗೂ ಲಸಿಕೆ ಪೂರೈಕೆಗೆ ಕಚ್ಚಾವಸ್ತುಗಳನ್ನು ಪೂರೈಸುವುದಾಗಿ ಅಮೆರಿಕ ಹೇಳಿದೆ.

ಭಾರತಕ್ಕೆ ವಿದೇಶಗಳ ಸಹಕಾರ
ಫ್ರಾನ್ಸ್, ಬ್ರಿಟನ್, ಕೆನಡಾ ಹಾಗೂ ಜರ್ಮನಿ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದಲ್ಲಿ ಕೋವಿಡ್ ಬಿಕ್ಕಟ್ಟು ಎದುರಿಸಲು ಸಹಕಾರ ನೀಡುವ ಭರವಸೆ ನೀಡಿವೆ. ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಕೋವಿಡ್ ಲಸಿಕೆಗಳನ್ನು ಹಾಕಲಾಗಿದೆ. ಈ ನಡುವೆ ಸೋಂಕು ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ.

ಆಮ್ಲಜನಕದ ಕೊರತೆ
ನವದೆಹಲಿಯಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಹಾಗೂ ಔಷಧಗಳ ಕೊರತೆ ಎದುರಾಗಿದೆ. ರೋಗಿಗಳ ಕುಟುಂಬದವರು ಸಾಮಾಜಿಕ ಮಾಧ್ಯಮಗಳಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೆಹಲಿಗೆ ಆಮ್ಲಜನಕ ಪೂರೈಕೆಗೆ ಸಹಕಾರ ನೀಡಿವೆ.

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ
ಭಾರತದಲ್ಲಿ 3,52,991 ಮಂದಿ ಕೊರೊನಾ ಸೋಂಕಿತರು ಕಳೆದ 24 ಗಂಟೆಯಲ್ಲಿ ಪತ್ತೆಯಾಗಿದ್ದಾರೆ. ಒಂದೇ ದಿನ 2812 ಮಂದಿ ಮೃತಪಟ್ಟಿದ್ದಾರೆ. ಒಟ್ಟು 1,73,13,163 ಪ್ರಕರಣಗಳಿವೆ. 28,13,658 ಸಕ್ರಿಯ ಪ್ರಕರಣಗಳಿವೆ, ಕಳೆದ ಒಂದು ದಿನದಲ್ಲಿ 2,19,272 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.












Click it and Unblock the Notifications