ಹೆಚ್ಚಾಯ್ತು ನಿರುದ್ಯೋಗ ಪ್ರಮಾಣ, ಸರ್ಕಾರದ ಸಹಾಯಕ್ಕೆ ಹಾಹಾಕಾರ
ವಾಷಿಂಗ್ಟನ್, ಮಾರ್ಚ್ 19: ಕೊರೊನಾ ಕೂಪದಲ್ಲಿ ನರಳುತ್ತಿರುವ ಅಮೆರಿಕನ್ನರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಈ ಪ್ರಮಾಣ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 7 ಲಕ್ಷ 77 ಸಾವಿರ ಅಮೆರಿಕನ್ನರು ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಿದ್ದಾರೆ ಎನ್ನಲಾಗಿದೆ. ಇದು ಅಮೆರಿಕದ ಇತಿಹಾಸದಲ್ಲೇ ಅತಿ ಘೋರ ಪರಿಸ್ಥಿತಿ ಎನ್ನುತ್ತಿವೆ ಅಲ್ಲಿನ ಮಾಧ್ಯಮಗಳು.
ಕೊರೊನಾ ಕಾರಣಕ್ಕೆ ಸಾವಿರಾರು ಕಂಪನಿಗಳು ಬಾಗಿಲು ಹಾಕಿದ್ದು, ಸುಮಾರು 1 ಕೋಟಿಗೂ ಹೆಚ್ಚು ನಿರುದ್ಯೋಗಿಗಳು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿಯೇ ಬೈಡನ್ ಸರ್ಕಾರ 2 ಟ್ರಿಲಿಯನ್ ಡಾಲರ್ ಮೊತ್ತದ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೂ ಪರಿಸ್ಥಿತಿ ಹಿಡಿತಕ್ಕೆ ಸಿಗದೆ ಜನರು ನರಳುವಂತಾಗಿದೆ.
2 ಟ್ರಿಲಿಯನ್ ಡಾಲರ್ ಮೊತ್ತದ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ಕೆಲಸ ಕಳೆದುಕೊಂಡು ನರಳುತ್ತಿರುವ ಪ್ರತಿಯೊಂದು ಕುಟುಂಬಕ್ಕೂ 1400 ಡಾಲರ್ ಸಹಯಾಧನ ನೀಡಲಾಗುತ್ತಿದೆ. ಈ ಸಹಾಯಧನಕ್ಕೆ ಅರ್ಜಿ ಹಾಕುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ.

ಸುಖಾಸುಮ್ಮನೆ ಹೊರಹಾಕಿದ ಆರೋಪ..!
ಹೌದು, ಒಂದು ಕಡೆ ಕೊರೊನಾ ಕಾರಣಕ್ಕೆ ಅಮೆರಿಕದಲ್ಲಿ ಕೆಲವು ಕಂಪನಿಗಳು ಬಾಗಿಲು ಹಾಕಿದ್ದರೆ, ಇನ್ನೂ ಕೆಲವರು ಸುಖಾಸುಮ್ಮನೆ ಕಾರ್ಮಿಕರನ್ನು ಹೊರಗೆ ದಬ್ಬಿರುವ ಆರೋಪ ಕೇಳಿಬರುತ್ತಿದೆ. ಮೊದಲೇ ತುರ್ತು ಪರಿಸ್ಥಿತಿ, ಇಂತಹ ಸಂದರ್ಭವನ್ನೇ ಕೆಲವು ಸಂಸ್ಥೆಗಳ ಮಾಲೀಕರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಇದನ್ನೆಲ್ಲಾ ಜೋ ಬೈಡನ್ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಲ್ಲಿನ ಬಡವರ ಬೆಂಬಲಕ್ಕೆ ನಿಂತಿದೆ. ಈಗಾಗಲೇ 1400 ಡಾಲರ್ ಸಹಾಯಧನದ ಜೊತೆ, ಮತ್ತಷ್ಟು ಅಗತ್ಯ ಕ್ರಮವನ್ನು ಕೂಡ ಕೈಗೊಳ್ಳಲಾಗುತ್ತಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಉಚಿತ ಪಡಿತರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

