ಬೈಡನ್ ಗೆಲುವಿನ ಅಧಿಕೃತ ಘೋಷಣೆ ಮಾಡಿದ ಎಲೆಕ್ಟೊರಲ್ ಕಾಲೇಜ್
ವಾಷಿಂಗ್ಟನ್, ಡಿಸೆಂಬರ್ 15: ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆದು ಒಂದು ತಿಂಗಳು ಕಳೆದರೂ ಫಲಿತಾಂಶ ಅಧಿಕೃತವಾಗಿ ಹೊರಬಂದಿರಲಿಲ್ಲ. ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಅವರು ಜಯಗಳಿಸಿರುವುದಾಗಿ ಮಾಧ್ಯಮಗಳು ಹೇಳಿದ್ದರೂ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಂಡಿರಲಿಲ್ಲ. ಬದಲಾಗಿ ಫಲಿತಾಂಶದ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಈಗ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಘೋಷಿಸುವ ಅಧಿಕಾರವುಳ್ಳ ಎಲೆಕ್ಟೊರಲ್ ಕಾಲೇಜ್ ಬೈಡನ್ ಅವರ ವಿಜಯವನ್ನು ಸೋಮವಾರ ಪ್ರಕಟಿಸಿದೆ.
Recommended Video
ಜೋ ಬೈಡನ್ ಅವರು 306 ಎಲೆಕ್ಟೊರಲ್ ಮತಗಳೊಂದಿಗೆ ಕಳೆದ ತಿಂಗಳ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಅವರು ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಅದು ಔಪಚಾರಿಕ ಘೋಷಣೆ ಮಾಡಿದೆ. ಡೊನಾಲ್ಡ್ ಟ್ರಂಪ್ ತಮ್ಮ ಸೋಲು ಒಪ್ಪಿಕೊಳ್ಳಲು ನಿರಾಕರಿಸಿದ್ದ ಕಾರಣ ಎಲೆಕ್ಟೊರಲ್ ಕಾಲೇಜ್‌ನ ಘೋಷಣೆ ಮಹತ್ವ ಪಡೆದಿತ್ತು. ಎಲೆಕ್ಟೊರಲ್ ಕಾಲೇಜು ಹೇಳಿದರೆ ತಾವು ಸೋಲೊಪ್ಪಿಕೊಳ್ಳುವುದಾಗಿ ಒಮ್ಮೆ ಟ್ರಂಪ್ ಹೇಳಿಕೆ ನೀಡಿದ್ದರು.
ತಮ್ಮ ವಿಜಯದ ನ್ಯಾಯಸಮ್ಮತತೆಯ ಕುರಿತಾದ ಯಾವುದೇ ಪ್ರಶ್ನೆಗಳು ಬಂದರೂ ಅವುಗಳನ್ನು ನಿರಾಕರಿಸುವಂತೆ ಜೋ ಬೈಡನ್ ಕರೆ ನೀಡಿದ್ದಾರೆ. ಅಮೆರಿಕದ ಜನತೆ ಈ ಫಲಿತಾಂಶವನ್ನು ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

'ಕಾನೂನಿನ ನಿಯಮ, ನಮ್ಮ ಸಂವಿಧಾನ ಮತ್ತು ಜನತೆಯ ಇಚ್ಛೆ ಈಡೇರಿದೆ' ಎಂದು ಚುನಾವಣೆಯ ಫಲಿತಾಂಶವನ್ನು ಬದಲಿಸುವ ಟ್ರಂಪ್ ಪ್ರಯತ್ನಗಳ ವಿರುದ್ಧ ಬೈಡನ್ ಪ್ರತಿಕ್ರಿಯೆ ನೀಡಿದ್ದಾರೆ. 'ಈ ದೇಶದಲ್ಲಿ ಪ್ರಜಾಪ್ರಭುತ್ವದ ಬೆಳಕಿನ ಜ್ವಾಲೆ ಬಹಳ ಹಿಂದೆಯೇ ಹೊತ್ತಿಕೊಂಡಿತ್ತು. ಈಗ ಒಂದು ಸಾಂಕ್ರಾಮಿಕ ಪಿಡುಗು ಅಥವಾ ಅಧಿಕಾರದ ದುರುಪಯೋಗದಂತಹ ಯಾವ ಪ್ರಯತ್ನಗಳೂ ಆ ಜ್ವಾಲೆಯನ್ನು ನಂದಿಸಲು ಆಗುವುದಿಲ್ಲ ಎನ್ನುವುದು ನಮಗೆ ತಿಳಿದಿದೆ' ಎಂದಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೂ ಅಮೆರಿಕದಲ್ಲಿ ಚುನಾವಣೆ ನಡೆದಿತ್ತು. ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮತಪತ್ರಗಳಲ್ಲಿ ಮತ ಹಾಕಿದ್ದರು. ಈಗ ಎಲೆಕ್ಟೊರಲ್ ಕಾಲೇಜು ಅಧಿಕೃತವಾಗಿ ಬೈಡನ್ ಜಯಘೋಷಣೆ ಮಾಡಿದ್ದು, ಫಲಿತಾಂಶವನ್ನು ವಾಷಿಂಗ್ಟನ್‌ಗೆ ರವಾನಿಸಲಾಗುತ್ತದೆ. ಉಪಾಧ್ಯಕ್ಷ ಮೈಕ್ ಪೆನ್ಸ್ ಅಧ್ಯಕ್ಷತೆಯಲ್ಲಿ ಜನವರಿ 6ರಂದು ಕಾಂಗ್ರೆಸ್‌ನ ಜಂಟಿ ಅಧಿವೇಶನ ನಡೆಯಲಿದೆ.












Click it and Unblock the Notifications