ಡೊನಾಲ್ಡ್ ಟ್ರಂಪ್ ಕಿರಿಯ ಸೋದರ ರಾಬರ್ಟ್ ನಿಧನ
ನ್ಯೂಯಾರ್ಕ್, ಆ. 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿರಿಯ ಸೋದರ ರಾಬರ್ಟ್ ಟ್ರಂಪ್(71) ಅವರು ನಿಧನರಾಗಿದ್ದಾರೆ. ರಾಬರ್ಟ್ ಅವರನ್ನು ನ್ಯೂಯಾರ್ಕಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಟ್ರಂಪ್ ಕುಟುಂಬಸ್ಥರು ಪ್ರಕಟಣೆ ಹೊರಡಿಸಿದ್ದಾರೆ.
ಶುಕ್ರವಾರದಂದು ಡೊನಾಲ್ಡ್ ಟ್ರಂಪ್ ಅವರು ನ್ಯೂಜೆರ್ಸಿಯ ಬೆಡ್‌ಮಿನಿಸ್ಟರ್‌ನಲ್ಲಿರುವ ತನ್ನ ಗಾಲ್ಫ್ ಕ್ಲಬ್‌ಗೆ ಹೋಗುವ ಮೊದಲು ಅಧ್ಯಕ್ಷ ಟ್ರಂಪ್ ಅವರು ನ್ಯೂಯಾರ್ಕ್-ಪ್ರೆಸ್‌ಬಿಟೇರಿಯನ್ / ವೀಲ್ ಕಾರ್ನೆಲ್ ವೈದ್ಯಕೀಯ ಕೇಂದ್ರದಲ್ಲಿದ್ದ ಸೋದರ ರಾಬರ್ಟ್ ಅವರನ್ನು ಕಂಡು ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಬಂದಿದ್ದರು. ನನ್ನ ಪ್ರಿಯ ಸೋದರ ಶನಿವಾರ ರಾತ್ರಿ ಶಾಂತಿಯುತವಾಗಿ ನಿಧನರಾಗಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ಅವನು ನನ್ನ ಸೋದರ ಮಾತ್ರವಲ್ಲ, ನನ್ನ ಉತ್ತಮ ಗೆಳೆಯನಾಗಿದ್ದ, ಆದರೆ ನಾವು ಮತ್ತೆ ಭೇಟಿಯಾಗುತ್ತೇವೆ, ಆತನ ನೆನಪು ಸದಾ ನನ್ನ ಹೃದಯದಲ್ಲಿರುತ್ತದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

1948ರಲ್ಲಿ ಜನಿಸಿದ ರಾಬರ್ಟ್ ಅವರು ಬೊಸ್ಟನ್ ವಿವಿ ಪದವೀಧರರಾಗಿದ್ದರು. ಅನ್ ಮೇರಿ ಪಾಲನ್ ರನ್ನು ವರಿಸಿದ್ದರು. ವಾಲ್ ಸ್ಟ್ರೀಟ್ ಕಾರ್ಪೊರೇಟ್ ಆರ್ಥಿಕ ವ್ಯವಹಾರದಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ನಂತರ ಟ್ರಂಪ್ ಕುಟುಂಬದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉನ್ನತ ಅಧಿಕಾರಿಯಾಗಿದ್ದರು, ಒಳ್ಳೆಯ ಟ್ರಂಪ್ ಎಂದು ಟ್ರಂಪ್ ಕುಟುಂಬದ ಚರಿತ್ರೆ ಬರೆದಿರುವ ಗ್ವೆಂಡಾ ಬ್ಲೇರ್ ಅವರು ಎಪಿಗೆ ತಿಳಿಸಿದ್ದಾರೆ.












Click it and Unblock the Notifications