3 ಕೋಟಿ ಸೋಂಕಿತರು..!
ಅಮೆರಿಕದಲ್ಲಿ ಈವರೆಗೂ 3 ಕೋಟಿ 3 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ 5 ಲಕ್ಷ 52 ಸಾವಿರ ಅಮೆರಿಕನ್ನರು ಈ ಡೆಡ್ಲಿ ಸೋಂಕಿನಿಂದ ನರಳಿ ಪ್ರಾಣಬಿಟ್ಟಿದ್ದಾರೆ. ಮತ್ತೊಂದುಕಡೆ ಸಾಮೂಹಿಕವಾಗಿ ವ್ಯಾಕ್ಸಿನ್ ನೀಡುವ ಕಾರ್ಯ ಆರಂಭವಾಗಿದ್ದರೂ, ಜನರನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭವಿಷ್ಯವೇ ಮಂಕಾಗಿ ಹೋಗುತ್ತಿದೆ. ಜೀವ ಉಳಿಸಿಕೊಂಡವನೇ ಮಹಾಶೂರ ಎಂಬಂತಾಗಿದೆ. ಹೊರಗಡೆ ಬರಲು ಜನರು ಭಯಪಡುತ್ತಿದ್ದಾರೆ. ಜೀವ ಉಳಿದರೆ ಸಾಕಪ್ಪಾ ಅಂತಾ ಗೊಣಗುತ್ತಿದ್ದಾರೆ ಅಮೆರಿಕನ್ನರು.

ಈ ವಿಚಾರದಲ್ಲಿ ಭಾರತವೇ ಬೆಸ್ಟ್..!
ಹಲವು ತಿಂಗಳಿಂದಲೂ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲೇ ಇದೆ. ಒಂದೆಡೆ ಬ್ರೆಜಿಲ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದಾಗ ಬ್ರೆಜಿಲ್ ಪಟ್ಟಿಯಲ್ಲಿ ಮೊದಲಸ್ಥಾನಕ್ಕೆ ಹೋಗಲಿದೆ ಎಂದಿದ್ದರು ತಜ್ಞರು. ಆದರೆ ಬಡರಾಷ್ಟ್ರ ಬ್ರೆಜಿಲ್‌ನಲ್ಲೂ 'ಕೊರೊನಾ' ವೈರಸ್‌ನ ಪ್ರಭಾವ ಒಂದಷ್ಟು ತಗ್ಗಿದೆ. ಮತ್ತೊಂದೆಡೆ ಭಾರತದಲ್ಲೂ ಕೊರೊನಾ ಸೋಂಕಿತರ ಪ್ರಮಾಣ ಏರುತ್ತಿರುವುದನ್ನು ನೋಡಿ ಇದೇ ರೀತಿ ಭಾವಿಸಲಾಗಿತ್ತು. ಆದರೆ ಭಾರತದಲ್ಲೂ ಹೊಸ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ. ಹಾಗೆ ನೋಡಿದರೆ ಕೊರೊನಾ ಸೋಂಕು ಕಂಟ್ರೋಲ್ ಮಾಡಿರುವ ವಿಚಾರದಲ್ಲಿ ಭಾರತವೇ ಅಮೆರಿಕ ನಾಯಕರಿಗೆ ಮಾದರಿ.

5 ಲಕ್ಷ ಸಾವು, ಆಸ್ಪತ್ರೆಗಳು ಫುಲ್..!
ಅಮೆರಿಕದಲ್ಲಿ ಕೊರೊನಾ ನೋಡ ನೋಡುತ್ತಿದ್ದಂತೆ ನರಕ ಸೃಷ್ಟಿಸಿತ್ತು. ಡಿಸೆಂಬರ್, ಜನವರಿ ಸಮಯದಲ್ಲಿ ಆ ದೇಶದ ಪರಿಸ್ಥಿತಿ ಭಯಾನಕವಾಗಿತ್ತು. ಪ್ರತಿದಿನ ಸಾವಿರ ಸಾವಿರ ಜನ ಕೊರೊನಾಗೆ ಬಲಿಯಾಗುತ್ತಿದ್ದರೆ, ಅಲ್ಲಿ ಹೊಸ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಸ್ಪತ್ರೆಗಳಲ್ಲಿ ಜಾಗವೇ ಖಾಲಿ ಇರಲಿಲ್ಲ. ಆಸ್ಪತ್ರೆಗಳ ಹಾಸಿಗೆಗಳು ಫುಲ್ ಆಗಿದ್ದವು. ಮತ್ತೊಂದು ನೋವಿನ ಸಂಗತಿ ಎಂದರೆ, ಮೃತಪಟ್ಟ ಸೋಂಕಿತರನ್ನು ಮಣ್ಣು ಮಾಡೋದಕ್ಕೆ ಸ್ಥಳಾವಕಾಶದ ಕೊರತೆ ಎದುರಾಯಿತು. ಆಗ ಸಾಮೂಹಿಕವಾಗಿ ಸಂಸ್ಕಾರ ಮಾಡಿತ್ತು ಅಲ್ಲಿನ ಸರ್ಕಾರ. ಹೀಗೆ 5 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾಗೆ ಬಲಿಯಾಗಿ ಹೋಗಿದ್ದಾರೆ.












Click it and Unblock the Notifications