ಉಕ್ರೇನ್ ಪರಮಾಣು ಸ್ಥಾವರಕ್ಕೆ ಅಗ್ನಿಶಾಮಕ ದಳ ಪ್ರವೇಶಕ್ಕೆ ಅವಕಾಶ ನೀಡಿ: ರಷ್ಯಾಕ್ಕೆ ಬೈಡೆನ್ ಮನವಿ
ವಾಷಿಂಗ್ಟನ್, ಮಾರ್ಚ್ 04: ಯುರೋಪ್‌ನಲ್ಲಿಯೇ ಅತಿ ದೊಡ್ಡದಾದ ಉಕ್ರೇನ್‌ನಲ್ಲಿರುವ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾದ ಸೈನಿಕರು ದಾಳಿ ಮಾಡಿದ್ದು, ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ಉಕ್ರೇನ್ ವಿದೇಶಾಂಗ ಸಚಿವರು ಭಾರೀ ದುರಂತದ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯ ಹಿನ್ನೆಲೆ ಉಕ್ರೇನ್ ಪರಮಾಣು ಸ್ಥಾವರಕ್ಕೆ ಅಗ್ನಿಶಾಮಕ ದಳದವರಿಗೆ ಪ್ರವೇಶಿಸಲು ಅವಕಾಶ ನೀಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಷ್ಯಾಕ್ಕೆ ಮನವಿ ಮಾಡಿದ್ದಾರೆ.
ಉಕ್ರೇನ್ ವಿದ್ಯುತ್ ಸ್ಥಾವರದ ಮೇಲೆ ಗುಂಡಿನ ದಾಳಿಯನ್ನು ನಿಲ್ಲಿಸುವಂತೆ ಮತ್ತು ತುರ್ತು ಸೇವೆಗಳಿಗೆ ಅವಕಾಶ ನೀಡುವಂತೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ರಷ್ಯಾಕ್ಕೆ ಒತ್ತಾಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪರಮಾಣು ಸ್ಥಾವರದಲ್ಲಿ ನ್ಯೂಕ್ಲಿಯರ್ ರಿಯಾಕ್ಷನ್ ಕಂಡು ಬಂದಿಲ್ಲ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಈ ಪ್ರದೇಶದಲ್ಲಿ ತನ್ನ ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಅಗ್ನಿಶಾಮಕ ಮತ್ತು ತುರ್ತು ಘಟಕಕ್ಕೆ ಪರಮಾಣು ವಿದ್ಯುತ್ ಸ್ಥಾವರಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲು ರಷ್ಯಾವನ್ನು ಅಧ್ಯಕ್ಷ ಒತ್ತಾಯಿಸಿದ್ದಾರೆ. ಈ ಮೂಲಕ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಯಾಗಿದ್ದಾರೆ," ಎಂದು ಉಭಯ ನಾಯಕರ ನಡುವಿನ ಮಾತುಕತೆಯ ಬಗ್ಗೆ ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚುವರಿಯಾಗಿ, ಹಿರಿಯ ಯುಎಸ್ ಅಧಿಕಾರಿಯು, "ನಮ್ಮ ಇತ್ತೀಚಿನ ಮಾಹಿತಿಯ ಪ್ರಕಾರ ವಿಕಿರಣದ ಯಾವುದೇ ಸೂಚನೆಗಳು ಕಂಡು ಬಂದಿಲ್ಲ. ನಾವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ," ಎಂದು ತಿಳಿಸಿದ್ದಾರೆ. ಯುಎಸ್ ಹಿರಿಯ ಅಧಿಕಾರಿಗಳ ಪ್ರಕಾರ, ಯುಎಸ್ ಅಧ್ಯಕ್ಷ ಜೋ ಬೈಡೆನ್ ಪರಮಾಣು ಕೇಂದ್ರದಲ್ಲಿ ಬೆಂಕಿ ಕಾಣಿಸಿರುವ ಬಗ್ಗೆ ಉಕ್ರೇನ್ ಅಧ್ಯಕ್ಷರ ಜೊತೆ ಮಾತನಾಡಿದ್ದಾರೆ.
