ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ನೃತ್ಯ: ವೈರಲ್ ವಿಡಿಯೋ
ವಾಷಿಂಗ್ಟನ್, ನವೆಂಬರ್ 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧ್ಯಕ್ಷೀಯ ಚುನಾವಣೆ 2020ಕ್ಕೂ ಕೆಲವೇ ಗಂಟೆಗಳ ಮುನ್ನ ಪ್ರಚಾರದ ವೇಳೆ ವೈಎಂಸಿಎ ಹಾಡಿಗೆ ಮಾಡಿದ ನೃತ್ಯ ವೈರಲ್ ಆಗಿದೆ. ಮತದಾರರನ್ನು ಸೆಳೆಯಲು ಇಷ್ಟು ದಿನ ಮಾತಿನ ಸಮರದಲ್ಲಿ, ಓಲೈಕೆಯಲ್ಲಿ ತೊಡಗಿದ್ದ ಡೊನಾಲ್ಡ್ ಟ್ರಂಪ್, ಕೊನೆಯ ದಿನ ಮತದಾರರಿಗೆ ನೃತ್ಯದ ಮಜಾ ನೀಡಿದರು.
ತಮ್ಮ ವಿಚಿತ್ರ ಶೈಲಿಯ ನೃತ್ಯದ ವಿಡಿಯೋವನ್ನು ಟ್ರಂಪ್ ಅವರು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಮತ! ಮತ! ಮತ!' ಎಂಬ ಕ್ಯಾಪ್ಷನ್ ಮೂಲಕ ಮತದಾನ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. 70ರ ದಶಕದ ವೈಎಂಸಿಎ ಡಿಸ್ಕೋ ಹಾಡಿಗೆ ವಿವಿಧ ಕಡೆ ನರ್ತಿಸಿದ್ದರು. ಈ ಹಾಡು ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಕ್ರೀಡಾ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಮೊಳಗುವಷ್ಟು ಜನಪ್ರಿಯವಾಗಿದೆ.
2020ರಲ್ಲಿ ತಮ್ಮ ಮರು ಚುನಾವಣೆಯನ್ನು ಬಯಸುತ್ತಿರುವ ಡೊನಾಲ್ಡ್ ಟ್ರಂಪ್, ತಮ್ಮ ಪ್ರಚಾರ ಸಮಾವೇಶಗಳಲ್ಲಿ ವೈಎಂಸಿಎ ಹಾಡನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಟ್ರಂಪ್ ಅವರ ಈ ನೃತ್ಯ ಟಿಕ್ ಟಾಕ್ ಪ್ರಿಯರಿಗೆ ಹೊಸ ವಸ್ತುವಾಗಿ ಸಿಕ್ಕಿದೆ. ಟ್ರಂಪ್ ಅವರ ನೃತ್ಯವನ್ನು ಅನುಕರಿಸಿ ಅನೇಕ ಟಿಕ್ ಟಾಕ್ ಮಂದಿ ನೃತ್ಯ ಮಾಡುತ್ತಿದ್ದು, ಸಾಕಷ್ಟು ಹಿಟ್ಸ್ ಪಡೆದಿದ್ದಾರೆ.
VOTE! VOTE! VOTE!pic.twitter.com/85ySh1KYkh
— Donald J. Trump (@realDonaldTrump) November 3, 2020
ಈಗಾಗಲೇ 91 ಮಿಲಿಯನ್‌ಗೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ. ಜೋ ಬೈಡನ್ ಗೆದ್ದರೆ 1992ರಲ್ಲಿ ಜಾರ್ಜ್ ಎಚ್ ಡಬ್ಲ್ಯೂ ಬುಷ್ ಅವರು ಅಧಿಕಾರ ಕಳೆದುಕೊಂಡ ಬಳಿಕ ಮೊದಲ ಮರು ಆಯ್ಕೆಯಾಗಲಿದೆ. ಅಂತಿಮ ಸಂಖ್ಯೆ ಏನೇ ಬಂದರೂ ಡೊನಾಲ್ಡ್ ಟ್ರಂಪ್ ಸೋಲು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಬಹುತೇಕ ಖಾತರಿಯಾಗಿದೆ. ಹಲವು ತಿಂಗಳಿನಿಂದ ಚುನಾವಣಾ ವಂಚನೆಯ ಬಗ್ಗೆ ಟ್ರಂಪ್ ಆರೋಪಗಳನ್ನು ಮಾಡುತ್ತಿದ್ದಾರೆ.

ಚುನಾವಣೆ ಮುಗಿಯುತ್ತಿದ್ದಂತೆಯೇ ಕಾನೂನು ಹೋರಾಟ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ. ಹೀಗಾಗಿ ಸೋಲು ಅನುಭವಿಸಿದರೆ ಯಾವುದೇ ಗದ್ದಲಗಳಿಲ್ಲದೆ ಸುಗಮವಾಗಿ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ಖಾತರಿ ನೀಡಲು ಅವರು ನಿರಾಕರಿಸುತ್ತಾ ಬಂದಿದ್ದಾರೆ.












Click it and Unblock the Notifications