ಉಕ್ರೇನ್ ಪರಮಾಣು ಸ್ಥಾವರ ಪರಿಸ್ಥಿತಿ ಸುಭದ್ರ
ಉಕ್ರೇನ್ ಪರಮಾಣು ಸ್ಥಾವರದಲ್ಲಿ ಪರಿಸ್ಥಿತಿಯನ್ನು ಸುಭದ್ರಗೊಳಿಸಲಾಗಿದೆ. ರಷ್ಯಾದ ಪಡೆಗಳಿಂದ ಸ್ಥಾವರವು ಗುಂಡಿನ ದಾಳಿಗೆ ಒಳಗಾಗಿ ಸ್ಥಾವರದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡ ನಂತರ ಸ್ಥಾವರವನ್ನು ರಕ್ಷಿಸಲಾಗಿದೆ ಎಂದು ವರದಿಯು ಹೇಳಿದೆ. ಪರಮಾಣು ಸುರಕ್ಷತೆಯನ್ನು ಈಗ ಖಾತರಿಪಡಿಸಲಾಗಿದೆ ಎಂದು ಝಪೊರಿಝಿಯಾ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಓಲೆಕ್ಸಾಂಡರ್ ಸ್ಟಾರುಖ್ ಹೇಳಿದ್ದಾರೆ. ತರಬೇತಿ ಕಟ್ಟಡ ಮತ್ತು ಪ್ರಯೋಗಾಲಯ ಬೆಂಕಿಯಿಂದ ಹಾನಿಗೀಡಾಗಿದೆ ಎಂದು ಕೂಡಾ ಹೇಳಿದ್ದಾರೆ.
ಇದಕ್ಕೂ ಮುನ್ನ ಈ ಸ್ಥಾವರ ಸ್ಪೋಟವಾದರೆ ಆಗುವ ಭಾರೀ ದುರಂತದ ಬಗ್ಗೆ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಎಚ್ಚರಿಕೆ ನೀಡಿದ್ದರು. "ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಝಪೊರಿಝಿಯಾ ಎನ್‌ಪಿಪಿ ಮೇಲೆ ರಷ್ಯಾದ ಸೈನ್ಯವು ಎಲ್ಲಾ ಕಡೆಯಿಂದ ಗುಂಡು ಹಾರಿಸುತ್ತಿದೆ. ಬೆಂಕಿ ಈಗಾಗಲೇ ಸ್ಫೋಟಗೊಂಡಿದೆ," ಎಂದು ಹೇಳಿದ್ದಾರೆ.
"ಒಂದು ವೇಳೆ ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಸ್ಫೋಟಿಸಿದರೆ, ಅದು ಚೆರ್ನೋಬಿಲ್‌ಗಿಂತ 10 ಪಟ್ಟು ದೊಡ್ಡ ಸ್ಪೋಟವಾಗಲಿದೆ. ಹೆಚ್ಚು ಅನಾಹುತವನ್ನು ಉಂಟು ಮಾಡಲಿದೆ. ರಷ್ಯನ್ನರು ತಕ್ಷಣವೇ ಬೆಂಕಿಯನ್ನು ನಿಲ್ಲಿಸಬೇಕು. ಅಗ್ನಿಶಾಮಕ ದಳಕ್ಕೆ ಪ್ರವೇಶ ಮಾಡಲು ಅನುಮತಿ ನೀಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಿ," ಎಂದು ಎಚ್ಚರಿಕೆ ಜೊತೆಗೆ ರಷ್ಯಾದ ಸೇನಾಪಡೆಗೆ ಮನವಿ ಮಾಡಿ ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವೀಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಪಿಪಿ ಮುಖ್ಯಸ್ಥರು ಇಗೊರ್ ಮುರಶೋವ್, "ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ (ಎನ್‌ಪಿಪಿ) ಪರಮಾಣು ಸುರಕ್ಷತೆಗೆ ಹಾನಿಯಾಗಿದೆ. ನಾವು ಎಲ್ಲವನ್ನೂ ಮಾಡುತ್ತಿದ್ದೇವೆ, ಆದರೆ ಬೆಂಕಿ ಕೆನ್ನಾಲಿಗೆ ಶಮನವಾಗುತ್ತಿಲ್ಲ. ಅಗ್ನಿಶಾಮಕದಳವು ಜೊತೆಯಾಗುವ ಸ್ಥಿತಿಯೂ ಇಲ್ಲ. ದೊಡ್ಡ ಅಪಾಯ ಎದುರಾಗಿದೆ. ಸ್ಥಾವರದಲ್ಲಿ ಯುದ್ಧ ನಡೆಯುತ್ತಿದೆ. ಪರಮಾಣು ಮೇಲೆ ಪರಿಣಾಮ ಬೀರುವ ಅಪಾಯವಿದೆ," ಎಂದು ತಿಳಿಸಿದ್ದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications